ಈಸ್ಟ್ ಬೆಂಗಾಳ್ ವಿರುದ್ಧ ಬೆಂಗಳೂರು ಎಫ್'ಸಿಗೆ ಸೋಲು; ಚಾಂಪಿಯನ್ ಕನಸು ಭಗ್ನ

By Suvarna Web DeskFirst Published Feb 25, 2017, 4:04 PM IST
Highlights

ಬೆಂಗಳೂರಿಗೆ ಇನ್ನು 6 ಪಂದ್ಯಗಳಷ್ಟೇ ಬಾಕಿ ಇದ್ದು, ಚಾಂಪಿಯನ್ ಆಗುವ ಆಸೆ ಜೀವಂತವಾಗಿರಿಸಬೇಕಾದರೆ ಆ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಬೆಂಗಳೂರು(ಫೆ. 25): ಹಾಲಿ ಐ-ಲೀಗ್ ಚಾಂಪಿಯನ್ಸ್ ಬೆಂಗಳೂರು ಫುಟ್ಬಾಲ್ ಕ್ಲಬ್ ಮತ್ತೊಂದು ಸೋಲಿಗೆ ಶರಣಾಗಿದೆ. ಇಂದು ತವರಿನಲ್ಲಿ ನಡೆದ ತನ್ನ 10ನೇ ಸುತ್ತಿನ ಪಂದ್ಯದಲ್ಲಿ ಈಸ್ಟ್ ಬೆಂಗಾಳ್ ವಿರುದ್ಧ ಬಿಎಫ್'ಸಿ 1-3 ಗೋಲುಗಳಿಂದ ಸೋಲನುಭವಿಸಿದೆ. ಇದರೊಂದಿಗೆ ಸತತ 7 ಪಂದ್ಯಗಳ ಕಾಲ ಬೆಂಗಳೂರಿಗರು ಒಂದೂ ಗೆಲುವು ಕಾಣದ ಸರಣಿಯನ್ನು ಮುಂದುವರಿಸಿದ್ದಾರೆ.

ಐ-ಲೀಗ್ ಚಾಂಪಿಯನ್ ಆಗುವ ಆಸೆ ಜೀವಂತವಾಗಿರಬೇಕಿದ್ದರೆ ಬೆಂಗಳೂರಿಗರು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ, ಈಸ್ಟ್ ಬೆಂಗಾಳ್'ನ ಸ್ಟ್ರೈಕರ್ ಹೈತಿ ದೇಶದ ವೆಬ್ಸನ್ ಆನ್ಸೆಲ್ಮೆ ಮೊದಲಾರ್ಧದಲ್ಲೇ ಗೋಲು ಗಳಿಸಿ ಬಿಎಫ್'ಸಿಗೆ ಚಕ್ಕರ್ ಕೊಟ್ಟರು. ದ್ವಿತೀಯಾರ್ಧದಲ್ಲಿ ರಾಬಿನ್ ಸಿಂಗ್ ದಿಢೀರ್ ಎರಡು ಗೋಲು ಗಳಿಸಿ ಬೆಂಗಳೂರಿಗರ ಗೆಲುವಿನ ಆಸೆಗೆ ಸಂಪೂರ್ಣ ತಣ್ಣೀರೆರಚಿದರು. ಅದಾದ ಬಳಿಕ ಬೆಂಗಳೂರು ಎಫ್'ಸಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿದರೂ ಎದುರಾಳಿಗಳ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಲಾಗಲಿಲ್ಲ. 84ನೇ ನಿಮಿಷದಲ್ಲಿ ಸಿಕೆ ವಿನೀತ್ ಒಂದು ಗೋಲು ಗಳಿಸಿ ಸಮಾಧಾನ ತಂದಿದ್ದು ಬಿಟ್ಟರೆ ಬೆಂಗಳೂರು ಎಫ್'ಸಿಗೆ ಇದು ಹತಾಶೆಯ ದಿನವಾಗಿತ್ತು.

ಈಸ್ಟ್ ಬೆಂಗಾಳ್ ತಂಡ ಈ ಗೆಲುವಿನೊಂದಿಗೆ ಐ-ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬೆಂಗಳೂರಿಗರು 10 ಪಂದ್ಯಗಳಿಂದ 13 ಅಂಕ ಗಳಿಸಿ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೆಂಗಳೂರಿಗೆ ಇನ್ನು 6 ಪಂದ್ಯಗಳಷ್ಟೇ ಬಾಕಿ ಇದ್ದು, ಚಾಂಪಿಯನ್ ಆಗುವ ಆಸೆ ಜೀವಂತವಾಗಿರಿಸಬೇಕಾದರೆ ಆ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಎಲ್ಲಾ ಪಂದ್ಯಗಳನ್ನು ಗೆದ್ದರೂ ಚಾಂಪಿಯನ್ ಪಟ್ಟ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ.

ಬೆಂಗಳೂರಿಗರು ಮಾರ್ಚ್ 5ರಂದು ನಡೆಯುವ ತಮ್ಮ ಮುಂದಿನ ಪಂದ್ಯದಲ್ಲಿ ಮಿನರ್ವಾ ಪಂಜಾಬ್ ತಂಡವನ್ನು ಎದುರುಗೊಳ್ಳಲಿದ್ದಾರೆ. ಕಳೆದ ನಾಲ್ಕೈದು ಪಂದ್ಯಗಳಿಂದ ದುರದೃಷ್ಟ ಎದುರಿಸುತ್ತಿರುವ ಬೆಂಗಳೂರು ತಂಡ ಈ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳುತ್ತದಾ ಎಂದು ಕಾದುನೋಡಬೇಕು.

click me!