
ಮುಂಬೈ(ಏ. 12): ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಭಾರತೀಯ ಫಾಸ್ಟ್ ಬೌಲರ್'ಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಸದ್ಯಕ್ಕೀಗ ಹಲವು ಶ್ರೇಷ್ಠ ವೇಗದ ಬೌಲರ್'ಗಳಿದ್ದಾರೆ. ಕೆಲವರಂತೂ ಒಳ್ಳೆಯ ಯಾರ್ಕರ್'ಗಳನ್ನು ಹಾಕಬಲ್ಲರು ಎಂದು ಬ್ರೆಟ್ ಲೀ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ. ಅಮೇಜಾನ್'ನಲ್ಲಿ ಮಾರಾಟಕ್ಕಿರುವ "ಬೌಲಿಂಗ್ ಮಾಸ್ಟರ್" ಕ್ರಿಕೆಟ್ ಟ್ರೈನಿಂಗ್ ಕಿಟ್'ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಬ್ರೆಟ್ ಲೀ, ಮುಂಬೈ ಇಂಡಿಯನ್ಸ್'ನ ಬೌಲರ್ ಜಸ್'ಪ್ರೀತ್ ಬುಮ್ರಾ ಅವರ ಬೌಲಿಂಗ್'ನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಬುಮ್ರಾ ಒಬ್ಬ ವೇಗದ ಬೌಲರ್ ಆಗಿ ನನಗೆ ಬಹಳ ಭರವಸೆ ಮೂಡಿಸಿದ್ದಾರೆ. ಅವರು ಒಳ್ಳೆಯ ಯಾರ್ಕರ್'ಗಳನ್ನೂ ಎಸೆಯಬಲ್ಲರು ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ.
ಬುಮ್ರಾ ಜೊತೆಗೆ ಅನುಭವಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಅವರ ಹೆಸರನ್ನೂ ಲೀ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಉಮೇಶ್ ಯಾದವ್ ಹೆಚ್ಚೆಚ್ಚು ಬೌಲಿಂಗ್ ಮಾಡಿದಷ್ಟೂ ಹೆಚ್ಚೆಚ್ಚು ಪಕ್ವವಾಗುತ್ತಾರೆಂದು ಸಚಿನ್ ತೆಂಡೂಲ್ಕರ್ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಬ್ರೆಟ್ ಲೀ ಸಹಮತ ವ್ಯಕ್ತಪಡಿಸಿದ್ದಾರೆ. "ಸಚಿನ್ ಹೇಳಿದ್ದು 100% ಸರಿ. ಉಮೇಶ್ ಹೆಚ್ಚು ಬೌಲಿಂಗ್ ಮಾಡಿದಷ್ಟೂ ಒಳ್ಳೆಯ ಬೌಲರ್ ಅಗಿ ರೂಪುಗೊಳ್ಳುತ್ತಾರೆ. ಬೌಲಿಂಗ್'ನ ಹಿಡಿತ ಸಿಕ್ಕುವುದು ನೀವು ಹೆಚ್ಚೆಚ್ಚು ಬೌಲಿಂಗ್ ಮಾಡಿದಾಗಲೇ" ಎಂದು ಲೀ ಹೇಳಿದ್ದಾರೆ.
ಇದೇ ವೇಳೆ, ವಿರಾಟ್ ಕೊಹ್ಲಿಯ ನಾಯಕತ್ವದ ಯಶಸ್ಸಿನ ಬಗ್ಗೆ ಮಾತನಾಡಿದ ಬ್ರೆಟ್ ಲೀ, "ಬೇರೆ ದೇಶಗಳ ನೆಲದಲ್ಲಿ ಆಡಿ ಗೆದ್ದಾಗ ಸಿಗುವ ತೃಪ್ತಿಯೇ ಬೇರೆ. ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ತನ್ನ ಗೆಲುವಿನ ಬೇಟೆಯನ್ನು ವಿದೇಶೀ ನೆಲದಲ್ಲೂ ಮುಂದುವರಿಸಬಲ್ಲುದಾ ಎಂಬುದೇ ಸವಾಲಿನ ಪ್ರಶ್ನೆಯಾಗಿದೆ" ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.