
ಬೆಂಗಳೂರು(ಮಾ. 07): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಕಂಬ್ಯಾಕ್ ಮಾಡಿದೆ. ಮೊದಲ ಟೆಸ್ಟ್'ನಲ್ಲಿ ಭಾರತೀಯರು ಒತ್ತಡಕ್ಕೆ ನಲುಗಿದರೆ, ಎರಡನೇ ಟೆಸ್ಟ್'ನಲ್ಲಿ ಒತ್ತಡಕ್ಕೊಳಗಾಗುವ ಸರದಿ ಆಸ್ಟ್ರೇಲಿಯನ್ನರದ್ದು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 75 ರನ್'ಗಳಿಂದ ಅಮೋಘ ಗೆಲುವು ಸಾಧಿಸಿದೆ. ಗೆಲ್ಲಲು 188 ರನ್ ಗುರಿ ಪಡೆದ ಆಸ್ಟ್ರೇಲಿಯಾ ತಂಡ ಕೇವಲ 112 ರನ್ನಿಗೆ ಆಲೌಟ್ ಆಯಿತು. ಸ್ಟೀವ್ ಸ್ಮಿತ್ ಮತ್ತು ಪೀಟರ್ ಹ್ಯಾಂಡ್ಸ್'ಕೂಂಬ್ ಅವರನ್ನು ಹೊರತುಪಡಿಸಿ ಉಳಿದ ಆಸ್ಟ್ರೇಲಿಯನ್ನರು ವಿಫಲರಾದರು. ಆರ್.ಅಶ್ವಿನ್ 41 ರನ್ನಿತ್ತು 6 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇದಕ್ಕೆ ಮುನ್ನ, ನಿನ್ನೆ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ್ದ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸಲ್ಲಿ 274 ರನ್ನಿಗೆ ಆಲೌಟ್ ಆಯಿತು. ಚೇತೇಶ್ವರ್ ಪೂಜಾರ ಕೇವಲ 8 ರನ್ನಿಂದ ಶತಕವಂಚಿತರಾದರು. ಅಜಿಂಕ್ಯ ರಹಾನೆ ಅರ್ಧಶತಕ ಭಾರಿಸಿದರು. ವಿರಾಟ್ ಕೊಹ್ಲಿ, ಕರುಣ್ ನಾಯರ್ ವಿಫಲರಾಗಿದ್ದು, ಭಾರತದ ದೊಡ್ಡ ಮೊತ್ತದ ಕನಸಿಕ್ಕೆ ತಣ್ಣೀರೆರಚಿದಂತಾಯಿತು.
ಆದರೆ, ಮೊದಲ ಇನ್ನಿಂಗ್ಸಲ್ಲಿ 8 ವಿಕೆಟ್ ಪಡೆದು ಭಾರತೀಯರಿಗೆ ನಡುಕ ಹುಟ್ಟಿಸಿದ್ದ ನೇಥನ್ ಲಯಾನ್ ಎರಡನೇ ಇನ್ನಿಂಗ್ಸಲ್ಲಿ ಒಂದೂ ವಿಕೆಟ್ ಗಿಟ್ಟಿಸಲಿಲ್ಲ. ಜೋಶ್ ಹೇಜಲ್ವುಡ್ 6 ವಿಕೆಟ್ ಪಡೆದು ಮಿಂಚಿದರು.
ಟೀಮ್ ಇಂಡಿಯಾ ಈ ಗೆಲುವಿನೊಂದಿಗೆ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಮೂರನೇ ಪಂದ್ಯವು ಮಾ. 16ರಿಂದ ರಾಂಚಿಯಲ್ಲಿ ನಡೆಯಲಿದೆ.
ಭಾರತ ಮೊದಲ ಇನ್ನಿಂಗ್ಸ್ 71.2 ಓವರ್ 189 ರನ್ ಆಲೌಟ್
(ಕೆಎಲ್ ರಾಹುಲ್ 90, ಕರುಣ್ ನಾಯರ್ 26, ಚೇತೇಶ್ವರ್ ಪೂಜಾರ 17, ಅಜಿಂಕ್ಯ ರಹಾನೆ 17 ರನ್ - ನೇಥನ್ ಲಯಾನ್ 50/8)
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 122.4 ಓವರ್ 276 ರನ್ ಆಲೌಟ್
(ಶಾನ್ ಮಾರ್ಷ್ 66, ಮ್ಯಾಟ್ ರೇನ್'ಶಾ 60, ಮ್ಯಾಥ್ಯೂ ವೇಡ್ 40, ಡೇವಿಡ್ ವಾರ್ನರ್ 33, ಮಿಶೆಲ್ ಸ್ಟಾರ್ಕ್ 26 ರನ್ - ರವೀಂದ್ರ ಜಡೇಜಾ 63/6, ಆರ್.ಅಶ್ವಿನ್ 84/2)
ಭಾರತ ಎರಡನೇ ಇನ್ನಿಂಗ್ಸ್ 97.1 ಓವರ್ 274 ರನ್ ಆಲೌಟ್
(ಚೇತೇಶ್ವರ್ ಪೂಜಾರ 92, ಅಜಿಂಕ್ಯ ರಹಾನೆ 52, ಕೆಎಲ್ ರಾಹುಲ್ 51, ವೃದ್ಧಿಮಾನ್ ಸಾಹಾ ಅಜೇಯ 20, ಅಭಿನವ್ ಮುಕುಂದ್ 16, ವಿರಾಟ್ ಕೊಹ್ಲಿ 15 ರನ್ - ಜೋಶ್ ಹೇಜಲ್ವುಡ್ 67/6, ಸ್ಟೀವ್ ಓ ಕೀಫೆ 36/2, ಮಿಶೆಲ್ ಸ್ಟಾರ್ಕ್ 74/2)
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 35.4 ಓವರ್ 112 ರನ್ ಆಲೌಟ್
(ಸ್ಟೀವ್ ಸ್ಮಿತ್ 28, ಪೀಟರ್ ಹ್ಯಾಂಡ್ಸ್'ಕೂಂಬ್ 24, ಡೇವಿಡ್ ವಾರ್ನರ್ 17 ರನ್ - ಆರ್.ಅಶ್ವಿನ್ 41/6, ಉಮೇಶ್ ಯಾದವ್ 30/2)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.