ರೋರಿಚ್‌ ಚಿತ್ರಗಳ ಮೋಡಿ, ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನೋಡಿ

By Kannadaprabha News  |  First Published Nov 19, 2024, 3:04 PM IST

ರಷ್ಯಾ ಮೂಲದ ಕಲಾವಿದ ನಿಕೋಲಸ್ ರೋರಿಚ್ ಅವರ 150ನೇ ಜನ್ಮದಿನದ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ 'ಸ್ಪೋಮಿನಾಯಾ ರೋರಿಚ್‌' ಪ್ರದರ್ಶನ ನಡೆಯುತ್ತಿದೆ. ಹಿಮಾಲಯದ ಸೌಂದರ್ಯ ಸೆರೆಹಿಡಿದ 36 ಚಿತ್ರಗಳು, ಅವರ ಜೀವನ ಚರಿತ್ರೆ ಮತ್ತು ಕಲಾ ಕೊಡುಗೆಗಳನ್ನು ಒಳಗೊಂಡಿದೆ.


- ಮಯೂರ್ ಹೆಗಡೆ

ಅಧ್ಯಾತ್ಮದಲ್ಲಿ ಅದ್ದಿ ತೆಗೆದ ಕುಂಚದಲ್ಲಿ ಚಿತ್ರಿಸಿದ ಹಿಮಾಚ್ಚಾದಿತ ಶಿಖರಗಳ ಸೌಂದರ್ಯ, ಕಣಿವೆಗಳ ನಡುವೆ ತಣ್ಣಗೆ ಹರಿವ ತೊರೆ ಮುಂದುವರಿದು ಬಂಡೆಗಳ ನಡುವೆ ವೇಗದಿಂದ ಸಾಗಿ ಮರೆಯಾಗುವ ಚಿತ್ರಣ. ವರ್ಣನಾತೀತ ಹಿಮಾಲಯದ ವಿಹಂಗಮತೆ ತುಂಬಿಕೊಳ್ಳಲು ಗಾಢ, ತಿಳಿನೀಲಿ ಬಣ್ಣಗಳ ರೇಖೆಯುದ್ದಕ್ಕೆ ಕಣ್ಣುಗಳು ಪಯಣಿಸುವಾಗ ಅರಿವಿಗೆ ಬಾರದಂತೆ ದಾರ್ಶನಿಕ ಲೋಕದಲ್ಲಿ ಕಳೆದುಹೋಗುವಂತೆ ಮಾಡುವ ಕಲಾತ್ಮಕತೆ.

Tap to resize

Latest Videos

undefined

ಹೊಸ ಮನೆ ಗೃಹಪ್ರವೇಶ ಮಾಡಿದ ಮೇಘನಾ ರಾಜ್; ಮನೆಗಿಟ್ಟ ಹೆಸರಲ್ಲಿ ಚಿರುನೇ ಇಲ್ಲ ಎಂದು ಫ್ಯಾನ್ಸ್ ಬೇಸರ

ಭಾರತದ ಕಲಾ ನವರತ್ನಗಳ ಪೈಕಿ ಏಕೈಕ ವಿದೇಶಿಗ ಎನ್ನಿಸಿಕೊಂಡ ರಷ್ಯಾ ಮೂಲದ ನಿಕೋಲಸ್ ರೋರಿಚ್‌ ಅವರ ವರ್ಣಚಿತ್ರಗಳ ಚಮತ್ಕಾರವಿದು. ಅವರ 150ನೇ ಜನ್ಮದಿನ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ‘ಸ್ಪೋಮಿನಾಯಾ ರೋರಿಚ್‌’ ಪ್ರದರ್ಶನ ನಡೆಯುತ್ತಿದೆ. ನಿಕೋಲಸ್ ಬರೆದ 36 ಹಿಮಾಚ್ಚಾದಿತ ಚಿತ್ರಗಳು ಕಲಾಪ್ರಿಯರ ಕಣ್ಮನ ಸೆಳೆಯುತ್ತಿವೆ.

ದೇಶದ 21 ಶಾಲೆಗಳ ಮಾನ್ಯತೆ ರದ್ದು ಮಾಡಿದ ಸಿಬಿಎಸ್‌ಇ, ಕರ್ನಾಟಕದ ಶಾಲೆ ಇದರಲ್ಲಿದ್ಯಾ?

ನಿಕೋಲಸ್‌ರು ಶಂಬಾಲಾದಿಂದ ಪ್ರೇರಿತಗೊಂಡು ರಚಿಸಿದ ಕಾಂಚನಜುಂಗಾ ಪರ್ವತದ ಚಿತ್ರ ಪ್ರದರ್ಶನದಲ್ಲಿದೆ. ಇದರ ಜೊತೆಗೆ ನಸುಕಿನ ಬೆಳಕು, ಏರುಬಿಸಿಲು, ಮುಸ್ಸಂಜೆಯ ಹೊತ್ತು ಹಾಗೂ ಹುಣ್ಣಿಮೆಯ ಚಂದ್ರನಡಿ ಕಂಡ ಹಿಮಾಲಯದ ಪರ್ವತಗಳ ಚಿತ್ರಗಳು, ಹಿಮಪರ್ವತಗಳ ತಪ್ಪಲಲ್ಲಿ ಬೌದ್ಧವಿಹಾರ, ನೀಲಾಕಾಶದಲ್ಲಿ ತೇಲುವ ಬಿಳಿಮೋಡ, ಸೂರ್ಯನ ಪ್ರತಿಫಲನದಲ್ಲಿ ಹೊಳೆವ ಹಿಮಪರ್ವತ, ಗುಲಾಬಿ, ಹಳದಿ ಬಣ್ಣಕ್ಕೆ ತಿರುಗಿರುವ ದಿಗಂತದಡಿಯ ಹಿಮಾಲಯ ಪರ್ವತಗಳ ಚಿತ್ರಗಳು ಇಲ್ಲಿವೆ. ಪ್ರತಿ ಚಿತ್ರವೂ ಅಧ್ಯಾತ್ಮದ ಗಾಢ ಭಾವನೆಯನ್ನು ಒಳಗೊಂಡಿದೆ.
 

ಬೆಂಗಳೂರಿನಲ್ಲಿ ನೆಲೆಸಿದ್ದ ನಿಕೋಲಸ್ ಅವರ ಪುತ್ರ ಸ್ವೆಟೋಸ್ಲಾವ್‌ ರೋರಿಚ್‌ ಪರಿಷತ್‌ಗೆ ಕೊಡುಗೆಯಾಗಿ ನೀಡಿರುವ ವರ್ಣಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ತೇಗದ ಚೌಕಟ್ಟುಗಳ ಒಳಗಿರುವ ಚಿತ್ರಗಳಲ್ಲಿ ನಿಕೋಲಸ್‌ರ ಹಸ್ತಾಕ್ಷರವಿದೆ. ಸರಿಸುಮಾರು 1925 ರಿಂದ 1930ರ ಕಾಲಾವಧಿಯಲ್ಲಿ ಚಿತ್ರಿತಗೊಂಡ ಇವನ್ನು ಪರಿಷತ್‌ ಮುತುವರ್ಜಿಯಿಂದ ಕಾಪಾಡಿಕೊಂಡು ಬಂದಿದೆ. ಈ ವರ್ಣಚಿತ್ರಗಳ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳದಂತೆ ನೋಡಿಕೊಳ್ಳಲಾಗುತ್ತಿದೆ. ಇನ್‌ಟ್ಯಾಕ್‌ ಲ್ಯಾಬ್‌ ಸಹಕಾರದಲ್ಲಿ ತಪಾಸಣೆಗೆ ಒಳಪಡಿಸಿ ಜತನದಿಂದ ಕಾಯ್ದುಕೊಳ್ಳಲಾಗಿದೆ. ಕೋಟ್ಯಂತರ ಬೆಲೆ ಬಾಳುವ ಈ ಚಿತ್ರಗಳನ್ನು ಮಾರುವಂತಿಲ್ಲ ಎಂದು ಚಿತ್ರಕಲಾ ಪರಿಷತ್‌ನ ಡಾ. ವಿಜಯಶ್ರೀ ಸಿ.ಎಸ್‌. ತಿಳಿಸಿದರು.

ಪ್ರದರ್ಶನದಲ್ಲಿ ಅನ್ಯ ದೇಶಗಳ ವಸ್ತು ಸಂಗ್ರಹಾಲಯಗಳಿಂದ ಸಂಗ್ರಹಿಸಿರುವ ನಿಕೋಲಸ್ ಅವರ ಪೇಂಟಿಂಗ್ ಪೋಸ್ಟ್‌ ಕಾರ್ಡ್‌ಗಳು, ಕ್ಯಾಲೆಂಡ‌ರ್ ಕಾರ್ಡ್‌, ನಿಕೋಲಸ್‌ ಅವರು ಬಳಸಿದ ಬಣ್ಣವನ್ನು ಪ್ರದರ್ಶನಕ್ಕಿಡಲಾಗಿದೆ. ಅವರ ವಿಶ್ವಪ್ರಸಿದ್ಧ ಮೆಡೊನ್ನ ಒರಿಫ್ಲಮ್ಮಾ, ಮೆಡೊನ್ನ ಲೆಬೊರಿಸ್‌, ಮಾಕ್ಸ್‌ ಪ್ರೇಯಿಂಗ್ ದ ಬುದ್ಧ, ಐಲ್ಯಾಂಡ್‌ ಆಫ್‌ ರೆಸ್ಟ್, ಟಿಬೆಟ್‌ ಚಿತ್ರಗಳು ಇದರಲ್ಲಿವೆ. ಜೊತೆಗೆ ಅವರ ಪುತ್ರ ಸೈಟೋಸ್ಲಾವ್ ಅವರು ತಮ್ಮ ತಂದೆಯ ಕಲೆ ಕುರಿತು ಬರೆದಿರುವ ಡೈರಿ ಹಾಗೂ 1935ರಲ್ಲಿ ಆಂಗ್ಲ ಪತ್ರಿಕೆಯಲ್ಲಿ ರೋರಿಚ್‌ ಒಪ್ಪಂದದ ಕುರಿತು ಪ್ರಕಟಗೊಂಡ ಲೇಖನಗಳು ಇಲ್ಲಿವೆ.

ನಿಕೋಲಸ್‌ ರೋರಿಚ್‌- 7ಸಾವಿರ ವರ್ಣಚಿತ್ರ:
ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ 1874ರ ಅಕ್ಟೋಬ‌ರ್ 8ರಂದು ಜನಿಸಿದ್ದ ನಿಕೋಲೈ ಕೊನ್ಸ್ಟ್ಯಾಂಟಿನೋವಿಚ್‌ ರೋರಿಚ್‌ ಅವರು ನಿಕೋಲಸ್ ರೋರಿಚ್‌ ಎಂದು ಪ್ರಸಿದ್ಧರಾದವರು. 1920ರಲ್ಲಿ ಭಾರತಕ್ಕೆ ಬಂದು ಹಿಮಾಚಲ ಪ್ರದೇಶದ ಕುಲು ಕಣಿವೆಯ ನಗ್ಗರ್ ಗ್ರಾಮದಲ್ಲಿ ವಾಸವಾಗಿದ್ದರು. ಬರೋಬ್ಬರಿ 7ಸಾವಿರಕ್ಕೂ ಅಧಿಕ ವರ್ಣಚಿತ್ರ, 29 ಕಲಾಕೃತಿ ರಚಿಸಿದ್ದರು. ರಷ್ಯಾದ ಕಲಾ ಪ್ರಕಾರ, ಭಾರತದ ಆಧ್ಯಾತ್ಮಿಕತೆ ಸಂಯೋಜನೆಯ ಚಿತ್ರಗಳನ್ನು ಬರೆಯುವ ಮೂಲಕ 20ನೇ ಶತಮಾನದ ಶ್ರೇಷ್ಠ ಚಿತ್ರಕಲಾವಿದ ಎನ್ನಿಸಿಕೊಂಡಿದ್ದಾರೆ.

ನಿಕೋಲಸ್ ಅವರು ‘ಉರುಸ್ವತಿ ಹಿಮಾಲಯನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ ಸ್ಥಾಪಿಸಿ ಮೂಲಕ ಸಾಕಷ್ಟು ಕಲಾಸೇವೆ ಮಾಡಿದ್ದಾರೆ. ನಿಕೋಲಸ್‌ ಅವರು ಹಿಮಾಲಯದಲ್ಲಿ ಗಿಡಮೂಲಿಕೆ ಸಂಗ್ರಹಿಸಲು ಹೋಗುತ್ತಿದ್ದಾಗ ಮೂಲತಃ ಕರಡು ರೂಪದಲ್ಲಿ ಬರೆದ ಚಿತ್ರಗಳಿವು. ಅದರಲ್ಲೂ ಚಿತ್ರಬರೆವ ಪರಿಕರ ಕೊಂಡೊಯ್ಯಲು ಬಳಸಿದ್ದ ರಟ್ಟಿನ ಮೇಲೆ ಚಿತ್ರಗಳನ್ನು ಬರೆದಿದ್ದರು (ಕ್ಯಾನ್ವಾಸ್‌ ಅಲ್ಲ). ಜೊತೆಗೆ ಚಿತ್ರ ಬಳಸಿರುವ ನೀಲವರ್ಣ, ಟೆಂಪರಿಂಗ್‌ ಅನುಸರಿಸಿ ಬರೆದ ಚಿತ್ರಗಳು ಶ್ರೇಷ್ಠ ಎನ್ನಿಸಿಕೊಂಡಿವೆ.

ಬುದ್ಧ, ರಾಮಕೃಷ್ಣ ಪರಮಹಂಸ, ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತಗೊಂಡಿದ್ದ ಅವರ ಅಧ್ಯಾತ್ಮ ಸಾಧನೆಯೂ ಅಗಾಧವಾದುದು. 1947ರಲ್ಲಿ ಅವರು ನಿಧನರಾದಾಗ ಅವರ ಸಮಾಧಿಗೆ ‘ಬ್ರಹ್ಮಶ್ರೀ’ ಎಂದು ಸಂಬೋಧಿಸಲಾಗಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್ ತಿಳಿಸಿದರು.

ಮೆಂತ್ಯೆ ಸೊಪ್ಪಿಗೆ ಹೆಚ್ಚು ಬೆಳ್ಳುಳ್ಳಿಯೊಂದಿಗೆ ಈ ಸ್ಪೆಷಲ್ ಪೇಸ್ಟ್ ಸೇರಿಸಿ ತಯಾರಿಸಿ ಸೂಪರ್ ಟೇಸ್ಟಿ ಪಲ್ಯ

ಭಾರತದ ನವರತ್ನ ನಿಕೋಲಸ್‌
1970ರ ದಶಕದಲ್ಲಿ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಒಂಬತ್ತು ಕಲಾವಿದರನ್ನು ಭಾರತದ ನವರತ್ನ ಎಂದು ಗುರುತಿಸಿತು. ಆ ಪೈಕಿ ನಿಕೋಲಸ್‌ ಏಕೈಕ ವಿದೇಶಿಗ ಎನ್ನಿಸಿಕೊಂಡಿದ್ದಾರೆ. ಆ್ಯಂಟಿಕ್ವಿಟೀಸ್ ಮತ್ತು ಆರ್ಟ್ ಟ್ರೆಷರ್ ಆಕ್ಟ್ 1972 ರ ಅಡಿಯಲ್ಲಿ ಅವರ ಕಲಾಕೃತಿಗಳನ್ನು ರಾಷ್ಟ್ರೀಯ ‘ಕಲಾ ಸಂಪತ್ತು’ ಎಂದು ಘೋಷಿಸಲಾಗಿದೆ. ರಾಜಾ ರವಿವರ್ಮ, ರವೀಂದ್ರನಾಥ ಟ್ಯಾಗೋರ್, ಗಗನೇಂದ್ರನಾಥ ಟ್ಯಾಗೋರ್, ಅಬನೀಂದ್ರನಾಥ ಟ್ಯಾಗೋರ್, ನಂದಲಾಲ್ ಬೋಸ್, ಜಾಮಿನಿ ರಾಯ್, ಸೈಲೋಜ್ ಮುಖರ್ಕ್ಜೆಯಾ ಮತ್ತು ಅಮೃತಾ ಶೇರ್-ಗಿಲ್ ಇತರ ಎಂಟು ರತ್ನಗಳು.

ಭಾರತದಲ್ಲಿ ರೋರಿಚ್ ಅವರ ಪರಂಪರೆಯನ್ನು ಅವರ ಮಗ ಸ್ವೆಟೊಸ್ಲಾವ್ ರೋರಿಚ್ ಮತ್ತು ಸೊಸೆ ಭಾರತೀಯ ನಟಿ ದೇವಿಕಾ ರಾಣಿ ಮುಂದುವರೆಸಿದರು. ಬೆಂಗಳೂರಲ್ಲಿ ನೆಲೆಸಿದ್ದ ಇವರು 1960 ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ ಸ್ಥಾಪನೆಗೂ ತಮ್ಮದೇ ಆದ ಕೊಡುಗೆ ನೀಡಿದ್ದರು.

ರೋರಿಚ್ ಒಪ್ಪಂದ ಮತ್ತು ಶಾಂತಿಯ ಧ್ವಜ
ಪ್ರೊ. ನಿಕೋಲಸ್ ರೋರಿಚ್, ಕಲೆಯ ಮೂಲಕ ಜಗತ್ತಿನ ಶಾಂತಿ ಮತ್ತು ಏಕತೆಯ ಸಾಧನೆಗೂ ಶ್ರಮಿಸಿದವರು. ಮಹಾಯುದ್ಧದ ಸಂದರ್ಭದಲ್ಲಿ ಕಲೆಗಳು ನಾಶವಾಗುವ ಅಪಾಯ ಅರಿತ ಅವರು ಅಂತಾರಾಷ್ಟ್ರೀಯ ಮಟ್ಟದ ರೋರಿಚ್ ಒಪ್ಪಂದ ನಿಯೋಜಿಸಿದರು. ಕಲಾಕೃತಿಗಳ ಸಂರಕ್ಷಣೆ, ಪೋಷಣೆ ಮತ್ತು ಸಂರಕ್ಷಣೆ, ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಹಾಗೂ ಶಾಂತಿ ಕಾಪಾಡುವ ವಿಚಾರವನ್ನು ಇದು ಒಳಗೊಂಡಿತ್ತು.

ಜಾರ್ಜ್ ಬರ್ನಾರ್ಡ್ ಶಾ, ಆಲ್ಬರ್ಟ್ ಐನ್‌ಸ್ಟೈನ್, ಎಚ್.ಜಿ. ವೆಲ್ಸ್, ರವೀಂದ್ರನಾಥ ಟ್ಯಾಗೋರ್ ಹಲವು ಜಾಗತಿಕ ವ್ಯಕ್ತಿಗಳು ಇದಕ್ಕೆ ಬೆಂಬಲ ಸೂಚಿಸಿದ್ದರು. 1935ರಲ್ಲಿ ಅಮೇರಿಕಾ ಅಧ್ಯಕ್ಷ ರೂಸೆವೆಲ್ಟ್‌ ಸೇರಿ 21 ರಾಷ್ಟ್ರಗಳು ಸಹಿಹಾಕಿ ಇದನ್ನು ಅನುಮೋದಿಸಿದವು. ಈ ಒಪ್ಪಂದದ ಮೇರೆಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸ್ಮಾರಕಗಳನ್ನು ಯುದ್ಧದ ವಿನಾಶದಿಂದ ರಕ್ಷಿಸುವ ಗುರಿಯನ್ನು ಯೋಜಿಸಲಾಯಿತು. ಇದಕ್ಕಾಗಿ ‘ಬ್ಯಾನರ್ ಆಫ್ ಪೀಸ್’ ಎಂಬ ಧ್ವಜವನ್ನು ರೋರಿಚ್ ಸ್ವತಃ ವಿನ್ಯಾಸಗೊಳಿಸಿದರು.

ಭಾರತದ ಕೊನೆಯ ರೈಲು ನಿಲ್ದಾಣದ ವಿಶೇಷತೆ, ಇಲ್ಲಿಂದ ನೇಪಾಳಕ್ಕೆ ನಡದೇ ಹೋಗಬಹುದು!

ದ್ರಾವಿಡ್‌ ತಾಯಿ ಪಿಎಚ್‌ಡಿ
ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರ ತಾಯಿ ಪುಷ್ಪ ದ್ರಾವಿಡ್‌ ಅವರು ನಿಕೋಲಸ್‌ ರೋರಿಚ್‌ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ನಿಕೋಲಸ್‌ ಬಗೆಗೆ ಅಧ್ಯಯನ ಕೈಗೊಂಡು ಡಾಕ್ಟರೆಟ್‌ ಪಡೆದ ಮೊದಲಿಗರು ಅವರು. ಚಿತ್ರಕಲಾ ಪರಿಷತ್‌ನಲ್ಲಿ ಡಾಕ್ಟರೆಟ್‌ ಪದವಿ ಪಡೆದ ಮೊದಲಿಗರು ಎಂಬ ಹೆಗ್ಗಳಿಕೆಯೂ ಅವರದ್ದು ಎಂದು ಪರಿಷತ್ ತಿಳಿಸಿದೆ.

 

ನಿಕೋಲಸ್ ರೋರಿಚ್‌ ಕಲಾಜಗತ್ತಿನ ಶ್ರೇಷ್ಠರು. 2025ನ್ನು ಜಾಗತಿಕವಾಗಿ ‘ರೋರಿಚ್ ವರ್ಷ’ ಎಂದು ಘೋಷಿಸಿದ್ದು, ಚಿತ್ರಕಲಾ ಪರಿಷತ್‌ನಲ್ಲಿ ಮಾತ್ರ ರೋರಿಚ್‌ ಅವರು ರಚಿಸಿದ ಗರಿಷ್ಠ ಸಂಖ್ಯೆಯ ವರ್ಣಚಿತ್ರಗಳಿವೆ. ಪರಿಷತ್‌ನಿಂದ ಒಂದು ವರ್ಷದ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಾ.ಬಿ.ಎಲ್‌.ಶಂಕರ್‌, ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷರು

click me!