ಬಾಬಾಸಾಹೇಬರ ನಿಪ್ಪಾಣಿ ಭೇಟಿಗೆ 100 ಸಂಭ್ರಮ: ಆರ್‌.ಅಶೋಕ್‌ ಲೇಖನ

ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದಲಿತರ ಬಂಧು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದಲಿತರ ಸಬಲೀಕರಣಕ್ಕೆ ನಾಂದಿ ಹಾಡಲು ಬೆಳಗಾವಿಯ ನಿಪ್ಪಾಣಿಗೆ ಭೇಟಿ ನೀಡಿ 100 ವರ್ಷ ತುಂಬಿದೆ. ಇದರ ಅಂಗವಾಗಿ ಬಿಜೆಪಿ ‘ಭೀಮ ಹೆಜ್ಜೆ-100ರ ಸಂಭ್ರಮ’ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ರಥಯಾತ್ರೆಯು ಶುಕ್ರವಾರ ಬೆಂಗಳೂರಿನಿಂದ ಹೊರಟಿದ್ದು 14ಕ್ಕೆ ಬೆಳಗಾವಿ ತಲುಪಲಿದೆ. 15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. 

Dr BR Ambedkar celebrates 100 years of Nippani visit R Ashok Article gvd

- ಆರ್‌.ಅಶೋಕ್‌, ವಿಧಾನಸಭೆ ಪ್ರತಿಪಕ್ಷದ ನಾಯಕ

ದೇಶದ ಸಂವಿಧಾನ ರಚನೆಯ ಹರಿಕಾರ, ದಲಿತರ ವಿಮೋಚಕ, ಕಾರ್ಮಿಕರ ಹಕ್ಕುಗಳು, ಮಹಿಳೆಯರ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನ ಅವಕಾಶ ಮತ್ತು ಮೌಢ್ಯಗಳ ನಿವಾರಣೆಯ ಪ್ರತಿಪಾದಕ, ಹಿಂದೂ ಧರ್ಮದ ವಸ್ತುನಿಷ್ಠ ವಿಮರ್ಶಕ, ಸಮರ್ಪಕ ವಿದೇಶಾಂಗ ನೀತಿಯ ಸಮರ್ಥಕ... ಎಲ್ಲವೂ ಆಗಿದ್ದ ಅಪರೂಪದ ಧೀಮಂತ ನಾಯಕರೆಂದರೆ, ಡಾ.ಬಾಬಾಸಾಹೇಬ್ ಅಂಬೇಡ್ಕರ್. 64ಕ್ಕೂ ಹೆಚ್ಚು ಪದವಿಗಳನ್ನು ಪಡೆದಿದ್ದ ಅವರು ಮಹತ್ವದ ಲೇಖಕ, ವಿಚಾರಶೀಲ ಪತ್ರಕರ್ತ ಮತ್ತು ಸಾಮಾಜಿಕ ಆಂದೋಲನಗಳ ಗಟ್ಟಿ ಧ್ವನಿಯೂ ಆಗಿದ್ದರು.

Latest Videos

ಅಂಬೇಡ್ಕರ್‌ಗೆ ಕಾಂಗ್ರೆಸ್‌ನಿಂದ ಅಗೌರವ: ದುರಂತವೆಂದರೆ, ಆಧುನಿಕ ಭಾರತದ ಅಧ್ವರ್ಯುಗಳಲ್ಲಿ ಒಬ್ಬರಾಗಿದ್ದ ಬಾಬಾಸಾಹೇಬರಿಗೆ, ಅವರು ಬದುಕಿದ್ದಾಗ ಸೂಕ್ತ ಗೌರವ ಸಿಗಲೇ ಇಲ್ಲ. ಬದಲಿಗೆ ಅವರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಪಿತೂರಿ ಅಂದಿನ ಸರ್ಕಾರದಿಂದಲೇ ಆಗುತ್ತಿತ್ತು. 1951ರಲ್ಲಿ ಅವರು ಕಾನೂನು ಸಚಿವ ಪದವಿಗೆ ರಾಜೀನಾಮೆ ನೀಡುವಂತೆ ಮಾಡಿದ್ದು, 1952ರ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದು, 1964ರಲ್ಲಿ ಅವರು ದೆಹಲಿಯಲ್ಲಿ ನಿಧನರಾದಾಗ ಗೌರವಯುತವಾಗಿ ಅವರ ಅಂತಿಮ ಸಂಸ್ಕಾರ ನಡೆಸದೆ ಇದ್ದಿದ್ದು, 1990ರಲ್ಲಿ ಬಿಜೆಪಿ ಬೆಂಬಲಿತ ಕೇಂದ್ರ ಸರ್ಕಾರ ಬರುವವರೆಗೂ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡದೇ ಇದ್ದಿದ್ದು ಇದೇ ಪಟ್ಟಭದ್ರ ಹಿತಾಸಕ್ತಿಗಳು! ಆದರೆ, ಅಂಬೇಡ್ಕರ್‌ ಇಲ್ಲದ ಆಧುನಿಕ ಭಾರತವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ತಮ್ಮ ರಾಜಕೀಯ ಲಾಭ, ದಮನಿತ ಸಮುದಾಯಗಳ ಮತ, ಮಾತಿನ ಗಿಲೀಟುಗಳು ಬೇಕೆಂದಾಗ ಮಾತ್ರ ಇಂತಹ ಅಪ್ರತಿಮ ನಾಯಕನನ್ನು ನೆನಪು ಮಾಡಿಕೊಳ್ಳುವ ಪಕ್ಷಗಳು ಇನ್ನಾದರೂ ಆತ್ಮವಂಚನೆಯನ್ನು ಬಿಟ್ಟು, ಅಂಬೇಡ್ಕರ್‌ ಅವರನ್ನು ಒಪ್ಪಿಕೊಳ್ಳಬೇಕು.

ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ಗೆ ಗಿಗ್‌ ತೆರಿಗೆ: ಸಚಿವ ಸಂಪುಟ ಒಪ್ಪಿಗೆ

ನಿಪ್ಪಾಣಿ ಭೇಟಿ ಆಚರಣೆ ಮರೆತ ಕಾಂಗ್ರೆಸ್‌: ಇಂಥ ಅನನ್ಯ ದ್ರಷ್ಟಾರರಾಗಿದ್ದ ಬಾಬಾಸಾಹೇಬರು ಬೆಳಗಾವಿಯ ನಿಪ್ಪಾಣಿಗೆ ಭೇಟಿ ನೀಡಿ, ಏಪ್ರಿಲ್‌ 11ಕ್ಕೆ 100 ವರ್ಷ ತುಂಬಿದೆ. ಅದು ಅಂತಿಂಥ ಭೇಟಿಯಲ್ಲ, ಬದಲಿಗೆ ಅಂದಿನ ಮುಂಬೈ-ಕರ್ನಾಟಕ ಭಾಗದಲ್ಲಿ ದಲಿತರ ಸಬಲೀಕರಣಕ್ಕೆ ನಾಂದಿ ಹಾಡಿ, ಅದನ್ನು ಗಮನಾರ್ಹವಾಗಿ ಸಾಧಿಸಲು ನಾಂದಿ ಹಾಡಿದಂತಹ ಭೇಟಿ. ಆದರೆ, ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಆಚರಿಸಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಾಬಾಸಾಹೇಬರ ನಿಪ್ಪಾಣಿ ಭೇಟಿಯ ಶತಮಾನೋತ್ಸವವನ್ನೂ ಆಚರಿಸಬೇಕೆಂಬ ವಿವೇಕ ಬರಲಿಲ್ಲ. ಈ ಬಗ್ಗೆ ಬೆಳಗಾವಿಯಲ್ಲಿ ಕೆಲ ತಿಂಗಳ ಹಿಂದೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ನಿಪ್ಪಾಣಿಯ ಶಾಸಕಿಯೂ, ಮಾಜಿ ಸಚಿವೆಯೂ ಆದ ಬಿಜೆಪಿಯ ಶಶಿಕಲಾ ಜೊಲ್ಲೆ ಅವರು ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದರೂ ಸರ್ಕಾರ ಬಾಬಾ ಸಾಹೇಬರಿಗೆ ಸಂಬಂಧಿಸಿದ ಈ ಸಂಗತಿಯನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಏಕೆಂದರೆ, ದಲಿತರು ಇದ್ದಲ್ಲೇ ಇರಬೇಕು ಮತ್ತು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಆಗಿದ್ದರೆ ಸಾಕು ಎನ್ನುವ ಧೋರಣೆ ಇದರ ಹಿಂದಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ದಲಿತರಿಗಾಗಿ ಬಹಿಷ್ಕೃತ ಹಿತಕಾರಣಿ ಸಭಾ ಸಮಾವೇಶ: ಅಂಬೇಡ್ಕರ್‌ ಜೀವನಕ್ಕೂ ಉತ್ತರ ಕರ್ನಾಟಕದ ನಿಪ್ಪಾಣಿ, ವಿಜಯಪುರ, ಬೆಳಗಾವಿ, ಹುಕ್ಕೇರಿಗೆ ಸಮೀಪದ ಗವನಾಳ ಗ್ರಾಮಕ್ಕೂ ನಿಕಟ ಸಂಬಂಧವಿದೆ. 1925ರಲ್ಲಿ ಅವರು ಮೊದಲು ಬಂದಿದ್ದು ಚಿಕ್ಕೋಡಿಗೆ. ಅದೂ ಒಂದು ಕೋರ್ಟ್ ಕೆಲಸದ ಮೇಲೆ. ಆಗ ಅವರು ನಿಪ್ಪಾಣಿಯಲ್ಲಿ ಎರಡು ದಿನ ಅಲ್ಲಿನ ದಲಿತಬಂಧು ಶ್ರೀ ವರಾಳೆ ಅವರ ಮನೆಯಲ್ಲಿ ಉಳಿದುಕೊಂಡಿದ್ದರು (ಹಿಂದೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದು, ಹಾಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಗಿರುವ ಪ್ರಸನ್ನ ವರಾಳೆ ಅವರು ಇದೇ ಕುಟುಂಬದವರು). ಈ ವೇಳೆ ಬಾಬಾಸಾಹೇಬರು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದ ‘ಬಹಿಷ್ಕೃತ ಹಿತಕಾರಣಿ ಸಭಾ’ದ ಸಮಾವೇಶವನ್ನು ಏರ್ಪಡಿಸಿದರು. ದಲಿತರ ಸಬಲೀಕರಣಕ್ಕಾಗಿ ಸಾಮಾಜಿಕ ಸುಧಾರಣಾ ಆಂದೋಲನಗಳಿಗೆ ಉತ್ತೇಜನ ನೀಡುವುದು ಇದರ ಹಿಂದಿದ್ದ ಉದ್ದೇಶವಾಗಿತ್ತು.

ಇದರ ಭಾಗವಾಗಿ ದಲಿತರಿಗೆ ಸಿಗಬೇಕಾದ ಗುಣಮಟ್ಟದ ಶಿಕ್ಷಣ, ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯ ಅಗತ್ಯ, ದಮನಿತ ವರ್ಗಗಳ ಪ್ರಯೋಜನಕ್ಕೆ ವಿಶೇಷ ಗ್ರಂಥಾಲಯ, ಸಮುದಾಯ ಕೇಂದ್ರ, ಅಧ್ಯಯನ ಕೇಂದ್ರ, ಕೃಷಿ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಬೇಕಾದ ಜರೂರು, ದಲಿತರಿಗೆ ಸಂಬಂಧಿಸಿದ ವಿಚಾರ ಮತ್ತು ಸಮಸ್ಯೆಗಳ ನಿವಾರಣೆಗೆ ತ್ವರಿತ ಸ್ಪಂದನೆ ವಿಚಾರಗಳನ್ನು ಇಲ್ಲಿ ಚರ್ಚಿಸಲಾಯಿತು. ಸ್ವತಃ ಬಾಬಾಸಾಹೇಬರೇ ಈ ಸಮಾವೇಶದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಈ ಸಮಾವೇಶದ ಸಮಯದಲ್ಲೇ ನಿಪ್ಪಾಣಿಯಲ್ಲಿ ದಲಿತರಿಗೆಂದೇ ಹುಟ್ಟಿಕೊಂಡ ಗ್ರಂಥಾಲಯವನ್ನು ಉದ್ಘಾಟಿಸಿದ ಅವರು, ಅಸ್ಪೃಶ್ಯರ ಮಕ್ಕಳಿಗೆ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳನ್ನೂ ವಿತರಿಸಿದರು. ಇಲ್ಲಿಂದ ಮುಂದಕ್ಕೆ ಸೃಷ್ಟಿಯಾಗಿದ್ದು ಚರಿತ್ರೆ!

ಮಾನಸಿಕ ದಾಸ್ಯದ ವಿರುದ್ಧ ಕರೆ: ಇದಾದ ಮೇಲೆ, ಬಾಬಾಸಾಹೇಬರು 1925ರ ನ.11, 12ರಂದು ಬೆಳಗಾವಿಯಲ್ಲಿ ‘ಬಹಿಷ್ಕೃತ ಹಿತಕಾರಣಿ ಸಭಾ’ದ 3ನೇ ಸಮಾವೇಶವನ್ನು ಹಮ್ಮಿಕೊಂಡಿದ್ದುಂಟು. ಇಲ್ಲಿ ಅವರು ಧಾರ್ಮಿಕ ಮೌಢ್ಯಗಳು ಮತ್ತು ದೇವದಾಸಿ ಪದ್ಧತಿ, ಬಡತನ, ಅನಕ್ಷರತೆಯಂತಹ ಅನಿಷ್ಟಗಳ ವಿರುದ್ಧ ದೃಢವಾಗಿ ದನಿ ಎತ್ತಿದರು. ಒಟ್ಟಿನಲ್ಲಿ, ದಲಿತರು ತಮ್ಮ ಮಾನಸಿಕ ದಾಸ್ಯದಿಂದ ಹೊರಬರಬೇಕೆಂದು ಅವರು ಕರೆ ನೀಡಿದರು. ಆಮೇಲೆ, ಇದಾದ ಎರಡು ವರ್ಷಗಳ ನಂತರ, ಅಂದರೆ 1927ರ ಮೇ 15ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಬ್ಲಾಕ್‌ನ ಭಾಗವಾಗಿದ್ದ ಗಾವನಾಳ ಗ್ರಾಮದಲ್ಲಿ ಬಹಿಷ್ಕೃತ ಹಿತಕಾರಣಿ ಸಭಾದ 5ನೇ ಅಧಿವೇಶನ ನಡೆಸಿದರು. 

ಸಾವಿರಾರು ಜನರು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಬಾಬಾಸಾಹೇಬರು ದೇವಸ್ಥಾನ, ಉದ್ಯಾನವನ, ಕೆರೆಕಟ್ಟೆಗಳು, ಬಾವಿಗಳು, ಹೋಟೆಲ್‌ಗಳು, ಖಾನಾವಳಿಗಳು ಮತ್ತು ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ನೀಡಬೇಕು. ಇದಕ್ಕಾಗಿ ಸರ್ಕಾರವು ಸೂಕ್ತ ಶಾಸನವನ್ನು ರೂಪಿಸಬೇಕು ಎಂಬ ಮಹತ್ವದ ನಿರ್ಣಯ ಅಂಗೀಕಾರ ಆಗುವಂತೆ ನೋಡಿಕೊಂಡರು. 1929ರ ಮಾ. 23ರಂದು ಬಾಬಾಸಾಹೇಬರು ಬೆಳಗಾವಿಗೆ ಬಂದಿದ್ದರು. ಅಲ್ಲಿ ನಡೆದ ಪ್ರಪ್ರಥಮ ಸಾಮಾಜಿಕ ಪರಿಷತ್ತಿನ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಇದರ ಉದ್ದೇಶವಾಗಿತ್ತು. ಇಲ್ಲಿ ಅವರು ದಲಿತರ ಸಬಲೀಕರಣಕ್ಕೆ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳು ಅತ್ಯವಶ್ಯ ಎಂದು ಪ್ರತಿಪಾದಿಸಿದರು. ಇಂತಹ ಅಂಬೇಡ್ಕರ್‌ ಅವರು ಕೊನೆಯ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದು 1937ರಲ್ಲಿ. ಮೇ 31ರಂದು ಅವರು ವಿಜಯಪುರದಲ್ಲಿ (ಆಗಿನ ಬಿಜಾಪುರ) ನಡೆದ ಜಿಲ್ಲಾ ಹರಿಜನ ಪರಿಷತ್ತಿನ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಬಿಜಾಪುರ ಮಾತ್ರವಲ್ಲದೆ ಬೆಳಗಾವಿ, ಸೊಲ್ಲಾಪುರ ಭಾಗಗಳಿಂದ ಸಾವಿರಾರು ಜನರು ಆಗಮಿಸಿದ್ದರು.

ಬಿಜೆಪಿಯಿಂದ ಅಂಬೇಡ್ಕರ್‌ಗೆ ನಿಜವಾದ ಗೌರವ: ಈಗ ಕಾಂಗ್ರೆಸ್ ಆಗಿಂದಾಗ್ಗೆ ಬಾಬಾಸಾಹೇಬರ ಬಗ್ಗೆ ಅಭಿಮಾನವನ್ನು ಹರಿಸುತ್ತಿದೆ. ಆದರೆ, ಬಾಬಾಸಾಹೇಬರಿಗೆ ನಿಜವಾದ ಗೌರವವನ್ನು ಸಲ್ಲಿಸುತ್ತಿರುವುದು ಬಿಜೆಪಿ ಮಾತ್ರವೇ ಆಗಿದೆ. ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ 2003ರಲ್ಲಿ ದೆಹಲಿಯಲ್ಲಿ ಅಂಬೇಡ್ಕರ್ ನ್ಯಾಷನಲ್ ಮ್ಯೂಸಿಯಂಗೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ, ನಂತರ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದನ್ನು ಬೇಕೆಂದೇ ಮರೆಯಿತು. ಇದನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಇದರ ಜತೆಗೆ ಮೋದಿ ಸರ್ಕಾರ 2017ರಲ್ಲಿ ದೆಹಲಿಯಲ್ಲಿ ‘ಅಂಬೇಡ್ಕರ್ ಇಂಟರ್‌ನ್ಯಾಷನಲ್‌ ಸೆಂಟರ್’ಅನ್ನು ದೇಶಕ್ಕೆ ಸಮರ್ಪಿಸಿತು. ಇದೇ ಬಿಜೆಪಿ ಸರ್ಕಾರ 2015ರಲ್ಲಿ ಪ್ರತಿ ವರ್ಷ ನ.26ರಂದು ಅಂಬೇಡ್ಕರ್ ಗೌರವಾರ್ಥ ‘ಸಂವಿಧಾನ ದಿನ’ವೆಂದು ಆಚರಿಸುವ ಸಂಪ್ರದಾಯವನ್ನು ಆರಂಭಿಸಿತು. ಇದಲ್ಲದೆ, ಅಂಬೇಡ್ಕರ್ ಅವರ ಚಿಂತನೆಗಳಿಗೆ ತಕ್ಕಂತೆ ಅಂತ್ಯೋದಯ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಸೌಭಾಗ್ಯ ಯೋಜನೆ ಮತ್ತು ಸ್ವಚ್ಛ ಭಾರತ ಯೋಜನೆಗಳನ್ನು ರೂಪಿಸಿದೆ.

ಅಂಬೇಡ್ಕರ್‌ ಜೀವಿಸಿದ 5 ಸ್ಥಳ ಪ್ರವಾಸಿ ತಾಣ: ಇದರಿಂದ ದೇಶದ ಕೋಟ್ಯಂತರ ದಲಿತಬಂಧುಗಳ ಶ್ರೇಯೋಭಿವೃದ್ಧಿ ಸಾಧ್ಯವಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿ, ಬಾಬಾಸಾಹೇಬರ ಬದುಕಿನಲ್ಲಿ ನಿರ್ಣಾಯಕವಾಗಿರುವ 5 ಸ್ಥಳಗಳನ್ನು ಮೋದಿ ಅವರ ಸರ್ಕಾರವು ಜಾಗತಿಕ ಮಟ್ಟದ ಪ್ರವಾಸಿ ತಾಣಗಳನ್ನಾಡಿ ಮಾಡಿದೆ. ಅವೆಂದರೆ- ಮಧ್ಯಪ್ರದೇಶದಲ್ಲಿರುವ ಅವರ ಜನ್ಮಸ್ಥಳ ಮೋವ್, ಲಂಡನ್‌ನಲ್ಲಿ ಅವರು ಉನ್ನತಾಧ್ಯಯನ ಮಾಡುತ್ತಿದ್ದಾಗ ಉಳಿದುಕೊಂಡಿದ್ದ ಸ್ಥಳ, ನಾಗ್ಪುರದಲ್ಲಿ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದ ಸ್ಥಳ (ದೀಕ್ಷಾಭೂಮಿ), ದೆಹಲಿಯಲ್ಲಿ ಅವರು ಮಹಾಪರಿನಿರ್ವಾಣ ಹೊಂದಿದ ಸ್ಥಳ ಮತ್ತು ಮುಂಬೈನಲ್ಲಿ ಅವರು ಪಂಚಭೂತಗಳಲ್ಲಿ ಲೀನರಾದ ಚೈತ್ಯಭೂಮಿ.

ವೋಟ್‌ಗಾಗಿ ಕಾಂಗ್ರೆಸ್‌ ಅಂಬೇಡ್ಕರ್‌ ಜಪ: ಕಾಂಗ್ರೆಸ್ ಈಗ ತನ್ನ ರಾಜಕೀಯ ಉಳಿವಿಗಾಗಿ ಬಾಬಾಸಾಹೇಬರ ಜಪ ಮಾಡುತ್ತಿದೆ. ಆದರೆ ಅವರು ಪ್ರತಿಪಾದಿಸಿದ ಹಿಂದೂ ಕೋಡ್ ಬಿಲ್ ಸುಧಾರಣೆ, ದಲಿತರ ಸಬಲೀಕರಣಕ್ಕಾಗಿ ಭೂಮಿಯ ಮರುಹಂಚಿಕೆ ಮುಂತಾದವುಗಳನ್ನು ವಿರೋಧಿಸಿದ್ದು ಇದೇ ಕಾಂಗ್ರೆಸ್! ಅಷ್ಟೇ ಅಲ್ಲ, ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ ನಾರಾಯಣ ಕಾಜ್ರೋಳ್ಕರ್ ಅವರಿಗೆ 1970ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಟ್ಟಿದ್ದು, 1990ರವರೆಗೂ ಸಂಸತ್ತಿನಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರ ಹಾಕದಂತೆ ತಡೆ ಹಿಡಿದಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ! ಇದೊಂದು, ಇತಿಹಾಸದ ಕ್ರೂರ ಅಧ್ಯಾಯ.

ಇನ್ನೂ ಬೇಸ್‌ ವಿವಿಗಿಲ್ಲ ಪೂರ್ಣಾವಧಿ ಕುಲಪತಿ: ಶೋಧನಾ ಸಮಿತಿಯಿಂದ 3 ಹೆಸರು ಶಿಫಾರಸು

ಇದೇನೇ ಇರಲಿ, ಅಂಬೇಡ್ಕರ್‌ ನಮ್ಮ ನಾಡಿನ ನಿಪ್ಪಾಣಿಗೆ ನೀಡಿದ ಭೇಟಿಗೆ ಈಗ ಶತಮಾನೋತ್ಸವದ ಸಂಭ್ರಮ. ಸರ್ಕಾರ ಇದನ್ನು ಮಾಡುತ್ತಿಲ್ಲ. ಆದರೆ, ಅವರ ವಿಚಾರಗಳ ಮೇಲೆ ನೈಜ ಅಭಿಮಾನವಿರುವ ಮತ್ತು ಅವರ ತತ್ವಗಳ ಹಾದಿಯಲ್ಲೇ ಸಾಗುತ್ತಿರುವ ಬಿಜೆಪಿ ಈ ನಿಮಿತ್ತವಾಗಿ ‘ಭೀಮ ಹೆಜ್ಜೆ-100ರ ಸಂಭ್ರಮ’ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಏ.11 ಬೆಂಗಳೂರಿನಿಂದ ಹೊರಟಿರುವ ಈ ಯಾತ್ರೆಯು ಅಂಬೇಡ್ಕರ್ ಜಯಂತಿಯ ದಿನವಾದ ಏ.14ರಂದು ಬೆಳಗಾವಿ ತಲುಪಲಿದೆ. ಏ.15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಅದು, ನಾಡಿನ ದಲಿತ ಬಂಧುಗಳಿಗೆ ಸಮಾನತೆ ಮತ್ತು ಸಹೋದರತ್ವಗಳ ಜತೆಗೆ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಗಳ ಹೊಚ್ಚಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಇದು ಬಾಬಾಸಾಹೇಬರಿಗೆ ಸಲ್ಲಿಸುತ್ತಿರುವ ಅಂತಃಕರಣಪೂರ್ವಕ ಗೌರವವಾಗಿದ್ದು, ನಾಡಿನ ಸಾಮಾಜಿಕ ಚರಿತ್ರೆಯಲ್ಲಿ ಪರಿವರ್ತನೆಯ ಮತ್ತೊಂದು ಸ್ತರಕ್ಕೆ ಶ್ರೀಕಾರವಾಗಲಿದೆ.

vuukle one pixel image
click me!