
ಪ್ಯಾರಿಸ್ (ನ.06): ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸುವ ಮೂಲಕ ಮರ್ರೆ, ವಿಶ್ವದ ಟೆನಿಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಈ ಸಾಧನೆ ಮಾಡುವ ಮೂಲಕ, 122 ವಾರಗಳ ಕಾಲ ನಂಬರ್ಒನ್ ಸ್ಥಾನದಲ್ಲಿ ವಿರಾಜಮಾನರಾಗಿದ್ದ ಸರ್ಬಿಯಾದ ಸ್ಟಾರ್ ಟೆನಿಸಿಗ ನೊವಾಕ್ ಜೊಕೊವಿಚ್ ಅವರನ್ನು ಕೆಳಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಮರ್ರೆ. ಅಲ್ಲದೆ, ಅವರ ವೃತ್ತಿಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಂಬರ್ಒನ್ ಸ್ಥಾನಕ್ಕೇರಿದ್ದಾರೆ. 1973ರಲ್ಲಿ ಎಟಿಪಿ ಶ್ರೇಯಾಂಕ ಕಂಪ್ಯೂಟರೀಕರಣವಾದ ನಂತರ ಬ್ರಿಟನ್ ಪಾಲಿಗೆ ಟೆನಿಸ್ ರಂಗದಲ್ಲಿ ನಂಬರ್ಒನ್ ಪಟ್ಟ ಒಲಿದಿರುವುದೂ ಇದೇ ಮೊದಲು.
ಹಾಲಿ ಟೂರ್ನಿಯಲ್ಲಿ ನೊವಾಕ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಬೇಕಾದರೆ ಮರ್ರೆ, ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಮಿಲೊಸ್ ರೊವೊನಿಕ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಬೇಕಿತ್ತು. ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 9 ಗಂಟೆಗೆ ನಡೆಯಬೇಕಿದ್ದ ಪಂದ್ಯಕ್ಕೂ ಮುನ್ನವೇ ಗಾಯದ ಸಮಸ್ಯೆಯಿಂದಾಗಿ ಮಿಲೊಸ್ ರೊವೊನಿಕ್ ಅವರು ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ, ಮರ್ರೆ ಅನಾಯಾಸವಾಗಿ ಫೈನಲ್ ಪ್ರವೇಶಿಸಿದ್ದಲ್ಲದೆ, ವಿಶ್ವ ಶ್ರೇಯಾಂಕದಲ್ಲಿ ನಂಬರ್ಒನ್ ಸ್ಥಾನಕ್ಕೂ ಲಗ್ಗೆಯಿಟ್ಟರು.
ಈ ವರ್ಷದ ತಮ್ಮ ಟೆನಿಸ್ ಪಯಣದಲ್ಲಿ ತಾವು ಆಡಿದ 12 ಟೂರ್ನಿಗಳಲ್ಲಿ 11ರಲ್ಲಿ ಫೈನಲ್ ಪ್ರವೇಶ, ಒಟ್ಟಾರೆಯಾಗಿ 73 ಪಂದ್ಯಗಳಲ್ಲಿ ಜಯ ದಾಖಲಿಸಿದ್ದು ಅಗ್ರಸ್ಥಾನಕ್ಕೆ ದಾಂಗುಡಿಯಿಡಲು ನೆರವಾಗಿದೆ. ಇದಲ್ಲದೆ, ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಪರಾಭವ ಹೊಂದಿದ್ದು, ಮರ್ರೆಯವರ ಅಗ್ರಸ್ಥಾನದ ಪಯಣವನ್ನು ಸುಲಭಗೊಳಿಸಿತ್ತು. ಶುಕ್ರವಾರ ನಡೆದಿದ್ದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮರ್ರೆ 7-6 (11-9), 7-5 ಸೆಟ್‌ಗಳಿಂದ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಎದುರು ಗೆಲುವು ಸಾಧಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.