ಟೆಸ್ಟ್ ಆರಂಭಕ್ಕೂ ಮುನ್ನ ಇಂಗ್ಲೆಂಡ್’ಗೆ ಶುಭ ಕೋರಿದ ಐಸಿಸಿ

By Web DeskFirst Published Jul 31, 2018, 1:53 PM IST
Highlights

'1000 ಟೆಸ್ಟ್ ಪಂದ್ಯವಾಡುತ್ತಿರುವ ಜಗತ್ತಿನ ಮೊದಲ ತಂಡವೆಂದು ಹೆಗ್ಗಳಿಕೆಗೆ ಪಾತ್ರವಾಗುತ್ತಿರುವ ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಪಂದ್ಯವಾಡುತ್ತಿರುವ ಇಂಗ್ಲೆಂಡ್ ತಂಡವು ಮತ್ತಷ್ಟು ಉತ್ತಮ ಕ್ರಿಕೆಟಿಗರನ್ನು ಜಗತ್ತಿಗೆ ನೀಡಲಿ ಎಂದು ಆಶೀಸುತ್ತೇನೆ'

ದುಬೈ[ಜು.31]: ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಶುಭಕೋರಿದೆ. ಆಗಸ್ಟ್ 01ರಿಂದ ಎಡ್ಜ್’ಬಾಸ್ಟನ್’ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯವು ಇಂಗ್ಲೆಂಡ್ ತಂಡದ 1000ನೇ ಟೆಸ್ಟ್ ಅಂತರಾಷ್ಟ್ರೀಯ ಪಂದ್ಯವಾಗಿರಲಿದೆ.

'1000 ಟೆಸ್ಟ್ ಪಂದ್ಯವಾಡುತ್ತಿರುವ ಜಗತ್ತಿನ ಮೊದಲ ತಂಡವೆಂದು ಹೆಗ್ಗಳಿಕೆಗೆ ಪಾತ್ರವಾಗುತ್ತಿರುವ ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಪಂದ್ಯವಾಡುತ್ತಿರುವ ಇಂಗ್ಲೆಂಡ್ ತಂಡವು ಮತ್ತಷ್ಟು ಉತ್ತಮ ಕ್ರಿಕೆಟಿಗರನ್ನು ಜಗತ್ತಿಗೆ ನೀಡಲಿ ಎಂದು ಆಶೀಸುತ್ತೇನೆಂದು' ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಶುಭಕೋರಿದ್ದಾರೆ.

ಇಂಗ್ಲೆಂಡ್ ತಂಡವು 1877ರಂದು ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿತ್ತು. ಅಲ್ಲಿಂದ ಇಂದಿನವರೆಗೆ ಇಂಗ್ಲೆಂಡ್ ತಂಡವು 999 ಟೆಸ್ಟ್ ಪಂದ್ಯಗಳನ್ನಾಡಿದ್ದು, 357 ಪಂದ್ಯಗಳಲ್ಲಿ ಗೆಲುವು, 297 ಸೋಲು ಹಾಗೂ 345 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.  ಇನ್ನು ಎಡ್ಜ್’ಬಾಸ್ಟನ್ ಮೈದಾನ ಇಂಗ್ಲೆಂಡ್ ತಂಡದ 1000ನೇ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಏಕೈಕ ಮೈದಾನವೆನಿಸಲಿದೆ. 

ಈ ಮೈದಾನದಲ್ಲಿ ಇದುವರೆಗೆ ಇಂಗ್ಲೆಂಡ್ ತಂಡವು 50 ಪಂದ್ಯಗಳನ್ನಾಡಿದ್ದು, 27 ಗೆಲುವು, 8 ಸೋಲು ಹಾಗೂ 15 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಇದುವರೆಗೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಒಟ್ಟು 177 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ ತಂಡವು 43ರಲ್ಲಿ ಗೆಲುವು, 25ರಲ್ಲಿ ಸೋಲು ಕಂಡಿದೆ. 

click me!