ಇಟ್ಸ್ ಚೆನೈ VS ಹೈದರಾಬಾದ್: ಯಾರ ಮುಡಿಗೆ ಐಪಿಎಲ್ ಕಪ್?

First Published May 27, 2018, 12:07 PM IST
Highlights

ಐಪಿಎಲ್ 11ನೇ ಆವೃತ್ತಿ ಅಂತ್ಯಗೊಳ್ಳುವ ಸಮಯ ಬಂದೇ ಬಿಟ್ಟಿದೆ. ಭಾನುವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಈ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದ್ದು, 2 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2016ರ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ಪ್ರಶಸ್ತಿಗಾಗಿ ಸೆಣಸಲಿವೆ.

ಮುಂಬೈ(ಮೇ.27): ಐಪಿಎಲ್ 11ನೇ ಆವೃತ್ತಿ ಅಂತ್ಯಗೊಳ್ಳುವ ಸಮಯ ಬಂದೇ ಬಿಟ್ಟಿದೆ. ಭಾನುವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಈ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದ್ದು, 2 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2016ರ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ಪ್ರಶಸ್ತಿಗಾಗಿ ಸೆಣಸಲಿವೆ.

5 ದಿನಗಳ ಹಿಂದಷ್ಟೇ ಇದೇ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 1ರಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು, ಮತ್ತೊಮ್ಮೆ ಪರಸ್ಪರ ಎದುರಾಗಲಿದ್ದು ಈ ಬಾರಿ ಪಂದ್ಯ ಹೆಚ್ಚಿನ ಮಹತ್ವ ಪಡೆದಿದೆ. ಕ್ವಾಲಿಫೈಯರ್ 1ರಲ್ಲಿ ಕೊನೆಯಲ್ಲಿ ಫಾಫ್ ಡು ಪ್ಲೆಸಿ ಹೋರಾಟದಿಂದಾಗಿ ಚೆನ್ನೈ 2 ವಿಕೆಟ್ ಜಯ ಸಾಧಿಸಿ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಸನ್‌ರೈಸರ್ಸ್‌, ಕೋಲ್ಕತಾಗೆ ಪ್ರಯಾಣಿಸಿ ಕ್ವಾಲಿಫೈಯರ್ 2ರಲ್ಲಿ ಆತಿಥೇಯ ಕೆಕೆಆರ್ ವಿರುದ್ಧ ಸೆಣಸಾಡಿ, 13 ರನ್‌ಗಳ ರೋಚಕ ಗೆಲುವು ಸಾಧಿಸಿ ಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿತ್ತು.

ಈ ಆವೃತ್ತಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿದ್ದು, ಮೂರೂ ಪಂದ್ಯಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿದೆ. ತಂಡದ ಸಮತೋಲನವನ್ನು ಮುಂದಿಟ್ಟುಕೊಂಡು ಹೇಳುವುದಾದರೆ, ಚೆನ್ನೈ ಈ ಪಂದ್ಯದಲ್ಲಿ ಗೆಲ್ಲುವನೆಚ್ಚಿನ ತಂಡ ಎನಿಸಿಕೊಳ್ಳುತ್ತಿದೆ. ಅಂಬಟಿ ರಾಯುಡು, ಶೇನ್ ವಾಟ್ಸನ್, ಸುರೇಶ್ ರೈನಾ, ಫಾಫ್ ಡು ಪ್ಲೆಸಿ, ಎಂ.ಎಸ್.ಧೋನಿ ಹೀಗೆ ಘಟಾನುಘಟಿಗಳ ಬಲ ಸಿಎಸ್‌ಕೆಗಿದೆ. ಬ್ರಾವೋ, ಜಡೇಜಾ, ಹರ್ಭಜನ್, ಚಾಹರ್ ಸಹ ಸಮರ್ಥವಾಗಿ ಬ್ಯಾಟ್ ಬೀಸಬಲ್ಲ ಆಟಗಾರರಾಗಿದ್ದು ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್‌ಗೆ ಸವಾಲಾಗಿ ಪರಿಣಮಿಸಲಿದೆ.

ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಧೋನಿ, ಕಳೆದ ಪಂದ್ಯದಲ್ಲಿ ಹರ್ಭಜನ್‌ರಿಂದ ಒಂದೂ ಓವರ್ ಬೌಲ್ ಮಾಡಿಸಿರಲಿಲ್ಲ. ಶಾರ್ದೂಲ್, ಎನ್‌ಗಿಡಿ, ಚಾಹರ್, ಬ್ರಾವೋ, ಜಡೇಜಾ ಇನ್ನಿಂಗ್ಸ್ ಮುಕ್ತಾಯಗೊಳಿಸಿದ್ದರು. ವಾಟ್ಸನ್, ರೈನಾ ಸಹ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಆದರೆ ಧೋನಿಯ ಕೆಲ ಪ್ರಯೋಗಗಳು ತಂಡಕ್ಕೆ ಮುಳುವಾಗುವ ಸಾಧ್ಯತೆ ಇದೆ.

ಕೇನ್, ರಶೀದ್ ನೆಚ್ಚಿಕೊಂಡಿದೆ ರೈಸರ್ಸ್‌: ಸನ್‌ರೈಸರ್ಸ್‌ ಹೈದರಾಬಾದ್ ತನ್ನ ಪ್ರತಿಭಾನ್ವಿತ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ವಿಲಿಯಮ್ಸನ್ ತಂಡದ ಬ್ಯಾಟಿಂಗ್ ಆಧಾರವೆನಿಸಿದ್ದು, ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ತಂಡ ಸಾಧಾರಣ ಮೊತ್ತ ಕಲೆಹಾಕಿದ ಹೊರತಾಗಿಯೂ ಜಯ ಸಾಧಿಸುತ್ತಿರುವುದಕ್ಕೆ ಕಾರಣ, ಬಲಿಷ್ಠ ಬೌಲಿಂಗ್ ಪಡೆ. ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್ ಪರಿಣಾಮಕಾರಿ ದಾಳಿ ನಡೆಸುತ್ತಿದ್ದರೆ, ಕಾರ್ಲೊಸ್ ಬ್ರಾಥ್ವೇಟ್ ಹಾಗೂ ರಶೀದ್ ಖಾನ್ ಆಲ್ರೌಂಡ್ ಆಟ ತಂಡಕ್ಕೆ ನೆರವಾಗುತ್ತಿದೆ. 

ಶಕೀಬ್ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ ಹೊರತುಬ್ಯಾಟಿಂಗ್‌ನಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಫೈನಲ್‌ನಲ್ಲಿ ಶಕೀಬ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕ್ವಾಲಿಫೈಯರ್ 1ರಲ್ಲಿ ರಶೀದ್, ಧೋನಿ ಸೇರಿ ಚೆನ್ನೈನ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ತಂಡ ಅವರಿಂದ ಮತ್ತೊಮ್ಮೆ ಉತ್ಕೃಷ್ಟ ಪ್ರದರ್ಶನ ನಿರೀಕ್ಷೆ ಮಾಡುತ್ತಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನೇ ರಶೀದ್ ಮುಂದುವರಿಸಿದರೆ, ಚೆನ್ನೈಗೆ ಗೆಲುವು ಕಷ್ಟವಾಗುವುದು ಖಚಿತ. ಚೆನ್ನೈ ಬ್ಯಾಟ್ಸ್‌ಮನ್‌ಗಳು ಹಾಗೂ ರಶೀದ್ ನಡುವಿನ ಪೈಪೋಟಿ ಭಾರೀ ಕುತೂಹಲ ಕೆರಳಿಸಿದೆ.

click me!