
ಢಾಕಾ(ಅ. 22): ಭಾರತ ಹಾಕಿ ತಂಡ 10 ವರ್ಷದ ಬಳಿಕ ಏಷ್ಯಾ ಕಪ್ ಹಾಕಿ ಟೂರ್ನಿ ಜಯಿಸಿದೆ. ಇಂದು ನಡೆದ ಫೈನಲ್'ನಲ್ಲಿ ಮಲೇಷ್ಯಾ ವಿರುದ್ಧ ಭಾರತ 2-1 ಗೋಲುಗಳಿಂದ ಗೆಲುವು ಸಾಧಿಸಿದೆ. ಇಡೀ ಪಂದ್ಯವು ಭಾರತದ ಬಿಗಿಹಿಡಿತದಲ್ಲೇ ಇತ್ತು. ಕೊನೆಯಲ್ಲಿ ಮಲೇಷ್ಯಾ ಒಂದು ಗೋಲು ಹೊಡೆದು ಸೋಲು ಅಂತರ ತಗ್ಗಿಸಿಕೊಂಡಿತಾದರೂ ಭಾರತಕ್ಕೆ ಮೊದಲಿಂದಲೂ ಗೆಲುವು ನಿಶ್ಚಿತವೆಂಬಂತಿತ್ತು. ಪಂದ್ಯ ಶುರುವಾದ 3ನೇ ನಿಮಿಷದಲ್ಲೇ ರಮಣದೀಪ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್'ನ ಕೊನೆ ಘಳಿಗೆಯಲ್ಲಿ ಲಲಿತ್ ಉಪಾಧ್ಯಾಯ್ ಗೋಲು ಗಳಿಸಿದರು. ಆದರೆ, ಪಂದ್ಯ ಮುಗಿಯಲು 10 ನಿಮಿಷ ಇರುವಾಗ ಮಲೇಷ್ಯಾದ ಶಹ್ರಿಲ್ ಸಾಬಾ ಗೋಲು ಗಳಿಸಿ ಅಂತರ ತಗ್ಗಿಸಿದರು. ಈ ಪಂದ್ಯದಲ್ಲಿ ಕೊಡಗಿನ ಹುಡುಗ ಎಸ್.ವಿ.ಸುನೀಲ್ ಗೋಲು ಗಳಿಸದಿದ್ದರೂ ತಮ್ಮ ಚುರುಕಿನ ದಾಳಿ ಮೂಲಕ ಎದುರಾಳಿ ಡಿಫೆಂಡರ್'ಗಳ ಕಂಗೆಡಿಸಿದರು.
ಭಾರತ ತಂಡ ಏಷ್ಯಾ ಕಪ್ ಟೂರ್ನಿಯನ್ನು ಜಯಿಸುತ್ತಿರುವುದು ಇದು ಮೂರನೇ ಬಾರಿ. 1982ರಲ್ಲಿ ಪ್ರಾರಂಭಗೊಂಡ ಏಷ್ಯಾಕಪ್ ಟೂರ್ನಿ ಇಲ್ಲಿಯವರೆಗೆ 10 ಬಾರಿ ನಡೆದಿದೆ. ಭಾರತ ತಂಡ 2003 ಮತ್ತು 2007ರಲ್ಲಿ ಪ್ರಶಸ್ತಿ ಜಯಿಸಿತ್ತು. ಅದಾದ ಬಳಿಕ ಮೊದಲ ಬಾರಿ ಚಾಂಪಿಯನ್ ಆಗಿದೆ. ಇದು ಬಿಟ್ಟರೆ 5 ಬಾರಿ ರನ್ನರ್'ಅಪ್ ಆಗಿದೆ. ನೆರೆಯ ಪಾಕಿಸ್ತಾನ ಟೂರ್ನಿ ಆರಂಭದಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಆಗಿದ್ದು ಬಿಟ್ಟರೆ 28 ವರ್ಷಗಳಿಂದ ಗೆಲುವಿನ ಪಟ್ಟ ಸಿಕ್ಕಿಲ್ಲ. ಇನ್ನು, ನಾಲ್ಕು ಬಾರಿ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾದ ಹ್ಯಾಟ್ರಿಕ್ ಗೆಲುವಿನ ಕನಸು ಈ ಬಾರಿ ಈಡೇರಿಲ್ಲ. ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾ ಈ ಬಾರಿ 3 ಮತ್ತು 4ನೇ ಸ್ಥಾನಕ್ಕೆ ತೃಪ್ತಿಪಟ್ಟಿವೆ. ಮಲೇಷ್ಯಾ ತಂಡ ಏಷ್ಯಾ ಕಪ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಫೈನಲ್ ತಲುಪಿ ಅಚ್ಚರಿ ಮೂಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.