
- ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನಮ್ಮ ದೇಶದ ಪ್ರತಿಯೊಂದು ಆಚರಣೆಗೆ ಆಧ್ಯಾತ್ಮಿಕ ಆಯಾಮ ಮಾತ್ರವಲ್ಲ, ಸಾಮಾಜಿಕ ಆಯಾಮವೂ ಇರುತ್ತದೆ. ಉದಾಹರಣೆಗೆ, ರಕ್ಷಾ ಬಂಧನ. ಉತ್ತರ ಭಾರತದಲ್ಲಿ ಪ್ರಮುಖವಾಗಿ ಆಚರಿಸುವ ಈ ಹಬ್ಬದ ದಿನ ಅಣ್ಣ ತಮ್ಮಂದಿರಿಗೆ ಅಕ್ಕ ತಂಗಿಯರು 'ನಿಮಗೆ ನಮ್ಮ ರಕ್ಷೆಯಿದೆ' ಎಂಬ ಭಾವನಾತ್ಮಕ ಭರವಸೆಯ ಸಂಕೇತವಾಗಿ ರಾಖಿಯನ್ನು ಕಟ್ಟುತ್ತಾರೆ. ಕೇವಲ ಹೆಂಗಸರಿಗೆ ಗಂಡಸರು ರಕ್ಷಣೆ ಕೊಡುವುದು ಮಾತ್ರವಲ್ಲ, ಗಂಡಸರಿಗೂ ಹೆಂಗಸರ ರಕ್ಷಣೆ ಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ನಾವು ಸಮಾಜ ಜೀವಿಗಳು. ಪ್ರಕೃತಿ ವಿಕೋಪ, ಶತ್ರು ಪ್ರಕೋಪ ಮತ್ತು ಯಾವುದೇ ರೀತಿಯ ಅಪಘಾತ ಸಮಾಜದ ಎಲ್ಲರನ್ನೂ ಬಾಧಿಸಬಹುದು. ಇವುಗಳಿಂದ ಒಬ್ಬರಿಗೊಬ್ಬರು ರಕ್ಷಣೆ ನೀಡಬೇಕೆಂಬ ಉದಾತ್ತ ಧ್ಯೇಯ ರಕ್ಷಾಬಂಧನದ ಆಚರಣೆಯ ಹಿಂದಿದೆ. ರಕ್ಷಾ ಬಂಧನದ ಇನ್ನೊಂದು ವಿಶೇಷ ಗಮನಿಸಿ. ಬಂಧನ ಮುಕ್ತಿಗೆ ವಿರೋಧ. ಆದರೆ ರಕ್ಷಾಬಂಧನವು ನಮಗೆ ಜ್ಞಾನದ ಜೊತೆ ಬಾಂಧವ್ಯ ಉಂಟಾಗಲಿ, ಪ್ರೀತಿಯ ಬಾಂಧವ್ಯ ಉಂಟಾಗಲಿ ಎಂಬ ಆಶಯವನ್ನು ಹೊಂದಿದೆ. ಪ್ರೀತಿಯ ಬಂಧನ ಒಳ್ಳೆಯದು, ಆದರೆ ಮೋಹದ ಬಂಧನ ದೂರವಾಗಲಿ, ಪ್ರೀತಿಯ ಬಂಧನದಿಂದ ಶ್ರೇಯಸ್ಸು ಉಂಟಾಗುತ್ತದೆ ಎಂಬುದರ ಪ್ರತೀಕ ಈ ರಕ್ಷಾ ಬಂಧನ.
ಪುರುಷರಾಗಲಿ, ಮಹಿಳೆಯರಾಗಲಿ ಯಾರೂ ಬಲಹೀನರಲ್ಲ. ಪುರುಷರಿಗೆ ಬಾಹುಬಲವಿದ್ದರೆ ಹೆಂಗಸರಿಗೆ ಸಂಕಲ್ಪಶಕ್ತಿ ಅಥವಾ ಮನೋಬಲವಿರುತ್ತದೆ. ಆದುದರಿಂದಲೇ ಹೆಂಗಸರು ಸಂಕಲ್ಪಿಸಿದ ಎಲ್ಲ ಕೆಲಸಗಳೂ ಬಹುಪಾಲು ನೆರವೇರುತ್ತವೆ. ಹೆಂಗಸರಲ್ಲಿರುವ ಭಾವನಾತ್ಮಕ ಶಕ್ತಿ ಹಾಗೂ ಬುದ್ಧಿಶಕ್ತಿಯನ್ನು ಅಭಿವ್ಯಕ್ತಿಗೊಳಿಸಲು ರಕ್ಷಾ ಬಂಧನ ಆಚರಿಸಲಾಗುತ್ತದೆ. ಸ್ತ್ರೀಪುರುಷರಿಬ್ಬರಿಗೂ ಪರಸ್ಪರರ ರಕ್ಷಣೆಯ ಅಗತ್ಯವಿದೆ ಎಂಬುದನ್ನೂ ಇದು ಸಂಕೇತಿಸುತ್ತದೆ.
ಉತ್ತರ ಭಾರತದಲ್ಲಿ ಶ್ರಾವಣ ಮಾಸದ ಪೌರ್ಣಮಿಯ ದಿನ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ನಾಗರ ಪಂಚಮಿಯ ದಿನವೇ ಈ ಆಚರಣೆಯನ್ನು ಮಾಡುತ್ತೇವೆ. ಕೆಲವು ಭಾಗದಲ್ಲಿ ಹೆಣ್ಣುಮಕ್ಕಳು ತಮ್ಮ ಅಣ್ಣ ಅಥವಾ ತಮ್ಮನ ಮೇಲೆ ಹಾಲು ಹಾಕಿ ಅವರಿಗೆ ರಕ್ಷೆಯನ್ನು ಕೋರುವ ಪದ್ಧತಿಯೂ ಇದೆ. ಶ್ರಾವಣ ಪೌರ್ಣಮಿಯ ದಿನ ಯಜ್ಞೋಪವೀತವನ್ನು ಬದಲಾಯಿಸಿಕೊಳ್ಳುವ ಪದ್ಧತಿಯೂ ಇದೆ.
ನಮ್ಮ ಮೇಲೆ ಕೌಟುಂಬಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜವಾಬ್ದಾರಿ ಇದೆ ಎಂಬುದನ್ನು ನೆನಪಿಸುವ ಸಲುವಾಗಿ ಜನಿವಾರದಲ್ಲಿ ಮೂರು ಎಳೆಗಳಿರುತ್ತವೆ. ತಂದೆತಾಯಿಯರ ಋಣ, ಗುರುಗಳ ಋಣ ಮತ್ತು ನಾವು ಬದುಕುತ್ತಿರುವ ಸಮಾಜದ ಋಣ ನಮ್ಮ ಮೇಲೆ ಸದಾ ಇದೆ, ಅದನ್ನು ತೀರಿಸಲು ಸಾಧ್ಯವಿಲ್ಲದಿದ್ದರೂ ಸ್ಮರಣೆಯನ್ನಾದರೂ ಮಾಡಿಕೊಳ್ಳೋಣ ಎಂಬುದನ್ನು ಪುನರ್ಮನನ ಮಾಡಿಕೊಳ್ಳಲು ಜನಿವಾರವನ್ನು ಅಂದು ಬದಲಾಯಿಸಿಕೊಳ್ಳುತ್ತಾರೆ.