ಮೊದಲ ಭೇಟಿಯ ಮಿಠಾಯಿ... ಮಗನ ಕಾದಂಬರಿಯಲ್ಲಿ ಕಂಡ ಟಿಜೆಎಸ್ ಜಾರ್ಜ್

Published : Jul 20, 2025, 01:26 PM IST
Jeet Thayil novel

ಸಾರಾಂಶ

ಜೀತ್ ತಾಯಿಲ್ ಹೆಸರಾಂತ ಪತ್ರಕರ್ತ ಟಿಜೆಎಸ್ ಜಾರ್ಜ್ ಮಗ. ತಮ್ಮ ಕೃತಿಗಳಿಂದ ದೊಡ್ಡ ಹೆಸರು ಮಾಡಿದ್ದಾರೆ. ಭಾರತೀಯ ಕವಿಗಳ ಕವನಗಳ ಸಂಗ್ರಹ ಹೊರತಂದಿದ್ದಾರೆ.

ಜೀತ್ ತಾಯಿಲ್ ಬರೆದಿರುವ ಹೊಸ ಕಾದಂಬರಿಯ ಹೆಸರು ಎಲ್ಸ್‌ವೇರಿಯನ್ಸ್. ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸಿದರೆ ಎಲ್ಲಿಂದಲೋ ಬಂದವರು. ಅದೊಂದು ವಿಶಿಷ್ಟ ಪ್ರಕಾರದ ಕಾದಂಬರಿಯಲ್ಲದ ಕಾದಂಬರಿ. ಅದನ್ನು ಅವರು ಡಾಕ್ಯುಮೆಂಟರಿ ನಾವೆಲ್ ಎಂದು ಕರೆದಿದ್ದಾರೆ. ಸಾಕ್ಷ್ಯಚಿತ್ರವೂ ಕಲ್ಪನೆಯೂ ಸೇರಿ ಹುಟ್ಟಿದ ಕತೆ ಅದು. ಜೀತ್ ತಾಯಿಲ್ ಹೆಸರಾಂತ ಪತ್ರಕರ್ತ ಟಿಜೆಎಸ್ ಜಾರ್ಜ್ ಮಗ. ತಮ್ಮ ಕೃತಿಗಳಿಂದ ದೊಡ್ಡ ಹೆಸರು ಮಾಡಿದ್ದಾರೆ. ಭಾರತೀಯ ಕವಿಗಳ ಕವನಗಳ ಸಂಗ್ರಹ ಹೊರತಂದಿದ್ದಾರೆ. ಕಾದಂಬರಿಗಳನ್ನೂ ಬರೆದಿದ್ದಾರೆ. ಅವರ ಹೊಸ ಪುಸ್ತಕದ ಮೊದಲ ಅಧ್ಯಾಯದಲ್ಲಿ ಟಿಜೆಎಸ್ ಜಾರ್ಜ್ ಮೊದಲ ಸಲ ಪತ್ನಿ ಅಮ್ಮು ಥಾಮಸ್ ಅವರನ್ನು ಭೇಟಿಯಾದ ಪ್ರಸಂಗವಿದೆ. ಇಲ್ಲಿಂದ ಕತೆ ದೇಶಾಂತರಗಳನ್ನು ದಾಟಿ ಎಲ್ಲೆಲ್ಲಿಗೋ ಹೋಗುತ್ತದೆ.

ಇದೇ ಪುಸ್ತಕದಲ್ಲಿ ಜೀತ್ ತಾಯಿಲ್, ಅನೇಕ ಫೋಟೋಗಳನ್ನೂ ಬಳಸಿಕೊಂಡಿದ್ದಾರೆ. ಟಿಜೆಎಸ್ ಅವರ ತಾರುಣ್ಯದ ಫೋಟೋ, ಅಮ್ಮು ಅವರ ಫೋಟೋ ಕೂಡ ಇದೆ. ಅನೇಕ ಕಾರಣಗಳಿಗೆ ವಿಶಿಷ್ಟವಾಗಿರುವು ಈ ಕಾದಂಬರಿಯ ಮೊದಲ ಅಧ್ಯಾಯದ ಆಯ್ದ ಭಾಗ ಇಲ್ಲಿದೆ: ಗುಟ್ಟಾಗಿ ಅವನು ಅವಳನ್ನು ಭೇಟಿಯಾದ. ಎರಡೂ ಕಡೆಯೂ ಗುಲ್ಲೆದ್ದಿತು. ಅವನು ಫೋಟೋ ನೋಡಿದ್ದ. ಎರಡೂ ಕುಟುಂಬದವರೂ ಪರಸ್ಪರರನ್ನು ಕಂಡಿದ್ದರು, ಅದಕ್ಕಿಂತ ಹೆಚ್ಚಿಗೇನು ಬೇಕು? ಒಂದೇ ಮಾತು; ಬೇಕು ಅಥವಾ ಬೇಡ. ಅದರ ಬದಲು ಅವನು ಅವಳ ವಿಳಾಸ ಬರೆದಿಟ್ಟುಕೊಂಡ. ಕೊಚಿನ್ ವಿಮಾನ ಹತ್ತಿದ. ಬಾಡಿಗೆ ಕಾರು ಮಾಡಿಕೊಂಡು ಅಲ್ವಾಯಿಯ ಹೈಸ್ಕೂಲಿಗೆ ಬಂದ.ಅಮ್ಮು ಥಾಮಸ್ ಎಲ್ಲಿದ್ದಾರೆ ಅಂತ ವಿಚಾರಿಸಿದ. ಲೆಕ್ಕದ ಟೀಚರ್ ಸ್ಟಾಫ್ ರೂಮಿಗೆ ಓಡೋಡಿ ಹೋಗಿ, ಯಾರೋ ಗಂಡಸು ಅವಳನ್ನು ಕೇಳಿಕೊಂಡು ಬಂದಿದ್ದಾನೆಂದೂ ಗೇಟಿನ ಬಳಿ ಇದ್ದಾನೆಂದೂ ಹೇಳಿದಳು. ತನ್ನ ಕುತೂಹಲ ಯಾರಿಗೂ ತಿಳಿಯದೇ ಇರಲಿ ಅಂತ ಲೆಕ್ಕದ ಟೀಚರ್ ಆದಷ್ಟೂ ಸಹಜವಾಗಿದ್ದಳು.

''ಏನದು.. ಸರಿಯಾಗಿ ಹೇಳು'' ಅಂದಳು ಅಮ್ಮು

''ಗಡ್ಡ ಬಿಟ್ಟಿದ್ದಾರೆ, ಇಷ್ಟುದ್ದ'' ಅಂದಳು ಲೆಕ್ಕದ ಟೀಚರ್.

''ಯಾರು?''

''ಅದೇ ನಿನ್ನನ್ನು ನೋಡೋದಕ್ಕೆ ಬಂದ ಗಂಡಸು''

ಅಮ್ಮು ಏನೋ ಅನಾಹುತ ಆಗಿದೆ ಅಂದುಕೊಂಡು ಹೊರಗೋಡಿದಳು. ಅಪ್ಪನಿಗೇನೋ ಆಗಿರಬೇಕು, ಅಮ್ಮನಿಗೆ ತೊಂದರೆ ಆಗಿರಬಹುದು. ಒಂದು ಅಪಘಾತ... ಬಂದಿರುವ ಗಡ್ಡದ ಮನುಷ್ಯ ತನ್ನನ್ನು ಪತ್ರಕರ್ತ ಎಂದು ಪರಿಚಯಿಸಿಕೊಂಡು ಪರ್ಸಿನಿಂದ ಒಂದು ಫೋಟೋ ತೆಗೆದು ತೋರಿಸಿದ. ಅವಳು ಹಣಿಕಿ ಹಾಕಿದಳು. ಅದನ್ನು ಗುರುತಿಸಲು ಅವಳಿಗೆ ಸ್ಪಲ್ಪ ಹೊತ್ತೇ ಬೇಕಾಯಿತು. ಶಾಲೆಯ ಕೊನೆಯ ದಿನ ತೆಗೆದ ಫೋಟೋ ಅದು. ಕೆದರಿದ ಕೂದಲು, ಪೆದ್ದು ನಗು, ಅದು ಅವಳ ಮೆಚ್ಚಿನ ಫೋಟೋ ಏನಲ್ಲ. ಆದರೆ ಅವಳ ಪಕ್ಕದಲ್ಲಿ ಅವಳು ಆಟೋಟದಲ್ಲಿ ಗೆದ್ದ ಟ್ರೋಫಿಗಳ ರಾಶಿಯೂ ಇತ್ತು. ಆಕೆ ಅವನ ಕಪ್ಪು ಕನ್ನಡಕದ ಹಿಂದೆ ಅಡಗಿದ ಕಣ್ಣುಗಳನ್ನು ಸಣ್ಣಗೆ ನೋಡಿದಳು.

''ಇಪ್ಪತ್ತೇಳು ಪದಕ, ಇಪ್ಪತ್ತೈದು ಟ್ರೋಫಿ'' ಅಂದಳು ಅಮ್ಮು

''ಓಟ, ಈಜು ಮತ್ತಿತರ ಪಠ್ಯೇತರ ಚಟುವಟಿಕೆಗಾಗಿ'' ಆತನೆಂದ.

''ಕರೆಕ್ಟ್''

''ನೀನು ಟೀಚರ್ ಇರಬೇಕಲ್ಲ. ಏನು ಕಲಿಸುತ್ತಿ?''

''ಫಿಸಿಕ್ಸ್, ಕೆಮಿಸ್ಟ್ರಿ, ಜೀವಶಾಸ್ತ್ರ''

''ಗುಡ್, ಆದರೆ ನನ್ನ ಅಭಿಪ್ರಾಯದಲ್ಲಿ...''

''ಅದಕ್ಕೂ ನಿಮ್ಮ ಅಭಿಪ್ರಾಯಕ್ಕೂ ಏನು ಸಂಬಂಧ?''

ಆತ ಕನ್ನಡಕ ತೆಗೆದ. ಬೂದು ಬಣ್ಣದ ಕಣ್ಣು.

''ನನ್ನ ಅಭಿಪ್ರಾಯದಲ್ಲಿ ಈ ಫೋಟೋ ನಿನಗೇನೂ ನ್ಯಾಯ ಒದಗಿಸಿಲ್ಲ.'' ಅವನು ಅಮ್ಮುವನ್ನು ಮಾತ್ರವೇ ನೋಡುತ್ತಿರಲಿಲ್ಲ. ಆಕೆಯ ಪರಿಪೂರ್ಣ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದ. ಆಕೆ ಉಟ್ಟಿದ್ದ ಕೆಂಪು ಬಾರ್ಡರಿನ ಹತ್ತಿಯ ಸಾದಾ ಸೀರೆ, ಹಾರಾಡುತ್ತಿದ್ದ ಕೂದಲಲ್ಲಿ ಅಡಗಿ ಕೂತಿದ್ದ ಮಲ್ಲಿಗೆಯ ದಂಡೆ, ನಾಚಿಕೆಯ ನಗು ಮತ್ತು ಜಾಣತನ ಸೂಸುವ ಕಣ್ಣುಗಳು. ಅವಳ ಚೆಲುವು. ಏರ್ ಇಂಡಿಯಾ ವಿಮಾನದಲ್ಲಿ ಜೇಬಿಗಿಳಿಸಿದ ಮಿಠಾಯಿಗಳನ್ನು ಅವಳ ಮುಂದೆ ಹಿಡಿಯುತ್ತಾನೆ. ತನ್ನ ಕುರಿತು ಅಗಾಧ ನಂಬಿಕೆ ಮತ್ತು ಪ್ರೇಮದ ಕುರಿತು ತನ್ನದೇ ವಿಶಿಷ್ಟ ಕಲ್ಪನೆ ಇರುವ ಗಂಡಿನ ನಡವಳಿಕೆಯನ್ನು ಗಮನಿಸುತ್ತಾ ಅವಳು ಅದನ್ನು ಮುದದಿಂದ ತೆಗೆದುಕೊಳ್ಳುತ್ತಾಳೆ.

ಧನ್ಯವಾದ, ತುಂಬಾ ಧನ್ಯವಾದ ಅವಳು ಔಪಚಾರಿಕವಾಗಿ ಹೇಳುತ್ತಾಳೆ. ಅವನು ಕೊಟ್ಟ ಮಿಠಾಯಿ ಅವಳ ಕೈಯಲ್ಲಿ ಕರಗಿ ಅಂಟಾಗುತ್ತಿದೆ. ''ನಾನಿನ್ನು ಬರ್ತೀನಿ.'' ಅಲ್ಲಿಗೆ ಭೇಟಿ ಕೊನೆಯಾಗುತ್ತದೆ. ಎರಡೂ ಕುಟುಂಬಗಳಿಗೆ ಸಂದೇಶ ತಲುಪುತ್ತದೆ. ಜಾರ್ಜ್ ಮುಂಬಯಿಗೆ ಮರಳುತ್ತಾರೆ. ಅಲ್ಲಿಂದ ಮೂರು ತಿಂಗಳ ಕಾಲ ಪತ್ರಿಕೋದ್ಯಮದ ಪಾಠ ಹೇಳುವುದಕ್ಕೆ ಪೆನ್ಸಿಲ್ವೇನಿಯಾದ ಹ್ಯಾರಿಸ್‌ಬರ್ಗ್ ವಿಮಾನ ಹತ್ತುತ್ತಾರೆ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?