ವಿಭಜನೆಯ ಕತೆಗಳನ್ನು ಮಕ್ಕಳಿಗೆ ಹೇಳಿ : ಸುಧಾಮೂರ್ತಿ

Published : Jan 19, 2026, 06:48 PM IST
Sudha Murty

ಸಾರಾಂಶ

ಕಿಕ್ಕಿರಿದ ಕೇಳುಗರು, ಮಾತುಮಾತಿಗೂ ಚಪ್ಪಾಳೆ, ಮಾತು ನಡೆಯುತ್ತಿದ್ದಂತೆಯೇ ಪುಸ್ತಕಕ್ಕೆ ಸಹಿ ಹಾಕಿಸಿಕೊಳ್ಳಲು ಸಾಲುಗಟ್ಟಿದ ಜನರ ನಡುವೆ ಸುಧಾಮೂರ್ತಿ, ‘ಕಳೆದುಹೋದ ಬೆಂಡೋಲೆಯ ಮಾಂತ್ರಿಕತೆ’ ಎಂಬ ವಿಷಯದ ಕುರಿತು ಪತ್ರಕರ್ತೆ ಮಂದಿರಾ ನಾಯರ್ ಜತೆ ಸಂವಾದ ಗೋಷ್ಠಿ ನಡೆಸಿಕೊಟ್ಟರು. 

ಜೈಪುರ (ಜ.19) : ಕಿಕ್ಕಿರಿದ ಕೇಳುಗರು, ಮಾತುಮಾತಿಗೂ ಚಪ್ಪಾಳೆ, ಮಾತು ನಡೆಯುತ್ತಿದ್ದಂತೆಯೇ ಪುಸ್ತಕಕ್ಕೆ ಸಹಿ ಹಾಕಿಸಿಕೊಳ್ಳಲು ಸಾಲುಗಟ್ಟಿದ ಜನರ ನಡುವೆ ಸುಧಾಮೂರ್ತಿ, ‘ಕಳೆದುಹೋದ ಬೆಂಡೋಲೆಯ ಮಾಂತ್ರಿಕತೆ’ ಎಂಬ ವಿಷಯದ ಕುರಿತು ಪತ್ರಕರ್ತೆ ಮಂದಿರಾ ನಾಯರ್ ಜತೆ ಜೈಪುರ ಸಾಹಿತ್ಯೋತ್ಸವದ ಮೂರನೆಯ ದಿನದ ಮೊದಲ ಸಂವಾದ ಗೋಷ್ಠಿ ನಡೆಸಿಕೊಟ್ಟರು.

ಮಾತಿನ ನಡುವೆ ತನ್ನ ಬದುಕಿನ ಅನುಭವ, ಮೊಮ್ಮಕ್ಕಳನ್ನು ಬೆಳೆಸುವ ರೀತಿ, ಕುಸಿಯುತ್ತಿರುವ ಕುಟುಂಬ ವ್ಯವಸ್ಥೆ, ಲೇಖಕರ ಜವಾಬ್ದಾರಿಯ ಕುರಿತು ಸುಧಾಮೂರ್ತಿ ಮಾತಾಡಿದರು.

ಕತೆಯ ಮೂಲಕ ಹೇಳಬಹುದು ಎಂಬ ಕಾರಣಕ್ಕೆ ನಾನು ಬರೆಯಲು ಆರಂಭಿಸಿದೆ

‘ನನ್ನ ಮೊಮ್ಮಕ್ಕಳು ಬೇರೆ ದೇಶದಲ್ಲಿದ್ದಾರೆ. ಅವರ ಜತೆ ನಾನು ದಿನವೂ ಮಾತಾಡಲು ಆಗುವುದಿಲ್ಲ. ಅವರಿಗೆ ಹಳೆಯ ಮೌಲ್ಯಗಳನ್ನು ಕತೆಯ ಮೂಲಕ ಹೇಳಬಹುದು ಎಂಬ ಕಾರಣಕ್ಕೆ ನಾನು ಬರೆಯಲು ಆರಂಭಿಸಿದೆ. ಈ ಕಾಲದಲ್ಲಿ ಕುಟುಂಬಗಳು ಒಡೆದಿವೆ. ಮಕ್ಕಳು ಅಜ್ಜ ಅಜ್ಜಿಯರ ಜತೆ ಬದುಕುತ್ತಿಲ್ಲ. ತಾಯಂದಿರು ಟೀವಿಗೆ ಜೋತುಬಿದ್ದಿದ್ದಾರೆ. ಹೀಗಾಗಿ ಮನೆಯಲ್ಲಿ ಮಾತಾಡುವ ವಾತಾವರಣವೇ ಮಾಯವಾಗಿದೆ. ಇಂಥ ಹೊತ್ತಲ್ಲಿ ಮಕ್ಕಳಿಗೆ ಕತೆ ಹೇಳುವ ಮೂಲಕ ಜೀವನಮೌಲ್ಯ ಹೇಳಿಕೊಡಬೇಕು’ ಎಂದು ಅವರು ತಾನು ಬರೆಯುವ ಕಾರಣವನ್ನು ತೆರೆದಿಟ್ಟರು.

ಚರಿತ್ರೆಯ ಪರಿಚಯ ಇಲ್ಲದೇ ಭವಿಷ್ಯದ ಬೆಳಕು ದೊರಕುವುದಿಲ್ಲ

‘ಚರಿತ್ರೆಯ ಪರಿಚಯ ಇಲ್ಲದೇ ಭವಿಷ್ಯದ ಬೆಳಕು ದೊರಕುವುದಿಲ್ಲ. ಮಕ್ಕಳನ್ನು ಇತಿಹಾಸದ ಸ್ಮಾರಕಗಳ ಬಳಿ ಕರೆದೊಯ್ಯಬೇಕು. ಭಾರತದ ಬಗ್ಗೆ ಅವರು ತಿಳಿದುಕೊಳ್ಳಬೇಕಾದದ್ದು ಸಾಕಷ್ಟಿದೆ. ನಾನು ನನ್ನ ಮೊಮ್ಮಕ್ಕಳನ್ನು ಚಿರಾಪುಂಜಿಗೆ ಕರೆದೊಯ್ದು ನನ್ನ ದೇಶದ ಪರಿಚಯ ಮಾಡಿಕೊಟ್ಟಿದ್ದೆ’ ಎಂದು ಅವರು ಹೇಳಿದರು.‘ಈ ಬಾರಿ ನಾನು ಭಾರತದ ವಿಭಜನೆಯ ಕತೆ ಬರೆದಿದ್ದೇನೆ. ನನ್ನ ಮೊಮ್ಮಗಳು ಅನೌಷ್ಕಾ ಸುನಕ್‌ಗೆ ಭಾರತದ ಕತೆ ಹೇಳಲು ಹೊರಟಿದ್ದೇನೆ. ಭಾರತದ ವಿಭಜನೆ ಅತ್ಯಂತ ಬೇಸರದ ಸಂಗತಿ. ಮುಂದೆ ಇಂಥದ್ದು ಮರುಕಳಿಸಬಾರದು. ನನ್ನ ಅಳಿಯನ ಹಿರಿಯರು ಎರಡು ಸಲ ತಾವಿರುವ ಜಾಗ ಬಿಟ್ಟು ಬರಬೇಕಾಯಿತು. ಅವರು ಹುಟ್ಟಿದ ಊರು ಪಾಕಿಸ್ತಾನದಲ್ಲಿದೆ.

ವಿಭಜನೆ ಸಂದರ್ಭದಲ್ಲಿ ಅವರು ಅಲ್ಲಿಂದ ಆಫ್ರಿಕಾದ ನೈರೋಬಿಗೆ ಹೋದರು. ಅಲ್ಲಿಂದ ಗುಳೆ ಹೊರಟು ಲಂಡನ್ನಿಗೆ ಬಂದರು. ಹೀಗೆ ಎರಡು ಸಲ ಅವರ ಬದುಕು ಎತ್ತಂಗಡಿಯಾಗಿದೆ. ಬದುಕನ್ನು ಮತ್ತೆ ಮತ್ತೆ ಕಟ್ಟುವುದು ಸುಲಭವಲ್ಲ’ ಎಂದು ಸುಧಾಮೂರ್ತಿ ಅಭಿಪ್ರಾಯಪಟ್ಟರು.‘ವಿಭಜನೆಯ ನಂತರ ಪಂಜಾಬಿಗಳಿಗೆ ಪಂಜಾಬ್ ಸಿಕ್ಕಿತು. ಅವರ ಭಾಷೆಯೂ ಉಳಿಯಿತು. ಬಂಗಾಳಿಗರೂ ಭಾಷೆ, ನೆಲ ಉಳಿಸಿಕೊಂಡರು. ಸಿಂಧಿಗಳಿಗೆ ಆ ಭಾಗ್ಯ ಇರಲಿಲ್ಲ. ಅವರು ನೆಲವನ್ನೂ ಭಾಷೆಯನ್ನೂ ಕಳಕೊಂಡರು. ಸಂಸ್ಕೃತಿಯೂ ಕ್ರಮೇಣ ನಾಶವಾಯಿತು. ಅವರೆಲ್ಲ ಹಿಂದಿ ಮಾತಾಡಲು ಆರಂಭಿಸಿದರು. ಸಿಂಧಿ ಭಾಷೆಯೇ ಮರೆಯಾಯಿತು’ ಎಂದು ಸುಧಾಮೂರ್ತಿ ಬೇಸರಪಟ್ಟರು.

‘ತಾವು ಅನುಭವಿಸುತ್ತಿರುವ ಸಂತೋಷದ ಹಿಂದೆ ಎಷ್ಟೆಲ್ಲ ಕಷ್ಟಗಳಿವೆ ಅನ್ನುವುದು ನನ್ನ ಮೊಮ್ಮಕ್ಕಳಿಗೆ ಅರ್ಥವಾಗಬೇಕು. ಸ್ವಾತಂತ್ರ್ಯ ಸುಲಭವಾಗಿ ಸಿಗುವುದಿಲ್ಲ. ನಮ್ಮ ಪೂರ್ವಜರು ಅದಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಕುಸಿದು ಬಿದ್ದ ಮನೆಯನ್ನು ಛಲದಿಂದ ಕಟ್ಟಿದ್ದಾರೆ ಎನ್ನುವುದು ತಿಳಿಯಬೇಕು. ಅದಕ್ಕಾಗಿಯೇ ವಿಭಜನೆಯ ಕತೆ ಹೇಳುತ್ತಿದ್ದೇನೆ’ ಎಂದು ಸುಧಾಮೂರ್ತಿ ಹೇಳಿದರು.

‘ದುಡ್ಡು ಮತ್ತು ಯಶಸ್ಸು ಮುಖ್ಯ. ಅವೇ ಎಲ್ಲವೂ ಅಲ್ಲ. ನಿಜವಾದ ಶಕ್ತಿಯೆಂದರೆ ಆತ್ಮವಿಶ್ವಾಸ ಮತ್ತು ಕಷ್ಟವನ್ನು ಎದುರಿಸುವ ಶಕ್ತಿ. ಇದಿಲ್ಲದೇ ಹೋದರೆ ಗೆಲುವೂ ಸಾಧ್ಯವಿಲ್ಲ, ಮನಃಶಾಂತಿಯೂ ಇರುವುದಿಲ್ಲ’ ಎನ್ನುವ ಮಾತು ಸಭಿಕರ ಮೆಚ್ಚುಗೆ ಗಳಿಸಿತು.

 

PREV
Read more Articles on
click me!

Recommended Stories

ಹಳ್ಳಿ ಹಿನ್ನೆಲೆಯ ಯುವ ಜನಾಂಗಕ್ಕೆ 8 ಆರ್ಥಿಕ ಪಾಠಗಳು
ಸೃಜನಶೀಲ ಲೇಖಕರ ಅನುವಾದ ಓದುಗರಿಗೆ ಹತ್ತಿರ : ಶಾನಭಾಗ