
ಮುಂಬೈ(ಮಾ.22): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೇಂದ್ರ ಗುತ್ತಿಗೆ ಪಡೆದಿರುವ ಆಟಗಾರರ ನೂತನ ಪಟ್ಟಿಯನ್ನು ಪ್ರಕಟಿಸಿದ್ದು, 2010ರ ಬಳಿಕ ಆಟಗಾರರ ಸಂಭಾವನೆಯನ್ನು ಶೇ100ರಷ್ಟು ಹೆಚ್ಚಿಸಿದೆ. ಇನ್ನು ಸೀಮಿತ ಓವರ್'ಗಳ ಆಲ್ರೌಂಡರ್ ಸುರೇಶ್ ರೈನಾ ಅವರನ್ನು ಕೇಂದ್ರ ಗುತ್ತಿಗೆಯಿಂದ ಕೈಬಿಟ್ಟಿರುವುದು ಕ್ರಿಕೆಟ್ ಪ್ರಿಯರಲ್ಲಿ ಹುಬ್ಬೇರುವಂತೆ ಮಾಡಿದೆ.
ಭಾರತ ಟೆಸ್ಟ್ ತಂಡದ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ, ಮುರಳಿ ವಿಜಯ್ ಹಾಗೂ ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ರವೀಂದ್ರ ಜಡೇಜಾ, ‘ಎ’ ದರ್ಜೆಗೆ ಬಡ್ತಿ ಪಡೆದಿದ್ದಾರೆ. ಕಳೆದ ಬಾರಿ ಪೂಜಾರ ಹಾಗೂ ವಿಜಯ್ ‘ಬಿ’ ದರ್ಜೆಯಲ್ಲಿದ್ದರೆ, ಕಳಪೆ ಪ್ರದರ್ಶನದ ಆಧಾರದ ಮೇಲೆ ಜಡೇಜಾ ‘ಸಿ’ ದರ್ಜೆಗೆ ತಳ್ಳಲ್ಪಟ್ಟಿದ್ದರು.
ಈ ಮೊದಲು ವಾರ್ಷಿಕ 1 ಕೋಟಿ ರೂಪಾಯಿ ಇದ್ದ ‘ಎ’ ದರ್ಜೆ ಕ್ರಿಕೆಟಿಗರ ಸಂಭಾವನೆಯನ್ನು 2 ಕೋಟಿ ರೂಪಾಯಿಗೆ ಏರಿಸಿದರೆ, ‘ಬಿ’ ದರ್ಜೆ ಕ್ರಿಕೆಟಿಗರು 50 ಲಕ್ಷ ರೂಪಾಯಿಗಳಿಗೆ ಬದಲಾಗಿ 1 ಕೋಟಿ ರೂಪಾಯಿ ಪಡೆಯಲಿದ್ದಾರೆ. ‘ಸಿ‘ ದರ್ಜೆ ಕ್ರಿಕೆಟಿಗರ ಸಂಭಾವನೆಯನ್ನು 25 ಲಕ್ಷ ರೂಪಾಯಿಗಳಿಗೆ ಬದಲಾಗಿ ವಾರ್ಷಿಕ 50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
‘ಸಿ’ ದರ್ಜೆಯಲ್ಲಿದ್ದ ಕರ್ನಾಟಕದ ಕೆ.ಎಲ್.ರಾಹುಲ್ ಹಾಗೂ ವೃದ್ಧಿಮಾನ್ ಸಾಹ ‘ಬಿ’ ದರ್ಜೆಗೆ ಬಡ್ತಿ ಪಡೆದರೆ, ಲಯ ಕೊರತೆ ಕಾರಣ ತಂಡದಿಂದ ಹೊರಗುಳಿದಿರುವ ಶಿಖರ್ ಧವನ್ ‘ಸಿ’ ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ.
ದೇವಧರ್ ಟ್ರೋಫಿ ತಂಡಗಳ ಆಯ್ಕೆಯಲ್ಲಿ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಸುರೇಶ್ ರೈನಾ ಅವರನ್ನು ಗುತ್ತಿಗೆ ಪಟ್ಟಿಯಿಂದಲೂ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ. ಹರ್ಭಜನ್ ಸಿಂಗ್, ವರುಣ್ ಆರೋನ್, ಸ್ಟುವರ್ಟ್ ಬಿನ್ನಿ, ಕರ್ಣ್ ಶರ್ಮಾ, ಮೋಹಿತ್ ಶರ್ಮಾ, ಶ್ರೀನಾಥ್ ಅರವಿಂದ್ ಗುತ್ತಿಗೆ ಕಳೆದುಕೊಂಡಿದ್ದಾರೆ.
ಪಂದ್ಯ ವೇತನದಲ್ಲಿ ಭಾರೀ ಹೆಚ್ಚಳ..!
ಆಟಗಾರರು ಪ್ರತಿ ಟೆಸ್ಟ್'ಗೆ 15 ಲಕ್ಷ, ಏಕದಿನಕ್ಕೆ 6 ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿಗಳ ವೇತನ ಪಡೆದುಕೊಳ್ಳಲಿದ್ದಾರೆ. ಜತೆಗೆ ಪ್ರದರ್ಶನ ಆಧಾರದ ಮೇಲೆ ಆಟಗಾರರಿಗೆ ಇನಾಮು ಸಹ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಮೊದಲು ಪ್ರತಿ ಟೆಸ್ಟ್'ಗೆ 5, ಏಕದಿನಕ್ಕೆ 3 ಹಾಗೂ ಟಿ20ಗೆ 1.5 ಲಕ್ಷ ವೇತನ ದೊರೆಯುತ್ತಿತ್ತು.
ಇಲ್ಲಿದೆ ಆಟಗಾರರ ಪಟ್ಟಿ
‘ಎ’ ದರ್ಜೆ ಆಟಗಾರರು:
ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ಆರ್.ಅಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಮುರಳಿ ವಿಜಯ್
‘ಬಿ’ ದರ್ಜೆ ಆಟಗಾರರು:
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ವೃದ್ಧಿಮಾನ್ ಸಾಹ, ಜಸ್‌ಪ್ರೀತ್ ಬೂಮ್ರಾ, ಯುವರಾಜ್ ಸಿಂಗ್
‘ಸಿ’ ದರ್ಜೆ ಆಟಗಾರರು:
ಶಿಖರ್ ಧವನ್, ಅಂಬಟಿ ರಾಯುಡು,ಅಮಿತ್ ಮಿಶ್ರಾ, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ, ಕೇದಾರ್ ಜಾಧವ್, ಯುಜ್‌ವೇಂದ್ರ ಚಾಹಲ್,ಪಾರ್ಥೀವ್ ಪಟೇಲ್, ಜಯಂತ್ ಯಾದವ್, ಮನ್‌ದೀಪ್ ಸಿಂಗ್, ಧವಲ್ ಕುಲ್ಕರ್ಣಿ, ಶಾರ್ದುಲ್ ಠಾಕೂರ್, ರಿಶಬ್ ಪಂತ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.