ದಲಿತರ ಬಗ್ಗ ಕಾಳಜಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಬಗ್ಗೆ ಗೌರವವನ್ನು ಭಾರತೀಯ ಜನತಾ ಪಕ್ಷ ಹೊಂದಿದ್ದರೆ ಮೊದಲು ರಾಷ್ಟ್ರಮಟ್ಟದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತರುವ ಧೈರ್ಯವನ್ನು ತೋರಿಸಲಿ.
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ. ವಿಶೇಷ ಲೇಖನ
ದಲಿತರ ಬಗ್ಗ ಕಾಳಜಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಬಗ್ಗೆ ಗೌರವವನ್ನು ಭಾರತೀಯ ಜನತಾ ಪಕ್ಷ ಹೊಂದಿದ್ದರೆ ಮೊದಲು ರಾಷ್ಟ್ರಮಟ್ಟದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತರುವ ಧೈರ್ಯವನ್ನು ತೋರಿಸಲಿ. ಆ ಕೆಲಸ ಮಾಡಿದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವವರಲ್ಲಿ ನಾನು ಮೊದಲಿಗನಾಗುತ್ತೇನೆ. ಇದನ್ನು ನಮ್ಮ ಸರ್ಕಾರದ ಸವಾಲೆಂದು ಬೇಕಾದರೆ ತಿಳಿದುಕೊಳ್ಳಿ. ಹಿಂದೂ ಧರ್ಮದ ಸುಧಾರಣೆಯಾಗದೆ ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ಸು ಕಾಣಲಾರದು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಬಲವಾಗಿ ನಂಬಿದ್ದರು. ಹಿಂದೂ ಧರ್ಮವನ್ನು ಅದಕ್ಕೆ ಅಂಟಿಕೊಂಡ ರೋಗಗಳಾದ ಜಾತೀಯತೆ, ಮೂಢನಂಬಿಕೆ, ಕಂದಾಚಾರಗಳಿಂದ ಬಿಡುಗಡೆಗೊಳಿಸಬೇಕೆಂದು ಅವರು ಪ್ರಾಮಾಣಿಕವಾಗಿ ಬಯಸಿದ್ದರು.
1927ರಲ್ಲಿ ನಡೆದ ಮಹಾಡ್ ಕೆರೆ ಸತ್ಯಾಗ್ರಹದಿಂದ ಹಿಡಿದು 1953ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಹಿಂದೂ ಕೋಡ್ ಬಿಲ್‌ವರೆಗಿನ ಬಾಬಾಸಾಹೇಬರ ಹೋರಾಟದ ಮೈಲಿಗಲ್ಲುಗಳು ಹಿಂದೂ ಧರ್ಮದ ಸುಧಾರಣೆಗೆ ಅವರು ನಡೆಸಿದ್ದ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿವೆ. ತನ್ನ ಎಲ್ಲ ಪ್ರಯತ್ನಗಳು ವಿಫಲವಾದ ನಂತರ ಭರವಸೆಯನ್ನೇ ಕಳೆದುಕೊಂಡ ಅವರು ‘ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ’ ಎನ್ನುವ ಐತಿಹಾಸಿಕ ಹೇಳಿಕೆ ನೀಡಿ ಕೊನೆಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಹಿಂದೂ ಧರ್ಮದ ಸುಧಾರಣೆಯಾಗಬೇಕಾದರೆ ಅದರ ಮೂಲ ಪಂಚಾಂಗ ಆಗಿದ್ದ ಮನುಸ್ಮೃತಿಯನ್ನು ನಾಶ ಮಾಡಬೇಕೆಂದು ಅವರಿಗೆ ತಿಳಿದಿತ್ತು. ಇದಕ್ಕಾಗಿಯೇ 1927ರ ಡಿಸೆಂಬರ್ 25ರಂದು ಅಲ್ಲಿಯವರೆಗಿನ ಅಲಿಖಿತ ಸಂವಿಧಾನವಾಗಿದ್ದ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕುವ ಮೂಲಕ ತನ್ನ ಸಾಮಾಜಿಕ ಪರಿವರ್ತನೆಯ ಚಳವಳಿಯನ್ನು ಪ್ರಾರಂಭಿಸಿದ್ದರು.
ಬಿಜೆಪಿಯವರು ಮನೆ ನೀಡಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುವೆ: ಸಚಿವ ಜಮೀರ್
ದಾರ್ಶನಿಕರ ನಡೆ ಮತ್ತು ನುಡಿಗಳು ಕೇವಲ ವಿರೋಧಿಸುವ ಇಲ್ಲವೇ ಮುರಿದುಹಾಕುವ ಉದ್ದೇಶವನ್ನು ಮಾತ್ರ ಹೊಂದಿರುವುದಿಲ್ಲ, ಅದು ಪರಿಹಾರ ಮತ್ತು ಪರ್ಯಾಯವನ್ನು ಕಟ್ಟುವ ಕಾರ್ಯಕ್ರಮಗಳನ್ನೂ ಒಳಗೊಂಡಿರುತ್ತದೆ. ಇದಕ್ಕೆ ಸಾಕ್ಷಿ ಮನುಸ್ಮೃತಿ ಎಂಬ ಅಲಿಖಿತ ಸಂವಿಧಾನವನ್ನು ಸುಟ್ಟುಹಾಕಿದ 22 ವರ್ಷಗಳ ನಂತರ ಅವರು ಸ್ವತಂತ್ರ ಭಾರತಕ್ಕೆ ನೀಡಿರುವ ಲಿಖಿತ ಸಂವಿಧಾನ. ಈ ಸಂವಿಧಾನದ ಬುನಾದಿ ಮೇಲೆ ಭವಿಷ್ಯದ ಭಾರತ ನಿರ್ಮಾಣವಾಗಬೇಕೆಂದು ಬಾಬಾ ಸಾಹೇಬರು ಬಯಸಿದ್ದೇ ಸಮಾಜದ ಒಂದು ವರ್ಗದ ಪಾಲಿಗೆ ಮಹಾ ಅಪರಾಧವಾಗಿ ಹೋಯಿತು. ಮನುಸ್ಮೃತಿ ಆಧಾರದ ಸಾಮಾಜಿಕ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಲೆಕ್ಕಾಚಾರದಲ್ಲಿದ್ದ ಪಟ್ಟಭದ್ರ ಹಿತಾಸಕ್ತಿಗಳು ಪ್ರಾರಂಭದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ಆರ್‌ಎಸ್‌ಎಸ್‌ನಿಂದ ವಿರೋಧ: ಸಂವಿಧಾನವನ್ನು ಆರ್‌ಎಸ್‌ಎಸ್ ಅಂದಿನಿಂದ ಇಂದಿನವರೆಗೆ ಹೃತ್ಪೂರ್ವಕವಾಗಿ ಒಪ್ಪಿಕೊಂಡಿಲ್ಲ. ‘ನಮ್ಮ ಸಂವಿಧಾನದಲ್ಲಿ ಪ್ರಾಚೀನ ಭಾರತದ ಸಾಂವಿಧಾನಿಕ ಬೆಳವಣಿಗೆಗಳ ಉಲ್ಲೇಖವೇ ಇಲ್ಲ. ಇಂದು ಜಗತ್ತಿನಲ್ಲಿ ಮನುಸ್ಮೃತಿಯ ಕಾನೂನುಗಳ ಬಗ್ಗೆ ಅಪಾರ ಗೌರವ ಮತ್ತು ನಿಷ್ಠೆ ಇದೆ. ನಮ್ಮ ದೇಶದ ಸಂವಿಧಾನದ ಪಂಡಿತರಿಗೆ ಇದು ಲೆಕ್ಕಕ್ಕೂ ಇಲ್ಲ’. ಹೀಗೆ ಬಾಬಾ ಸಾಹೇಬರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ನಾಲ್ಕು ದಿನಗಳ ನಂತರ 1949ರ ನವೆಂಬರ್ 30ರಂದು ತನ್ನ ಮುಖವಾಣಿ ಪತ್ರಿಕೆ ‘ಆರ್ಗನೈಸರ್’ನಲ್ಲಿ ಆರ್‌ಎಸ್‌ಎಸ್ ಸಂವಿಧಾನವನ್ನು ವಿರೋಧಿಸಿದ್ದು ಮಾತ್ರವಲ್ಲ ಬಾಬಾ ಸಾಹೇಬರನ್ನೂ ಅಣಕ ಮಾಡಿತ್ತು.
‘ಭಾರತೀಯತೆಯೇ ಇಲ್ಲದಿರುವುದು ಹೊಸ ಸಂವಿಧಾನದ ಅತೀ ಕೆಟ್ಟಭಾಗ. ಹಿಂದೂ ರಾಷ್ಟ್ರಕ್ಕೆ ವೇದಗಳ ನಂತರ ಬಹುಜನರು ಪೂಜಿಸುವ ಮನುಸ್ಮೃತಿ ನಮ್ಮ ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯಗಳಿಗೆ ಆಧಾರವಾಗಿರುವಂತಹದ್ದು. ನಮಗೆ ಮನುಸ್ಮೃತಿಯೇ ನಿಜವಾದ ಹಿಂದೂ ಕಾನೂನು’ ಎಂದು ಆರ್‌ಎಸ್‌ಎಸ್‌ನ ಇನ್ನೊಬ್ಬ ಚಿಂತಕ ವಿ.ಡಿ.ಸಾವರ್ಕರ್ ಹೇಳಿದ್ದರು. ‘ನಮ್ಮ ಸಂವಿಧಾನ ಜಗತ್ತಿನ ಹಲವಾರು ದೇಶಗಳ ಸಂವಿಧಾನದಿಂದ ಆರಿಸಿದ ಪುಟಗಳ ಸಂಕೀರ್ಣ ಸ್ವರೂಪದ ಕಂತೆ. ಅದರಲ್ಲಿ ನಮ್ಮದು ಎನ್ನುವಂತಹದ್ದು ಏನೂ ಇಲ್ಲ. ನಮ್ಮ ರಾಷ್ಟ್ರೀಯ ಗುರಿ ಏನಿರಬೇಕು? ನಮ್ಮ ಬದುಕಿನ ಗುರಿ ಏನಿರಬೇಕು ಎಂಬ ಬಗ್ಗೆ ಸಂವಿಧಾನದ ನಿರ್ದೇಶಿತ ತತ್ವಗಳಲ್ಲಿ ಒಂದೇ ಒಂದು ಶಬ್ದದ ಉಲ್ಲೇಖ ಇದೆಯೇ?’ ಎಂದು ಆರ್‌ಎಸ್‌ಎಸ್‌ನ ಸರಸಂಘಚಾಲಕ ಎಂ.ಎಸ್.ಗೋಲ್ವಾಲ್ಕರ್ ಪ್ರಶ್ನಿಸಿದ್ದರು.
‘ಅಂಬೇಡ್ಕರ್ ಮತ್ತು ಅಸ್ಪೃಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ. ನಾವು ಅಸ್ಪೃಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು’ ಎಂದು ಆರ್‌ಎಸ್‌ಎಸ್‌ನ ಇನ್ನೊಬ್ಬ ಐಡಲಾಗ್ ಬಿ.ಎಸ್.ಮೂಂಜೆ ಹೇಳಿದ್ದರು.ಹೆಣ್ಣು ಮಕ್ಕಳಿಗೆ ಹಕ್ಕು ಕೊಟ್ಟ ಅಂಬೇಡ್ಕರ್ ಇದರಿಂದ ಧೃತಿಗೆಡದ ಬಾಬಾ ಸಾಹೇಬರು ತಮ್ಮ ಸಾಮಾಜಿಕ ಪರಿವರ್ತನೆಯ ಬಂಡಿಯನ್ನು ಎಳೆಯುತ್ತಲೇ ಮುಂದೆ ಸಾಗಿದ್ದರು. ಹಿಂದೂ ಧರ್ಮದ ಸುಧಾರಣೆಗಾಗಿ ಅಂಬೇಡ್ಕರ್ ಅವರು ಮಾಡಿದ್ದ ಕೊನೆಯ ಪ್ರಯತ್ನ ಮಹಿಳೆಯರ ಮದುವೆ, ಉತ್ತರಾಧಿಕಾರ, ಆಸ್ತಿ, ದತ್ತು ಸ್ವೀಕಾರದ ಹಕ್ಕುಗಳು ಸೇರಿದಂತೆ ಇನ್ನಿತರ ಕೌಟುಂಬಿಕ ಹಕ್ಕುಗಳನ್ನು ನೀಡುವ ಹಿಂದು ಕೋಡ್ ಬಿಲ್ ರಚನೆ.
ಇದರಿಂದ ರೊಚ್ಚಿಗೆದ್ದ ಆರ್‌ಎಸ್‌ಎಸ್, ಜನಸಂಘವೂ ಸೇರಿದಂತೆ ಅಂಗಸಂಸ್ಥೆಗಳ ಜೊತೆ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಮಾತ್ರವಲ್ಲ ಅವರ ಪ್ರಯತ್ನಕ್ಕೆ ಸಾಥ್ ನೀಡಿದ್ದ ಆಗಿನ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ವಿರುದ್ಧ ಯುದ್ಧವನ್ನೇ ಸಾರಿದ್ದವು. ಬೀದಿ ಬೀದಿಗಳಲ್ಲಿ ಇವರಿಬ್ಬರ ಪ್ರತಿಕೃತಿಗಳನ್ನು ಸುಟ್ಟುಹಾಕಲಾಯಿತು. ‘ಮಹಿಳೆಯರಿಗೆ ಹಕ್ಕುಗಳನ್ನು ನೀಡುವುದರಿಂದ ಪುರುಷರ ಮಾನಸಿಕವಾದ ಕ್ಷೋಭೆಯನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಪುರುಷರು ಮಾನಸಿಕ ರೋಗವನ್ನು ಅನುಭವಿಸಬೇಕಾಗುತ್ತದೆ’ ಎಂದು ಎಂ.ಎಸ್.ಗೋಲ್ವಾಲ್ಕರ್ ಹೇಳಿದ್ದರು.
ಆ ದಿನದಿಂದ ಈ ದಿನದವರೆಗೆ ಆರ್‌ಎಸ್‌ಎಸ್ ತನ್ನ ಹಿಂದಿನ ನಿಲುವನ್ನು ಮತ್ತು ತಮ್ಮ ನಾಯಕರ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನಿರಾಕರಿಸಿಲ್ಲ, ಈ ಬಗ್ಗೆ ತಮ್ಮ ಬದಲಾದ ನಿಲುವಿನ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿಲ್ಲ, ಮಾತ್ರವಲ್ಲ ಅವಕಾಶ ಸಿಕ್ಕಿದಾಗೆಲ್ಲ ಮನುಸ್ಮೃತಿಯ ಜನವಿರೋಧಿ ಆಶಯಗಳನ್ನು ಸಮರ್ಥನೆ ಮಾಡುತ್ತಲೇ ಇದೆ. ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಅರ್ಥ ಏನು? ಈಗಲೂ ಅವರು ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಒಪ್ಪಿಕೊಂಡಿಲ್ಲ ಎಂದಲ್ಲವೇ?
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷ ಸೇರಿದಂತೆ ಅದರ ನೂರಾರು ಅಂಗ ಸಂಸ್ಥೆಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ಮತ್ತು ಸಾಧನೆಗಳನ್ನು ಇತಿಹಾಸದ ಪುಟಗಳಿಂದ ಅಳಿಸಿಹಾಕಲು ನಿರಂತರವಾಗಿ ಪ್ರಯತ್ನ ಮಾಡುತ್ತಾ ಬಂದಿವೆ.ವಿರೋಧಿಗಳನ್ನು ತುಳಿಯುವ ವಿಧಾನ ಪಟ್ಟಭದ್ರ ವ್ಯವಸ್ಥೆ ತನಗೆ ವಿರುದ್ಧವಾಗಿರುವ ವ್ಯಕ್ತಿಗಳನ್ನು ತುಳಿದುಹಾಕಲು ಸಾಮಾನ್ಯವಾಗಿ ನಾಲ್ಕು ಮಾರ್ಗಗಳನ್ನು ಅನುಸರಿಸುತ್ತದೆ. ಮೊದಲನೆಯದಾಗಿ ನಿರ್ಲಕ್ಷ್ಯ. ಅವರ ಬಗ್ಗೆ ಪರ-ವಿರೋಧದ ಯಾವ ಮಾತುಗಳನ್ನಾಡದೆ ನಿರ್ಲಕ್ಷಿಸಿ ಕೊಲ್ಲುವುದು. Killing by Silence. ಬುದ್ಧನ ಬಗ್ಗೆ ಸಾವಿರಾರು ವರ್ಷಗಳ ಬಗ್ಗೆ ಮಾತನಾಡದೆ ಹೀಗೆ ನಿರ್ಲಕ್ಷಿಸಿದರು. ಎರಡನೆಯದಾಗಿ ಅವರನ್ನು ದೈವತ್ವಕ್ಕೇರಿಸಿ ಆರಾಧಿಸಿ ದೇವರು ಮಾಡಿಬಿಡುವುದು. ಬಸವಣ್ಣ, ನಾರಾಯಣ ಗುರು ಇತ್ಯಾದಿ.
ಮೂರನೆಯದು ಚಾರಿತ್ರ್ಯಹನನ ಮಾಡುವುದು. ಸುಳ್ಳು ಇತಿಹಾಸಗಳನ್ನು ಸೃಷ್ಟಿಸಿ ತಪ್ಪು ಅಭಿಪ್ರಾಯ ಮೂಡಿಸುವುದು. ಅಂಬೇಡ್ಕರ್ ಪರಿನಿಬ್ಬಾಣ ದಿನವೇ ಬಾಬ್ರಿ ಮಸೀದಿ ಧ್ವಂಸದ ದಿನದ ಆಯ್ಕೆ. ಅಂಬೇಡ್ಕರ್ ಚಿತ್ರದ ಪಕ್ಕದಲ್ಲಿಯೇ ಸಾವರ್ಕರ್ ಫೋಟೋ ಹಾಕುವುದು. Worshipping False gods ಅಂತಹ ಪುಸ್ತಕಗಳನ್ನು ಬರೆಸುವುದು. ಇತ್ಯಾದಿ. ಇದ್ಯಾವುದಕ್ಕೂ ಜಗ್ಗದೆ ಇದ್ದರೆ ಉಪಾಯದಿಂದ ಕುಟಿಲತನದಿಂದ ಆ ವ್ಯಕ್ತಿಯನ್ನು ಎತ್ತಿ ತಮ್ಮ ಗುಂಪಿಗೆ ಸೇರಿಸಿಕೊಳ್ಳುವುದು. ಬುದ್ಧ, ಬಸವಣ್ಣ, ಭಗತ್ ಸಿಂಗ್, ವಿವೇಕಾನಂದ, ಹೀಗೆ ಒಬ್ಬೊಬ್ಬರನ್ನೇ ಆಪೋಶನ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಲೇ ಬಂದಿರುವ ಸಂಘ ಪರಿವಾರ ಇತ್ತೀಚೆಗೆ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಇದೇ ರೀತಿ ಹೈಜಾಕ್ ಮಾಡುತ್ತಿರುವುದು ಢಾಳಾಗಿ ಕಾಣಿಸುತ್ತಿದೆ.
ಅಂಬೇಡ್ಕರ್ ವಿರೋಧಿಗಳೀಗ ಅಭಿಮಾನಿಗಳು: ಅಂಬೇಡ್ಕರ್ ಅವರ ಆಶಯಗಳನ್ನೇ ವಿರೋಧಿಸಿಕೊಂಡು ಬಂದವರು ಇತ್ತೀಚೆಗೆ ಇದ್ದಕ್ಕಿದ್ದ ಹಾಗೆ ಅಂಬೇಡ್ಕರ್ ಅಭಿಮಾನಿಗಳಂತೆ ಮಾತನಾಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ. ಭಾರತೀಯ ಜನತಾ ಪಕ್ಷ ಮತ್ತು ಅವರ ನೇತೃತ್ವದ ಸರ್ಕಾರ ಇತ್ತೀಚಿನ ದಿನಗಳಲ್ಲಿ ದಲಿತರು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ವಿಶೇಷ ಮಮಕಾರದಿಂದ ಮಾತನಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ ಅಂತರಂಗದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಇರುವ ಅಭಿಪ್ರಾಯದಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ.
ಈಗಲೂ ಹಿಂದೂ ಧರ್ಮದೊಳಗಿರುವ ರೋಗಗ್ರಸ್ತ ಮನಸ್ಸುಗಳಿಗೆ ಸಂವಿಧಾನಕ್ಕಿಂತ ಮನುಸ್ಮೃತಿಯೇ ಹೆಚ್ಚು ಪ್ರಿಯವೆನಿಸಿದೆ. ಅದು ಸಾರಿರುವ ಜಾತಿ ವ್ಯವಸ್ಥೆಯ ಬುಡ ಭದ್ರಪಡಿಸುವ ಕೆಲಸವನ್ನು ಈ ವರ್ಗ ಗುಟ್ಟಾಗಿ ಮಾಡುತ್ತಿದೆ. ಇಂತಹವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ, ಅದು ಸಾರುವ ಆಶಯಗಳಲ್ಲಿ ನಂಬಿಕೆ ಇಲ್ಲ. ಸಾಮಾಜಿಕ ನ್ಯಾಯದ ಸಿದ್ಧಾಂತ, ಜಾತಿನಾಶ, ಅಸ್ಪೃಶ್ಯತೆಯ ನಿರ್ಮೂಲನೆ ಯಾವುದೂ ಅವರಿಗೆ ಬೇಕಾಗಿಲ್ಲ. ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿರುವ ಯಥಾಸ್ಥಿತಿವಾದಿಗಳು.ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಗೌರವ
ಅಂಬೇಡ್ಕರ್ ಅವರ ಜೊತೆ ಕೆಲವು ರಾಜಕೀಯ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಕೂಡಾ ಕಾಂಗ್ರೆಸ್ ಪಕ್ಷ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಈ ಗೌರವ ಮತ್ತು ನಂಬಿಕೆಯ ಕಾರಣದಿಂದಾಗಿಯೇ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿದ್ದರು. ಬಾಬಾ ಸಾಹೇಬರು ಹಿಂದೂ ಕೋಡ್ ಮಸೂದೆ ರಚನೆಗೆ ಮುಂದಾದಾಗ ಪ್ರಧಾನಿಯಾಗಿದ್ದ ಪಂಡಿತ ಜವಾಹರಲಾಲ್ ನೆಹರೂ ಅವರು ಸಂಪೂರ್ಣ ಬೆಂಬಲ ನೀಡಿದ್ದರು. ಆದರೆ ವಿರೋಧ ಪಕ್ಷದಲ್ಲಿದ್ದ ಜನಸಂಘ ಮತ್ತು ಆರ್‌ಎಸ್‌ಎಸ್ ನಾಯಕರು ಅದನ್ನು ಬಹಿರಂಗವಾಗಿ ವಿರೋಧಿಸಿದರೆ, ಕಾಂಗ್ರೆಸ್ ಪಕ್ಷದೊಳಗೆ ಇದ್ದ ಕೆಲವು ನಾಯಕರು ಒಳಗಿದ್ದುಕೊಂಡೇ ಅದು ಅಂಗೀಕಾರವಾಗದಂತೆ ನೋಡಿಕೊಂಡರು.
ಇದರಿಂದ ನೊಂದಿದ್ದ ಜವಾಹರಲಾಲ್ ನೆಹರೂ ಅವರು ಹಿಂದು ಕೋಡ್ ಬಿಲ್‌ನಲ್ಲಿರುವ ಎಲ್ಲ ಅಂಶಗಳನ್ನು ತಮ್ಮ ಹದಿನೇಳು ವರ್ಷಗಳ ಆಡಳಿತದ ಕಾಲದಲ್ಲಿ ಹಂತಹಂತವಾಗಿ ಅನುಷ್ಠಾನಕ್ಕೆ ತಂದಿದ್ದರು ಎನ್ನುವುದನ್ನು ಬಹಳಷ್ಟು ಇತಿಹಾಸಕಾರರು ನೆನಪು ಮಾಡಿಕೊಳ್ಳದೆ ಹೋದರು. ರಾಜ್ಯದಲ್ಲಿರುವ ನಮ್ಮ ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳಿಗೆ ಬದ್ಧವಾಗಿದೆ. ನಮ್ಮದು ನುಡಿದಂತೆ ನಡೆವ ಸರ್ಕಾರ. ಕೇವಲ ಸಾರ್ವಜನಿಕ ಸಭೆಗಳಲ್ಲಿ ಆಡುವ ಮಾತುಗಳಿಗಷ್ಟೇ ನಮ್ಮ ಕಾಳಜಿ ಸೀಮಿತವಾದುದಲ್ಲ. ನಾವು ಆಡಿದ್ದನ್ನು ಮಾಡಿ ತೋರಿಸಿದ್ದೇವೆ. ರಾಜ್ಯದ ಸಂಪತ್ತು ಮತ್ತು ಅಧಿಕಾರದ ಮೇಲೆ ಜಾತಿ-ಧರ್ಮ, ಬಡವ-ಬಲ್ಲಿದ, ಶಿಕ್ಷಿತ-ಅಶಿಕ್ಷಿತ ಎಂಬ ಭೇದ ಇಲ್ಲದೆ ಎಲ್ಲರಿಗೂ ಸಮಾನ ಹಕ್ಕು ಇದೆ. ಸಂಪತ್ತು ಮತ್ತು ಅಧಿಕಾರವನ್ನು ಜಾತಿ-ವರ್ಗ ಭೇದ ಇಲ್ಲದೆ ಎಲ್ಲರಿಗೂ ಸಮಾನ ರೀತಿಯಲ್ಲಿ ಹಂಚಿಕೆ ಆಗಬೇಕು ಎಂಬ ಬಾಬಾ ಸಾಹೇಬರ ಕನಸನ್ನು ನಾವು ನನಸು ಮಾಡುತ್ತಿದ್ದೇವೆ.
ಇದಕ್ಕೆ ಒಂದು ಉದಾಹರಣೆಯನ್ನಷ್ಟೇ ನೀಡುತ್ತಿದ್ದೇನೆ. ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿರುವ ಯೋಜನಾ ವೆಚ್ಚದ ಹಣವನ್ನು ನಿಗದಿಪಡಿಸಿರುವ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ. ಇದು ಒಂದು ಪಕ್ಷ ಇಲ್ಲವೇ ಸರ್ಕಾರದ ಒಂದು ಅವಧಿಯ ಜನಪ್ರಿಯ ಕಾರ್ಯಕ್ರಮ ಅಲ್ಲ. ಇದು ಶಾಶ್ವತವಾದುದು. ಸಂವಿಧಾನದತ್ತವಾದ ಮೀಸಲಾತಿ ನೀತಿ ಹೇಗಿದೆಯೋ ಹಾಗೆ ರಾಜ್ಯದಲ್ಲಿರುವ ಈ ಕಾಯಿದೆ. ನಮ್ಮ ಪಕ್ಷ ಅಧಿಕಾರದಲ್ಲಿರಲಿ, ಇಲ್ಲದೆ ಇರಲಿ ಯಾರೂ ಕೂಡಾ ಈ ಯೋಜನೆಯನ್ನು ಬದಲಾಯಿಸಲು ಯಾರಿಂದಲೂ ಸಾಧ್ಯ ಇಲ್ಲ.ಕೇಂದ್ರಕ್ಕೆ ಸವಾಲು
35ಕ್ಕೆ ಕಣ್ಮಂಜು, 40 ವರ್ಷ ವಯಸ್ಸಿಗೇ ಕ್ಷಯರೋಗ: ಗ್ರಾಮಸ್ಥರಿಂದ ವಾಸ್ತವತೆಯ ಅನಾವರಣ
ದಲಿತರ ಬಗ್ಗ ಕಾಳಜಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಬಗ್ಗೆ ಗೌರವವನ್ನು ಭಾರತೀಯ ಜನತಾ ಪಕ್ಷ ಹೊಂದಿದ್ದರೆ ಮೊದಲು ರಾಷ್ಟ್ರಮಟ್ಟದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತರುವ ಧೈರ್ಯವನ್ನು ತೋರಿಸಲಿ. ಆ ಕೆಲಸ ಮಾಡಿದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವವರಲ್ಲಿ ನಾನು ಮೊದಲಿಗನಾಗುತ್ತೇನೆ. ಇದನ್ನು ನಮ್ಮ ಸರ್ಕಾರದ ಸವಾಲೆಂದು ಬೇಕಾದರೆ ತಿಳಿದುಕೊಳ್ಳಿ. ಬಾಬಾ ಸಾಹೇಬರು ನಮ್ಮಂತಹವರ ಪಾಲಿಗೆ ಒಬ್ಬ ವ್ಯಕ್ತಿ ಅಲ್ಲ, ಅವರು ಒಂದು ಸಿದ್ಧಾಂತ. ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದವರು ವ್ಯಕ್ತಿಯಾಗಿ ಅವರನ್ನು ಆರಾಧನೆ ಮಾಡಿದರೂ ಅವರು ಅಂಬೇಡ್ಕರ್ ವಿರೋಧಿಗಳೇ ಆಗಿರುತ್ತಾರೆ.