ಫುಟ್ಬಾಲ್: ಬಲಿಷ್ಠ ಇಟಲಿಗೆ ಶಾಕ್ ಕೊಟ್ಟ ಭಾರತದ ಕಿರಿಯರು

By Suvarna Web DeskFirst Published May 20, 2017, 2:02 PM IST
Highlights

ನಿನ್ನೆ ಸಂಜೆ ಇಟಲಿಯ ಅರಿಜೋ ನಗರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಅಭಿಜಿತ್ ಸರ್ಕಾರ್(31ನೇ ನಿಮಿಷ) ಮತ್ತು ರಾಹುಲ್ ಪ್ರವೀಣ್ (80ನೇ ನಿಮಿಷ) ಗೋಲು ಗಳಿಸಿದರು. ಈ ಪಂದ್ಯದಲ್ಲಿ ಭಾರತೀಯರೇ ಹೆಚ್ಚು ಮೇಲುಗೈ ಸಾಧಿಸಿದ್ದು ಗಮನಾರ್ಹ.

ಬೆಂಗಳೂರು: ಭಾರತದ ಅಂಡರ್-17 ಫುಟ್ಬಾಲ್ ತಂಡವು ಅತಿದೊಡ್ಡ ಗೆಲುವು ಸಾಧಿಸಿದೆ. ವಿಶ್ವ ಫುಟ್ಬಾಲ್'ನ ದೈತ್ಯ ರಾಷ್ಟ್ರವೆನಿಸಿದ ಇಟಲಿ ಅಂಡರ್-17 ತಂಡದ ವಿರುದ್ಧ ಭಾರತದ ಕಿರಿಯರು 2-0 ಗೋಲುಗಳಿಂದ ಜಯಭೇರಿ ಭಾರಿಸಿದ್ದಾರೆ. ಅಂಡರ್-17 ವಿಶ್ವಕಪ್'ಗೆ ಅಣಿಯಾಗುತ್ತಿರುವ ಭಾರತದ ಹುಡುಗರಿಗೆ ಈ ಜಯ ಹೊಸ ಹುಮ್ಮಸ್ಸು ಮೂಡಿಸಲಿದೆ.

ನಿನ್ನೆ ಸಂಜೆ ಇಟಲಿಯ ಅರಿಜೋ ನಗರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಅಭಿಜಿತ್ ಸರ್ಕಾರ್(31ನೇ ನಿಮಿಷ) ಮತ್ತು ರಾಹುಲ್ ಪ್ರವೀಣ್ (80ನೇ ನಿಮಿಷ) ಗೋಲು ಗಳಿಸಿದರು. ಈ ಪಂದ್ಯದಲ್ಲಿ ಭಾರತೀಯರೇ ಹೆಚ್ಚು ಮೇಲುಗೈ ಸಾಧಿಸಿದ್ದು ಗಮನಾರ್ಹ. 8ನೇ ನಿಮಿಷದಲ್ಲಿ ಕೋಮಲ್ ತಾಟಲ್, 13ನೇ ನಿಮಿಷದಲ್ಲಿ ಅನಿಕೇತ್, 75ನೇ ನಿಮಿಷದಲ್ಲಿ ರಾಹುಲ್ ಪ್ರವೀಣ್ ಗೋಲು ಗಳಿಸುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತರಾಗಿದ್ದರು. ಇಲ್ಲದಿದ್ದರೆ ಭಾರತದ ಹುಡುಗರು ಇನ್ನಷ್ಟು ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಸಾಧ್ಯತೆ ಇತ್ತು.

ಈ ಬಾರಿಯ ಅಂಡರ್-17 ವಿಶ್ವಕಪ್ ಭಾರತದಲ್ಲೇ ನಡೆಯಲಿರುವುದರಿಂದ ಭಾರತ ತಂಡ ನೇರವಾಗಿ ವಿಶ್ವಕಪ್'ಗೆ ಕ್ವಾಲಿಫೈ ಆಗಿದೆ. 2013ರಿಂದಲೇ ವಿಶ್ವಕಪ್'ಗಾಗಿ ತಂಡವನ್ನು ಸಜ್ಜುಗೊಳಿಸುತ್ತಿರುವ ಭಾರತವು ಈಗಾಗಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿ ತಂಡವನ್ನು ಅಣಿಗೊಳಿಸಿದೆ. ಹಲವು ಬಾರಿ ವಿದೇಶೀ ಪ್ರವಾಸ ಮಾಡಿ ಬಲಿಷ್ಠ ರಾಷ್ಟ್ರಗಳೊಂದಿಗೆ ಪಂದ್ಯವನ್ನು ಆಯೋಜಿಸುತ್ತಿದೆ. ಅಕ್ಟೋಬರ್ 6ರಿಂದ 28ರವರೆಗೆ ನಡೆಯಲಿರುವ ಈ ಕಿರಿಯರ ವಿಶ್ವಕಪ್'ನಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಾಗಿದೆ.

click me!