
ಮಾಸ್ಕೋ[ಜೂ.20]: ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ ಬಾರಿಸಿದ ಹೆಡ್ಡರ್ ಗೋಲಿನ ನೆರವಿನಿಂದ ಮೊರಾಕ್ಕೋ ವಿರುದ್ಧ ಪೋರ್ಚುಗಲ್ 1-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವು ಪೋರ್ಚುಗಲ್ ಮುಂದಿನ ಪ್ರವಾಸದ ಕನಸು ಜೀವಂತವಾಗಿರಿಸಿದರೆ, ಮೊರಕ್ಕೋ ಫಿಫಾ ವಿಶ್ವಕಪ್’ನಿಂದ ಹೊರಬಿದ್ದಿದೆ.
ಇಲ್ಲಿನ ಲಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ’ಬಿ’ ಗುಂಪಿನ ಪಂದ್ಯದಲ್ಲಿ ಪೋರ್ಚುಗಲ್ ಕೊನೆಗೂ ಜಯದ ನಿಟ್ಟುಸಿರು ಬಿಟ್ಟಿದೆ. ಸ್ಪೇನ್ ವಿರುದ್ಧ ರೋಚಕ ಡ್ರಾ ಸಾಧಿಸಲು ಕಾರಣವಾಗಿದ್ದ ನಾಯಕ ರೊನಾಲ್ಡೋ ಮತ್ತೊಮ್ಮೆ ತಂಡಕ್ಕೆ ಆಪತ್ಭಾಂದವರೆನಿಸಿದರು. ಪಂದ್ಯದ 4ನೇ ನಿಮಿಷದಲ್ಲಿ ಹೆಡ್ಡರ್ ಮೂಲಕ ಗೋಲು ಬಾರಿಸಿದ ರೊನಾಲ್ಡೋ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧ ಮುಕ್ತಾಯದ ವೇಳೆಗೆ ಪೋರ್ಚುಗಲ್ 1-0 ಮುನ್ನಡೆ ಕಾಯ್ದುಕೊಂಡಿತ್ತು.
ದ್ವಿತಿಯಾರ್ಧದಲ್ಲಿ ಮೊರಾಕ್ಕೋ ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನಿಸಿತಾದರೂ ಪೋರ್ಚುಗಲ್ ಪಡೆಯ ರಕ್ಷಣಾತ್ಮಕ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪೋರ್ಚುಗಲ್ ಜಯದ ಕೇಕೆ ಹಾಕಿತು.
ಇತಿಹಾಸ ಬರೆದ ರೊನಾಲ್ಡೋ:
ಅಂತರಾಷ್ಟ್ರೀಯ ಫುಟ್ಬಾಲ್’ನಲ್ಲಿ ಯೂರೋಪ್ ಪರ ಗರಿಷ್ಠ ಗೋಲು ಸಿಡಿಸಿದ ಆಟಗಾರ ಎನ್ನುವ ದಾಖಲೆಯನ್ನು ಕ್ರಿಸ್ಟಿಯಾನೋ ರೊನಾಲ್ಡೊ ನಿರ್ಮಿಸಿದ್ದಾರೆ. ಮೊರಾಕ್ಕೋ ವಿರುದ್ಧದ ಪಂದ್ಯದಲ್ಲಿ ಫೋರ್ಚುಗಲ್’ನ ಸೂಪರ್ ಸ್ಟಾರ್ ರೊನಾಲ್ಡೋ ಅಂತರಾಷ್ಟ್ರೀಯ ಫುಟ್ಬಾಲ್’ನಲ್ಲಿ 85ನೇ ಗೋಲು ಸಿಡಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ.
ಈ ಮೂಲಕ ಫುಟ್ಬಾಲ್ ದಂತಕತೆ ಫೆರೇಂಕ್ ಪುಸ್ಕಾಸ್ ಹೆಸರಿನಲ್ಲಿದ್ದ ದಾಖಲೆಯನ್ನು ರೊನಾಲ್ಡೋ ಅಳಿಸಿಹಾಕಿದರು. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದಾಗಲೇ ರೊನಾಲ್ಡೊ ಪುಸ್ಕಾಸ್ ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಮೊರಾಕ್ಕೋ ವಿರುದ್ಧ ಬಾರಿಸಿದ ಗೋಲು ರೊನಾಲ್ಡೊ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.