ಐಪಿಎಲ್‌: ಈಡನ್‌ನಲ್ಲಿಂದು ಗೇಲ್‌ Vs ರಸೆಲ್‌ ಫೈಟ್‌!

By Web DeskFirst Published Mar 27, 2019, 4:18 PM IST
Highlights

ಐಪಿಎಲ್’ನ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿರುವ ಕೋಲ್ಕತಾ ನೈಟ್’ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತೊಂದು ಜಯದ ನಿರೀಕ್ಷೆಯಲ್ಲಿದ್ದು, ಕ್ರಿಕೆಟ್ ಕಾಶಿ ಈಡನ್’ಗಾರ್ಡನ್ ಮೈದಾನದಲ್ಲಿ ಉಭಯ ತಂಡಗಳಿಂದು ಮುಖಾಮುಖಿಯಾಗುತ್ತಿವೆ.

ಕೋಲ್ಕತಾ[ಮಾ.27]: ಸೋಲುವ ಪಂದ್ಯಗಳನ್ನು ಗೆದ್ದು 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಶುಭಾರಂಭ ಮಾಡಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಹಾಗೂ ಕೋಲ್ಕತಾ ನೈಟ್‌ರೈಡ​ರ್ಸ್ ತಂಡಗಳು, ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ರಾಜಸ್ಥಾನ ರಾಯಲ್ಸ್‌ ಆಟಗಾರ ಜೋಸ್‌ ಬಟ್ಲರ್‌ರನ್ನು ವಿವಾದಾತ್ಮಕ ರೀತಿಯಲ್ಲಿ ಔಟ್‌ ಮಾಡಿದ ಪ್ರಸಂಗದ ಕುರಿತು ಇನ್ನೂ ಚರ್ಚೆ ನಡೆಯುತ್ತಲೇ ಇರುವಾಗಲೇ ಮತ್ತೊಂದು ಗೆಲುವಿಗೆ ಕಿಂಗ್ಸ್‌ ಇಲೆವೆನ್‌ ನಾಯಕ ಆರ್‌.ಅಶ್ವಿನ್‌ ರಣತಂತ್ರ ರೂಪಿಸಿದ್ದಾರೆ.

ಸನ್‌ರೈಸ​ರ್ಸ್ ವಿರುದ್ಧ ಕೊನೆ 3 ಓವರ್‌ಗಳಲ್ಲಿ 53 ರನ್‌ ಚಚ್ಚಿ ಗೆಲುವು ದಾಖಲಿಸಿದ್ದ ಕೋಲ್ಕತಾ, ಮತ್ತೊಂದು ಭರ್ಜರಿ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿ, ರಾಜಸ್ಥಾನವನ್ನು ಸೋಲಿನ ಕೂಪಕ್ಕೆ ತಳ್ಳಿದ್ದ ಕಿಂಗ್ಸ್‌ ಇಲೆವೆನ್‌ ಸಹ ಗೆಲುವಿನ ಓಟ ಮುಂದುವರಿಸಲು ಹಾತೊರೆಯುತ್ತಿದೆ.

ಗೇಲ್‌ ವರ್ಸಸ್‌ ರಸೆಲ್‌: ಎರಡೂ ತಂಡಗಳಿಗೆ ವಿಂಡೀಸ್‌ನ ಆಟಗಾರರೇ ಟ್ರಂಪ್‌ ಕಾರ್ಡ್‌ಗಳೆನಿಸಿದ್ದಾರೆ. ಪ್ರಮುಖವಾಗಿ ಪಂಜಾಬ್‌ನ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ಹಾಗೂ ಕೆಕೆಆರ್‌ನ ಪ್ರಚಂಡ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ ನಡುವಿನ ಸ್ಪರ್ಧೆ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಕೆಕೆಆರ್‌ನ ಸ್ಪಿನ್‌ ಅಸ್ತ್ರವಾಗಿ ಕಣಕ್ಕಿಳಿಯಲಿರುವ ಸುನಿಲ್‌ ನರೈನ್‌, ಆರಂಭಿಕ ಬ್ಯಾಟ್ಸ್‌ಮನ್‌ ಆಗಿಯೂ ಆಡಲಿದ್ದಾರೆ. ಮತ್ತೊಂದೆಡೆ ಗೇಲ್‌ರಷ್ಟೇ ಅಪಾಯಕಾರಿ ಬ್ಯಾಟ್ಸ್‌ಮನ್‌ ಎನಿಸಿರುವ ನಿಕೋಲಸ್‌ ಪೂರನ್‌, ಕಿಂಗ್ಸ್‌ ಇಲೆವೆನ್‌ನ ಬಲ ಹೆಚ್ಚಿಸಲಿದ್ದಾರೆ.

ರಾಹುಲ್‌, ಕಾರ್ತಿಕ್‌ ಮೇಲೆ ಒತ್ತಡ: ಕೆ.ಎಲ್‌.ರಾಹುಲ್‌, ದಿನೇಶ್‌ ಕಾರ್ತಿಕ್‌ ಬೇರೆ ಬೇರೆ ಐಪಿಎಲ್‌ ತಂಡಗಳ ಪರ ಆಡುತ್ತಿದ್ದರೂ, ಈ ಟೂರ್ನಿಯಲ್ಲಿ ಇಬ್ಬರ ಗುರಿ ಒಂದೇ ಆಗಿದೆ. ಐಪಿಎಲ್‌ ಟ್ರೋಫಿ ಗೆಲ್ಲಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಇಬ್ಬರೂ ಹೋರಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ರಾಹುಲ್‌ 4 ರನ್‌ ಗಳಿಸಿದರೆ, ಕಾರ್ತಿಕ್‌ 2 ರನ್‌ಗೆ ಔಟಾಗಿದ್ದರು. ವಿಶ್ವಕಪ್‌ ತಂಡದ ಆಯ್ಕೆಗೆ ಕೆಲವೇ ವಾರಗಳು ಬಾಕಿ ಇದ್ದು, ಇಬ್ಬರ ಮೇಲೂ ಸಾಕಷ್ಟುಒತ್ತಡವಿದೆ.

ಕೆಕೆಆರ್‌ ತಂಡ ಈ ಪಂದ್ಯದ ಬಳಿಕ ಮುಂದಿನ 4 ಪಂದ್ಯಗಳನ್ನು ತವರಿನಾಚೆ ಆಡಲಿದ್ದು, ಗೆಲುವಿನ ಲಯ ಮುಂದುವರಿಸಲು ಎದುರು ನೋಡುತ್ತಿದೆ. ಕೈಜಾರಿದ್ದ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಸೋಲಿನ ಹಳಿಗಿಳಿಯದಿರಲು ಎಚ್ಚರ ವಹಿಸಬೇಕಿದೆ.

ಒಟ್ಟು ಮುಖಾಮುಖಿ: 23

ಕೆಕೆಆರ್‌: 15

ಪಂಜಾಬ್‌: 08

ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ಕ್ರಿಸ್‌ ಲಿನ್‌, ಸುನಿಲ್‌ ನರೈನ್‌, ರಾಬಿನ್‌ ಉತ್ತಪ್ಪ, ದಿನೇಶ್‌ ಕಾರ್ತಿಕ್‌(ನಾಯಕ), ನಿತೀಶ್‌ ರಾಣಾ, ಆ್ಯಂಡ್ರೆ ರಸೆಲ್‌, ಶುಭ್‌ಮನ್‌ ಗಿಲ್‌, ಪೀಯೂಷ್‌ ಚಾವ್ಲಾ, ಕುಲ್ದೀಪ್‌ ಯಾದವ್‌, ಲಾಕಿ ಫಗ್ರ್ಯೂಸನ್‌, ಪ್ರಸಿದ್ಧ್ ಕೃಷ್ಣ.

ಪಂಜಾಬ್‌: ಕೆ.ಎಲ್‌.ರಾಹುಲ್‌, ಕ್ರಿಸ್‌ ಗೇಲ್‌, ಮಯಾಂಕ್‌ ಅಗರ್‌ವಾಲ್‌, ಸರ್ಫರಾಜ್‌, ನಿಕೋಲಸ್‌ ಪೂರನ್‌, ಮನ್‌ದೀಪ್‌, ಸ್ಯಾಮ್‌ ಕರ್ರನ್‌, ಆರ್‌.ಅಶ್ವಿನ್‌, ಮೊಹಮದ್‌ ಶಮಿ, ಮುಜೀಬ್‌ ರಹಮಾನ್‌, ಅಂಕಿತ್‌ ರಜಪೂತ್‌.

ಸ್ಥಳ: ಕೋಲ್ಕತಾ, ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

click me!