
ಇಪೋ, ಮಲೇಷ್ಯಾ(ಮೇ 6): ಸುಲ್ತಾನ್ ಆಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಮೂರನೇ ಸ್ಥಾನ ಪಡೆಯಿತು. ನಿನ್ನೆ ಮಲೇಷ್ಯಾ ವಿರುದ್ಧ ಸೋಲಿನ ಆಘಾತ ಉಂಡಿದ್ದ ಭಾರತ ತಂಡ ಇಂದು ನ್ಯೂಜಿಲೆಂಡ್ ವಿರುದ್ಧ ನಿಚ್ಚಳ ಗೆಲುವನ್ನು ಸಾಧಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕಿವೀಸ್ ಪಡೆಯನ್ನು 4-0 ಗೋಲುಗಳಿಂದ ಭಾರತ ಸದೆಬಡಿಯಿತು. ಈ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ರೂಪಿಂದರ್ ಪಾಲ್ ಸಿಂಗ್ 2 ಗೋಲು ಗಳಿಸಿ ಭಾರತದ ಗೆಲುವಿಗೆ ಬುನಾದಿ ಹಾಕಿಕೊಟ್ಟರು. ಕೊಡಗಿನ ಹುಡುಗ ಎಸ್.ವಿ.ಸುನೀಲ್ ಮತ್ತು ತಲ್ವೀಂದರ್ ಸಿಂಗ್ ಕೂಡ ಗೋಲು ಗಳಿಸಿ ತಂಡದ ಗೆಲುವನ್ನು ಖಾತ್ರಿಗೊಳಿಸಿದರು.
ಇದಕ್ಕೂ ಮುನ್ನ ನಿನ್ನೆ ನಡೆದ ಲೀಗ್ ಹಂತದ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ವಿರುದ್ಧ ಭಾರತ 0-1ರಿಂದ ಸೋತಿತು. ವಿಶ್ಲೇಷಕರ ಪ್ರಕಾರ ಆ ಪಂದ್ಯದಲ್ಲಿ ಭಾರತ ಹಾಕಿ ತಂಡದ ಪ್ರದರ್ಶನ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಹೀನಾಯವಂತೆ. ಆ ಪಂದ್ಯ ಗೆದ್ದಿದ್ದರೆ ಭಾರತ ತಂಡ ಫೈನಲ್'ಗೆ ಏರುವ ಅವಕಾಶವಿತ್ತು. ಕಳೆದ ಬಾರಿ ರನ್ನರ್'ಅಪ್ ಆಗಿದ್ದ ಭಾರತ ತಂಡ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾದ ಪ್ರಮೇಯ ಬರುತ್ತಿರಲಿಲ್ಲ.
ಭಾರತ ವಿರುದ್ಧ ಅಚ್ಚರಿಯ ಗೆಲುವು ಪಡೆದ ಮಲೇಷ್ಯಾ ಅದೇ ಉತ್ಸಾಹದಲ್ಲಿ ಜಪಾನ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ 5ನೇ ಸ್ಥಾನ ಪಡೆಯಿತು. ಜಪಾನಿಗರು ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟರು. ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ಗ್ರೇಟ್ ಬ್ರಿಟನ್ ನಡುವಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.