ತಮಿಳುನಾಡಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಕಬ್ಬಡ್ಡಿ ಶಾಲೆ

First Published Jun 2, 2018, 10:08 AM IST
Highlights

ಭಾರತದಲ್ಲಿ ಕಬಡ್ಡಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ಕ್ರಿಕೆಟ್ ಪ್ರಖ್ಯಾತಿಗೆ ಪೈಪೋಟಿ ನೀಡುವಂತೆ ಜನಪ್ರಿಯವಾಗುತ್ತಿದೆ ಕಬಡ್ಡಿ. ಪ್ರೊ ಕಬಡ್ಡಿ ಎಂಬ ವೃತ್ತಿಪರ ಪಂದ್ಯಾವಳಿಯ ಆಗಮನದ ಬಳಿಕ ದೇಶದ ಮೂಲೆ ಮೂಲೆಗಳಿಗೂ ವಿಸ್ತಾರವಾಗಿದೆ ಈ ಮನರಂಜಕ ಆಟ.

ಸ್ಪಂದನ್ ಕಣಿಯಾರ್
ಬೆಂಗಳೂರು(ಜೂ.2): ಭಾರತದಲ್ಲಿ ಕಬಡ್ಡಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ಕ್ರಿಕೆಟ್ ಪ್ರಖ್ಯಾತಿಗೆ ಪೈಪೋಟಿ ನೀಡುವಂತೆ ಜನಪ್ರಿಯವಾಗುತ್ತಿದೆ ಕಬಡ್ಡಿ. ಪ್ರೊ ಕಬಡ್ಡಿ ಎಂಬ ವೃತ್ತಿಪರ ಪಂದ್ಯಾವಳಿಯ ಆಗಮನದ ಬಳಿಕ ದೇಶದ ಮೂಲೆ ಮೂಲೆಗಳಿಗೂ ವಿಸ್ತಾರವಾಗಿದೆ ಈ ಮನರಂಜಕ ಆಟ. 

ಪ್ರೊ ಕಬಡ್ಡಿಯ ವೃತ್ತಿಪರತೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ತಂಡವೊಂದರ ಮಾಲಿಕ ಸಂಸ್ಥೆ ಇದೀಗ ಯುವ ಪ್ರತಿಭೆಗಳನ್ನು ಬೆಳೆಸುವುದಕ್ಕೋಸ್ಕರ ವಿಶೇಷ ಶಾಲೆಯೊಂದನ್ನು ತೆರೆಯಲು ನಿರ್ಧರಿಸಿದೆ. ಪ್ರೊ ಕಬಡ್ಡಿಯ 12 ತಂಡಗಳಲ್ಲಿ ಒಂದಾಗಿರುವ ತಮಿಳ್ ತಲೈವಾಸ್ ತಂಡದ ಮಾಲಿಕರು ಚೆನ್ನೈನಲ್ಲಿ ವಸತಿ ಶಾಲೆಯೊಂದನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. 

ಅತಿ ಶೀಘ್ರದಲ್ಲಿ ಈ ಶಾಲೆ ಆರಂಭಗೊಳ್ಳಲಿದ್ದು, ದೇಶದಲ್ಲೇ ಕಬಡ್ಡಿಗಾಗಿ ಮೀಸಲಿರುವ ಮೊದಲ ಶಾಲೆ ಎನಿಸಿಕೊಳ್ಳಲಿದೆ. ಚೆನ್ನೈನ ಪ್ರತಿಷ್ಠಿತ ವಿದ್ಯಾಸಂಸ್ಥೆ ತಮಿಳ್ ತಲೈವಾಸ್‌ನ ಈ ವಿಭಿನ್ನ ಯೋಜನೆಗೆ ಕೈ ಜೋಡಿಸುತ್ತಿದೆ. ತಲೈವಾಸ್ ಕ್ರೀಡಾ ಸಂಬಂಧಿ ವ್ಯವಸ್ಥೆಗಳನ್ನುನೋಡಿಕೊಂಡರೆ, ಪ್ರತಿಷ್ಠಿತ ವಿದ್ಯಾಸಂಸ್ಥೆ ಆಟಗಾರರ ವಿದ್ಯಾಭ್ಯಾಸ, ವಾಸ್ತವ್ಯಕ್ಕೆ ಬೇಕಿರುವ ಅನುಕೂಲ ಮಾಡಲಿದೆ. 

ಸದ್ಯದಲ್ಲೇ ತಂಡ ಪ್ರತಿಷ್ಠಿತ ಸಂಸ್ಥೆಯ ಹೆಸರನ್ನು ತಲೈವಾಸ್ ಅಧಿಕೃತವಾಗಿ ಪ್ರಕಟ ಮಾಡಲಿದೆ. ಕಬಡ್ಡಿ ಅಕಾಡೆಮಿ ಸ್ಥಾಪನೆ ಗುರಿಯೊಂದಿಗೆ ವಸತಿ ಶಾಲೆ ಜತೆಜತೆಯಲ್ಲೇ ತಮಿಳುನಾಡಿನಾದ್ಯಂತ 10ಕ್ಕಿಂತಲೂ ಹೆಚ್ಚು ಕಬಡ್ಡಿ ಅಕಾಡೆಮಿ (ಕಬಡ್ಡಿ ಎಕ್ಸಲೆನ್ಸ್ ಸ್ಕೂಲ್)ಗಳನ್ನು ಆರಂಭಿಸುವುದು ತಮಿಳ್ ತಲೈವಾಸ್ ಮಾಲಿಕರ ಗುರಿಯಾಗಿದೆ.

ಎಷ್ಟು ಸಾಧ್ಯವೋ ಅಷ್ಟು ಆಳಕ್ಕಿಳಿದು ಪ್ರತಿಭೆಗಳ ಶೋಧ ನಡೆಸಲು ತಂಡ ವಿವಿಧ ಯೋಜನೆಗಳನ್ನು ರೂಪಿಸಿ, ಜಾರಿಗೆ ತರುತ್ತಿದೆ. ತಮಿಳ್ ತಲೈವಾಸ್ ವತಿಯಿಂದಲೇ ವಿವಿಧ ಹಂತಗಳ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವುದು ಸಹ ಮಾಲಿಕರ ಯೋಜನೆಗಳಲ್ಲಿ ಒಂದಾಗಿದೆ. 

ದಿಗ್ಗಜ ಕಬಡ್ಡಿ ಪಟುಗಳಿಂದ ಯುವ ಪ್ರತಿಭೆಗಳಿಗೆ ಟಿಪ್ಸ್:
ತಮಿಳ್ ತಲೈವಾಸ್ ತಂಡದಲ್ಲಿರುವ ಭಾರತೀಯ ಕಬಡ್ಡಿಯ ದಿಗ್ಗಜ ಆಟಗಾರರಾದ ಅಜಯ್ ಠಾಕೂರ್, ಮಂಜಿತ್ ಚಿಲ್ಲಾರ್, ಜಸ್ವೀರ್ ಸಿಂಗ್ ಸೇರಿದಂತೆ ಇನ್ನೂ ಅನೇಕ ಆಟಗಾರರು ವಸತಿ ಶಾಲೆಗಳಿಗೆ ತೆರಳಿ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ವೃತ್ತಿಪರ ಆಟಗಾರರಿಂದ ಪಡೆಯುವ ಮಾಹಿತಿ, ಸಲಹೆಗಳು ಹೊಸಬರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಪೈಕಿ ಅತ್ಯುತ್ತಮ ಆಟ ಪ್ರದರ್ಶಿಸುವವರಿಗೆ ಪ್ರೊ ಕಬಡ್ಡಿ ಲೀಗ್ ಸೇರಿದಂತೆ ವಿವಿಧ ಪಂದ್ಯಾವಳಿಗಳಲ್ಲಿ ಆಡುವ ಅವಕಾಶ ಕಲ್ಪಿಸುವುದು ಚೆನ್ನೈ ಮಾಲಿಕರ ಗುರಿಯಾಗಿದೆ. 

ಗೋಪಿಚಂದ್ ಅಕಾಡೆಮಿಗೂ ತಲೈವಾಸ್ ಮಾಲಿಕ ನೆರವು:  ತಲೈವಾಸ್ ಮಾಲಿಕರಲ್ಲಿ ಒಬ್ಬರಾದ ನಿಮ್ಮಗಡ್ಡ ಪ್ರಸಾದ್, ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. 2008ರಲ್ಲಿ ಗೋಪಿಚಂದ್ ಅಕಾಡೆಮಿ ಆರಂಭಿಸಲು ಆರ್ಥಿಕ ನೆರವಿಗಾಗಿ ಹುಡುಕಾಡುತ್ತಿದ್ದಾಗ, ಪ್ರಸಾದ್ ರೂ. 5 ಕೋಟಿ ಸಹಾಯ ಮಾಡಿದ್ದರು. 

ಇಂದು ಗೋಪಿಚಂದ್ ಅಕಾಡೆಮಿ ಸೈನಾ, ಸಿಂಧು, ಕಿದಾಂಬಿ ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್ ರಂತಹ ವಿಶ್ವ ಶ್ರೇಷ್ಠ, ಒಲಿಂಪಿಕ್ ಪದಕ ವಿಜೇತ ಶಟ್ಲರ್‌ಗಳನ್ನು ಕೊಡುಗೆ ನೀಡಿದೆ. ಇದೇ ರೀತಿ ಕಬಡ್ಡಿಗೂ ಕೊಡುಗೆ ನೀಡಬೇಕು ಎನ್ನುವುದು ಚೆನ್ನೈ ಮಾಲಿಕ ಪ್ರಸಾದ್‌ರ ಗುರಿಯಾಗಿದೆ.

3 ವಯೋಮಿತಿಗಳಲ್ಲಿ ಪ್ರತಿಭಾನ್ವಿತರ ಆಯ್ಕೆ:  
ತಮಿಳುನಾಡಿನಾದ್ಯಂತ ಪ್ರತಿಭಾನ್ವೇಷಣೆ ನಡೆಸಲಾಗುತ್ತಿದ್ದು, ಮೂರು ವಯೋಮಿತಿ(ಅಂಡರ್ 17, ಅಂಡರ್ 19 ಹಾಗೂ ಅಂಡರ್ 23)ಗಳಲ್ಲಿ ಆಟಗಾರರ ಆಯ್ಕೆ ನಡೆಸಲಾಗುತ್ತಿದೆ. ವಿವಿಧ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಂತಿಮವಾಗಿ 70 ಆಟಗಾರರನ್ನು ವಸತಿ ಶಾಲೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ತಮಿಳ್ ತಲೈವಾಸ್ ಸಿಇಒ ವೀರೇನ್ ಡಿ’ಸಿಲ್ವಾ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಈ ಆಟಗಾರರನ್ನು ಒಳಗೊಂಡ ತಂಡಗಳು ವಿವಿಧ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿವೆ. ದಿನೇ ದಿನೆ ದೇಶಾದ್ಯಂತ ಕಬಡ್ಡಿ ಪಂದ್ಯಾವಳಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಧ್ಯವಾದಷ್ಟು ಟೂರ್ನಿಗಳಲ್ಲಿ ತಲೈವಾಸ್‌ನ ವಿವಿಧ ವಯೋಮಿತಿಯ ತಂಡಗಳು ಪಾಲ್ಗೊಳ್ಳಲಿವೆ ಎಂದು ವೀರೇನ್ ಮಾಹಿತಿ ನೀಡಿದ್ದಾರೆ.

click me!