
ದುಬೈ(ಸೆ.28): ಹಾಲಿ ಚಾಂಪಿಯನ್ ಭಾರತ, ಏಷ್ಯಾದ ಶ್ರೇಷ್ಠ ಕ್ರಿಕೆಟ್ ತಂಡವಾಗಿ ಮುಂದುವರಿಯಲು ಕಾತರಗೊಂಡಿದೆ. ಇಂದು ಇಲ್ಲಿ ನಡೆಯಲಿರುವ 2018ರ ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೆಣಸಲಿದೆ. ಬುಧವಾರ ಪಾಕಿಸ್ತಾನವನ್ನು ಬಗ್ಗುಬಡಿದ ಬಾಂಗ್ಲಾ, ಭಾರತ-ಪಾಕಿಸ್ತಾನ ಫೈನಲ್‌ಗೆ ಅಡ್ಡಿಯಾಯಿತು.
ದಾಖಲೆಯ 6 ಬಾರಿ ಚಾಂಪಿಯನ್ ಆಗಿರುವ ಭಾರತಕ್ಕೆ 7ನೇ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ಗುರಿ. ಮತ್ತೊಂದೆಡೆ 3ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಬಾಂಗ್ಲಾದೇಶ, ಈ ಬಾರಿಯಾದರೂ ಅದೃಷ್ಟ ಕೈಹಿಡಿಯಲಿದೆ ಎನ್ನುವ ನಂಬಿಕೆ ಹೊಂದಿದೆ.
ಮೇಲ್ನೋಟಕ್ಕೆ ಭಾರತ ಫೈನಲ್ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಟೂರ್ನಿಯುದ್ದಕ್ಕೂ ಭಾರತ ಪ್ರಾಬಲ್ಯ ಮೆರೆದಿದೆ. ಆದರೆ ಫೈನಲ್‌ನಲ್ಲಿ ಏನು ಬೇಕಿದ್ದರೂ ಆಗಬಹುದು. ಮೊದಲ ನಾಲ್ಕು ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಆರ್ಭಟದ ನಡುವೆ ಮಧ್ಯಮ ಕ್ರಮಾಂಕದ ದೌರ್ಬಲ್ಯ ಕಂಡಿರಲಿಲ್ಲ. ಆದರೆ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ, ಭಾರತಕ್ಕಿರುವ ಅಸಲಿ ಸಮಸ್ಯೆ ಬಹಿರಂಗವಾಗಿತ್ತು. ಬಾಂಗ್ಲಾದೇಶ, ಭಾರತದ ಅಗ್ರ 3 ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಪೆವಿಲಿಯನ್‌ಗಟ್ಟುವಲ್ಲಿ ಯಶಸ್ವಿಯಾದರೆ, ಮುಕ್ಕಾಲು ಭಾಗ ಪಂದ್ಯ ಗೆದ್ದಂತೆಯೇ ಲೆಕ್ಕ.
ಆಫ್ಘಾನಿಸ್ತಾನ ವಿರುದ್ಧ ಔಪಚಾರಿಕ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ಶಿಖರ್ ಧವನ್ ಹನ್ನೊಂದರ ಬಳಗಕ್ಕೆ ಮರಳಲಿದ್ದಾರೆ. ಇಬ್ಬರೂ ಪ್ರಚಂಡ ಲಯದಲ್ಲಿದ್ದು, ತಂಡ ಮತ್ತೊಮ್ಮೆ ಇವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಅಂಬಟಿ ರಾಯುಡು 3ನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಉತ್ತಮ ಆರಂಭ ಪಡೆಯುತ್ತಿದ್ದಾರೆ. ಆದರೆ ನಿರ್ಣಾಯಕ ಸಮಯಗಳಲ್ಲಿ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸುತ್ತಿದ್ದಾರೆ. ಧೋನಿ ಹಾಗೂ ಜಾಧವ್, ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಕೊಡುಗೆ ನೀಡುತ್ತಿಲ್ಲ. ಸ್ಪಿನ್ನರ್‌ಗಳ ಎದುರು ಧೋನಿ ಪರದಾಡುತ್ತಿದ್ದು, ಬಾಂಗ್ಲಾಗಿದು ಲಾಭವಾಗಬಹುದು.
ಅತ್ತ ಬಾಂಗ್ಲಾದೇಶ ತನ್ನ ಇಬ್ಬರು ಪ್ರಮುಖ ಆಟಗಾರರಿಲ್ಲದೆ ಫೈನಲ್‌ನಲ್ಲಿ ಆಡಬೇಕಿದೆ. ತಮೀಮ್ ಇಕ್ಬಾಲ್ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡುತ್ತಿದೆ. ತಂಡ ಪ್ರತಿ ಪಂದ್ಯದಲ್ಲೂ ಕೆಟ್ಟ ಆರಂಭ ಪಡೆದುಕೊಳ್ಳುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಮುಷ್ಫಿಕರ್ ರಹೀಮ್, ಮಹಮದುಲಾ, ಇಮ್ರುಲ್ ಕಯಿಸ್ ಸೇರಿ ಮತ್ತಿರರು ರನ್ ಕೊಡುಗೆ ನೀಡುತ್ತಾ ಆಸರೆಯಾಗುತ್ತಿದ್ದಾರೆ. ಅವರಿಂದ ಮತ್ತೊಂದು ಹೋರಾಟದ ಅಗತ್ಯವಿದೆ. ತಾರಾ ಆಲ್ರೌಂಡರ್ ಶಕೀಬ್ ಅಲ್ ಹಸನ್ ಗಾಯಗೊಂಡು ಬಾಂಗ್ಲಾದೇಶಕ್ಕೆ ವಾಪಸಾಗಿದ್ದಾರೆ. ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಆಡುವಾಗ, ಶಕೀಬ್ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗುವುದು ಸಹಜ. ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಿಗೆ ಜಸ್‌ಪ್ರೀತ್ ಬುಮ್ರಾರ ವೇಗ, ಭುವನೇಶ್ವರ್‌ರ ಸ್ವಿಂಗ್, ಕುಲ್ದೀಪ್‌ರ ಸ್ಪಿನ್, ಚಾಹಲ್‌ರ ಗೂಗ್ಲಿ ಹಾಗೂ ರವೀಂದ್ರ ಜಡೇಜಾರ ಜಾದೂ ಎದುರಿಸುವುದು ಸವಾಲಾಗಿ ಪರಿಣಮಿಸಲಿದೆ.
ಮುಸ್ತಾಫಿಜುರ್ ರಹಮಾನ್, ರುಬೆಲ್ ಹೊಸೈನ್ ಹಾಗೂ ನಾಯಕ ಮಶ್ರಫೆ ಮೊರ್ತಜಾ ಶಿಸ್ತುಬದ್ಧ ದಾಳಿ ನಡೆಸುತ್ತಿದ್ದಾರೆ. ಈ ಮೂವರ ಎದುರು ಭಾರತೀಯರು ಎಚ್ಚರಿಕೆಯಿಂದ ಆಡಬೇಕಿದೆ. ಮೆಹದಿ ಹಸನ್ ನಿರೀಕ್ಷೆ ಮಾಡಿದಷ್ಟು ಪರಿಣಾಮಕಾರಿಯಾಗುತ್ತಿಲ್ಲ. 5ನೇ ಬೌಲರ್ ಆಗಿ ಮಹಮದುಲ್ಲಾ ದಾಳಿಗಿಳಿಯಲಿದ್ದು, ಭಾರತ ಇದರ ಲಾಭವೆತ್ತಬೇಕಿದೆ.
ಒಟ್ಟು ಮುಖಾಮುಖಿ: 34
ಭಾರತ: 28
ಬಾಂಗ್ಲಾ: 05
ಏಷ್ಯಾಕಪ್‌ನಲ್ಲಿ ಭಾರತ vs ಬಾಂಗ್ಲಾ
ಒಟ್ಟು ಮುಖಾಮುಖಿ: 11
ಭಾರತ: 10
ಬಾಂಗ್ಲಾ: 01
ಸಂಭವನೀಯ ತಂಡಗಳು
ಭಾರತ:
ಶಿಖರ್ ಧವನ್, ರೋಹಿತ್ ಶರ್ಮಾ (ನಾಯಕ), ಅಂಬಟಿ ರಾಯುಡು, ಎಂ.ಎಸ್.ಧೋನಿ, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಜಸ್‌ಪ್ರೀತ್ ಬೂಮ್ರಾ.
ಬಾಂಗ್ಲಾದೇಶ:
ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಮಿನುಲ್ ಹಕ್, ಮುಷ್ಫಿಕುರ್ ರಹೀಮ್, ಮೊಹಮದ್ ಮಿಥುನ್, ಇಮ್ರುಲ್ ಕಯಾಸ್, ಮಹಮದುಲ್ಲಾ, ಮೆಹದಿ ಹಸನ್, ಮಶ್ರಫೆ ಮೊರ್ತಜಾ (ನಾಯಕ), ರುಬೆಲ್ ಹೊಸೈನ್, ಮುಸ್ತಾಫಿಜುರ್ ರಹಮಾನ್.
ಪಂದ್ಯ ಆರಂಭ: ಸಂಜೆ 5ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.