ಐ-ಲೀಗ್: ಬೆಂಗಳೂರು ಎಫ್'ಸಿ ಶುಭಾರಂಭ; ಶಿಲ್ಲಾಂಗ್ ವಿರುದ್ಧ 3-0 ಜಯ

By Suvarna Web DeskFirst Published Jan 8, 2017, 9:43 AM IST
Highlights

ಬಿಎಫ್‌'ಸಿ ತನ್ನ ಮುಂದಿನ ಪಂದ್ಯವನ್ನು ಇದೇ ಮೈದಾನದಲ್ಲಿ ಜ.14ರಂದು ಚೆನ್ನೈ ಸಿಟಿ ವಿರುದ್ಧ ಆಡಲಿದೆ.

ಬೆಂಗಳೂರು: ಪ್ರವಾಸಿ ತಂಡದ ದಿಟ್ಟಪ್ರತಿರೋಧದ ಮಧ್ಯೆಯೂ ಕೊನೆಯವರೆಗೂ ಏಕಪಕ್ಷೀಯ ಪ್ರಾಬಲ್ಯ ಕಾಯ್ದುಕೊಂಡ ಹಾಲಿ ಚಾಂಪಿಯನ್‌ ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ಪ್ರವಾಸಿ ಶಿಲಾಂಗ್‌ ಲಜಾಂಗ್‌ ತಂಡವನ್ನು 3-0 ಗೋಲುಗಳಿಂದ ಮಣಿಸಿ ಈ ಋುತುವಿನ ಪ್ರತಿಷ್ಠಿತ ಐ-ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ತವರು ಅಭಿಮಾ​ನಿಗಳ ಅಭೂತಪೂರ್ವ ಬೆಂಬಲದೊಂ​ದಿಗೆ ಪಂದ್ಯ​ದಾದ್ಯಂತ ಪ್ರಚಂಡ ಪ್ರದರ್ಶನ ನೀಡಿದ ಸುನೀಲ್‌ ಛೆಟ್ರಿ ಸಾರಥ್ಯದ ಬಿಎಫ್‌ಸಿ ಪರ ಯುವ ಆಟಗಾರ ಉದಾಂತ ಸಿಂಗ್‌ (27 ಮತ್ತು 69ನೇ ನಿ.) ಎರಡು ಗೋಲು ಗಳಿಸಿ ಮಿಂಚಿ​ದರೆ, 80ನೇ ನಿಮಿಷದಲ್ಲಿ ಲಾಲ್‌ಮಂಗಿ​ಯಾಸಂಗ ರಾಲ್ಟೆಗೋಲು ಬಾರಿಸಿದರು.

ಪ್ರಥಮಾರ್ಧದಲ್ಲೇ ಮುನ್ನಡೆ: ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಬಿಎಫ್‌ಸಿ, ಶಿಲಾಂಗ್‌ ತಂಡವನ್ನು ಶುರುವಿನಿಂದಲೇ ನಿಯಂತ್ರಿಸಿತು. ಮೇಲಿಂದ ಮೇಲೆ ಗೋಲಿಗಾಗಿ ಯತ್ನಿಸಿದ ಅದರ ಹವಣಿಕೆಯನ್ನು ಹೊಸಕಿ ಹಾಕುವಲ್ಲಿ ಛೆಟ್ರಿ ಪಡೆ ಯಶ ಕಂಡಿತು. ಇತ್ತ, ಬಿಎಫ್‌ಸಿ ಕೂಡ ಶಿಲಾಂಗ್‌ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಬಹುವಾಗಿ ಪ್ರಯ​ತ್ನಿಸಿತಾ​ದರೂ, ಫಲ ನೀಡಲಿಲ್ಲ. ಹೀಗಾಗಿ ಮೊದಲ 20 ನಿಮಿಷಗಳು ಬರೇ ಹೋರಾಟದಲ್ಲಿ ಮುಕ್ತಾಯ ಕಂಡಿತು. ಆದರೆ, ಇದಾದ ಏಳು ನಿಮಿಷಗಳ ಅಂತರದಲ್ಲಿ 20 ವರ್ಷದ, ಮಣಿಪುರ ಮೂಲದ ಫಾರ್ವರ್ಡ್‌ ಆಟಗಾರ ಉದಾಂತ ಸಿಂಗ್‌ ಚೆಂಡನ್ನು ನಿಯಂತ್ರಣಕ್ಕೆ ಪಡೆದು ಬಾರಿಸಿದ ಗೋಲನ್ನು ತಡೆಯಲು ಶಿಲಾಂಗ್‌ ಗೋಲಿ ವಿಶಾಲ್‌ಗೆ ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಸಿಕ್ಕ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಬಿಎಫ್‌ಸಿ ಯಶಸ್ವಿಯಾ​ದರೆ, ದ್ವಿತೀಯಾರ್ಧದಲ್ಲಿ ಶಿಲಾಂಗ್‌ ತುಸು ಬಿರುಸು ತೋರಿತು. ಆದರೆ, ಈ ಹಂತದಲ್ಲಿ ಮತ್ತೊಮ್ಮೆ ಉದಾಂತ ನಡೆಸಿದ ದಾಳಿಯಲ್ಲಿ ಅದು 0-2 ಹಿನ್ನಡೆ ಅನುಭವಿಸಿತು. ಇತ್ತ ಪಂದ್ಯ ಮುಗಿಯಲು ಇನ್ನು 10 ನಿಮಿಷಗಳಿವೆ ಎನ್ನುವಾಗ ರಾಲ್ಟೆಗೋಲು ಹೊಡೆದು ತಂಡ ಪೂರ್ಣ 3 ಅಂಕಗಳನ್ನು ಗಳಿಸಲು ನೆರವಾದರು. ಆನಂತರದ ಹೆಚ್ಚುವರಿ 3 ನಿಮಿಷದಲ್ಲಿಯೂ ಶಿಲಾಂಗ್‌ ಆಟಗಾರರು ಗೋಲು ಗಳಿಸಲು ವಿಫಲವಾದರು.

ಅಂದಹಾಗೆ ಬಿಎಫ್‌'ಸಿ ತನ್ನ ಮುಂದಿನ ಪಂದ್ಯವನ್ನು ಇದೇ ಮೈದಾನದಲ್ಲಿ ಜ.14ರಂದು ಚೆನ್ನೈ ಸಿಟಿ ವಿರುದ್ಧ ಆಡಲಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

click me!