ಇಂಗ್ಲೆಂಡ್ ಸರಣಿಗೆ ಗಂಭೀರ್ ಜತೆ ರಾಜ್ಯದ ಕರುಣ್'ಗೂ ಅವಕಾಶ?

By Suvarna Web DeskFirst Published Nov 1, 2016, 4:43 PM IST
Highlights

ಎಂಎಸ್‌ಕೆ ಪ್ರಸಾದ್ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗಷ್ಟೇ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಆಟಗಾರರು ತೋರಿದ್ದ ಪ್ರದರ್ಶನವನ್ನೂ ಪರಿಗಣಿಸಲಿದೆ ಎಂದು ಹೇಳಲಾಗಿದೆ.

ಮುಂಬೈ(ನ.01): ಇದೇ ತಿಂಗಳ 9ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಗೆ ಭಾರತೀಯ ಆಯ್ಕೆಸಮಿತಿ ಬುಧವಾರ (ನ.2) ಭಾರತ ತಂಡವನ್ನು ಪ್ರಕಟಿಸಲಿದ್ದು, ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅಲಭ್ಯವಾಗಿದ್ದ ವೇಗಿ ಇಶಾಂತ್ ಶರ್ಮಾ ಮತ್ತೆ ತಂಡಕ್ಕೆ ಮರಳುವ ಸಂಭವವಿದೆ.

ಅಂತೆಯೇ ರಣಜಿ ಪಂದ್ಯಾವಳಿಯಲ್ಲಿ ಆಕರ್ಷಕ ಪ್ರದರ್ಶನ ನೀಡುತ್ತಿರುವ ಕರ್ನಾಟಕದ ಕರುಣ್ ನಾಯರ್‌ಗೂ ಆಯ್ಕೆಸಮಿತಿ ಕರೆ ಕೊಡುವ ಸಾಧ್ಯತೆ ಇದೆ. ಇನ್ನು ಕಿವೀಸ್ ವಿರುದ್ಧದ ಸರಣಿಯಲ್ಲಿ ಆಡಿದ್ದ ಹಿರಿಯ ಆಟಗಾರ ಗೌತಮ್ ಗಂಭೀರ್ ಕೂಡ ಇಂಗ್ಲೆಂಡ್ ಸರಣಿಗೆ ಮರಳುವ ಆಶಯವನ್ನು ಹೊತ್ತಿದ್ದಾರೆ.

ಆದರೆ, ಗಾಯಾಳುಗಳಾದ ಶಿಖರ್ ಧವನ್ ಮತ್ತು ಕರ್ನಾಟಕದ ಕೆ.ಎಲ್. ರಾಹುಲ್ ಮರಳುವಿಕೆ ಕುರಿತು ಯಾವುದೇ ಖಚಿತತೆ ಮೂಡಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮೂಲಗಳು ಹೇಳಿವೆ. ಈ ಇಬ್ಬರೂ ತಮ್ಮ ದೈಹಿಕ ಕ್ಷಮತೆಯನ್ನು ಇನ್ನಷ್ಟೇ ಋಜುವಾತುಪಡಿಸಬೇಕಿದೆ.

ಎಂಎಸ್‌ಕೆ ಪ್ರಸಾದ್ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗಷ್ಟೇ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಆಟಗಾರರು ತೋರಿದ್ದ ಪ್ರದರ್ಶನವನ್ನೂ ಪರಿಗಣಿಸಲಿದೆ ಎಂದು ಹೇಳಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಕಾನ್ಪುರ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು. ಇನ್ನು ಹಿರಿಯ ಆಟಗಾರ ಗೌತಮ್ ಗಂಭೀರ್, ಆಫ್ ಸ್ಪಿನ್ನರ್ ಜಯಂತ್ ಯಾದವ್‌ಗೆ ಕೋಲ್ಕತಾ ಟೆಸ್ಟ್‌ನಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಆ ಟೆಸ್ಟ್‌ನಲ್ಲಿ ಅವಕಾಶ ಪಡೆಯಲು ವಿಫಲವಾದ ಗಂಭೀರ್, ಇದೇ ಕೋಲ್ಕತಾ ಟೆಸ್ಟ್‌ನಲ್ಲಿ ಬೆರಳಿಗೆ ಗಾಯ ಮಾಡಿಕೊಂಡ ಶಿಖರ್ ಧವನ್ ಬದಲು ಅವಕಾಶ ಪಡೆದಿದ್ದರು. ಎರಡು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ ಗಂಭೀರ್ ಆಕರ್ಷಕ ಪ್ರದರ್ಶನ ನೀಡಿದರೂ, ಇತ್ತೀಚೆಗೆ ಕರ್ನಾಟಕ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಸಂಪೂರ್ಣ ವಿಫಲವಾಗಿದ್ದರು. ಆದರೆ, ಒಡಿಶಾ ವಿರುದ್ಧ 145 ರನ್ ಗಳಿಸಿರುವ ಗಂಭೀರ್‌ಗೆ ಆಯ್ಕೆಸಮಿತಿ ಮಣೆ ಹಾಕುವ ಸಂಭವವಿದೆ.

ಏತನ್ಮಧ್ಯೆ ರಾಜ್ಯದ ಪ್ರತಿಭಾನ್ವಿತ ಆಟಗಾರ ಕರುಣ್ ನಾಯರ್ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಕಿವೀಸ್ ವಿರುದ್ಧದ ಕೊನೆಯ ಟೆಸ್ಟ್‌ಗೆ ಆಯ್ಕೆಯಾದರೂ, ಅಂತಿಮ 11ರಲ್ಲಿ ಅವರು ಸ್ಥಾನ ಪಡೆದಿರಲಿಲ್ಲ. ಆದರೆ, ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಅಮೋಘವಾಗಿ ಮುನ್ನಡೆಸುತ್ತಿರುವ ಅವರು ತಂಡದಲ್ಲಿ ಸ್ಥಾನ ಪಡೆಯುವ ನಿಚ್ಚಳ ಸಾಧ್ಯತೆಗಳಿವೆ.

ಅಂದಹಾಗೆ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಂಡಿರುವ ಅಲೆಸ್ಟೈರ್ ಕುಕ್ ಸಾರಥ್ಯದ ಇಂಗ್ಲೆಂಡ್ ಇಂದು ಮುಂಬೈಗೆ ಬರಲಿದ್ದು, ಯಾವುದೇ ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಆದರೆ, ನ.5ರಂದು ರಾಜ್‌ಕೋಟ್‌ಗೆ ತೆರಳುವ ಮುನ್ನ ಒಂದೇ ಒಂದು ಅಭ್ಯಾಸ ಶಿಬಿರದಲ್ಲಿ ಭಾಗವಹಿಸಲಿದೆ.

click me!