
ಮೀರ್ಪುರ(ಆ.02): ಪ್ರವಾಸಿ ಆಷ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆತಿಥೇಯ ಬಾಂಗ್ಲಾದೇಶ ಗೆಲವು ಕಂಡಿದೆ. ಶನಿವಾರ ತಡರಾತ್ರಿ ಮುಗಿದ ಸರಣಿಯ ಮೂರನೇ ಪಂದ್ಯದಲ್ಲಿ ಆಷ್ಘಾನಿಸ್ತಾನದ ವಿರುದ್ಧ ಬಾಂಗ್ಲಾದೇಶ 141 ರನ್ಗಳ ಜಯ ಕಂಡಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ, 2-1 ಅಂತರದಲ್ಲಿ ಜಯ ಸಾಧಿಸಿತು.
ಇಲ್ಲಿನ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ, ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದ ಆಷ್ಘಾನಿಸ್ತಾನ, 33.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 138 ರನ್ ಮಾತ್ರ ಗಳಿಸಿತು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಂದೊಂದನ್ನು ಗೆದ್ದು 1-1ರ ಸಮಬಲ ಸಾಧಿಸಿದ್ದವು. ಹೀಗಾಗಿ, ಮೂರನೇ ಪಂದ್ಯ ಸಾಕಷ್ಟುಕುತೂಹಲ ಕೆರಳಿಸಿತ್ತು. ಅಂತಿಮ ಪಂದ್ಯದಲ್ಲಿ ಆ ಪಂದ್ಯದಲ್ಲೂ ಜಯ ಸಾಧಿಸುವುದರೊಂದಿಗೆ ಬಾಂಗ್ಲಾದೇಶ ತವರಿನಲ್ಲಿ ಮುಖಭಂಗಕ್ಕೊಳಗಾಗುವ ಪ್ರಮೇಯ ತಪ್ಪಿಸಿಕೊಂಡಿತು.
ಶನಿವಾರದ ಪಂದ್ಯದಲ್ಲಿ, ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶವು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯ ಕಂಡಿತಾದರೂ, ಆರಂಭಿಕ ತಮೀಮ್ ಇಕ್ಬಾಲ್ ಅವರ ಆಕರ್ಷಕ ಶತಕದ (118 ರನ್, 118 ಎಸೆತ, 11 ಬೌಂಡರಿ, 2 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದ ಶಬ್ಬೀರ್ ರಹಮಾನ್ ಅವರ ಅರ್ಧಶತಕದ (65 ರನ್, 79 ಎಸೆತ, 6 ಬೌಂಡರಿ, 3 ಸಿಕ್ಸರ್) ದೆಸೆಯಿಂದಾಗಿ ಬಾಂಗ್ಲಾದೇಶವು ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಆದರೆ, ಈ ಸವಾಲನ್ನು ಬೆನ್ನಟ್ಟಲು ಕ್ರೀಸಿಗಿಳಿದ ಆಷ್ಘಾನಿಸ್ತಾನವು ಆರಂಭಿದಿಂದಲೇ ಎಡವುತ್ತಾ ಸಾಗಿತು.
ಆರಂಭಿಕ ಮೊಹಮ್ಮದ್ ಶಾಬಾಜ್ ಶೂನ್ಯಕ್ಕೆ ಔಟಾದರು. ಮತ್ತೊಬ್ಬ ಆರಂಭಿಕ ನವ್ರೋಜ್ ಮಂಗಲ್, ರಹಮತ್ ಶಾ ಜೋಡಿ ಇನಿಂಗ್ಸ್ ಮೇಲೆತ್ತಲು ಕೊಂಚ ಯತ್ನಿಸಿದರೂ 47 ರನ್ ಜತೆಯಾಟದ ನಂತರ ಈ ಜೋಡಿ ಬೇರ್ಪಡುವ ಮೂಲಕ ಆಷ್ಘಾನಿಸ್ತಾನ ಇನಿಂಗ್ಸ್ ಅವನತಿಯತ್ತ ಸಾಗಿತು. ಆನಂತರ ಬಂದವರಲ್ಲಿ ಯಾರೂ ಜಿಗುಟುತನ ತೋರದ ಫಲವಾಗಿ ಪ್ರವಾಸಿಗರು ದಯನೀಯ ಸೋಲು ಕಾಣಬೇಕಾಯಿತು.
ಆತಿಥೇಯ ತಂಡದ ಸ್ಪಿನ್ನರ್ ಮೊಹಮ್ಮದ್ ಹುಸೇನ್ 3 ವಿಕೆಟ್ ಕಬಳಿಸಿದರೆ, ವೇಗಿ ಟಸ್ಕಿನ್ ಅಹ್ಮದ್ 2 ವಿಕೆಟ್ ಪಡೆದು ಎದುರಾಳಿ ತಂಡದ ಶೀಘ್ರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ 50 ಓವರ್ಗಳಲ್ಲಿ 8 ವಿಕೆಟ್ಗೆ 279 (ತಮೀಮ್ ಇಕ್ಬಾಲ್ 118, ಶಬ್ಬೀರ್ 65; ರಶೀದ್ ಖಾನ್ 39ಕ್ಕೆ 2, ಮೊಹಮ್ಮದ್ ನಬಿ 41ಕ್ಕೆ 2); ಆಷ್ಘಾನಿಸ್ತಾನ 33.5 ಓವರ್ಗಳಲ್ಲಿ 138 (ರಹ್ಮತ್ ಶಾ 36, ನವ್ರೋಜ್ ಮಂಗಲ್ 33; ಮೊಶರಫ್ ಹುಸೇನ್ 24ಕ್ಕೆ 3, ಟಸ್ಕಿನ್ ಅಹ್ಮದ್ 31ಕ್ಕೆ 2). ಪಂದ್ಯ ಹಾಗೂ ಸರಣಿ ಶ್ರೇಷ್ಠ: ತಮೀಮ್ ಇಕ್ಬಾಲ್ (ಬಾಂಗ್ಲಾದೇಶ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.