
-ಬನ್ನೂರು ಕೆ.ರಾಜು, ಸಾಹಿತಿ-ಪತ್ರಕರ್ತ.
ಇಡೀ ಜಗತ್ತೇ ಇತ್ತ ತಿರುಗಿ ನೋಡುವಂತೆ ಧರೆಗಿಳಿದ ದೇವಲೋಕದಂತೆ ಮತ್ತೆ ಬಂದಿದೆ ಮೈಸೂರು ದಸರಾ. ದೇವೇಂದ್ರನ ಅಮರಾವತಿಯಂತೆ ಮೈಸೂರಿಗೆ ಮೈಸೂರೇ ಮಿರಮಿರನೆ ಮಿಂಚುವ ಮಹಾಸಡಗರ. ಮೈಮನ ಪುಳಕಿತವಾಗುವಂತೆ ನಿತ್ಯ ಬದುಕಿನ ಜಂಜಡ ಮರೆಸುವ ಸಂತಸದ ಆಗರ. ಕಣ್ಣು ಕೋರೈಸುವಂತೆ ಮೈಸೂರೆಂಬೋ ಸ್ವರ್ಗದ ಬಾಗಿಲು ತೆರೆದುಕೊಳ್ಳುವ ಸಂಭ್ರಮದ ಚಿತ್ತಾರ. ಮೈಸೂರು ದಸರೆಯೇ ಹಾಗೆ. ಇದಕ್ಕಾಗಿ ಇಡೀ ಮೈಸೂರು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ನಿಲ್ಲುವ ಪರಿ ಇದೆಯಲ್ಲ ವಾಹ್ಹ್, ಮಹದದ್ಭುತ! ಇದಕ್ಕಿಲ್ಲ ಮತ್ತೊಂದು ಸರಿಸಮ. ಅದಕ್ಕೇನೆ ಇದು ಅಷ್ಟೊಂದು ಜಗದ್ವಿಖ್ಯಾತ.ದೇಶದ ಹಲವು ಕಡೆ ದಸರಾ ಉತ್ಸವಗಳು ನಡೆಯುವುದುಂಟು. ಆದರೆ, ಮೈಸೂರು ದಸರಾದ ವೈಭವವೇ ಬೇರೆ. ಇಡೀ ವಿಶ್ವವೇ ಇತ್ತ ತಿರುಗಿ ನೋಡುವಂಥದ್ದು. ಯಾರೇ ಆಗಲಿ ಈ ಕ್ಷಣಕ್ಕೂ ಮೈಸೂರು ದಸರಾ ಎಂದಾಕ್ಷಣ ಏನೋ ಒಂಥರಾ ಆನಂದ. ಮೈಮನವೆಲ್ಲಾ ರೋಮಾಂಚನ. ಕಣ್ಮುಂದೆ ಚೆಂದದ ಮೈಸೂರು, ಅಂದದ ಅರಮನೆ, ಸುಂದರ ಚಿನ್ನದ ಅಂಬಾರಿ, ಮನಸೆಳೆವ ರತ್ನ ಸಿಂಹಾಸನ, ಸಿಂಹಾಸನಾಧೀಶರಾಗಿ ಮೆರೆದ ಮಹಾರಾಜರ ವೈಭವ-ವೈಭೋಗಗಳೆಲ್ಲವೂ ನೆನಪುಗಳ ಮೆರವಣಿಗೆಯಾಗಿ ತೇಲಿ ಬರುತ್ತದೆ. ಇದರ ಜೊತೆಗೆ ಮೈಸೂರು ದಸರೆಯ ಜಂಬೂ ಸವಾರಿ ಮತ್ತೆ ಮತ್ತೆ ಕಣ್ಣಿಗೆ ಕಟ್ಟಿದಂತೆ ನೆನಪಿನ ಪರದೆಯಲ್ಲಿ ಹಾದು ಹೋಗುತ್ತದೆ. ಇದೇ ನೋಡಿ ಮೈಸೂರು ದಸರಾದ ವೈಶಿಷ್ಟ್ಯತೆ.
ವಿಜಯನಗರದ ವೈಭವ: ಒಂದು ಕಾಲದಲ್ಲಿ ಆಳರಸರ ಮಹೋತ್ಸವವಾಗಿ ಮೆರೆದು ಇಂದು ಬದಲಾದ ಕಾಲಘಟ್ಟದಲ್ಲಿ ನಾಡಹಬ್ಬವೆಂದು ಕರೆಯಲ್ಪಡುತ್ತಿರುವ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಸುದೀರ್ಘ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ. ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಈ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯುಂಟು. ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ವಿಜಯನಗರ ಸಾಮ್ರಾಜ್ಯ ಕಟ್ಟಿ ವೈಭವದಿಂದ ಮೆರೆದವರು ವಿಜಯನಗರ ಅರಸರು.
ಅವರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ ಕೇಂದ್ರಗಳಾಗಿದ್ದವು. ತಮ್ಮ ಸಾಮ್ರಾಜ್ಯದ ಶಕ್ತಿ-ಸಾಮರ್ಥ್ಯ, ಸಂಪತ್ತು-ಸಮೃದ್ಧಿ, ವೈಭವ-ವೈಭೋಗ, ವೀರತ್ವ-ಧೀರತ್ವ, ಕಲೆ-ಸಾಹಿತ್ಯ, ಸಂಗೀತ-ನೃತ್ಯ, ಸಂಸ್ಕೃತಿ-ಸಂಪನ್ನತೆ... ಹೀಗೆ ಸಕಲ ವಿಧಗಳಲ್ಲೂ ತಮ್ಮ ಹಿರಿಮೆ-ಗರಿಮೆಗಳನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಬಹುಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ಈ ದಸರಾ ಮಹೋತ್ಸವವನ್ನು ವಿಜಯನಗರ ಅರಸರು ಆಚರಿಸುತ್ತಿದ್ದರು. ಈ ಉತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ ದಾಖಲೆಗಳುಂಟು. ಅಷ್ಟೇ ಅಲ್ಲ 11ನೇ ಶತಮಾನದಲ್ಲೇ ಇಲ್ಲಿಗೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರಾದ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಬಂದಿದ್ದ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ (1520-1522) ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ಈ ಮಹೋತ್ಸವವನ್ನು ಕೊಂಡಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.
ಯದುವಂಶಕ್ಕೆ ಬಂದ ದಸರಾ: ಇಂಥ ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದುವಂಶದ ಮೈಸೂರು ಒಡೆಯರು. ಇವರಲ್ಲಿನ ೯ನೇ ಆಳ್ವಿಕೆಯ ರಾಜ ಒಡೆಯರು (1578-1617) ಅಂದು ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದ ವಿಜಯದಶಮಿಯ ದಸರಾ ಮಹೋತ್ಸವವನ್ನು ಮೊದಲಿಗೆ ಆರಂಭಿಸಿದರು. ಥೇಟ್ ವಿಜಯನಗರ ಅರಸರ ಸಂಪ್ರದಾಯದಂತೆಯೇ ದಸರಾಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಶಾಸ್ತ್ರ ಹಾಗೂ ವಿಧಿ-ವಿಧಾನಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅಳವಡಿಸಿಕೊಂಡರು. ಈ ಪ್ರಕಾರ ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಶುರುವಾಗಿ ಮಹಾನವಮಿಯ ಕಡೇ ದಿನದವರೆವಿಗೂ ಪ್ರತಿನಿತ್ಯ ಪೂಜೆ-ಪುನಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಬೇಕೆಂದು ಪಕ್ಕಾ ವಿಧೇಯಕವನ್ನೇ ಮಾಡಿ ದಸರಾ ಹಬ್ಬವನ್ನು ಆಚರಣೆಗೆ ತಂದರು.
1798ರವರೆಗೂ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ದಸರಾ ನಡೆಯುತ್ತಿತ್ತು. ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುಕುಲತಿಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲಕ್ಕೆ (1799-1868) ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣದಿಂದ 1799ರ ಜೂನ್ ೩೦ರಂದು ಮೈಸೂರಿಗೆ ವರ್ಗವಾಯಿತು. ಅಲ್ಲಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅತೀವ ಕಾಳಜಿಯಿಂದ ಮತ್ತಷ್ಟು ವಿಜೃಂಭಣೆಯಿಂದ 1799 ಆಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭವಾಗಿ ಮೈಸೂರು ದಸರಾ ಎಂದು ವಿಶ್ವವಿಖ್ಯಾತಿಯಾಯಿತು. ವಿಜಯದಶಮಿಯಂದು ಮಧ್ಯಾಹ್ನ ಮಹಾರಾಜರು ಅಲಂಕೃತ ಆನೆಯ ಮೇಲಿನ ಚಿನ್ನದ ಅಂಬಾರಿಯನ್ನೇರಿ ವೈಭವದ ಜಂಬೂಸವಾರಿಯಲ್ಲಿ ಅಂಬಾ ವಿಲಾಸ ಅರಮನೆಯಿಂದ ಹೊರಟು ಬನ್ನಿಮಂಟಪಕ್ಕೆ ತೆರಳಿ ಬನ್ನಿಪೂಜೆ ಮಾಡಿ ಧ್ವಜ ಹಾರಿಸಿ ಸೈನಿಕರಿಂದ ವಂದನೆ ಸ್ವೀಕರಿಸಿ ನಂತರ ತಾವು ಬಂದ ರಾಜ ಮಾರ್ಗದಲ್ಲೇ ಅರಮನೆಗೆ ವಾಪಸ್ಸಾಗುವ ಈ ಜಂಬೂ ಸವಾರಿಯೇ ಮೈಸೂರು ದಸರೆಯ ಪ್ರಮುಖ ಆಕರ್ಷಣೆ.
ದಸರ ಉತ್ಸವಕ್ಕೆ ಕಂಟಕ: ಈ ರೀತಿ ರಾಜ ಒಡೆಯರಿಂದ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ವಿಜಯನಗರ ಪರಂಪರೆಯ ನವರಾತ್ರಿ ಪೂಜೆಯ ದಸರಾ ಮಹೋತ್ಸವ ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಮತ್ತಷ್ಟು ಭವ್ಯಗೊಂಡು, ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆ(1902-1940) ಕಾಲಕ್ಕೆ ಮಗದಷ್ಟು ವೈಭವದ ಉತ್ತುಂಗಕ್ಕೇರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವಾಗಿ ವಿಜೃಂಭಿಸಿತು. ನಾಲ್ವಡಿಯವರ ನಂತರ ಯದುವಂಶದ 25ನೆಯ ಹಾಗೂ ಕಟ್ಟಕಡೆಯ ದೊರೆಯಾಗಿ ಅಧಿಕಾರಕ್ಕೆ ಬಂದ ಜಯಚಾಮರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ (1940-1947) ಇನ್ನಷ್ಟು ವೈಭವ ಪಡೆದುಕೊಂಡು ಜಾಗತಿಕ ಆಕರ್ಷಣೆ ಪಡೆಯಿತು. ಆದರೆ, 1947 ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯಗಳಿಸಿದ ನಂತರ ರಾಜ ಮಹಾರಾಜರ ಸಂಸ್ಥಾನಗಳೆಲ್ಲವೂ ಭಾರತ ಸರ್ಕಾರದಲ್ಲಿ ವಿಲೀನವಾದವು.
ಆದರೂ ಸಹ ಯಾವುದೇ ಅಡ್ಡಿಯಿಲ್ಲದೆ ಮೈಸೂರು ದಸರಾ ಆಚರಣೆ ನಡೆದುಕೊಂಡು ಬರುತ್ತಿತ್ತು. ಜಯಚಾಮರಾಜ ಒಡೆಯರು ರಾಜ ಪ್ರಮುಖರಾಗಿ ಹಿಂದಿನಂತೆ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದರು. 1962ರಲ್ಲಿ ರಾಜಧನ ಮತ್ತು ರಾಜತ್ವರದ್ದಾದಾಗ ಮೂರ್‍ನಾಲ್ಕು ವರ್ಷಗಳ ಕಾಲ ದಸರಾ ನಿಂತು ಹೋಗಿತ್ತು. ಆದರೆ, ಮೈಸೂರಿನ ಪ್ರಮುಖ ಕೈಗಾರಿಕೋದ್ಯಮಿ ಎಫ್.ಕೆ.ಇರಾನಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಸರಳವಾಗಿ ದಸರಾ ಹಬ್ಬವನ್ನು ನಡೆಸಿಕೊಂಡು ಬರಲಾಯಿತು. 1980ರಲ್ಲಿ ಆರ್.ಗುಂಡೂರಾವ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದಾಗ ಭವ್ಯ ಪರಂಪರೆಯ ಮೈಸೂರು ದಸರಾ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿ ಅದರ ಉಸ್ತುವಾರಿಯನ್ನು ಸರ್ಕಾರವೇ ವಹಿಸಿಕೊಂಡಿತು. ಹಾಗಾಗಿ ಅಂದಿನಿಂದ ಇಂದಿನ ತನಕವೂ ನಾಡಹಬ್ಬವಾಗಿ ರಾಜ್ಯ ಸರ್ಕಾರದಿಂದಲೇ ಪ್ರತಿವರ್ಷ ಮೈಸೂರು ದಸರಾ ನಡೆಯುತ್ತಾ ಬಂದಿದೆ.
ರಾಜ ಪ್ರತ್ಯಕ್ಷ ದೈವವೆಂಬ ಭಾವನೆಯಿದ್ದ ಆ ಕಾಲದಲ್ಲಿ ಆಳರಸರದೇ ದರ್ಬಾರು. ಅಂದು ಅಂಬಾರಿಯಲ್ಲಿ ಸ್ವತಃ ಮಹಾರಾಜರೇ ಕೂರುತ್ತಿದ್ದರೆ ಇಂದು ಮೈಸೂರಿನ ಅಧಿದೇವತೆ ನಾಡದೇವಿ ಚಾಮುಂಡೇಶ್ವರಿ ಅಂಬಾರಿಯಲ್ಲಿ ಅಲಂಕೃತವಾಗಿ ಪೂಜಿಸಲ್ಪಡುತ್ತಾಳೆ. 750 ಕೆ.ಜಿ. ಭಾರದ ಬಂಗಾರದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಸುಂದರ ಮೂರ್ತಿಯನ್ನು ಹೊತ್ತ ಗಜರಾಜನ ಗಾಂಭೀರ್ಯ ನಡಿಗೆಯಲ್ಲಿ ಮೈಸೂರು ರಾಜ ಬೀದಿಯಲ್ಲಿ ಸಾಗುವ ಮೈಸೂರು ದಸರೆಯ ಜಂಬೂ ಸವಾರಿಯನ್ನು ನೋಡುವುದೇ ಒಂದು ಮಹಾಹಬ್ಬ. ಹಾಗಾಗಿ ಈ ಮಹಾದೃಶ್ಯ ಕಾವ್ಯವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಿಯರೆಲ್ಲಾ ಸಾಗರದೋಪಾದಿಯಲ್ಲಿ ಮೈಸೂರಿನತ್ತ ಹರಿದು ಬರುತ್ತಾರೆ. ವಿಜಯದಶಮಿಯಂದು ಈ ಚಿನ್ನದ ಅಂಬಾರಿಯನ್ನು ದರ್ಶಿಸುವುದು ಮಹಾ ಪುಣ್ಯವೆಂಬ ಭಾವನೆ ಇಲ್ಲಿ ಬೇರೂರಿರುವುದರಿಂದ ಇದಕ್ಕೆ ದೈವೀಕಶಕ್ತಿಯದ್ದೆಂದು ಹೆಚ್ಚಿನ ಮಹತ್ವವುಂಟು.
ವಿಜಯದಶಮಿ ವೈಭವದ ನವರಾತ್ರಿಯ ಮೈಸೂರು ದಸರಾ ಎಂದರೆ ಅದು ಜಂಬೂ ಸವಾರಿಯಷ್ಟೇ ಅಲ್ಲ. ಸಮಸ್ತ ನಾಡಿನ ಸಾಂಸ್ಕೃತಿಕ ಸಿರಿ ಸಂಪತ್ತಿನ ಮತ್ತು ನಾಡನ್ನಾಳಿದ ರಾಜ ಪರಂಪರೆಯ ಅನಾವರಣ. ಮೈಸೂರು ದಸರಾ ಉತ್ಸವದ ಉದ್ದಕ್ಕೂ ಇದರದ್ದೇ ಮಹಾದರ್ಶನ. ಆಶ್ವಯುಜ ಶುದ್ಧ ಪ್ರಥಮೆಯಂದು ದೇವಿ ಚಾಮುಂಡಿ ಪೂಜೆಯೊಡನೆ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಉತ್ಸವ ಆರಂಭಗೊಳ್ಳುವ ಮೊದಲ ದಿನದಿಂದ ಹಿಡಿದು ಮಹಾನವಮಿಯ ಒಂಭತ್ತು ದಿನಗಳೂ ದಸರಾ ಸಂಗೀತೋತ್ಸವ, ದಸರಾ ಚಲನಚಿತ್ರೋತ್ಸವ, ದಸರಾ ಕಾವ್ಯೋತ್ಸವ, ದಸರಾ ರಂಗೋತ್ಸವ, ಕೈಗಾರಿಕಾ ದಸರಾ, ದಸರಾ ಕ್ರೀಡೋತ್ಸವ, ಯುವ ದಸರಾ, ಯೋಗ ದಸರಾ, ಗ್ರಾಮೀಣ ದಸರಾ, ಜನಪದ ದಸರಾ, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ದಸರಾ ಗೊಂಬೆ ಪ್ರದರ್ಶನ, ದಸರಾ ವೈಮಾನಿಕ ಪ್ರದರ್ಶನ, ದಸರಾ ಆಹಾರ ಮೇಳ... ಹೀಗೆ ಮೈಸೂರಿನ ತುಂಬಾ ವಿವಿಧ ದಸರಾ ಉತ್ಸವಗಳ, ಮೇಳಗಳ, ಪ್ರದರ್ಶನಗಳ ಮಹಾ ಸುಗ್ಗಿಯೇ ಜರುಗುತ್ತದೆ. ನವರಾತ್ರಿಯ ಸಮಾರೋಪವಾಗಿ ವಿಜಯ ದಶಮಿಯಂದು ರಾಜ್ಯದ ಮುಖ್ಯಮಂತ್ರಿಯಿಂದ ನಂದಿ ಕಂಬ ಪೂಜೆಯೊಡನೆ ಆನೆ ಮೇಲಿನ ಅಂಬಾರಿಯಲ್ಲಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಚಾಲನೆಗೊಂಡು ನಡೆಯುವ ಜಂಬೂ ಸವಾರಿಯ ಮಹಾ ಮೆರವಣಿಗೆಯಲ್ಲಂತೂ ಇಡೀ ನಾಡಿನ ಸಾಂಸ್ಕೃತಿಕ ಸಂಪತ್ತು ತೆರೆದುಕೊಳ್ಳುತ್ತದೆ. ಮಿಂಚಿ ಮೆರೆಯುತ್ತದೆ.
ನಂದೀಧ್ವಜ ಕುಣಿತ, ನಾದಸ್ವರ ವಾದನ, ಪ್ಯಾಲೇಸ್ ಬ್ಯಾಂಡ್, ಪೊಲೀಸ್ ಬ್ಯಾಂಡ್, ಆನೆ ಸಾರೋಟು, ಕುದುರೆ ಸಾರೋಟು, ಪಿರಂಗಿಗಳು, ಬೆಳ್ಳಿ ರಥ, ವಿವಿಧ ಪಲ್ಲಕ್ಕಿಗಳು, ಭಜನೆ ಮೇಳ, ಕರಗ, ವೀರಭದ್ರನ ಕುಣಿತ, ಕೀಲು ಕುದುರೆ, ಮಲ್ಲಗಂಬ, ವೇಷಗಾರರು, ಅಲಾವಿ ಕುಣಿತ, ವೀರಗಾಸೆ, ಝೂಂಜ್ ಪಥಕ್, ಗೊರವರ ಕುಣಿತ, ಜಗ್ಗಲಗೆ ಮೇಳ, ಹೆಜ್ಜೆ ಮೇಳ, ಗಾರುಡಿಗೊಂಬೆ, ಟಿಬೇಟಿಯನ್ ನೃತ್ಯ, ಚಿಟ್ ಮೇಳ, ಕೋಲಾಟ, ಮಲೆನಾಡು ಸುಗ್ಗಿಕುಣಿತ, ಕೊಡವ ಕುಣಿತ, ಪೂಜಾ ಕುಣಿತ, ಕಂಸಾಳೆ, ತಮಟೆ ವಾದನ, ಮರಗಾಲು ಕುಣಿತ, ಸೋಮನಕುಣಿತ, ಚಂಡೆ ಮೇಳ, ಹಾಲಕ್ಕಿ ಸುಗ್ಗಿ ಕುಣಿತ, ನಗಾರಿ ಮೇಳ, ಪಟಾ ಕುಣಿತ, ಕೊಂಬು ಕಹಳೆ, ಕರಡಿ ಮಜಲು, ಪಾಳೇಗಾರನ ವೇಷ, ದೊಣ್ಣೆವರಸೆ, ಕಂಗಿಲು ಕುಣಿತ, ಯಕ್ಷಗಾನ ವೇಷಧಾರಿಗಳು, ಜಡೆಕೋಲಾಟ, ಧ್ವಜ ಕುಣಿತ, ಚಿಟಿಕಿ ಭಜನೆ, ಒನಕೆ ನೃತ್ಯ, ಭೂತ ನೃತ್ಯ ಇವುಗಳೆಲ್ಲದರ ಮಹಾ ಸಂಗಮವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಪ್ರತಿನಿಧಿಸುವ 30ಕ್ಕೂ ಹೆಚ್ಚು ವೈವಿಧ್ಯಮಯ ಸ್ತಬ್ದಚಿತ್ರಗಳೊಡನೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗುವ ''''ಮೈಸೂರು ದಸರಾ'''' ಎಂಬ ಈ ಮಹಾ ಮೆರವಣಿಗೆ ಲಕ್ಷಾಂತರ ಜನರ ಕಣ್ಮನ ಸೆಳೆಯುತ್ತಾ ನಗರದಿಂದ ನಾಲ್ಕೈದು ಕಿ.ಮೀ. ದೂರವಿರುವ ಬನ್ನಿಮಂಟಪ ತಲುಪುತ್ತದೆ.
ಆಗ ಅಲ್ಲಿ ಪೊಲೀಸ್ ದಳದಿಂದ ಮನಮೋಹಕ, ಬಹುರೋಚಕವಾದ ಟಾರ್ಚ್‌ಲೈಟ್ ಪೆರೇಡ್ (ಪಂಜಿನ ಕವಾಯಿತು) ಆರಂಭವಾಗುತ್ತದೆ. ಹಿಂದೆ ಮಹಾರಾಜರು ಸೈನಿಕರಿಂದ ಧ್ವಜ ವಂದನೆ ಸ್ವೀಕರಿಸುತ್ತಿದ್ದ ಮಾದರಿಯಲ್ಲೇ ಈಗ ಟಾರ್ಚ್‌ಲೈಟ್ ಪೆರೇಡ್‌ನಲ್ಲಿ ರಾಜ್ಯದ ರಾಜ್ಯಪಾಲರು ಧ್ವಜವಂದನೆ ಗೌರವ ಸ್ವೀಕರಿಸುತ್ತಾರೆ. ಟಾರ್ಚ್‌ಲೈಟ್ ಪೆರೇಡ್‌ನ ಚಿತ್ತಾಕರ್ಷಕ ಸಾಹಸಮಯ ವರ್ಣ ದೃಶ್ಯಗಳಂತೂ ವಣಿಸಲಸದಳ. ಲೇಸರ್ ಪ್ರದರ್ಶನ, ಅಶ್ವಾರೋಹಿಗಳ ಸಾಹಸ ಕಸರತ್ತು, ಹೊನಲು ಬೆಳಕಿನ ಮಾಯಾಲೋಕ, ಬಣ್ಣ ಬಣ್ಣದ ಬಾಣ ಬಿರುಸುಗಳ ಯಕ್ಷಲೋಕಗಳೆಲ್ಲವೂ ಒಮ್ಮೆಗೇ ಸೃಷ್ಟಿಗೊಂಡು ಇವುಗಳೊಂದಿಗೆ ಹತ್ತು ದಿನಗಳ ಒಟ್ಟಾರೆ ದಸರಾ ಕಾರ್ಯಕ್ರಮಗಳಿಗೆ ಮಂಗಳ ಹಾಡಲಾಗುತ್ತದೆ. ಈ ದಸರಾ ಸಂದರ್ಭದಲ್ಲಿ ಮೈಸೂರು ನಗರದ ದೊಡ್ಡಕೆರೆ ಮೈದಾನದಲ್ಲಿ ಸೃಷ್ಟಿಗೊಳ್ಳುವ ‘ದಸರಾ ವಸ್ತು ಪ್ರದರ್ಶನ’ ಕೂಡ ಪ್ರವಾಸಿಗರನ್ನು ಆಕರ್ಷಿಸುವ ಕಿನ್ನರ ಲೋಕವಾಗಿ ಕಂಗೊಳಿಸುತ್ತದೆ.