
ಬೆಂಗಳೂರು(ಏ.17): ಸೋತವರ ಕದನದಲ್ಲಿ ದಿಟ್ಟತನ ಗೆದ್ದಿದೆ. ಸತತ 3 ಸೋಲು ಕಂಡಿದ್ದ ಪುಣೆ ಸೂಪರ್ ಜೈಂಟ್ (ಪಿಎಸ್‌ಜಿ) ಹಾಗೂ ಸತತ 2 ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಣ ಹಣಾಹಣಿಯಲ್ಲಿ ಪ್ರವಾಸಿ ತಂಡ ಗೆದ್ದು ಬೀಗಿದೆ. ಮಳೆ ಸುರಿದರೂ ಕರಗದ ಕರಿಮುಗಿಲು ಇನ್ನಷ್ಟುಸುರಿಸುವ ಆತಂಕದಲ್ಲೇ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಜರುಗಿದ ಭಾರೀ ಏರಿಳಿತಗಳ ರೋಚಕ ಕದನದಲ್ಲಿ ಆರ್‌ಸಿಬಿಯನ್ನು ಪುಣೆ ತಂಡ 27 ರನ್‌ಗಳಿಂದ ಮಣಿಸಿತು. ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುಣೆ 20 ಓವರ್'ಗಳಲ್ಲಿ 8 ವಿಕೆಟ್‌ಗೆ 161 ರನ್ ಗಳಿಸಿದರೆ, ಇದನ್ನು ಬೆನ್ನತ್ತಿದ ಆರ್‌ಸಿಬಿ 20 ಓವರುಗಳಲ್ಲಿ 9 ವಿಕೆಟ್‌ಗೆ ಕೇವಲ 134 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಕೊಹ್ಲಿ ಬಳಗ ಹ್ಯಾಟ್ರಿಕ್ ಸೋಲು ಅನುಭವಿಸಿದ್ದಷ್ಟೇ ಅಲ್ಲದೆ, 5 ಪಂದ್ಯಗಳಲ್ಲಿ ಕೇವಲ 1 ಗೆಲುವಿನ ದುಸ್ಥಿತಿಗೆ ಕುಸಿಯಿತು. ಅಲ್ಲದೆ ಅಂಕಪಟ್ಟಿಯಲ್ಲಿ ಕಡೆಯ ಸ್ಥಾನಕ್ಕೆ ಕುಸಿಯಿತು. ಅತ್ತ ಪುಣೆ ತಂಡ ಹ್ಯಾಟ್ರಿಕ್ ಪರಾಭವ ಬಳಿಕ ಸರಣಿ ಸೋಲಿನ ಕೊಂಡಿ ಕಳಚಿಕೊಂಡು 5 ಪಂದ್ಯಗಳಲ್ಲಿ 2ನೇ ಗೆಲುವಿನ ಸಿಹಿ ಉಂಡಿತು. ಬ್ಯಾಟ್ ಮಾಡಿದ ಪುಣೆಗೆ ರಹಾನೆ-ತ್ರಿಪಾಠಿ ಉತ್ತಮ ಆರಂಭ ಒದಗಿಸಿದರಾದರೂ 63 ರನ್ ಜೊತೆಯಾಟದ ಬಳಿಕ ಬೆನ್ನುಬೆನ್ನಿಗೇ ನಿರ್ಗಮಿಸಿದರು. ನಂತರ ಹಾಲಿ-ಮಾಜಿ ನಾಯಕರಾದ ಸ್ಮಿತ್, ಧೋನಿ ಜೋಡಿ ವಿಕೆಟ್ ಕಾಯ್ದುಕೊಂಡು ಸ್ಥಿರ ಆಟ ಪ್ರದರ್ಶಿಸಿದರು. ಆದರೆ, 15ನೇ ಓವರಿನ ಬಳಿಕ ರನ್ ವೇಗ ಹೆಚ್ಚಿಸುವ ಒತ್ತಡಕ್ಕೆ ಸಿಲುಕಿ ಪುಣೆ ಭಾರೀ ಕುಸಿತಕ್ಕೆ ಒಳಗಾಯಿತು. ಕೇವಲ 9 ಎಸೆತಗಳಲ್ಲಿ 3 ರನ್‌ಗೆ 5 ವಿಕೆಟ್ ಕಳೆದುಕೊಂಡ ಪುಣೆಗೆ ಅಂತಿಮ ಎರಡು ಓವರುಗಳಲ್ಲಿ ಮನೋಜ್ ತಿವಾರಿ ಸಿಡಿಸಿದ 3 ಬೌಂಡರಿ, 2 ಸಿಕ್ಸರುಗಳಿಂದಾಗಿ 161 ರನ್‌ಗಳ ಗೌರವಾರ್ಹ ಮೊತ್ತ ಪ್ರಾಪ್ತವಾಯಿತು. ಗೆಲುವಿನ ಗುರಿ ಬೆನ್ನತ್ತಿದ ತವರಿನ ತಂಡಕ್ಕೆ ನಾಯಕ ಕೊಹ್ಲಿ ಮೊದಲ ಓವರಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ, ಎರಡನೇ ಓವರಿನಲ್ಲಿ ದೊರೆತ ಎರಡು ಜೀವದಾನಗಳ ಲಾಭ ಎತ್ತುವಲ್ಲಿ ಅವರು ವಿಫಲರಾದರು. ಅದೇ ಓವರಲ್ಲಿ ಮನ್‌ದೀಪ್ ಸಿಂಗ್ ನಿರ್ಗಮಿಸಿದರೆ, 6ನೇ ಓವರಿನಲ್ಲಿ ಕೊಹ್ಲಿ ಔಟಾದರು. ಬೌಲರ್ ಎಸೆದ ಚೆಂಡು ತುಸು ನಿಂತು ಬರುತ್ತಿದ್ದ ಪಿಚ್‌ನಲ್ಲಿ ರನ್ ಗಳಿಸಲು ಬೆಂಗಳೂರು ಬ್ಯಾಟ್ಸ್‌ಮನ್‌ಗಳು ತಿಣುಕಾಡಿದರು. ಧೋನಿ ಮಿಂಚಿನ ಸ್ಟಂಪಿಂಗ್‌ಗೆ ಟಿ20 ಮಾಂತ್ರಿಕ ಎಬಿ ಡಿವಿಲಿಯರ್ಸ್ ವಿಕೆಟ್ ತೆತ್ತರೆ, ಜಾಧವ್, ವಾಟ್ಸನ್ ಕೂಡ ನಿರಾಸೆಯ ಮೊತ್ತಕ್ಕೆ ಔಟಾದರು. ಕಡೆಯಲ್ಲಿ ಬಿನ್ನಿ ಮತ್ತು ನೇಗಿ ಅಬ್ಬರದ ಹೊಡೆತಕ್ಕೆ ಯತ್ನಿಸಿದರಾದರೂ ಆರ್‌ಸಿಬಿ ಗೆಲುವಿನಿಂದ 15 ರನ್ ದೂರ ಉಳಿಯಿತು. ಪುಣೆ ಪರ ಶಾರ್ದೂಲ್ ಠಾಕೂರ್ ಹಾಗೂ 14.5 ಕೋಟಿಯ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಲಾ 3 ವಿಕೆಟ್ ಮತ್ತು ಜೈದೇವ್ ಉನಾದ್ಕತ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಕ್ರಿಸ್ ಗೇಲ್ ಇನ್ನೂ ಫಾರ್ಮ್ ಕಂಡುಕೊಳ್ಳದ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ (ದೇಸೀ ಮತ್ತು ಅಂತಾರಾಷ್ಟ್ರೀಯ ಸೇರಿ) 10 ಸಾವಿರ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಲು ಇನ್ನೂ ಕಾಯಬೇಕಿದೆ. ಸದ್ಯ 9997 ರನ್ ಗಳಿಸಿರುವ ಗೇಲ್ ಅವರನ್ನು ಪುಣೆ ವಿರುದ್ಧದ ಪಂದ್ಯದಿಂದ ಕೈಬಿಡಲಾದ ಕಾರಣ ವಿಶ್ವದಾಖಲೆ ಬರೆಯಲು ಕನಿಷ್ಠ ಮುಂದಿನ ಪಂದ್ಯದವರೆಗೆ ಕಾಯಬೇಕಿದೆ. -- ವಿವರ ಪುಣೆ ಸೂಪರ್‌ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 161 ರಹಾನೆ ಬಿ ಬದ್ರಿ 30 ತ್ರಿಪಾಠಿ ಸಿ ಕೊಹ್ಲಿ ಬಿ ನೇಗಿ 31 ಸ್ಮಿತ್ ಬಿ ಅರವಿಂದ್ 27 .ಎಸ್. ಧೋನಿ ಬಿ ವ್ಯಾಟ್ಸನ್ 28 ಸ್ಟೋಕ್ಸ್ ಬಿ ಮಿಲ್ನೆ 02 ಸಿ ಮಂದೀಪ್ ಸಿಂಗ್ ಬಿ ಅರವಿಂದ್ 01 ತಿವಾರಿ ರನೌಟ್ (ಕೊಹ್ಲಿ/ಜಾಧವ್) 27 ಸಿ ಡಿವಿಲಿಯರ್ಸ್ ಬಿ ಮಿಲ್ನೆ 00 ಉನದ್ಕಟ್ ಅಜೇಯ 02 (ಬೈ 1, ಲೆಬೈ 5, ವೈ 7) 13 ಪತನ: 1-63 (ರಹಾನೆ), 2-69 (ತ್ರಿಪಾಠಿ), 3-127 (ಧೋನಿ), 4-127 (ಸ್ಮಿತ್), 5-129 (ಕ್ರಿಸ್ಟಿಯನ್), 6-130 (ಸ್ಟೋಕ್ಸ್), 7-130 (ಠಾಕೂರ್), 8-161 (ತಿವಾರಿ) : ಆ್ಯಡಮ್ ಮಿಲ್ನೆ 4-0-27-2, ಸ್ಯಾಮುಯೆಲ್ ಬದ್ರಿ 4-0-32-1, ಶ್ರೀನಾಥ್ ಅರವಿಂದ್ 4-0-29-2, ಶೇನ್ ವ್ಯಾಟ್ಸನ್ 4-0-44-1, ಪವನ್ ನೇಗಿ 3-0-12-1, ಯಜುವೇಂದ್ರ ಚಾಹಲ್ 1-0-11-0 ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134 ಕೊಹ್ಲಿ ಸಿ ರಹಾನೆ ಬಿ ಸ್ಟೋಕ್ಸ್ 28 ಸಿಂಗ್ ಸಿ ಧೋನಿ ಬಿ ಠಾಕೂರ್ 00 ಡಿವಿಲಿಯರ್ಸ್ ಸ್ಟಂಪ್ ಧೋನಿ ಬಿ ಇಮ್ರಾನ್ 29 ಜಾಧವ್ ಬಿ ಉನದ್ಕಟ್ 18 ವಾಟ್ಸನ್ ಬಿ ಸ್ಟೋಕ್ಸ್ 14 ಬಿನ್ನಿ ಬಿ ಠಾಕೂರ್ 18 ನೇಗಿ ಸಿ ತ್ರಿಪಾಠಿ ಬಿ ಠಾಕೂರ್ 10 ಮಿಲ್ನೆ ಬಿ ಸ್ಟೋಕ್ಸ್ 02 ಬದ್ರಿ ಬಿ ಉನದ್ಕಟ್ 00 ಅರವಿಂದ್ ಅಜೇಯ 06 ಚಹಾಲ್ ಅಜೇಯ 01 (ಬೈ 1, ಲೆಬೈ 2, ವೈ 5) 08 ಪತನ: 1-14 (ಮಂದೀಪ್ ಸಿಂಗ್), 2-41 (ಕೊಹ್ಲಿ), 3-70 (ಡಿವಿಲಿಯರ್ಸ್), 4-91 (ಜಾಧವ್), 5-101 (ವಾಟ್ಸನ್), 6-123 (ನೇಗಿ), 7-125 (ಬಿನ್ನಿ), 8-126 (ಬದ್ರಿ), 9-132 (ಮಿಲ್ನೆ) : ಜಯದೇವ್ ಉನದ್ಕಟ್ 4-0-25-2, ಶಾರ್ದೂಲ್ ಠಾಕೂರ್ 4-0-35-3, ಡೇನಿಯಲ್ ಕ್ರಿಸ್ಟಿಯನ್ 4-0-26-0, ಬೆನ್ ಸ್ಟೋಕ್ಸ್ 4-0-18-3, ಇಮ್ರಾನ್ ತಾಹೀರ್ 4-0-27-1 : ಬೆನ್ ಸ್ಟೋಕ್ಸ್ (ರೈಸಿಂಗ್ ಪುಣೆ) ಆರ್‌ಸಿಬಿಗೆ ಮುಂದಿನ ಪಂದ್ಯ ಏ.18ರಂದು ಗುಜರಾತ್ ಲಯನ್ಸ್ ಎದುರು ಮುಂದಿನ ಪಂದ್ಯ ಏ.22 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.