ಮತ್ತೆ ಬಂತು ಮಿನಿ ಒಲಿಂಪಿಕ್ಸ್‌; ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ ಇಂದಿನಿಂದ ಆರಂಭ

Kannadaprabha News   | Kannada Prabha
Published : Jul 23, 2026, 10:35 AM IST
Commonwealth Games 2026

ಸಾರಾಂಶ

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ 23ನೇ ಕಾಮನ್‌ವೆಲ್ತ್‌ ಗೇಮ್ಸ್‌ ಆರಂಭವಾಗಲಿದ್ದು, 74 ದೇಶಗಳು ಪಾಲ್ಗೊಳ್ಳಲಿವೆ. ವೆಚ್ಚ ಕಡಿತದ ಕಾರಣ ಈ ಬಾರಿ ಕ್ರಿಕೆಟ್‌, ಶೂಟಿಂಗ್‌, ಹಾಕಿ ಸೇರಿದಂತೆ ಹಲವು ಪ್ರಮುಖ ಕ್ರೀಡೆಗಳನ್ನು ಕೈಬಿಡಲಾಗಿದ್ದು, ಇದು ಭಾರತದ ಪದಕ ಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಗ್ಲಾಸ್ಗೋ: ‘ಮಿನಿ ಒಲಿಂಪಿಕ್ಸ್‌’ ಖ್ಯಾತಿಯ ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತೆ ಆಗಮಿಸಿದೆ. 23ನೇ ಆವೃತ್ತಿಯ ಬಹುರಾಷ್ಟ್ರೀಯ ಕ್ರೀಡಾಕೂಟವು ಸ್ಕಾಟ್ಲೆಂಡ್‌ನ ಅತಿ ದೊಡ್ಡ ನಗರವಾಗಿರುವ ಗ್ಲಾಸ್ಗೋದಲ್ಲಿ ಗುರುವಾರದಿಂದ ಆರಂಭಗೊಳ್ಳಲಿದೆ. 11 ದಿನಗಳ ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆಯ 74 ದೇಶಗಳ 3,000ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಒಲಿಂಪಿಕ್ಸ್‌ನಂತೆ ಕಾಮನ್‌ವೆಲ್ತ್‌ ಗೇಮ್ಸ್‌ ಕೂಡಾ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತವೆ. 2022ರ ಗೇಮ್ಸ್‌ಗೆ ಬರ್ಮಿಂಗ್‌ಹ್ಯಾಮ್‌ ಆತಿಥ್ಯ ವಹಿಸಿತ್ತು. ಆದರೆ ಈ ಬಾರಿ ಕ್ರೀಡಾಕೂಟದಲ್ಲಿ ಹೆಚ್ಚೇನೂ ಗೇಮ್ಸ್‌ಗಳಿಲ್ಲ. ವೆಚ್ಚ ಕಡಿತ ಕಾರಣಕ್ಕೆ ಹಲವು ಪ್ರಮುಖ ಕ್ರೀಡೆಗಳನ್ನು ಕೈ ಬಿಡಲಾಗಿದೆ. ಉಳಿದಂತೆ ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌, ಈಜು, ಸೈಕ್ಲಿಂಗ್‌, ಬಾಸ್ಕೆಟ್‌ಬಾಲ್‌ ಸೇರಿದಂತೆ 10 ಕ್ರೀಡೆಗಳಿವೆ. ಈ ಪೈಕಿ ಪ್ಯಾರಾ ಕ್ರೀಡಾಪಟುಗಳ 6 ಕ್ರೀಡೆಗಳೂ ಇವೆ.

ಸ್ಕಾಟ್ಲೆಂಡ್‌ನ ಒಟ್ಟು 7 ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಆ.2ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅದರಲ್ಲಿ 2030ರ ಆತಿಥ್ಯ ಹಕ್ಕು ಹೊಂದಿರುವ ಭಾರತಕ್ಕೆ ಧ್ವಜ ಹಸ್ತಾಂತರ ನಡೆಯಲಿದೆ.

4ನೇ ಬಾರಿ ಸ್ಕಾಟ್ಲೆಂಡ್‌ ಆತಿಥ್ಯ:

ಸ್ಕಾಟ್ಲೆಂಡ್‌ನಲ್ಲಿ 4ನೇ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜನೆಗೊಳ್ಳಲಿದೆ. 1970ರಲ್ಲಿ ಮೊದಲ ಬಾರಿ ಎಡಿನ್‌ಬರ್ಗ್‌ನಲ್ಲಿ ಗೇಮ್ಸ್ ನಡೆದಿತ್ತು. 1986ರ ಗೇಮ್ಸ್‌ಗೂ ಎಡಿನ್‌ಬರ್ಗ್‌ ಆತಿಥ್ಯ ವಹಿಸಿತ್ತು. ಬಳಿಕ 2014ರಲ್ಲಿ ಗ್ಲಾಸ್ಗೋದಲ್ಲಿ ಗೇಮ್ಸ್‌ ಆಯೋಜಿಸಲಾಗಿತ್ತು. ಆಗ 18 ಕ್ರೀಡೆಗಳಿದ್ದವು. 12 ವರ್ಷಗಳ ಅಂತರದಲ್ಲಿ ಮತ್ತೊಮ್ಮೆ ಜಾಗತಿಕ ಮಟ್ಟದ ಕ್ರೀಡೆಗೆ ಗ್ಲಾಸ್ಗೋ ಆತಿಥ್ಯ ವಹಿಸಲು ಸಜ್ಜಾಗಿದೆ.

ಬ್ರಿಟೀಷರಿಂದ ಆಳಲ್ಪಟ್ಟ ದೇಶಗಳು ಪಾಲ್ಗೊಳ್ಳುವ ಗೇಮ್ಸ್‌ ಕಾಮನ್‌ವೆಲ್ತ್‌!

ಬ್ರಿಟೀಷರ ಆಳ್ವಿಕೆಗೆ ಒಳಪಟ್ಟ ದೇಶಗಳೆಲ್ಲಾ ಒಟ್ಟಿಗೆ ಪಾಲ್ಗೊಳ್ಳುವ ಕ್ರೀಡಾಕೂಟವೇ ಕಾಮನ್‌ವೆಲ್ತ್‌ ಗೇಮ್ಸ್‌. ಇದು ಮೊದಲ ಬಾರಿ ನಡೆದಿದ್ದು 1930ರಲ್ಲಿ. ಫಿಫಾ ವಿಶ್ವಕಪ್‌ ಕೂಡಾ ಅದೇ ವರ್ಷ ಶುರುವಾಗಿತ್ತು ಎಂಬುದು ಗಮನಾರ್ಹ. ಈ ಗೇಮ್ಸ್‌ ಒಲಿಂಪಿಕ್ಸ್‌ನಂತೆಯೇ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 70ಕ್ಕೂ ಹೆಚ್ಚು ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ.

ಕಳೆದ ಸಲ ಆಡಿಸಿದ್ದ 10 ಕ್ರೀಡೆಗೆ ಕೊಕ್: ಕ್ರಿಕೆಟ್, ಶೂಟಿಂಗ್‌, ಹಾಕಿ ಇಲ್ಲ!

ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಈ ಬಾರಿ ಹಲವು ಕ್ರೀಡೆಗಳನ್ನು ಕೈ ಬಿಡಲಾಗಿದೆ. ಕಳೆದ ಬಾರಿ ಬರ್ಮಿಂಗ್‌ಹ್ಯಾಮ್‌ನಲ್ಲಿ 20 ಕ್ರೀಡೆಗಳನ್ನು ನಡೆಸಲಾಗಿತ್ತು. ಅದರಲ್ಲಿ ಮಹಿಳಾ ಕ್ರಿಕೆಟ್‌ ಕೂಡಾ ಇತ್ತು. ಆದರೆ ಈ ಬಾರಿ ಕ್ರಿಕೆಟ್‌, ಬ್ಯಾಡ್ಮಿಂಟನ್‌, ಶೂಟಿಂಗ್‌, ಹಾಕಿ, ಕುಸ್ತಿ ಸೇರಿ ಪ್ರಮುಖ ಕ್ರೀಡೆಗಳಿಗೆ ಕೊಕ್‌ ನೀಡಲಾಗಿದೆ. ಇದರಿಂದ ಭಾರತದ ಪದಕ ಗಳಿಕೆ ಮೇಲೆ ಭಾರೀ ಹೊಡೆತ ಬೀಳುವುದು ಖಚಿತ. ಕಳೆದ ಬಾರಿ ಭಾರತ 61 ಪದಕ ಗೆದ್ದಿತ್ತು. ಅದರಲ್ಲಿ 25 ಪದಕಗಳು ಕುಸ್ತಿ, ಬ್ಯಾಡ್ಮಿಂಟನ್‌, ಶೂಟಿಂಗ್‌, ಟೇಬಲ್‌ ಟೆನಿಸ್‌ನಿಂದಲೇ ಬಂದಿದ್ದವು. ಹೀಗಾಗಿ ಈ ವರ್ಷ ಪದಕ ಗಳಿಕೆ ಕಡಿಮೆ ಆಗುವ ಸಾಧ್ಯತೆಯಿದೆ. ಆದರೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬಹುತೇಕ ಎಲ್ಲಾ ಕ್ರೀಡೆಗಳನ್ನು ಆಯೋಜಿಸಲು ಭಾರತ ಚಿಂತನೆ ನಡೆಸುತ್ತಿದೆ.

ಕಳೆದ ಸಲ ₹7500 ಕೋಟಿ, ಈಗ ₹2,000 ಕೋಟಿ ವೆಚ್ಚ

ಹಲವು ಕ್ರೀಡೆಗಳನ್ನು ಕೈಬಿಟ್ಟಿರುವ ಕಾರಣ ಈ ಬಾರಿ ಆಯೋಜನೆಯ ವೆಚ್ಚ ಕಡಿತಗೊಂಡಿದೆ. ಈಗಾಗಲೇ ಇರುವ ಕ್ರೀಡಾಂಗಣಗಳು, ಮೂಲಸೌಕರ್ಯಗಳನ್ನೇ ಅವಲಂಬಿಸಿ ಗೇಮ್ಸ್‌ ಆಯೋಜಿಸುತ್ತಿರುವುದರಿಂದ ಕಳೆದ ಬಾರಿಗಿಂತ ಶೇ.60ರಷ್ಟು ವೆಚ್ಚ ಕಡಿಮೆಯಾಗಲಿದೆ. 2022ರಲ್ಲಿ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ಗೆ ₹7500 ಕೋಟಿ ವೆಚ್ಚವಾಗಿತ್ತು. ಈ ಬಾರಿ ₹2000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕುರುಡರಿಗೂ ಸ್ಪರ್ಶ ಅನುಭವ ಕೊಡುವ ರೀತಿ ಪದಕ ವಿನ್ಯಾಸ

ಬಲ್ಗೇರಿಯಾ ಮೂಲದ ಕಲಾವಿದೆ ಮಿಲಿಟ್ಸಾ ಮಿಲೆಂಕೋವಾ ಎಂಬವರು ಈ ಬಾರಿ ಕ್ರೀಡಾಕೂಟದ ಪದಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಗ್ಲಾಸ್ಗೋದ ಪರಂಪರೆ, ಸಂಸ್ಕೃತಿ, ಸಂಪ್ರದಾಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು, ತ್ರಿಕೋನ ಆಕಾರದಲ್ಲಿದೆ. ಕುರುಡರೂ ಕೂಡಾ ಮುಟ್ಟಿ ನೋಡಿ ಅನುಭವಿಸುವ ರೀತಿಯಲ್ಲಿ ‘ಬ್ರೈಲ್‌’ ಮೂಲಕ ಪದಕಗಳನ್ನು ವಿನ್ಯಾಸಗೊಳಿಸಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ಒಟ್ಟು 215 ಪದಕ ವಿಭಾಗಗಳಲ್ಲಿ 1168 ಪದಕಗಳನ್ನು ಈ ಬಾರಿ ಸ್ಪರ್ಧಿಗಳಿಗೆ ನೀಡಲಾಗುತ್ತದೆ.

215 ವಿಭಾಗ: ಈ ಬಾರಿ ಕ್ರೀಡಾಕೂಟದಲ್ಲಿ 215 ಪದಕ ವಿಭಾಗಗಳ ಸ್ಪರ್ಧೆಗಳಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಬೆಂಕಿ ಇಲ್ಲದೆ ಹೊಗೆ ಬರಲ್ಲ'; ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಹೊಸ ಬಾಂಬ್ ಸಿಡಿಸಿದ ರವಿಚಂದ್ರನ್ ಅಶ್ವಿನ್
ಇಂಗ್ಲೆಂಡ್‌ ಸಿರೀಸ್‌ನಲ್ಲಿ ತಮ್ಮನ ಕಾಟ, ಜಿಂಬಾಬ್ವೆಯಲ್ಲಿ ಅಣ್ಣನ ಭೀತಿ: ಶ್ರೇಯಸ್ ಅಯ್ಯರ್ ಬಳಗಕ್ಕೆ ಹೆಚ್ಚಿದ ಟೆನ್ಶನ್!