
ಗ್ಲಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಸ್ಪರ್ಧೆಗಳು ಶುಕ್ರವಾರ ಆರಂಭಗೊಳ್ಳಲಿದೆ. ಆದರೆ ಇದಕ್ಕೂ ಮುನ್ನವೇ ಭಾರತ ಪದಕ ಖಾತೆ ತೆರೆದಿದೆ. ಮಹಿಳಾ ಬಾಕ್ಸಿಂಗ್‌ನ 75 ಕೆ.ಜಿ. ವಿಭಾಗದಲ್ಲಿ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ ಲವ್ಲೀನಾ ಬೊರ್ಗೊಹೈನ್ ಅವರು ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡರು.
ಈ ವಿಭಾಗದಲ್ಲಿ ಕೇವಲ 5 ಸ್ಪರ್ಧಿಗಳಿದ್ದರು. ಇವರಲ್ಲಿ ಒಬ್ಬರಿಗೆ ಬೈ ಅಂದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿತ್ತು. ಅದು ಲವ್ಲೀನಾಗೆ ಸಿಕ್ಕ ಕಾರಣ ಅವರು ಅಂತಿಮ-4ರ ಸುತ್ತಿಗೆ ನೇರವಾಗಿ ಪ್ರವೇಶ ಪಡೆದರು. ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್ ತಲುಪಿದವರಿಗೆ ಕನಿಷ್ಠ ಕಂಚಿನ ಪದಕವಾದರೂ ಲಭಿಸುತ್ತದೆ. ಹೀಗಾಗಿ ಭಾರತಕ್ಕೆ ಪದಕ ಖಚಿತವಾಗಿದೆ. ಅವರು ಸೆಮಿಫೈನಲ್‌ನಲ್ಲಿ ಟುವಾಲು ದೇಶದ ಟಿಕೆಬಿಪಿ ಟಾಫಕಿ ವಿರುದ್ಧ ವಿರುದ್ಧ ಜು.31ರಂದು ಸ್ಪರ್ಧಿಸಲಿದ್ದಾರೆ. ಅದರಲ್ಲಿ ಗೆದ್ದರೆ ಫೈನಲ್ ಪ್ರವೇಶಿಸಲಿದ್ದು, ಸೋತರೆ ಕಂಚು ಪಡೆಯಲಿದ್ದಾರೆ.
28 ವರ್ಷದ ಲವ್ಲೀನಾಗೆ ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚೊಚ್ಚಲ ಪದಕ. ಅಸ್ಸಾಂ ಬಾಕ್ಸರ್ ಲವ್ಲೀನಾ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು. 2022ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು, 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರ ಗೆದ್ದಿದ್ದಾರೆ.
ಗ್ಲಾಸ್ಗೋ: ನಿಷೇಧಿತ ಮದ್ದು ಸೇವನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ಭಾರತಕ್ಕೆ ಈಗ ಕಾಮನ್‌ವೆಲ್ತ್ ಗೇಮ್ಸ್ ಭಾರೀ ಹಿನ್ನಡೆಯಾಗಿದೆ. ಅರ್ಹತಾ ಸುತ್ತಿನ ವೇಳೆ ಹಲವು ಬಾರಿ ಉದ್ದೀಪನ ಮದ್ದು ನಿಯಮ ಉಲ್ಲಂಘಿಸಿದ ಕಾರಣ ಭಾರತದ ವೇಟ್‌ಲಿಫ್ಟಿಂಗ್ ಕೋಟಾವನ್ನು ಭಾರೀ ಕಡಿತ ಮಾಡಲಾಗಿದೆ.
ಭಾರತಕ್ಕೆ 2026ರ ಗೇಮ್ಸ್‌ನಲ್ಲಿ 16 ಕೋಟಾ ಲಭ್ಯವಿದ್ದವು. ಆದರೆ ನಿಯಮ ಉಲ್ಲಂಘನೆ ಕಾರಣದಿಂದ ಆಯೋಜಕರು ಭಾರತದ ಕೋಟಾದಲ್ಲಿ 5 ಕಡಿತಗೊಳಿಸಿದ್ದಾರೆ. ಹೀಗಾಗಿ, ಭಾರತದ ಸ್ಪರ್ಧಿಗಳ ಸಂಖ್ಯೆ 12ರಿಂದ 11ಕ್ಕೆ ಇಳಿಕೆಯಾಗಿದೆ. ಗೇಮ್ಸ್‌ಗೂ ಮುನ್ನ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್(ಐಡಬ್ಲ್ಯುಎಲ್‌ಎಫ್) 12 ಜನರ ತಂಡವನ್ನು ಪ್ರಕಟಿಸಿತ್ತು. ಈ ಪೈಕಿ ದಿಲ್‌ಬಾಗ್ ಸಿಂಗ್ ಈ ಬಾರಿ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ. ಉಳಿದಂತೆ ಮೀರಾಬಾಯಿ ಚಾನು ಸೇರಿದಂತೆ 11 ಮಂದಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಅರ್ಹತಾ ಸುತ್ತಿನ ವೇಳೆ ಎನ್.ಅಜಿತ್(71 ಕೆ.ಜಿ.), ಸಾಯಿರಾಜ್ ಪರ್ದೇಶಿ(88 ಕೆ.ಜಿ.), ಹರ್‌ಚರಣ್ ಸಿಂಗ್(110 ಕೆ.ಜಿ.) ಹಾಗೂ ವನ್ಶಿತಾ ವರ್ಮಾ(86 ಕೆ.ಜಿ.) ಡೋಪಿಂಗ್‌ನಿಂದ ನಿಷೇಧಕ್ಕೊಳಗಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.