ಬೆಂಗ್ಳೂರಲ್ಲಿ ಪ್ರೊ ಕಬಡ್ಡಿಗೆ ಕ್ರೀಡಾ ಇಲಾಖೆ ಗ್ರೀನ್ ಸಿಗ್ನಲ್!| ತವರಿನ ಚರಣವನ್ನು ಕಂಠೀರವದಲ್ಲಿ ಆಡಲಿದೆ ಬೆಂಗಳೂರು ಬುಲ್ಸ್| 2 ವರ್ಷಗಳ ಬಳಿಕ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಪಂದ್ಯಗಳ ಆಯೋಜನೆ
ಬೆಂಗಳೂರು[ಜೂ.23]: ಕರ್ನಾಟಕದ ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ. ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ತವರಿನ ಚರಣದ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲೇ ನಡೆಯಲಿದೆ. ಬುಲ್ಸ್ ತಂಡಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ರಾಜ್ಯ ಕ್ರೀಡಾ ಇಲಾಖೆ ಅನುಮತಿ ನೀಡಿದೆ. ಇಲಾಖೆ ಹಾಗೂ ಬುಲ್ಸ್ ತಂಡದ ನಡುವೆ ಕೆಲ ದಿನಗಳ ಹಿಂದೆ ಒಪ್ಪಂದ ಸಹ ಆಗಿದೆ. ಈ ಬೆಳವಣಿಗೆಯನ್ನು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.
ಕಳೆದ 2 ಆವೃತ್ತಿಗಳ ವೇಳೆ ಬೆಂಗಳೂರಲ್ಲಿ ಪಂದ್ಯಗಳನ್ನು ನಡೆಸಲು ಕ್ರೀಡಾ ಇಲಾಖೆ ಅನುಮತಿ ನಿರಾಕರಿಸಿತ್ತು. ಹೀಗಾಗಿ 5ನೇ ಆವೃತ್ತಿಯಲ್ಲಿ ನಾಗ್ಪುರ, 6ನೇ ಆವೃತ್ತಿಯಲ್ಲಿ ಪುಣೆಯನ್ನು ಬುಲ್ಸ್ ತವರಾಗಿ ಸ್ವೀಕರಿಸಿತ್ತು. ಬುಲ್ಸ್ ತಂಡದ ಆಟವನ್ನು ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸಲು ಸಾಧ್ಯವಾಗದ ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದರು. ಈ ವರ್ಷ ಬುಲ್ಸ್, ಹಾಲಿ ಚಾಂಪಿಯನ್ ತಂಡವಾಗಿ ಲೀಗ್‌ಗೆ ಕಾಲಿಡಲಿದ್ದು, ನಿರೀಕ್ಷೆ ಹೆಚ್ಚಿದೆ. ಅದೇ ರೀತಿ ತವರಿನ ಪ್ರೇಕ್ಷಕರ ಮುಂದೆ ಆಡುವ ಅವಕಾಶ ಪಡೆಯಲಿರುವ ತಂಡಕ್ಕೆ ಹೆಚ್ಚಿನ ಉತ್ಸಾಹವಿರಲಿದೆ.
ಒಂದು ವಾರಕ್ಕೆ .60 ಲಕ್ಷ: ಬೆಂಗಳೂರು ಬುಲ್ಸ್ ತನ್ನ ತವರಿನ ಚರಣದ ಪಂದ್ಯಗಳನ್ನು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ಒಂದು ವಾರಕ್ಕೆ ಸುಮಾರು .60 ಲಕ್ಷ ಬಾಡಿಗೆ ಪಾವತಿಸಲಿದೆ ಎಂದು ತಿಳಿದು ಬಂದಿದೆ. ಜತೆಗೆ ಇಲಾಖೆಯ ಎಲ್ಲಾ ಷರತ್ತುಗಳಿಗೆ ಬುಲ್ಸ್ ತಂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಇತ್ತೀಚೆಗೆ ನಡೆದಿದ್ದ ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಕಂಠೀರವ ಕ್ರೀಡಾಂಗಣ ನೀಡಿದಾಗಲೇ, ಪ್ರೊ ಕಬಡ್ಡಿಗೂ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆ ನಿರೀಕ್ಷೆ ನಿಜವಾಗಿದೆ.
ತಾಂತ್ರಿಕ ಕಾರಣಗಳಿಂದಾಗಿ ಕಳೆದ 2 ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿರಲಿಲ್ಲ. ಈ ಬಾರಿ ಮತ್ತೆ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯಲು ಅವಕಾಶ ನೀಡಲಾಗಿದೆ. ಇಲಾಖೆಯ ನಿಯಮಗಳನ್ನು ಪಾಲಿಸಲು ಬೆಂಗಳೂರು ಬುಲ್ಸ್ ಒಪ್ಪಿದೆ.
- ರಮೇಶ್, ರಾಜ್ಯ ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ