
ಮುಂಬೈ(ಅ. 26): ಅಂಡರ್-17 ಫೀಫಾ ವಿಶ್ವಕಪ್'ನಲ್ಲಿ ಭಾರತ ಲೀಗ್ ಹಂತವನ್ನೂ ದಾಟದಿದ್ದರೂ ವಿಶ್ವದ ಗಮನ ಸೆಳೆಯುತ್ತಿದೆ. ಈ ವಿಶ್ವಕಪ್ ಮೂಲಕ ವಿಶ್ವ ಫುಟ್ಬಾಲ್ ಭೂಪಟದಲ್ಲಿ ಸ್ಥಾನ ಪಡೆದ ಭಾರತ ದೇಶ ಈಗ ವಿಶ್ವದಾಖಲೆ ಬರೆಯುತ್ತಿದೆ. ಅಂಡರ್-17 ಫೀಫಾ ವಿಶ್ವಕಪ್'ನ ಇತಿಹಾಸದಲ್ಲೇ ಟೂರ್ನಿಗೆ ಅತೀ ಹೆಚ್ಚು ಪ್ರೇಕ್ಷಕರನ್ನು ಕೊಟ್ಟ ದೇಶ ಭಾರತವಾಗಿದೆ. ಈ ವಿಚಾರದಲ್ಲಿ ಚೀನಾದ ದಾಖಲೆಯನ್ನು ಭಾರತ ಮುರಿಯುತ್ತಿದೆ.
1985ರಲ್ಲಿ ಚೀನಾದಲ್ಲಿ ನಡೆದಿದ್ದ ಚೊಚ್ಚಲ ಅಂಡರ್-17 ವಿಶ್ವಕಪ್'ನಲ್ಲಿ ಒಟ್ಟು 12,30,027 ಪ್ರೇಕ್ಷಕರು ಸ್ಟೇಡಿಯಂಗಳಿಗೆ ಹೋಗಿ ಪಂದ್ಯಗಳನ್ನ ವೀಕ್ಷಿಸಿದ್ದರು. ಈ ಬಾರಿ ಭಾರತದಲ್ಲಿ ನಡೆಯುತ್ತಿರುವ ಟೂರ್ನಿಗೆ ಇನ್ನೂ ಹೆಚ್ಚಿನ ಪ್ರೇಕ್ಷಕರು ಹರಿದುಬಂದಿದ್ದಾರೆ.
ಮುಂಬೈನಲ್ಲಿ ನಿನ್ನೆ ನಡೆದ ಸ್ಪೇನ್ ಮತ್ತು ಮಾಲಿ ನಡುವಿನ ಸೆಮಿಫೈನಲ್ ಪಂದ್ಯ ವೀಕ್ಷಿಸಲು 37,487 ಜನರು ಸ್ಟೇಡಿಯಂಗೆ ಜಮಾಯಿಸಿದ್ದರು. ಅದರೊಂದಿಗೆ ಇಡೀ ಟೂರ್ನಿಯಲ್ಲಿ ಒಟ್ಟು ಪ್ರೇಕ್ಷಕರ ಸಂಖ್ಯೆ 12,24,027 ಆಗಿದೆ. ಇದು ಚೀನಾದ ಒಟ್ಟು ಪ್ರೇಕ್ಷಕರ ಮೊತ್ತಕ್ಕಿಂತ 6 ಸಾವಿರ ಕಡಿಮೆ. ಆದರೆ, ಕೋಲ್ಕತಾದಲ್ಲಿ ಸ್ಪೇನ್ ಮತ್ತು ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯ ಬಾಕಿ ಇದೆ. ಫೂಟ್ಬಾಲ್ ಹುಚ್ಚು ಸಿಕ್ಕಾಪಟ್ಟೆ ಇರುವ ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ 60 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಹರಿದುಬರುವ ನಿರೀಕ್ಷೆ ಇದೆ. ಹೀಗಾಗಿ, ಅಂಡರ್-17 ಫೀಫಾ ವಿಶ್ವಕಪ್ ಟೂರ್ನಿಗೆ ಅತೀ ಹೆಚ್ಚು ಪ್ರೇಕ್ಷಕರನ್ನು ಕೊಟ್ಟ ಕೀರ್ತಿ ಮತ್ತು ದಾಖಲೆ ಭಾರತದ್ದಾಗುವುದು ನಿಶ್ಚಿತ.
ಯಾವುದೇ ಸ್ತರದ ಫೀಫಾ ವಿಶ್ವಕಪ್'ನಲ್ಲಿ ಭಾರತ ಆಡಿದ್ದು ಮತ್ತು ಆಯೋಜಿಸಿದ್ದು ಇದೇ ಮೊದಲು. ತನ್ನ ಚೊಚ್ಚಲ ಟೂರ್ನಿಯಲ್ಲಿ ಭಾರತ ತಂಡ ಸ್ವಲ್ಪಮಟ್ಟಿಗೆ ಗಮನ ಸೆಳೆಯುವಂಥ ಪ್ರದರ್ಶನ ನೀಡಿತು. ಅಮೆರಿಕ, ಕೊಲಂಬಿಯಾ ಮತ್ತು ಘಾನಾ ತಂಡಗಳ ವಿರುದ್ಧ ಭಾರತ ವೀರೋಚಿತ ಹೋರಾಟದ ಪ್ರದರ್ಶನ ನೀಡಿತು. ಆದರೆ, ತಾಂತ್ರಿಕ ಕೌಶಲ್ಯ, ದೈಹಿಕ ಕ್ಷಮತೆ ಹೀಗೆ ಎಲ್ಲಾ ಸ್ತರಗಳಲ್ಲೂ ಉಚ್ಚ ಮಟ್ಟದಲ್ಲಿರುವ ಆ ತಂಡಗಳಿಂದ ಭಾರತಕ್ಕೆ ಒಂದೂ ಪಾಯಿಂಟ್ ದಕ್ಕಿಸಿಕೊಳ್ಳಲಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.