
ಧರ್ಮಶಾಲಾ(ಅ.7): ರಣಜಿ ಟ್ರೋಫಿಯ ಮೊದಲ ದಿನವೇ ದ್ವಿಶತಕ ಸಿಡಿಸಿ ಮಿಂಚಿದ್ದ ಹಿಮಾಚಲ ಪ್ರದೇಶದ ಯುವ ಬ್ಯಾಟ್ಸ್'ಮನ್ ಪ್ರಶಾಂತ್ ಛೋಪ್ರಾ, ಇಂದು ಪ್ರಸಕ್ತ ಸಾಲಿನ ಚೊಚ್ಚಲ ತ್ರಿಶತಕ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ರಣಜಿ ಕ್ರಿಕೆಟ್'ನಲ್ಲಿ ತ್ರಿಶತಕ ಸಿಡಿಸಿದ 41ನೇ ಆಟಗಾರ ಎಂಬ ಹಿರಿಮೆಗೆ ಛೋಪ್ರಾ ಪಾತ್ರರಾಗಿದ್ದಾರೆ. ಪ್ರಶಾಂತ್ ಛೋಪ್ರಾ(338 ರನ್) ಆಕರ್ಷಕ ತ್ರಿಶತಕದ ನೆರವಿನಿಂದ ಹಿಮಾಚಲ ಪ್ರದೇಶ 8 ವಿಕೆಟ್'ಗೆ 729 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಪಂಜಾಬ್ ಒಂದು ವಿಕೆಟ್ ನಷ್ಟಕ್ಕೆ 110 ರನ್ ಬಾರಿಸಿದೆ.
ಇನ್ನು ಟೀಂ ಇಂಡಿಯಾದಿಂದ ಪದೇಪದೇ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಡೆಲ್ಲಿ ಅನುಭವಿ ಬ್ಯಾಟ್ಸ್'ಮನ್ ಗೌತಮ್ ಗಂಭೀರ್(136*) ಅಜೇಯ ಶತಕ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗಂಭೀರ್ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ನನ್ನಲ್ಲಿ ಇನ್ನೂ ಬ್ಯಾಟಿಂಗ್ ಉಳಿದಿದೆ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ಗಂಭೀರ್ ಸಿಡಿಸಿದ 40ನೇ ಶತಕವಾಗಿದೆ. ಇನ್ನುಳಿದಂತೆ ಡೆಲ್ಲಿಯ ಮತ್ತೋರ್ವ ಬ್ಯಾಟ್ಸ್'ಮನ್ ನಿತೀಶ್ ರಾಣಾ ಶತಕ ಸಿಡಿಸಿ ಗಂಭೀರ್'ಗೆ ಸಾಥ್ ನೀಡಿದರು. ಇದಕ್ಕೂ ಡೆಲ್ಲಿ ತಂಡದ ನಾಯಕರಾಗಿರುವ ವೇಗಿ ಇಶಾಂತ್ ಶರ್ಮಾ ಕೇವಲ 38 ರನ್‌ಗಳಿಗೆ 5 ವಿಕೆಟ್ ಪಡೆದು ಮಿಂಚಿದರು
ಉಳಿದಂತೆ ಛತ್ತಿಸ್'ಗಢ ತಂಡದ ಮನೋಜ್ ಸಿಂಗ್, ಗೋವಾ ವಿರುದ್ಧದ ಪಂದ್ಯದಲ್ಲಿ 125 ರನ್'ಗಳಿಸಿದರು. ಮಧ್ಯಪ್ರದೇಶ ತಂಡದ ಶುಭಂ ಶರ್ಮಾ ಮತ್ತು ಅಂಕಿತ್ ಶರ್ಮಾ, ಬರೋಡಾ ಎದುರಿನ ಪಂದ್ಯದಲ್ಲಿ ಶತಕಗಳಿಸಿದರು. ಶುಭಂ 196 ರನ್'ಗಳಿಸಿ ಕೇವಲ 4 ರನ್'ಗಳಿಂದ ದ್ವಿಶತಕ ವಂಚಿತರಾದರು.
ಪಂದ್ಯಗಳ ಸ್ಕೋರ್ ವಿವರ (2ನೇ ದಿನದಂತ್ಯಕ್ಕೆ)
ತಮಿಳುನಾಡು 176/10 ವಿರುದ್ಧ ಆಂಧ್ರ 231/7
ಸೌರಾಷ್ಟ್ರ 278/10 ವಿರುದ್ಧ ಹರ್ಯಾಣ 107 ಮತ್ತು 93/6
ರಾಜಸ್ಥಾನ 330/10 ವಿರುದ್ಧ ಜಮ್ಮು ಕಾಶ್ಮೀರ 150/1
ಅಸ್ಸಾಂ 258/10 ವಿರುದ್ಧ ದೆಹಲಿ 269/4
ರೈಲ್ವೇಸ್ 182/10 ಮತ್ತು 27/3 ವಿರುದ್ಧ ಉತ್ತರ ಪ್ರದೇಶ 250/10
ಜಾರ್ಖಂಡ್ 202/10 ವಿರುದ್ಧ ಕೇರಳ 250/8
ಮಧ್ಯಪ್ರದೇಶ 551/10 ವಿರುದ್ಧ ಬರೋಡಾ 36/2
ಬಂಗಾಳ 552/9 ವಿರುದ್ಧ ಸರ್ವೀಸಸ್ 103/1
ಛತ್ತಿಸ್‌ಗಢ 458/10 ವಿರುದ್ಧ ಗೋವಾ 28/0
ಹಿಮಾಚಲ ಪ್ರದೇಶ 729/8 ವಿರುದ್ಧ ಪಂಜಾಬ್ 110/1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.