IPL 12 ಫೈನಲ್‌ ಟಿಕೆಟ್‌ ಡೆಲ್ಲಿಗೋ, ಚೆನ್ನೈಗೋ?

By Web DeskFirst Published May 10, 2019, 1:58 PM IST
Highlights

ಮೊದಲ ಕ್ವಾಲಿಫೈಯರ್‌ನಲ್ಲಿ ಸೋತರೂ, ಮತ್ತೊಂದು ಅವಕಾಶ ಹೊಂದಿರುವ ಚೆನ್ನೈ, ಡೆಲ್ಲಿ ವಿರುದ್ಧ ಜಯಗಳಿಸಿ 8ನೇ ಬಾರಿ ಫೈನಲ್‌ ಪ್ರವೇಶಿಸಲು ತಹತಹಿಸುತ್ತಿದೆ. ಎಂ.ಎಸ್‌.ಧೋನಿ ಪಾಲಿಗೆ ಇದು ಬಹುತೇಕ ಕೊನೆ ಐಪಿಎಲ್‌ ಎಂದು ಹೇಳಲಾಗುತ್ತಿದ್ದು, ಅತ್ಯಂತ ಯಶಸ್ವಿ ನಾಯಕನಿಗೆ ಅದ್ಧೂರಿ ಬೀಳ್ಕೊಡುಗೆ ನೀಡುವ ಒತ್ತಡ ಚೆನ್ನೈ ತಂಡದ ಆಟಗಾರರ ಮೇಲಿದೆ.

ವಿಶಾಖಪಟ್ಟಣಂ(ಮೇ.10): ಈ ಆವೃತ್ತಿಯ ಐಪಿಎಲ್‌ನಲ್ಲಿ ಡೇರ್‌ಡೆವಿಲ್‌ಗಳ ರೀತಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸುವ ಉತ್ಸಾಹದಲ್ಲಿದ್ದು, ಶುಕ್ರವಾರ ಇಲ್ಲಿ ನಡೆಯಲಿರುವ ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತರೂ, ಮತ್ತೊಂದು ಅವಕಾಶ ಹೊಂದಿರುವ ಚೆನ್ನೈ, ಡೆಲ್ಲಿ ವಿರುದ್ಧ ಜಯಗಳಿಸಿ 8ನೇ ಬಾರಿ ಫೈನಲ್‌ ಪ್ರವೇಶಿಸಲು ತಹತಹಿಸುತ್ತಿದೆ. ಎಂ.ಎಸ್‌.ಧೋನಿ ಪಾಲಿಗೆ ಇದು ಬಹುತೇಕ ಕೊನೆ ಐಪಿಎಲ್‌ ಎಂದು ಹೇಳಲಾಗುತ್ತಿದ್ದು, ಅತ್ಯಂತ ಯಶಸ್ವಿ ನಾಯಕನಿಗೆ ಅದ್ಧೂರಿ ಬೀಳ್ಕೊಡುಗೆ ನೀಡುವ ಒತ್ತಡ ಚೆನ್ನೈ ತಂಡದ ಆಟಗಾರರ ಮೇಲಿದೆ.

ಚೆನ್ನೈ ವಿರುದ್ಧ ಲೀಗ್‌ ಪಂದ್ಯದಲ್ಲಿ 80 ರನ್‌ ಸೋಲು ಕಂಡ ಕಾರಣ, ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಈ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲಿ ಡೆಲ್ಲಿ ಸೋಲುಂಡಿದೆ. ಎಲಿಮಿನೇಟರ್‌ನಲ್ಲಿ ಸನ್‌ರೈಸ​ರ್ಸ್ ವಿರುದ್ಧ ಗೆಲುವು ಸಾಧಿಸಿ ಕ್ವಾಲಿಫೈಯರ್‌ 2ಗೆ ಅರ್ಹತೆ ಪಡೆದಿರುವ ಡೆಲ್ಲಿ, ಧೋನಿ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.

ನಿರ್ಣಾಯಕ ಹಂತದಲ್ಲಿ ಚೆನ್ನೈ ತಂಡದ ಬ್ಯಾಟಿಂಗ್‌ ಪಡೆ ಲಯ ಕಳೆದುಕೊಂಡಿದೆ. ಅಗ್ರ ಕ್ರಮಾಂಕದ ಸಮಸ್ಯೆ ತಂಡವನ್ನು ಬಲವಾಗಿ ಕಾಡುತ್ತಿದ್ದು, ಧೋನಿ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಮತ್ತೊಂದು ಗಮನಿಸಲೇಬೇಕಾದ ಅಂಶವೆಂದರೆ, ಚೆನ್ನೈ ತನ್ನ ಸ್ಪಿನ್ನರ್‌ಗಳು ಮಿಂಚಿದಾಗ ಮಾತ್ರ ಹೆಚ್ಚಿನ ಯಶಸ್ಸು ಸಾಧಿಸಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಇಲ್ಲಿನ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ಒದಗಿಸಿತ್ತು. ಚೆನ್ನೈಗೆ ಹೋಲಿಸಿದರೆ, ಡೆಲ್ಲಿ ತಂಡದ ವೇಗದ ಬೌಲಿಂಗ್‌ ಗುಣಮಟ್ಟಉತ್ತಮವಾಗಿದೆ.

ಪೃಥ್ವಿ ಶಾ ಲಯಕ್ಕೆ ಮರಳಿದ್ದು, ರಿಷಭ್‌ ಪಂತ್‌ ಸ್ಫೋಟಕ ಆಟ ಮುಂದುವರಿಸಿದ್ದಾರೆ. ಈ ಇಬ್ಬರು ಯುವ ಆಟಗಾರರು ಡೆಲ್ಲಿ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಎನಿಸಿದ್ದಾರೆ. ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಕಾಲಿನ್‌ ಮನ್ರೊ ಹೀಗೆ ಡೆಲ್ಲಿ ತಂಡದಲ್ಲಿ ಮ್ಯಾಚ್‌ ವಿನ್ನರ್‌ಗಳ ದಂಡೇ ಇದೆ. ಚೆನ್ನೈ ತಂಡದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಅನುಭವ ಪಡೆದರೂ ಸ್ಥಿರತೆ ಕಾಯ್ದುಕೊಳ್ಳಲು ಎಡವುತ್ತಿರುವುದು ಡೆಲ್ಲಿಗೆ ಲಾಭವಾಗಬಹುದು.

ಒಂದೊಮ್ಮೆ ಈ ಪಂದ್ಯಕ್ಕೆ ವಿಭಿನ್ನ ಪಿಚ್‌ ಬಳಸಿ, ಸ್ಪಿನ್ನರ್‌ಗಳಿಗೆ ನೆರವು ಸಿಕ್ಕರೆ, ಚೆನ್ನೈ ಮೇಲುಗೈ ಸಾಧಿಸಲಿದೆ. ಹರ್ಭಜನ್‌, ತಾಹಿರ್‌ ಹಾಗೂ ಜಡೇಜಾ ಉತ್ತಮ ಲಯದಲ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಚೆನ್ನೈಗೆ ಹೆಚ್ಚು ಅನುಭವವಿದೆ. ಆದರೆ ಡೆಲ್ಲಿ ಒತ್ತಡಕ್ಕೆ ಸಿಲುಕಿ ಪರದಾಡಿದ ಹಲವು ಉದಾಹರಣೆಗಳಿವೆ. ಹೀಗಾಗಿ, ಡೆಲ್ಲಿ ಮೇಲೆ ಒತ್ತಡ ಹೇರಿದಷ್ಟೂಚೆನ್ನೈಗೆ ಗೆಲುವು ಸುಲಭವಾಗಲಿದೆ.

ಚೆನ್ನೈ ಬುಕ್ಕಿಗಳ ಫೇವರಿಟ್‌

ಐಪಿಎಲ್‌ನಲ್ಲಿ ಬೆಟ್ಟಿಂಗ್‌ ವ್ಯವಹಾರ ಜೋರಾಗಿ ಸಾಗಲಿದೆ. ಪ್ಲೇ-ಆಫ್‌ ಹಂತದಲ್ಲಿ ತುಸು ಹೆಚ್ಚಾಗೇ ಬೆಟ್ಟಿಂಗ್‌ ನಡೆಯಲಿದ್ದು, ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಎಂದರೆ ಡೆಲ್ಲಿ ಗೆಲ್ಲಲಿದೆ ಎಂದು ಹಣ ಹಾಕುವವರಿಗೆ ಹೆಚ್ಚಿನ ಲಾಭ ಸಿಗಲಿದೆ.

ಪಿಚ್‌ ರಿಪೋರ್ಟ್‌

ವಿಶಾಖಪಟ್ಟಣಂನ ಪಿಚ್‌ನಲ್ಲಿ ಚೆಂಡು ನಿಂತು ಬರುವ ಕಾರಣ, ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸುವುದು ಸವಾಲಾಗಿ ಪರಿಣಮಿಸಲಿದೆ. ವೇಗದ ಬೌಲಿಂಗ್‌ಗೆ ಪಿಚ್‌ ಹೆಚ್ಚು ಸಹಕಾರ ನೀಡುವ ನಿರೀಕ್ಷೆ ಇದೆ. 175ಕ್ಕೂ ಹೆಚ್ಚು ಮೊತ್ತ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ.

ಒಟ್ಟು ಮುಖಾಮುಖಿ: 20

ಚೆನ್ನೈ: 14

ಡೆಲ್ಲಿ: 06

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಡು ಪ್ಲೆಸಿ, ವಾಟ್ಸನ್‌, ರೈನಾ, ವಿಜಯ್‌, ರಾಯುಡು, ಧೋನಿ (ನಾಯಕ), ಜಡೇಜಾ, ಬ್ರಾವೋ, ಚಾಹರ್‌, ಹರ್ಭಜನ್‌, ತಾಹಿರ್‌.

ಡೆಲ್ಲಿ: ಪೃಥ್ವಿ, ಧವನ್‌, ಶ್ರೇಯಸ್‌ (ನಾಯಕ), ರಿಷಭ್‌, ಮನ್ರೊ, ಅಕ್ಷರ್‌, ರುದರ್‌ಫೋರ್ಡ್‌, ಪೌಲ್‌, ಮಿಶ್ರಾ, ಟ್ರೆಂಟ್‌ ಬೌಲ್ಟ್‌, ಇಶಾಂತ್‌.

ಸ್ಥಳ: ವಿಶಾಖಪಟ್ಟಣಂ 
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!