
ನಗೋಯಾ: ಏಷ್ಯಾಡ್‌ನಲ್ಲಿ ಭಾರತ ಬುಧವಾರ ಒಂದೇ ದಿನ 4 ಚಿನ್ನದ ಪದಕ ಗೆದ್ದಿದ್ದು, ಪದಕ ಪಟ್ಟಿಯಲ್ಲಿ ಮತ್ತೆ ಅಗ್ರ-10ಕ್ಕೆ ಮರಳಿದೆ. ಆರ್ಚರಿ(ಬಿಲ್ಗಾರಿಕೆ) ಕ್ರೀಡೆಯ ಕಾಂಪೌಂಡ್ ವಿಭಾಗದಲ್ಲಿ ಭಾರತೀಯರು ಕ್ಲೀನ್‌ಸ್ವೀಪ್ ಸಾಧಿಸಿ 3 ಚಿನ್ನದ ಪದಕ ಗೆದ್ದರೆ, ಟ್ರ್ಯಾಪ್ ಶೂಟಿಂಗ್‌ನಲ್ಲಿ ಸತತ 2ನೇ ದಿನವೂ ಬಂಗಾರ ಒಲಿಯಿತು. ಉಳಿದಂತೆ ಬಾಕ್ಸಿಂಗ್, ಕುಸ್ತಿಯಲ್ಲೂ ಭಾರತ ಕಂಚಿನ ಸಾಧನೆ ಮಾಡಿತು.
ಮಹಿಳಾ ಕಾಂಪೌಂಡ್ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಂ, ಚಿಕಿತಾ ಹಾಗೀ ಪ್ರಿತಿಕಾ ಪ್ರದೀಪ್ ಅವರನ್ನೊಳಗೊಂಡ ತಂಡ ಫೈನಲ್‌ನಲ್ಲಿ ಚೀನಾದ ವಿರುದ್ಧ 238-234 ಅಂಕಗಳಿಂದ ಗೆಲುವು ಸಾಧಿಸಿ ಚಾಂಪಿಯನ್ ಎನಿಸಿಕೊಂಡಿತು. ಈ ಪೈಕಿ ಜ್ಯೋತಿ 2022ರ ಏಷ್ಯಾಡ್ ಚಿನ್ನ ವಿಜೇತ ಮಹಿಳಾ ತಂಡದಲ್ಲೂ ಇದ್ದರು.
ಇನ್ನು, ಪುರುಷರ ಕಾಂಪೌಂಡ್ ವಿಭಾಗದಲ್ಲಿ ಕುಶಾಲ್ ದಲಾಲ್, ಸಾಹಿಲ್ ಜಾಧವ್ ಹಾಗೂ ಗಣೇಶ್ ಮಣಿರತ್ನಂ ಅವರಿದ್ದ ತಂಡ ಚೀನಾ ತಂಡದ ವಿರುದ್ಧ ಫೈನಲ್‌ನಲ್ಲಿ 238-237 ಅಂಕಗಳ ರೋಚಕ ಗೆಲುವು ಸಾಧಿಸಿ ಚಿನ್ನ ಕೊರಳಿಗೇರಿಸಿಕೊಂಡಿತು. ಆ ಬಳಿಕ ಭಾರತಕ್ಕೆ ಮತ್ತೊಂದು ಚಿನ್ನ ಮಿಶ್ರ ತಂಡ ವಿಭಾಗದಲ್ಲಿ ದೊರೆಯಿತು. ಚಿಕಿತಾ ಹಾಗೂ ಸಾಹಿಲ್ ಜೋಡಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಜುಂಗ್‌ಯೂನ್ ಪಾರ್ಕ್ ಹಾಗೂ ಚೊಯ್ ಯುನ್ ಗ್ಯು ವಿರುದ್ಧ 158-157 ಅಂಕಗಳಿಂದ ಗೆದ್ದು ಸತತ 2ನೇ ಬಂಗಾರದ ಸಾಧನೆ ಮಾಡಿತು.
2022ರ ಏಷ್ಯಾಡ್‌ನಲ್ಲಿ ಭಾರತೀಯರು ಆರ್ಚರಿಯಲ್ಲಿ 5 ಚಿನ್ನದ ಪದಕ ಗೆದ್ದಿದ್ದರು. ಈ ಪೈಕಿ ಜ್ಯೋತಿ ಸುರೇಖಾ ಹ್ಯಾಟ್ರಿಕ್ ಚಿನ್ನದ ಸಾಧನೆ ಮಾಡಿದ್ದರು. ಈ ಬಾರಿ ಆರ್ಚರಿಯಲ್ಲಿ ಇನ್ನಷ್ಟು ಸ್ಪರ್ಧೆಗಳು ಉಳಿದಿದ್ದು, ಭಾರತಕ್ಕೆ ಹಲವು ಪದಕ ನಿರೀಕ್ಷೆಯಿದೆ.
ಚಿಕಿತಾ-ಸಾಹಿಲ್ ಜೋಡಿ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಗಿಟ್ಟಿಸಿಕೊಂಡಿತು. ಅಲ್ಲದೆ, ಕಾಂಪಾಂಡ್ ಮಿಶ್ರ ತಂಡ ವಿಭಾಗದಲ್ಲಿ 2028ರ ಒಲಿಂಪಿಕ್ಸ್ ಅರ್ಹತೆ ಪಡೆದ ಮೊದಲ ದೇಶ ಎನಿಸಿಕೊಂಡಿತು.
ಬಾಕ್ಸಿಂಗ್‌ನಲ್ಲಿ ಭಾರತ ಮತ್ತೆರಡು ಪದಕ ಗೆದ್ದಿದೆ. ಬುಧವಾರ ಪ್ರಿಯಾ ಘಂಘಾಸ್ ಹಾಗೂ ಕಪಿಲಾ ಪೊಖಾರಿಯಾ ಕಂಚು ಪಡೆದರು. ಮಹಿಳೆಯರ 60 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ 20 ವರ್ಷದ ಪ್ರಿಯಾ ಚೀನಾದ ಚಾಂಗ್ ಚೆಂಗ್ಯು ವಿರುದ್ಧ 1-4 ಅಂತರದಲ್ಲಿ ಸೋತರೆ, ಪುರುಷರ 90 ಕೆ.ಜಿ. ಸೆಮಿಫೈನಲ್‌ನಲ್ಲಿ ಕಪಿಲ್ ಉಜ್ಬೇಕಿಸ್ತಾನದ ತುರಾಬೆಕ್ ಖಬೀಬುಲ್ಲಾವ್ ವಿರುದ್ಧ 1-4 ಅಂತರದಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟುಕೊಂಡರು.
ಬಾಕ್ಸಿಂಗ್‌ನ 75 ಕೆ.ಜಿ. ವಿಭಾಗದಲ್ಲಿ ಲವ್ಲೀನಾ ಬೊರ್ಗೊಹೈನ್ ಫೈನಲ್ ಪ್ರವೇಶಿಸಿದ್ದು, ಏಷ್ಯಾಡ್‌ನ ಸತತ 2 ಆವೃತ್ತಿಗಳಲ್ಲಿ ಫೈನಲ್‌ಗೆರಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ. ಸೆಮೀಸ್‌ನಲ್ಲಿ ಅವರು ಕಜಕಸ್ತಾನದ ನಟಾಲ್ಯ ಬೊಗ್ಡನೋವಾ ವಿರುದ್ಧ 3-2 ಅಂತರದಲ್ಲಿ ಗೆದ್ದು ಕನಿಷ್ಠ ಬೆಳ್ಳಿ ಖಚಿತಪಡಿಸಿಕೊಂಡರು. ಕಳೆದ ಬಾರಿ ಲವ್ಲೀನಾ ಬೆಳ್ಳಿ ಗೆದ್ದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.