ಫಿಫಾ ವಿಶ್ವಕಪ್: ಬಲಿಷ್ಠ ಸ್ವಿಸ್ ವಿರುದ್ಧ ನೇಯ್ಮರ್ ಜಾದು

First Published Jun 17, 2018, 5:18 PM IST
Highlights

ಇಂದು ನಡೆಯಲಿರುವ ‘ಇ’ ಗುಂಪಿನ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಬ್ರೆಜಿಲ್, ಯುರೋಪ್‌ನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದೆನಿಸಿರುವ ಸ್ವಿಜರ್’ಲೆಂಡ್ ಸವಾಲನ್ನು ಸ್ವೀಕರಿಸಲಿದೆ.

ಮಾಸ್ಕೋ[ಜೂ.17]: ಕಳೆದ 3 ತಿಂಗಳು ಬ್ರೆಜಿಲ್ ಅಭಿಮಾನಿಗಳು ಆತಂಕದಲ್ಲಿದ್ದರು. ಕಾರಣ, ಗಾಯಗೊಂಡಿದ್ದ ತಾರಾ ಆಟಗಾರ ನೇಯ್ಮರ್ ಇನ್ನೂ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಬ್ರೆಜಿಲ್ ಅಭಿಮಾನಿಗಳ ನಿರೀಕ್ಷೆಯ ಭಾರವನ್ನು ಹೊತ್ತು ನೇಯ್ಮರ್ ರಷ್ಯಾಕ್ಕೆ ಬಂದಿಳಿದಿದ್ದಾರೆ.

ಇಂದು ನಡೆಯಲಿರುವ ‘ಇ’ ಗುಂಪಿನ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಬ್ರೆಜಿಲ್, ಯುರೋಪ್‌ನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದೆನಿಸಿರುವ ಸ್ವಿಜರ್’ಲೆಂಡ್ ಸವಾಲನ್ನು ಸ್ವೀಕರಿಸಲಿದೆ. ವಿಶ್ವದ ಅತ್ಯಂತ ದುಬಾರಿ ಆಟಗಾರ ಫೆಬ್ರವರಿಯಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡುವಾಗ ಗಾಯಗೊಂಡಿದ್ದರು. ಆ ಬಳಿಕ ಅವರು ಕೇವಲ 129 ನಿಮಿಷಗಳ ಕಾಲ ಮಾತ್ರ ಮೈದಾನದಲ್ಲಿ ಕಳೆದಿದ್ದಾರೆ. ಈ ನಿಮಿಷಗಳು ಬ್ರೆಜಿಲ್‌ನ ಅಭ್ಯಾಸ ಪಂದ್ಯಗಳಲ್ಲಿ ಆಗಿತ್ತು. ಕ್ರೊವೇಷಿಯಾ ಹಾಗೂ ಕಳೆದ ವಾರ ಆಸ್ಟ್ರಿಯಾ ವಿರುದ್ಧ ಬಾರಿಸಿದ ಆಕರ್ಷಕ ಗೋಲು, ನೇಯ್ಮರ್ ವಿಶ್ವಕಪ್‌ಗೆ ಸಿದ್ಧರಿದ್ದಾರೆ ಎನ್ನುವುದನ್ನು ದೃಢಪಡಿಸಿತು.

2014ರ ವಿಶ್ವಕಪ್‌ನಲ್ಲಿ ಕೊಲಂಬಿಯಾ ವಿರುದ್ಧ ಕ್ವಾರ್ಟರ್ ಫೈನಲ್ ವೇಳೆ ಗಾಯಗೊಂಡು ಹೊರಬಿದ್ದ ಬಳಿಕ, ನೇಯ್ಮರ್ ಮೊದಲ ವಿಶ್ವಕಪ್ ಪಂದ್ಯವಾಡಲಿದ್ದಾರೆ. ತಂಡದ ಪ್ರಮುಖ ಸ್ಟ್ರೈಕರ್ ಜವಾಬ್ದಾರಿ ಜತೆಗೆ ನಾಯಕತ್ವದ ಹೊಣೆ ಸಹ ಅವರ ಮೇಲಿದೆ.  ಕಳೆದ ವಿಶ್ವಕಪ್‌ನಲ್ಲಿ ಆಡಿದ ಆಟಗಾರರ ಪೈಕಿ ಕೇವಲ 6 ಆಟಗಾರರು ಮಾತ್ರ ಈ ಬಾರಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಡಿಫೆಂಡರ್ ಥಿಯಾಗೋ ಸಿಲ್ವಾ, 18 ವರ್ಷದ ಯುವ ಆಟಗಾರ ಗೇಬ್ರಿಯಲ್ ಜೀಸಸ್, ಫರ್ಡಿನಾಂಡೋ, ಫ್ರೆಡ್ ತಮ್ಮ ನಾಯಕನಿಗೆ ತಕ್ಕ ಬೆಂಬಲ ನೀಡಬೇಕಿದೆ.

ಮತ್ತೊಂದೆಡೆ ಸ್ವಿಜರ್‌ಲೆಂಡ್ ಸಹ ಅನುಭವಿಗಳಿಂದ ಕೂಡಿದೆ. ಫಿಫಾ ವಿಶ್ವ ಶ್ರೇಯಾಂಕದಲ್ಲಿನಲ್ಲಿ 6ನೇ ಸ್ಥಾನದಲ್ಲಿರುವ ಯುರೋಪಿಯನ್ ರಾಷ್ಟ್ರ, 6ನೇ ಬಾರಿ ಕಪ್ ಗೆಲ್ಲಲು ಕಾತರಿಸುತ್ತಿರುವ ಬ್ರೆಜಿಲ್‌ಗೆ ಆರಂಭಿಕ ಆಘಾತ ನೀಡಿದರೆ ಅಚ್ಚರಿಯಿಲ್ಲ.

click me!