ರಹಾನೆಗೆ ಏಕದಿನ ತಂಡದ ಚಿಂತೆ- ರೋಹಿತ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸೋ ತವಕ

First Published May 30, 2018, 8:19 PM IST
Highlights

ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸಲು ಹೋರಾಟ ಮಾಡುತ್ತಿದ್ದರೆ, ರಹಾನೆ ನಿಗಧಿತ ಮಾದರಿ ಕ್ರಿಕೆಟ್‌ನಲ್ಲಿ ಖಾಯಂ ಸ್ಥಾನಕ್ಕಾಗಿ ಹಾತೊರೆಯುತ್ತಿದ್ದಾರೆ. ಆದರೆ ಇವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ ಅನ್ನೋದನ್ನ ಮರೆಯುವಂತಿಲ್ಲ.

ಬೆಂಗಳೂರು(ಮೇ.30): ಟೀಮ್ಇಂಡಿಯಾದ ಮೋಸ್ಟ್ ಟ್ಯಾಲೆಂಟ್ ಬ್ಯಾಟ್ಸ್‌ಮನ್‌ಗಳಲ್ಲಿ ರೋಹಿತ್ ಶರ್ಮಾ ಹಾಗು ಅಜಿಂಕ್ಯ ರಹಾನೆ ಮುಂಚೂಣಿಯಲ್ಲಿದ್ದಾರೆ.  ಆದರೆ ರೋಹಿತ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದರೆ, ರಹಾನೆ ಏಕದಿನ ತಂಡದ ಸ್ಥಾನಕ್ಕಾಗಿ ಕಠಿಣ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಯಶಸ್ಸು ಮಾತ್ರ ಸಿಗುತ್ತಿಲ್ಲ. ಐಪಿಎಲ್ ಟೂರ್ನಿ ಮುಗಿಸಿರುವ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಮತ್ತೆ ಖಾಯಂ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧಧ ಏಕೈಕ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾಗೆ ಅವಕಾಶ ಕಲ್ಪಿಸಿಲ್ಲ. ಇನ್ನು ಐರ್ಲೆಂಡ್ ವಿರುದ್ಧದ ನಿಗಧಿತ ಓವರ್ ಕ್ರಿಕೆಟ್‌ಗೆ ರಹಾನೆ ಆಯ್ಕೆಯಾಗಿಲ್ಲ.  

ರೋಹಿತ್ ಹಾಗೂ ರಹಾನೆ ಅತ್ಯುತ್ತಮ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ರಹಾನೆ ಹಾಗೂ ರೋಹಿತ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹೀಗಾಗಿಯೇ ಕಳೆದ ಸೌತ್ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇನ್ನು ರಹಾನೆ ಏಕದಿನ ಹಾಗು ಟಿ-ಟ್ವೆಂಟಿ ತಂಡದಲ್ಲಿ ಅವಕಾಶ ವಂಚಿತರಾಗಿದ್ದರು. 

ರೋಹಿತ್ ಹಾಗೂ ರಹಾನೆ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಆಗಸ್ಟ್‌ನಲ್ಲಿ ಆರಂಭವಾಗಲಿರುವ ಭಾರತ -ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಆಯ್ಕೆಯಾಗೋದು ರೋಹಿತ್ ಕನಸಾಗಿದ್ದರೆ, 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋದು ರಹಾನೆ ಚಾಲೆಂಜ್. ಆದರೆ ಆಯ್ಕೆ ಸಮಿತಿ ಟೆಸ್ಟ್, ಏಕದಿನ ಹಾಗೂ ಟಿ-ಟ್ವೆಂಟಿ ಪಂದ್ಯಕ್ಕಾಗಿ ಆಟಗಾರರನ್ನ ಸಜ್ಜುಗೊಳಿಸಿದೆ. ಇಷ್ಟೇ ಅಲ್ಲ ಇದುವರೆಗೆ ಸಿಕ್ಕಿರೋ ಅವಕಾಶದಲ್ಲಿ ರೋಹಿತ್ ಟೆಸ್ಟ್ ಮಾದರಿಯಲ್ಲಿ ಹಾಗೂ ರಹಾನೆ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಇವರಿಗೆ ಮತ್ತೊಂದು ಅವಕಾಶ ಸಿಗೋದು ಕಷ್ಟ.

ಹಾಗಂತ ಇವರ ಮುಂದೆ ಆಯ್ಕೆಗಳಿಲ್ಲ ಎಂದಲ್ಲ. ಕಮ್‌ಬ್ಯಾಕ್ ಮಾಡೋ ಅವಕಾಶ ಇದೆ. ರಹಾನೆ ಟೆಸ್ಟ್ ಮಾದರಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ವಿದೇಶಿ ಪಿಚ್‌ಗಳಲ್ಲಿ ರಹಾನೆ ಕ್ಲಾಸ್ ಪ್ರದರ್ಶನ ನೀಡಿದ್ದಾರೆ. ಇತ್ತ ರೋಹಿತ್ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಹೀಗಾಗಿ ಇವರಿಬ್ಬರಿಗೂ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳೋದು ಕಷ್ಟವೇನಲ್ಲ. 

ಅಜಿಂಕ್ಯ ರಹಾನೆ 44 ಟೆಸ್ಟ್ ಪಂದ್ಯಗಳಲ್ಲಿ 2883 ರನ್ ಸಿಡಿಸಿದ್ದಾರೆ. 188 ರಹಾನೆ ವೈಯುಕ್ತಿಕ ಗರಿಷ್ಠ ಮೊತ್ತ. ಟೆಸ್ಟ್ ಕ್ರಿಕೆಟ್‌ನಲ್ಲಿ 9 ಶತಕ ಹಾಗು 12 ಅರ್ಧಶತಕ ಸಿಡಿಸಿರುವ ರಹಾನೆ 43.68ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಏಕದಿನದಲ್ಲಿ ರಹಾನೆ 90 ಪಂದ್ಯಗಳಿಂದ 2962 ರನ್ ದಾಖಲಿಸಿದ್ದಾರೆ. ಏಕದಿನದಲ್ಲಿ 3 ಶತಕ ಹಾಗೂ 24 ಅರ್ಧಶತಕ ಬಾರಿಸಿದ್ದಾರೆ.  20 ಟಿ-ಟ್ವೆಂಟಿ ಪಂದ್ಯಗಳಿಂದ 375 ರನ್ ದಾಖಲಿಸಿದ್ದಾರೆ. 

ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 180 ಪಂದ್ಯಗಳನ್ನಾಡಿ 6594 ರನ್ ಸಿಡಿಸಿದ್ದಾರೆ. ದಾಖಲೆಯ 264 ರನ್ ರೋಹಿತ್ ವೈಯುಕ್ತಿಕ ಗರಿಷ್ಠ ಮೊತ್ತ. ಏಕದಿನದಲ್ಲಿ 17 ಶತಕ ಹಾಗೂ 34 ಅರ್ಧಶತಕ ಬಾರಿಸಿದ್ದಾರೆ. 3 ದ್ವಿಶತಕ ಬಾರಿಸಿರುವ ರೋಹಿತ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆದರೆ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 25 ಪಂದ್ಯ ಆಡಿದ್ದಾರೆ. 2007ರಲ್ಲಿ ಏಕದಿನ ಹಾಗೂ ಟಿ-ಟ್ವೆಂಟಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್, ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದು 2013ರಲ್ಲಿ. ಟೆಸ್ಟ್‌ನಲ್ಲಿ ರೋಹಿತ್ 1479 ರನ್ ಸಿಡಿಸಿದ್ದಾರೆ. 3 ಶತಕ ಹಾಗೂ 9 ಅರ್ಧಶತಕ ಸಿಡಿಸಿದ್ದಾರೆ.

ಅಂಕಿ ಅಂಶಗಳು ರೋಹಿತ್  ಹಾಗೂ ರಹಾನೆ ಯಾವ ಮಾದರಿಯಲ್ಲಿ ಯಶಸ್ಸು ಕಂಡಿದ್ದಾರೆ ಅನ್ನೋದನ್ನ ಸಾರಿ ಹೇಳುತ್ತಿದೆ. ಆದರೆ ಹೊಸ ದಾಖಲೆ ಬರೆಯಲು ಈ ಆಟಗಾರರಿಗೆ ಸಾಧ್ಯವಿದೆ ಅನ್ನೋದು ಮರೆಯುವಂತಿಲ್ಲ. ಶೀಘ್ರದಲ್ಲೇ ಎಲ್ಲಾ ಮಾದರಿಯಲ್ಲೂ ರೋಹಿತ್ ಹಾಗೂ ರಹಾನೆ ಕಾಣಿಸಿಕೊಳ್ಳಲಿ ಅನ್ನೋದೇ ಅಭಿಮಾನಿಗಳ ಆಶಯ. 
 

click me!