RCB vs CSK ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜು

First Published Apr 25, 2018, 5:29 PM IST
Highlights

ಆರ್‌'ಸಿಬಿ ವಿರುದ್ಧ ಚೆನ್ನೈ ಹಿಂದಿನ ಆವೃತ್ತಿಗಳಲ್ಲಿ ಮೇಲುಗೈ ಸಾಧಿಸಿದ್ದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಒಟ್ಟು 7 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದುಕೊಂಡಿವೆ. 1 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ, ಆರ್‌'ಸಿಬಿಗಿಂತ ಉತ್ತಮ ಆರಂಭ ಪಡೆದುಕೊಂಡಿದ್ದು ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. ಇದೇ ವೇಳೆ ಕೊಹ್ಲಿಯ ಆರ್'ಸಿಬಿ 5 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದ್ದು, ಕಳೆದ ಪಂದ್ಯದಲ್ಲಿ ಸಾಧಿಸಿದ ಆಮೋಘ ಗೆಲುವಿನಿಂದ ತಂಡದ ಹುಮ್ಮಸ್ಸು ವೃದ್ಧಿಸಿದೆ.

ಬೆಂಗಳೂರು(ಏ.25): 2 ವರ್ಷಗಳ ಬಳಿಕ ಇಂದು ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌'ನಲ್ಲಿ ಮುಖಾಮುಖಿಯಾಗುತ್ತಿವೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣ ಈ ಮಹಾ ಕಾಳಗಕ್ಕೆ ಸಜ್ಜಾಗಿದ್ದು, ಎರಡೂ ತಂಡಗಳ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮನೆ ಮಾಡಿದೆ.

ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿ ಚೆನ್ನೈ 2 ವರ್ಷ ನಿಷೇಧಕ್ಕೆ ಗುರಿಯಾಗಿದ್ದರಿಂದ ಆರ್'ಸಿಬಿ-ಚೆನ್ನೈ ಸೆಣಸಾಟಕ್ಕೆ ಸಾಕ್ಷಿಯಾಗುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದರು. ಆರ್‌'ಸಿಬಿ ವಿರುದ್ಧ ಚೆನ್ನೈ ಹಿಂದಿನ ಆವೃತ್ತಿಗಳಲ್ಲಿ ಮೇಲುಗೈ ಸಾಧಿಸಿದ್ದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಒಟ್ಟು 7 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದುಕೊಂಡಿವೆ. 1 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ, ಆರ್‌'ಸಿಬಿಗಿಂತ ಉತ್ತಮ ಆರಂಭ ಪಡೆದುಕೊಂಡಿದ್ದು ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. ಇದೇ ವೇಳೆ ಕೊಹ್ಲಿಯ ಆರ್'ಸಿಬಿ 5 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದ್ದು, ಕಳೆದ ಪಂದ್ಯದಲ್ಲಿ ಸಾಧಿಸಿದ ಆಮೋಘ ಗೆಲುವಿನಿಂದ ತಂಡದ ಹುಮ್ಮಸ್ಸು ವೃದ್ಧಿಸಿದೆ.

ಎಬಿ ಡಿವಿಲಿಯರ್ಸ್‌ ಲಯಕ್ಕೆ ಮರಳಿದ್ದು, ಆರ್‌'ಸಿಬಿ ಪಾಲಿಗೆ ಇದಕ್ಕಿಂತ ಸಿಹಿ ಸುದ್ದಿ ಸಿಗಲು ಸಾಧ್ಯವಿಲ್ಲ. ಕೊಹ್ಲಿ ಸಹ ಆಕರ್ಷಕ ಆಟವಾಡುತ್ತಿದ್ದಾರೆ. ಆದರೆ ಆರಂಭಿಕರ ಸಮಸ್ಯೆ ಇನ್ನೂ ಹಾಗೇ ಉಳಿದಿದೆ. ಕೊಹ್ಲಿ, ಎಬಿಡಿ ನಂತರ ಜವಾಬ್ದಾರಿ ಹೊತ್ತು ಆಡಬಲ್ಲ ಆಟಗಾರರ ಕೊರತೆ ತಂಡವನ್ನು ಕಾಡುತ್ತಿದೆ. ಚೆನ್ನೈಗೆ ಹೋಲಿಸಿದರೆ ಆರ್‌'ಸಿಬಿ ಬೌಲಿಂಗ್ ದುರ್ಬಲವಾಗಿದ್ದು, ಈ ಪಂದ್ಯದಲ್ಲೂ ಬ್ಯಾಟ್ಸ್‌'ಮನ್'ಗಳೇ ತಂಡವನ್ನು ಕಾಪಾಡಬೇಕಿದೆ.

ರಾಯುಡು ಅಸ್ತ್ರ: ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಯಶಸ್ಸು ಕಾಣುತ್ತಿರುವ ಅಂಬಟಿ ರಾಯುಡು ಚೆನ್ನೈ ಬಲ ಹೆಚ್ಚಿಸಿದ್ದಾರೆ. ವಾಟ್ಸನ್ ಉತ್ತಮ ಲಯದಲ್ಲಿದ್ದು, ರೈನಾ, ಧೋನಿ ಹಾಗೂ ಬ್ರಾವೋ ರನ್ ಕೊಡುಗೆ ನೀಡುತ್ತಿದ್ದಾರೆ. ಡುಪ್ಲೆಸಿ ಗಾಯದಿಂದ ಚೇತರಿಸಿಕೊಂಡು ಆಡುವ ಹನ್ನೊಂದರ ಬಳಗಕ್ಕೆ ಸೇರಿಕೊಂಡಿರುವುದು ತಂಡದ ಬಲ ಹೆಚ್ಚಿಸಿದೆ. 5 ಪಂದ್ಯಗಳಲ್ಲಿ ಚೆನ್ನೈ ಪರ 6 ವಿವಿಧ ಬ್ಯಾಟ್ಸ್‌'ಮನ್‌'ಗಳು 50ಕ್ಕಿಂತ ಹೆಚ್ಚು ರನ್ ಗಳಿಸಿರುವುದು ತಂಡದ ಯಶಸ್ಸಿಗೆ ಹಿಡಿದ ಕೈಗನ್ನಡಿ. ದೀಪಕ್ ಚಾಹರ್, ಶಾರ್ದೂಲ್ ಉತ್ತಮ ಬೌಲಿಂಗ್ ನಡೆಸುತ್ತಿದ್ದು, ಸ್ಪಿನ್ನರ್ ಆಯ್ಕೆ ಗೊಂದಲ ಚೆನ್ನೈಗೆ ಕಾಡುತ್ತಿದೆ. ಟೂರ್ನಿ ಮಹತ್ವದ ಘಟ್ಟ ಪ್ರವೇಶಿಸುತ್ತಿದ್ದು, ಪ್ಲೇ-ಆಫ್ ದೃಷ್ಟಿಯಿಂದ ಆರ್‌'ಸಿಬಿಗಿದು ಮಹತ್ವದ ಪಂದ್ಯವಾಗಿದೆ.

click me!