ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಎಬಿ ಡಿವಿಲಿಯರ್ಸ್

First Published Jul 9, 2018, 6:49 PM IST
Highlights

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸೌತ್ಆಫ್ರಿಕಾ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ಹೇಳಿದ್ದೇನು? ಇಲ್ಲಿದೆ ವಿವರ.

ಕೇಪ್‌ಟೌನ್(ಜು.09): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದ ಸೌತ್ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಅತ್ಯುತ್ತಮ ಫಾರ್ಮ್‌ನಲ್ಲಿರುವಾಗಲೇ ಎಬಿಡಿ ಕ್ರಿಕೆಟ್ ಕರಿಯರ್‌ಗೆ ವಿದಾಯ ಹೇಳಿದ್ದರು. ಅಭಿಮಾನಿಗಳೆಲ್ಲಾ 2019ರ ವಿಶ್ವಕಪ್ ಟೂರ್ನಿಯಲ್ಲಿ ಎಬಿಡಿ ಬ್ಯಾಟಿಂಗ್ ನೋಡಲು ಕಾತರಗೊಂಡಿದ್ದರು. ಆದರೆ ದಿಢೀರ್ ವಿದಾಯ ಎಲ್ಲರಿಗೂ ಅಚ್ಚರಿ ತಂದಿತ್ತು.

ಎಬಿಡಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಂತೆ ಐಪಿಎಲ್ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಎಬಿಡಿ ನಿರ್ಧಾರ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇಷ್ಟೇ ಅಲ್ಲ ವಿದಾಯ ಹೇಳುತ್ತಿದ್ದಂತೆ, ವಿದೇಶಿ ಟೂರ್ನಿಗಳಲ್ಲಿ ಆಡೋ ಸಾಧ್ಯತೆ ಕಡಿಮೆ ಎಂದಿದ್ದರು.

ಸೌತ್ಆಫ್ರಿಕಾ ಸುದ್ದಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಎಬಿಡಿ ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಕೆಲ ವರ್ಷ ಐಪಿಎಲ್ ಟೂರ್ನಿಯಲ್ಲಿ ಆ‌ರ್‌ಸಿಬಿ ತಂಡವನ್ನ ಪ್ರತಿನಿಧಿಸೋದಾಗಿ ಎಬಿಡಿ ಸ್ಪಷ್ಟಪಡಿಸಿದ್ದಾರೆ. ಐಪಿಎಲ್ ಟೂರ್ನಿಯ ಆರ್‌ಸಿಬಿ ಹಾಗೂ ಸೌತ್ಆಫ್ರಿಕಾದ ಟೈಟಾನ್ಸ್ ತಂಡದ ಪರ ಆಡೋದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ಮಾಡಲಿದ್ದೇನೆ ಎಂದು ಎಬಿಡಿ ಹೇಳಿದ್ದಾರೆ.

ಸೌತ್ಆಫ್ರಿಕಾ ದೇಸಿ ಕ್ರಿಕೆಟ್‌ನಲ್ಲಿ ಸಕ್ರೀಯವಾಗಿರುತ್ತೇನೆ ಎಂದಿರುವ ಎಬಿಡಿ, ಐಪಿಎಲ್ ಟೂರ್ನಿಯಲ್ಲಿ ಎಷ್ಟು ಆವೃತ್ತಿ ಆಡಲಿದ್ದಾರೆ ಎಂಬುದನ್ನ ಸ್ಪಷ್ಟಪಡಿಸಿಲ್ಲ. ಆದರೆ ಕೆಲ ವರ್ಷಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯೋದಾಗಿ ಮಾತ್ರ ಹೇಳಿದ್ದಾರೆ.

click me!