ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ! ಮುಂದುವರೆದ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ! ಶಾಟ್‌ಪುಟ್ ಸ್ಪರ್ಧೆಯಲ್ಲಿ ತಾಜೀಂದರ್ ಪಾಲ್ ಸಿಂಗ್‌ಗೆ ಚಿನ್ನ! ಸ್ಕ್ವಾಷ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೌರವ್ ಘೋಶಾಲ್ ಕಂಚು
ಜಕಾರ್ತಾ(ಆ.25): ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಇಂದು ಶಾಟ್ ಪುಟ್ ತಾಜಿಂದರ್ ಪಾಲ್ ಸಿಂಗ್ ತೂರ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾರತದ ತಾಜೀಂದರ್ ಪಾಲ್ ಸಿಂಗ್ ಚಿನ್ನ ಗೆದ್ದಿದ್ದು, ತಾಜಿಂದರ್ 20.75 ಮೀಟರ್ ದೂರಕ್ಕೆ ಗುಂಡನ್ನು ಎಸೆಯುವ ಮೂಲಕ ಈ ದಾಖಲೆ ನಿರ್ಮಿಸಿದರು.
ತಮ್ಮ ಐದನೇ ಪ್ರಯತ್ನದಲ್ಲಿ ತಾಜೀಂದರ್ ಪಾಲ್ ಸಿಂಗ್ ಅತ್ಯಂತ ದೂರಕ್ಕೆ ಚೆಂಡನ್ನು ಎಸೆಯುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕ ಗಳಿಸಿದರು. ಇದು ಭಾರತಕ್ಕೆ ಕೂಟದ 7ನೇ ದಿನ ದೊರೆತ ಮೊದಲ ಚಿನ್ನದ ಪದಕವಾಗಿದೆ.
ಅಂತೆಯೇ ಒಟ್ಟಾರೆ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ 7ನೇ ಚಿನ್ನದ ಪದಕವಾಗಿದೆ. ಇನ್ನು ಸ್ಕ್ವಾಷ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೌರವ್ ಘೋಶಾಲ್ ಕಂಚಿಗೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಮತ್ತೊಂದೆಡೆ ಸ್ಕ್ವಾಷ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೌರವ್ ಘೋಶಾಲ್ ಕೂಡ ಪದಕ ಗೆದ್ದಿದ್ದು, ಇಂದು ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಸೌರವ್ ಘೋಷಾಲ್ ಹಾಂಕಾಂಗ್ ನ ಚುಂಗ್ ಮಿಂಗ್ ವಿರುದ್ಧ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.