ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಕ್ಕೆ ಈಗಾಗಲೇ ಚಾಲನೆ ಸಿಕ್ಕಿವೆ. ವಿಶ್ವದ ವಿವಿಧ ಭಾಗಗಳಿಂದ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಇದರ ವಿಶೇಷತೆ ಏನು?
ಶಿವಾನಂದ ಗೊಂಬಿ
ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದಾದ ಮಹಾಕುಂಭ ಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಸಜ್ಜಾಗುತ್ತಿದೆ. 12 ವರ್ಷಗಳಿಗೊಮ್ಮೆ ಬರೋಬ್ಬರಿ 45 ದಿನಗಳ ಕಾಲ ನಡೆಯುವ ಈ ಧಾರ್ಮಿಕ ಮೇಳಕ್ಕೆ ಕೋಟಿಗಟ್ಟಲೇ ಸಾಧು ಸಂತರು, ನಾಗಾಸಾಧುಗಳು, ಅಘೋರಿಗಳು, ಭಕ್ತರು ಆಗಮಿಸುವುದು ಇಲ್ಲಿನ ವಿಶೇಷ.
ಭಾರತ ಅಷ್ಟೇ ಅಲ್ಲ ವಿದೇಶಗಳಿಂದ ಭಕ್ತರು, ಆಗಮಿಸಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮಸ್ಥಳದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಇಲ್ಲಿ ಪುಣ್ಯಸ್ನಾನ ಮಾಡಿದರೆ ಪಾಪನಾಶ, ಮೋಕ್ಷ ಲಭಿಸುತ್ತದೆ ಎಂಬ ನಂಬುಗೆ ಇದೆ ಇದರ ಜತೆಗೆ ಲಕ್ಷಗಟ್ಟಲೇ ಜನ ಸೇರಿ ದೇವರ ಆರಾಧನೆ, ಧಾರ್ಮಿಕ ಚಿಂತನೆ, ಪ್ರವಚನಗಳೆಲ್ಲ ನಡೆಯುವುದರಿಂದ ಅಂತರಂಗವೂ ಶುದ್ಧಿಯಾಗಿ ಆಧ್ಯಾತ್ಮಿಕ ಜಾಗೃತಿಗೂ ನಾಂದಿ ಹಾಡುವುದೇ ಮಹಾಕುಂಭ ಮೇಳ.
12 ವರ್ಷಕ್ಕೊಮ್ಮೆ ಅಷ್ಟೇ ಏಕೆ ಮಹಾಕುಂಭಮೇಳ ಆಚರಿಸಲಾಗುತ್ತಿದೆ. ಪ್ರಯಾಗ್‌ರಾಜ್ ಪಕ್ಕದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾದ ಬಳಿಕ ಮೊಟ್ಟ ಮೊದಲ ಬಾರಿಗೆ ಮಹಾಕುಂಭ ಮೇಳ ನಡೆಸಲಾಗುತ್ತಿದೆ. ಹಾಗಾದರೆ ಕುಂಭ ಮೇಳದ ವಿಶೇಷ ಏನು? ಅಲ್ಲಿನ ತಯಾರಿ ಹೇಗೆ ನಡೆದಿದೆ ಎಂಬುದರ ಸಣ್ಣ ವಿವರ ಇಲ್ಲಿದೆ.
-20 ಡಿಗ್ರಿ ಚಳಿಗೂ ಬಟ್ಟೆ ಹಾಕದ ನಾಗಸಾಧುಗಳ ಶಕ್ತಿ ವೈದ್ಯಕೀಯ ವಿಜ್ಞಾನಕ್ಕೆ ಸವಾಲು
12 ವರ್ಷಗಳಿಗೊಮ್ಮೆ ಏಕೆ?
ಧರ್ಮಗ್ರಂಥಗಳಲ್ಲಿ ಪ್ರಯಾಗ್‌ರಾಜನ್ನು ತೀರ್ಥರಾಜ್ ಎಂದೂ ಉಲ್ಲೇಖಿಸಲಾಗಿದೆ. ಅಂದರೆ, ಇದು ತೀರ್ಥಯಾತ್ರೆಗಳ ರಾಜ ಎಂದು ವಿವರಿಸುತ್ತವೆ. ಮೊದಲ ಯಾಗವನ್ನು ಭಗವಾನ್ ಬ್ರಹ್ಮನು ಇಲ್ಲಿ ನಡೆಸಿದ್ದನು ಎಂಬ ಉಲ್ಲೇಖವಿದೆ. ದೇವತೆಗಳು ಮತ್ತು ರಾಕ್ಷಸರು 12 ಆಕಾಶದ ದಿನಗಳ ಕಾಲ ಅಮೃತಕ್ಕಾಗಿ ಹೋರಾಟ ನಡೆಸಿದರು. ಇದು 12 ಮಾನವ ವರ್ಷಗಳಿಗೆ ಸಮಾನ. ಈ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.
ಯಾವಾಗಿಂದ ಪ್ರಾರಂಭ?
2013ರಲ್ಲಿ ಇಲ್ಲಿ ಮಹಾಕುಂಭ ಮೇಳ ನಡೆದಿತ್ತು. ಇದೀಗ 2025ರ ಜನವರಿ 13ರಿಂದ (ಪೌಶ್ ಹುಣ್ಣಿಮೆ) ಇಲ್ಲಿ ಪ್ರಾರಂಭವಾಗಲಿದೆ. ಫೆ.26ರ ಶಿವರಾತ್ರಿ ದಿನದಂದು ಸಂಪನ್ನಗೊಳ್ಳಲಿದೆ. ಜ.14 ಮಕರ ಸಂಕ್ರಾಂತಿ, ಜನವರಿ 29ರಂದು ಮೌನಿ ಅಮವಾಸ್ಯೆ ಮತ್ತು ಫೆಬ್ರವರಿ 3ರಂದು ವಸಂತ ಪಂಚಮಿ. ಹೀಗೆ 5 ಬಾರಿ ಪುಣ್ಯ ಸ್ನಾನ ಪ್ರಯಾಗ್‌ರಾಜ್‌ನಲ್ಲಿ ಇರುವ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ.
ನದಿ ತೀರದಲ್ಲಿ ಮೆರವಣಿಗೆ
ಮಹಾ ಕುಂಭಮೇಳ ಹಿಂದು ಪುರಾಣಗಳಲ್ಲಿ ಆಳವಾಗಿ ಬೇರೂರಿದೆ. ನದಿ ಸ್ನಾನಕ್ಕೆ ಮಹತ್ವ ನೀಡಲಾಗಿದ್ದು, ತಪಸ್ವಿಗಳು ಮತ್ತು ಸಾಧುಸಂತರು ಮಂಗಳಕರ ದಿನಾಂಕಗಳಂದು ನದಿ ತೀರದಲ್ಲಿ ಮೆರವಣಿಗೆಗಳನ್ನು ನಡೆಸುತ್ತಾರೆ.
ವರ್ಷದಿಂದಲೇ ತಯಾರಿ
ಹಾಗೆ ನೋಡಿದರೆ ಆರು ವರ್ಷಕ್ಕೊಮ್ಮೆ ಅರ್ಧಕುಂಭ, 12 ವರ್ಷಕ್ಕೊಮ್ಮೆ ಪೂರ್ಣಕುಂಭ ನಡೆಯುತ್ತಲೇ ಇರುತ್ತದೆ. ನೂರಾರು ವರ್ಷಗಳಿಂದಲೇ ಇಲ್ಲಿ ಕುಂಭಮೇಳ ನಡೆಯುತ್ತಿದೆ. ಆದರೆ ಈ ವರ್ಷ ವಿಶೇಷವೆನಿಸಿದೆ. ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳುವುದರ ಜತೆ ಜತೆಗೆ ‘ಸ್ವಚ್ಛ- ಶುದ್ಧ, ಪರಿಸರ ಸ್ನೇಹಿ ಮಹಾಕುಂಭ ಮೇಳ’ ಮಾಡುವ ಸಂಕಲ್ಪ ಅಲ್ಲಿನ ಸರ್ಕಾರದ್ದು. ಜತೆಗೆ ಭಾರತದ ಆಧ್ಯಾತ್ಮಿಕ ಶಕ್ತಿ ಇಡೀ ವಿಶ್ವಕ್ಕೆ ತೋರಿಸುವ ಇರಾದೆಯೂ ಅಡಗಿದೆ.
ಇಂದಿನಿಂದ 45 ದಿನ ಕಾಲ ಮಹಾಕುಂಭಮೇಳ ವೈಭವ, ಪ್ರಯಾಗರಾಜ್‌ನಲ್ಲಿ ಮೊದಲ ಸ್ನಾನ ಆರಂಭ!
ಈ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿಯುವ ಕೆಲಸವೂ ನಡೆಯುತ್ತಿದೆ. ಭಾರತವನ್ನು ವಿಶ್ವಗುರು ಮಾಡುವಲ್ಲಿ ಮಹಾಕುಂಭ ಮೇಳವು ನಾಂದಿಯಾಗಲಿದೆ ಎಂಬ ವಿಶ್ವಾಸ ಪ್ರಧಾನಿ ನರೇಂದ್ರ ಮೋದಿ ಅವರದ್ದು.
ಈ ಎಲ್ಲ ಕಾರಣಗಳಿಂದ ‘ದಿವ್ಯ ಭವ್ಯ ಡಿಜಿಟಲ್ ಮಹಾಕುಂಭ’ ಎಂಬ ಟ್ಯಾಗ್‌ಲೈನ್ ಹಾಕಿಕೊಂಡು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಕಳೆದ ಒಂದು ವರ್ಷದಿಂದಲೇ ನಡೆಸಿದೆ.
ಸಂಗಮನಗರಿ ಸೃಷ್ಟಿ
ಈ 45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 45 ಕೋಟಿ ಜನ ಬಂದು ಹೋಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಗಂಗೆ, ಯಮುನೆ, ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳದಲ್ಲಿ ‘ಸಂಗಮನಗರಿ’ ಎಂಬ ನಗರವೇ ಸೃಷ್ಟಿಯಾಗಿದೆ. ಇದಕ್ಕೆ ಪ್ರತ್ಯೇಕ ಆಡಳಿತ ವರ್ಗವನ್ನೇ ಅಲ್ಲಿನ ಸರ್ಕಾರ ನಿಯೋಜಿಸಿದೆ.
50ಕ್ಕೂ ಹೆಚ್ಚು ಬ್ರಿಡ್ಜ್
ಮಹಾಕುಂಭದಲ್ಲಿ ಒಂದೇ ಒಂದು ಪ್ಲಾಸ್ಟಿಕ್ ಪೇಪರ್ ಬಳಸದೇ ಸಂಪೂರ್ಣ ಪರಿಸರ ಸ್ನೇಹಿಯನ್ನಾಗಿಸುವ ಕೆಲಸ ಭರದಿಂದ ಸಾಗಿದೆ. ಸ್ವಚ್ಛತೆ ಹಾಗೂ ಶುದ್ಧತೆ ಕಾಪಾಡುವುದಕ್ಕಾಗಿ ಬರೋಬ್ಬರಿ 1500 ಪೌರಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ನದಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಲೀಸಾಗಿ ಭಕ್ತರು, ಗುರುಶಿಷ್ಯರು, ನಾಗಾಸಾಧುಗಳು ಹೋಗಿ ಬರಲು ಅನುಕೂಲವಾಗಲೆಂಬ ಉದ್ದೇಶದಿಂದ 50ಕ್ಕೂ ಹೆಚ್ಚು ಸಣ್ಣ ಸಣ್ಣ ತಾತ್ಕಾಲಿಕ ಬ್ರಿಡ್ಜ್‌ಗಳನ್ನು ನಿರ್ಮಿಸಿದ್ದು ವಿಶೇಷ. 1.5 ಲಕ್ಷ ಶೌಚಾಲಯ, ಸ್ನಾನಗೃಹ, ಬಟ್ಟೆ ಬದಲಿಸಲು ವ್ಯವಸ್ಥೆಗಳು ಇಲ್ಲಿ ಹೇರಳವಾಗಿವೆ.
ಏಕಕಾಲಕ್ಕೆ ಸಾವಿರ ಸಾವಿರ ಜನರು ಉಳಿದುಕೊಳ್ಳಲು ಅನುಕೂಲವಾಗಲೆಂಬ ಉದ್ದೇಶದಿಂದ ಅಲ್ಲಲ್ಲಿ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಟೆಂಟ್ ನಗರಿ ಎಂದು ಕೂಡ ಕರೆಯಲಾಗುತ್ತಿದೆ. ಬರೀ ಸರ್ಕಾರವಷ್ಟೇ ಅಲ್ಲ. ಖಾಸಗಿಯಾಗಿ ನೂರಾರು ಟೆಂಟ್‌ಗಳನ್ನು ನಿರ್ಮಿಸಿರುವುದು ವಿಶೇಷ. ಒಂದು ರೀತಿಯಲ್ಲಿ ‘ಟೆಂಟ್‌ನಗರಿ’ ಎಂದು ಕರೆಯಲಾಗುತ್ತಿದೆ. ಆಗಮಿಸುವ ಸಾಧು ಸಂತರಿಗೆ, ಭಕ್ತರಿಗೆ ಕಿಂಚಿತ್ತೂ ಸಮಸ್ಯೆಯಾಗಬಾರದು ಎಂಬ ಉದ್ದೇಶ ಅಡಗಿದೆ.
‘ಡಿಜಿಟಲ್ ಕುಂಭ’
ಕುಂಭ ಮೇಳದ ಸಮಗ್ರ ಮಾಹಿತಿ ಜನರ ಅಂಗೈಯಲ್ಲೇ ಸಿಗಬೇಕು. ಏನಾದರೂ ಸಹಾಯ ಬೇಕೆಂದರೂ ತಕ್ಷಣವೇ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ‘ಕುಂಭ್ ಸಹಾಯಕ್’ (kumbh SahAIyak) ಎಂಬ ಚಾಟ್‌ಬೋಟ್ ಕೂಡ ತೆರೆದಿದೆ. ಇದು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಾಟ್‌ಬೋಟ್ ಎಂಬುದು ಮತ್ತೊಂದು ವಿಶೇಷ. ಜತೆ ಜತೆಗೆ ಫೇಸ್‌ಬುಕ್, ಇನ್‌ಸ್ಟಾ, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳನ್ನು ಹೇರಳವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಡಿಜಿಟಲ್‌ಗೂ ಹೆಚ್ಚಿನ ಆದ್ಯತೆ ನೀಡಿದಂತಾಗಿದೆ. ಈ ಕಾರಣದಿಂದಲೇ ದಿವ್ಯ ಭವ್ಯ ಡಿಜಿಟಲ್ ಮಹಾಕುಂಭ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೇಳಕ್ಕೆ ಸ್ವಾಗತಿಸುವ ಕೆಲಸ ಅಲ್ಲಿನ ಸರ್ಕಾರ ಮಾಡುತ್ತಿದೆ.
2025ರ ಮಹಾಕುಂಭ ಸಮಯದಲ್ಲಿ ಮಂಗಳ ನಿಂದ ಶುಭ, 4 ರಾಶಿಗೆ ಅದೃಷ್ಟ
ಹಿಂದೆ 1954ರಲ್ಲಿ ನಡೆದಿದ್ದ ಮಹಾಕುಂಭ ಮೇಳದಲ್ಲಿ ಆನೆಗಳ ಮೆರವಣಿಗೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಬರೋಬ್ಬರಿ 6 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಅಂಥ ಅಹಿತಕರ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಎಲ್ಲ ಬಗೆ ಸೌಲಭ್ಯ, ಮುನ್ನೆಚ್ಚರಿಕೆಗಳನ್ನು ಅಲ್ಲಿನ ಸರ್ಕಾರ ಕೈಗೊಂಡಿದೆ.
ಬೆಂಕಿ ನಂದಿಸಲು ಅತ್ಯಾಧುನಿಕ ತಂತ್ರಜ್ಞಾನ, ನೀರಿನ ಗೋಪುರದ ಕಟ್ಟಡ, ರೋಬೋಟ್‌ಗಳ ಬಳಕೆ ಹೀಗೆ ಹತ್ತು ಹಲವು ವಿಶೇಷತೆಗಳಿಗೆ ಮಹಾಕುಂಭ ಮೇಳ ಸಾಕ್ಷಿಕರಿಸಲಿದೆ ಎಂಬುದು ಸ್ಪಷ್ಟ. ಮಹಾಕುಂಭ ಮೇಳದಲ್ಲಿ ರೈಲ್ವೆ ಇಲಾಖೆ ಕೂಡ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಬರೋಬ್ಬರಿ ಪ್ರಯಾಗ್‌ರಾಜ್‌ಗೆ 3 ಸಾವಿರಕ್ಕೂ ಅಧಿಕ ವಿಶೇಷ ರೈಲುಗಳನ್ನು ಓಡಿಸಲಿದೆ. ಪ್ರಯಾಣಿಕರಿಗಾಗಿ ನಾಲ್ಕೈದು ವಿಶ್ರಾಂತಿ ತಾಣಗಳನ್ನು ಮಾಡಿದೆ. ಒಂದೊಂದು ತಾಣದಲ್ಲೂ 5 ಸಾವಿರಕ್ಕೂ ಅಧಿಕ ಪ್ರಯಾಣಿಕರು ಕೆಲಹೊತ್ತು ಅಂದರೆ ರೈಲು ಬರುವವರೆಗೆ ವಿಶ್ರಾಂತಿ ಪಡೆದುಕೊಳ್ಳಬಹುದಾಗಿದೆ. ಜತೆಗೆ ಪ್ರಯಾಣಿಕರ ಇದ್ದ ಸ್ಥಳದಲ್ಲೇ ಟಿಕೆಟ್ ಪಡೆಯುವ ವ್ಯವಸ್ಥೆಯನ್ನೂ ಮಾಡಿರುವುದು ವಿಶೇಷ. ಮುಂಜಾಗ್ರತಾ ಕ್ರಮವಾಗಿ ಪ್ರಯಾಗ್‌ರಾಜ್‌ದ ಗಲ್ಲಿಗಲ್ಲಿಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅವುಗಳನ್ನು ನಿಯಂತ್ರಿಸಲು ಸುಸಜ್ಜಿತ, ಅತ್ಯಾಧುನಿಕ ಕಂಟ್ರೋಲ್ ರೂಂ ಮಾಡಿದೆ.
ವಿಶ್ವದ ಅತಿ ದೊಡ್ಡ ಧಾರ್ಮಿಕ ಸಮ್ಮೇಳನ ಮಹಾಕುಂಭ ಮೇಳವು ಜಗತ್ತಿಗೆ ಭಾರತವೇ ಆಧ್ಯಾತ್ಮಿಕ ಗುರು ಎಂಬುದನ್ನು ತೋರಿಸಲು ನಾಂದಿಯಾಗಲಿ ಎಂಬುದು ಎಲ್ಲರ ಆಶಯ.
ಮಹಾ ಕುಂಭ ಮೇಳದ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಿದ್ದು ಮುಸ್ಲಿಂ ರಾಷ್ಟ್ರಗಳು ! ಟಾಪ್ ಒಂದರಲ್ಲಿದೆ ಶತ್ರು ದೇಶ
ಕುಂಭಕ್ಕೆ ಬಂದವರಿಗೆ ರಾಮನ ಆಹ್ವಾನ!
500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಕಳೆದ ವರ್ಷವಷ್ಟೇ ನಿರ್ಮಾಣವಾಗಿದೆ. ಪ್ರಯಾಗ್‌ರಾಜ್‌ದಿಂದ ಅಯೋಧ್ಯೆ ಬರೀ 160 ಕಿಮೀ ಅಂತರದಲ್ಲಿದೆ. ಶ್ರೀರಾಮಮಂದಿರ ಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಮಹಾಕುಂಭ ನಡೆಯುತ್ತಿದೆ. ಮಹಾಕುಂಭಕ್ಕೆ ಬರುವ ಭಕ್ತರು ಸಹಜವಾಗಿ ಇಲ್ಲೂ ಭೇಟಿ ನೀಡುವುದು ಮಾಮೂಲಿ. ಹೀಗಾಗಿ ಅಯೋಧ್ಯೆ, ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳನ್ನೊಳಗೊಂಡು ಧಾರ್ಮಿಕ ಪ್ರವಾಸಕ್ಕೆ ವಿಶೇಷ ಪ್ಯಾಕೇಜ್‌ಗಳ ವ್ಯವಸ್ಥೆಯೂ ಮಾಡಿರುವುದು ವಿಶೇಷ.