
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು ಉತ್ತರ ಕನ್ನಡ ಜಿಲ್ಲೆ
ನಿಸ್ಸಂಶಯವಾಗಿ ಭಾರತವನ್ನು ವಿಶ್ವಗುರು ಮಾಡುವ ಸಾಮರ್ಥ್ಯ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಭಾರತದ ರಾಜಕಾರಣ ಹಳಿತಪ್ಪಿಹೋಗಿದ್ದು, ಇನ್ನೇನು ಸರಿಪಡಿಸಲಾಗದು ಎನ್ನುವ ಹೊತ್ತಲ್ಲಿ ನರೇಂದ್ರ ಮೋದಿ ಭಾರತದ ಚುಕ್ಕಾಣಿ ಹಿಡಿದು ದೇಶವನ್ನು ಮುನ್ನಡೆಸುತ್ತಿರುವ ರೀತಿಗೆ ನಾನೂ ಸೇರಿದಂತೆ ವಿಶ್ವವೇ ನಿಬ್ಬೆರಗಾಗಿದೆ. ಕಳೆದ 11 ವರ್ಷಗಳಿಂದ ನಿರಂತರ ಪ್ರಧಾನಿಯಾಗಿ ದೇಶವನ್ನ ಆಳಿದ ಮೋದಿ, ಅತಿಹೆಚ್ಚು ಕಾಲ ಆಡಳಿತ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇದು ಸಣ್ಣ ಸಾಧನೆಯಲ್ಲ, ಅದೂ ಭ್ರಷ್ಟಾಚಾರ, ಜಾತೀಯತೆ, ಸ್ವಜನಪಕ್ಷಪಾತ, ಅಧಿಕಾರದ ಲಾಲಸೆಯನ್ನೇ ತುಂಬಿಕೊಂಡಿರುವ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ, ನಾನೊಬ್ಬ ರಾಜಕಾರಣಿಯಾಗಿ ಹೇಳುವುದಾದರೆ ಇದು ಅಸಾಮಾನ್ಯ ಸಂತರೊಬ್ಬರಿಂದಲೇ ಸಾಧ್ಯ.
ಸದಾ ಹಸನ್ಮುಖಿ, ಸಮಚಿತ್ತದ ವ್ಯಕ್ತಿ: ನಿಜ, ಮೋದಿ ಒಬ್ಬ ಕೇವಲ ರಾಜಕಾರಣಿ ಅಲ್ಲ, ಅವರಲ್ಲೊಬ್ಬ ಸಂತನಿದ್ದಾನೆ. ಸಂತನಿಗಿರಬೇಕಾದ ಎಲ್ಲ ಲಕ್ಷಣಗಳು ಅವರಲ್ಲಿದೆ. ಆಸೆ ಇಲ್ಲದೆ ಬದುಕುವುದು ಸಂತನ ಮೊದಲ ಲಕ್ಷಣ. ಎಲ್ಲರನ್ನು ಸಮಭಾವದಲ್ಲಿ ನೋಡುವುದು, ಸದಾ ಹಸನ್ಮುಖಿ, ಸಮಚಿತ್ತದ ವ್ಯಕ್ತಿ ಸಂತನೇ ಅಲ್ಲವೇ? ಪರಿತ್ಯಾಗಿಯಾಗಿ ಕುಟುಂಬದಿಂದ ಹೊರಬಂದ ಮೋದಿ ದೇಶಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು. ಅಂದು ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮವನ್ನು ರಕ್ಷಿಸುವ ಸಲುವಾಗಿ ದೇಶ ಸುತ್ತಿದರು. ಅವರ ಹೋರಾಟವನ್ನೇ ಇಂದು ಮೋದಿ ಮುನ್ನಡೆಸಿಹರು. ವಿವೇಕಾನಂದರದು, ಆಧ್ಯಾತ್ಮದ ಮಾರ್ಗವಾದರೆ, ಮೋದಿ ಅವರದ್ದು ಅಭಿವೃದ್ಧಿಯ ಮಾರ್ಗ.
ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಿ ಮಾಡಿದ ಭಾಷಣ. ಜಗತ್ತನ್ನು ಇತ್ತ ತಿರುಗಿ ನೋಡುವಂತೆ ಮಾಡಿತು. ಭಾರತ ಒಂದು ಹಾವಾಡಿಗರ ದೇಶವೆಂದು ಆಡಿಕೊಂಡಿದ್ದ ಜನ ಭಾರತವನ್ನು ದಿಟ್ಟಿಸಿ ನೋಡುವಂತಾಯಿತು. ಗೊಡ್ಡು ಆಚರಣೆಗಳ ಧರ್ಮ ಎಂದು ಜರಿದಿದ್ದ ಪಶ್ಚಿಮಾತ್ಯರು ಸನಾತನ ಧರ್ಮದ ಶಕ್ತಿ ಕಂಡು ಬೆರಗಾಗುವಂತಾಯಿತು. ಭಾರತಕ್ಕೆ ವಿಶ್ವಗುರುತ್ವದ ಶಕ್ತಿ ಇದೆ. ನಮ್ಮ ಧರ್ಮ, ನೆಲಕ್ಕೆ ಜಗತ್ತನ್ನು ಒಂದಾಗಿಸುವ ಸಾಮರ್ಥ್ಯವಿದೆ ಎಂದು ಅಂದು ನರೇಂದ್ರ ಹೇಳಿದ್ದನ್ನು, ಇಂದಿನ ನರೇಂದ್ರ ಮಾಡುತ್ತಿದ್ದಾರೆ. ಅಭಿವೃದ್ಧಿಯ ಮೂಲಕ, ಭ್ರಾತೃತ್ವದ ಮೂಲಕ. ವಿವೇಕಾನಂದರ ಮೂರು ನಿಮಿಷದ ಭಾಷಣ ಭಾರತವನ್ನು ವಿಶ್ವಕ್ಕೆ ಪರಿಚಯಿಸಿದರೆ, ಇಂದಿನ ನರೇಂದ್ರ ಮೋದಿಯವರ ನೂರು ಪ್ರವಾಸ ವಿಶ್ವವನ್ನು ಭಾರತಕ್ಕೆ ಸೇರಿಸುತ್ತಿದೆ.
ವಿದೇಶಿ ಪ್ರವಾಸ ಹಿಂದೆ ರಾಜತಾಂತ್ರಿಕತೆ: ನಿಜ, ಪ್ರಧಾನಿ ಮೋದಿ ಹೆಚ್ಚು ವಿದೇಶ ಪ್ರವಾಸ ನಡೆಸಿದ್ದಾರೆ. ಅವರ ಈ ವಿದೇಶ ಪ್ರವಾಸವನ್ನು ವಿರೋಧ ಪಕ್ಷದ ಅನೇಕ ನಾಯಕರು ಟೀಕಿಸಿದ್ದಾರೆ ಕೂಡಾ. ಆದರೆ, ಮೋದಿ ಎಂದೂ ಮೋಜು, ಮಸ್ತಿಗಾಗಿ ಪ್ರವಾಸ ಹೋದವರಲ್ಲ, ಅವರ ಪ್ರವಾಸದ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಬಹುಶಃ ವಿರೋಧಿಗಳಿಗೆ ಪ್ರವಾಸದ ಹಿಂದಿನ ಉದ್ದೇಶ ಅರ್ಥವಾದಂತಿಲ್ಲ ಬಿಡಿ. ಮೋದಿ ಅವರ ಈ ಪ್ರವಾಸದ ಹಿಂದೆ ರಾಜತಾಂತ್ರಿಕ ನಡೆ ಇದೆ. ದೇಶವನ್ನು ಕಟ್ಟುವ ದೂರ ದೃಷ್ಟಿ ಇದೆ. ಅವರು ವಿಶ್ವದ ಬಹುತೇಕ ಎಲ್ಲ ಪ್ರಮುಖ `ರಾಷ್ಟ್ರಗಳಿಗೆ ಪ್ರವಾಸ ಮಾಡಿದ್ದಾರೆ.
ಹೋಗಿ ಎಂದೂ ಬರಿಗೈಲಿ ಬಂದಿಲ್ಲ, ಅಲ್ಲಿನ ತಂತ್ರಜ್ಞಾನ, ಮಾಹಿತಿ, ಆರೋಗ್ಯ, ರಕ್ಷಣೆಗೆ ಸಂಬಂಧಿಸಿ ಸಾಕಷ್ಟು ಅನುದಾನವನ್ನು ಹೊತ್ತು ಬಂದಿದ್ದಾರೆ. ಭಾರತದ ಮಾರುಕಟ್ಟೆಯನ್ನು ವಿಶ್ವದೆದುರು ತೆರೆದಿಟ್ಟು, ದೇಶದಲ್ಲಿ ಹೂಡಿಕೆಗೆ ಕಾರಣವಾಗಿದ್ದಾರೆ. ಇದು ರಾಷ್ಟ್ರ ಆರ್ಥಿಕವಾಗಿ ಬೆಳೆಯಲು ಮುಖ್ಯ ಕಾರಣವಾಗಿದ್ದು, ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯ ರಾಷ್ಟ್ರವನ್ನಾಗಿಸುವತ್ತ ಮೋದಿ ಹೆಜ್ಜೆ ಇಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದು ಜಗತ್ತಿನ ದೊಡ್ಡಣ್ಣನೇ ಭಾರತದತ್ತ ಓಡಿ ಬರವಂತೆ ಮಾಡಿರುವುದು, ಮೋದಿ ಅವರ ರಾಜತಾಂತ್ರಿಕ ತಾಕತ್ತು. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರವ ಸಮ್ಮಾನಗಳು ನಮ್ಮ ಕಣ್ಣೆದುರಲ್ಲೇ ಇದ್ದು, ಇದನ್ನು ವಿರೋಧಿಗಳು ಒಪ್ಪಿಕೊಳ್ಳಬೇಕಿದೆ ಅಷ್ಟೆ.
ಅಷ್ಟಕ್ಕೂ ಮೋದಿ ವಿದೇಶಗಳಿಗೆ ಹೋಗಿ ಬರುವಾಗ ಕೇವಲ ಭಾಷಣ ಮಾಡುತ್ತಿಲ್ಲ, ಅಲ್ಲಿನ ಮೂಲ ನಿವಾಸಿಗಳೊಂದಿಗೆ ಬೆರೆಯುವ ಅವರು ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಆಹಾರವನ್ನೂ ವಿದೇಶಿಗರಿಗೆ ಆ ಮೂಲಕ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಸ್ವತಃ ದೇಶಿ ಉಡುಗೆಯಲ್ಲಿ ಸದಾ ಶಿಸ್ತು ಬದ್ಧವಾಗಿ ಕಂಗೊಳಿಸುವ ಮೋದಿ ಭಾರತೀಯತೆಯನ್ನು ಹರಡುತ್ತಿದ್ದಾರೆ. ಅವರು ಕೊಡುವ ಉಡುಗೊರೆಯಾದರೂ ಏನು? ಭಗವದ್ಗೀತೆ, ದೇಶೀಯತೆ ಸಾರುವ ವಸ್ತುಗಳೇ ಆಗಿವೆ. ಆ ಮೂಲಕ ಭಾರತೀಯತೆ ಸಾರುವ ಮೋದಿಯನ್ನು ಸಂತನೆಂದು ಕರೆಯಲು ನನಗೂ ಹೆಮ್ಮೆ ಎನಿಸುತ್ತಿದೆ.
ಧರ್ಮ ಚಿಂತನೆಯೊಂದಿಗೆ ದೈವ ಭಕ್ತಿ ಸಹಾ ಸಂತನ ಇನ್ನೊಂದು ಲಕ್ಷಣ. ಮೋದಿ ಅವರಲ್ಲಿರುವ ಧರ್ಮ ಶ್ರದ್ಧೆ, ದೈವಭಕ್ತಿಯನ್ನು ನಾವು ನೀವೆಲ್ಲ ಕಂಡಿದ್ದೇವೆ. ಪ್ರತಿನಿತ್ಯ ಧ್ಯಾನ ಯೋಗ ಮಾಡುವ ಅವರು, ತಮ್ಮೆಲ್ಲ ಕಾರ್ಯವನ್ನು ಸಮರ್ಪಣಾ ಭಾವದಿಂದಲೇ ಮಾಡುತ್ತಾರೆ. ದೈವ ಭಕ್ತರಾದ ಮೋದಿ ಉಪವಾಸದಂತಹ ವ್ರತಾಚರಣೆಯನ್ನೂ ಪಾಲಿಸುತ್ತಾರೆಂದರೆ ಸಣ್ಣ ಸಂಗತಿಯಲ್ಲ, ಅದು ಅವರ ದೈವಭಕ್ತಿಗೆ ಸಾಕ್ಷಿ. ಸ್ವಾರ್ಥದ ಲವಲೇಶವೂ ಇಲ್ಲದೆ ಮಾಡುವ ಅವರ ಆ ಅದಮ್ಯ ಚೈತನ್ಯಕ್ಕೆ ಬಹುಶಃ ಆಧ್ಯಾತ್ಮವೇ ಶಕ್ತಿ ಇರಬಹುದು. ಸಾತ್ವಿಕ ಆಹಾರ, ವಿಚಾರದಿಂದ ಕಂಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ದೇಶಭಕ್ತಿ ಆವರಿಸಿಕೊಂಡಿದೆ.
ನಿಜ, ಮೋದಿ ಒಬ್ಬ ರಾಜಕೀಯ ಸಂತ. ಅವರ ಜೀವನ ನಮ್ಮಂಥ ರಾಜಕಾರಣಿಗಳಿಗೆ ಮಾದರಿ, ಎಬಿಎಪಿ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡ ನಾನು ಮುಂದೆ ಬಿಜೆಪಿಯಿಂದ 6 ಬಾರಿ ಶಾಸಕನಾಗಿ ರಾಜ್ಯ ರಾಜಕಾರಣದಲ್ಲಿ ಕೆಲಸ ಮಾಡಿದ್ದೇನೆ. ಸಚಿವನಾಗಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ ನಾನು ಇಂತಹಾ ಅಪರೂಪದ ರಾಜಕಾರಣಿಯನ್ನು ಕಂಡಿಲ್ಲ, ಅವರ ಬದ್ಧತೆ, ಶಿಸ್ತು, ಸಂಯಮ, ಜನಪರ ಕಾಳಜಿ ಅಷ್ಟೇಕೆ, ಸಂಸತ್ ಸದಸ್ಯರೊಂದಿಗೆ ಅವರು ಹೊಂದಿರುವ ಸಂಬಂಧಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನನಗೆ ಅವರೊಬ್ಬ ಗುರುವಾಗಿ ಕಾಣುತ್ತಾರೆ. ಮೊದಲಬಾರಿಗೆ ಸಂಸತ್ ಭವನ ಪ್ರವೇಶಿಸುವಾಗ ಮಂಡಿಯೂರಿ ನಮಿಸಿರುವುದು ನಮ್ಮ ಸಂವಿಧಾನಕ್ಕೆ ನೀಡಿದ ಗೌರವವಾಗಿದೆ. ಇದು ಸಂತನಿಂದ ಮಾತ್ರ ಸಾಧ್ಯ ಅಲ್ಲವೇ?
ಅಸಾಧ್ಯದ ಸಾಧನೆ: ಭಾರತದಂತಹ ವೈವಿಧ್ಯಮಯ ಸಂಸ್ಕೃತಿಯ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ರಾಜಕಾರಣಿಗೆ ಇರಬೇಕಾದ ಎಲ್ಲ ಕ್ಷಣಗಳನ್ನು ಮೋದಿಯಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನಾಯಕನಿಗೆ ಇರುವ ಲಕ್ಷಣವೂ ಮೋದಿಯವರಲ್ಲಿದೆ. ಅನುಭವವೂ ಇದೆ. ಇದೇ ಕಾರಣಕ್ಕೆ ಭಾರತ ಇಂದು ಸಮರ್ಥವಾಗಿ ಮುನ್ನಡೆಯುತ್ತಿದೆ. 2001ರಿಂದ ಆರಂಭವಾದ ಅವರ ರಾಜಕೀಯ ಜೀವನ ದೇಶಕ್ಕೆ ಎಲ್ಲಿಲ್ಲದ ಕೊಡುಗೆ ನೀಡಿದೆ. ಮೊದಲು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೋದಿ, 2014ರಲ್ಲಿ ನಮ್ಮೆಲ್ಲರ ಪ್ರಧಾನಿಯಾಗಿ ಕಾರ್ಯ ಆರಂಭಿಸಿದರು. ನಂತರ ನಡೆದಿದ್ದಲ್ಲವೂ ಅಚ್ಚರಿಯೆ, ಯಾವುದು ಅಸಾಧ್ಯ ಎಂದೆಣಿಸಿದ್ದೆವೋ ಅದನ್ನೆಲ್ಲ ಮಾಡಿ ತೋರಿಸಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಭದ್ರತೆಗೆ ಅವರು ನೀಡಿದ ಕೊಡುಗೆಯನ್ನು ಯಾರೂ ಅಲ್ಲ ಗಳೆಯುವಂತಿಲ್ಲ, ದೇಶದ ಅಖಂಡತೆಯನ್ನು ಎತ್ತಿ ಹಿಡಿಯಲು ಸೇನೆಯ ಬಲ ವರ್ಧನೆಗೆ ಮೊದಲ ಆದ್ಯತೆ ನೀಡಿದ್ದಾರೆ. ಪರಿಣಾಮ ಭಾರತೀಯ ಸೇನೆ ಇಂದು ವಿಶ್ವದ ಬಲಾಡ್ಯ ರಾಷ್ಟ್ರಗಳ ಸೇನಾ ಸಾಲಿಗೆ ಸೇರಿದೆ. ಆತ್ಮ ನಿರ್ಭರ ಭಾರತದಡಿ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತಿರುವುದು ಮೋದಿ ಅವರ ರಾಷ್ಟ್ರ ಮೊದಲೆನ್ನುವ ನೀತಿಗೆ ಸಾಕ್ಷಿಯಾಗಿದೆ. ದೇಶದ ಜತೆ ಗಡಿ ಹಂಚಿಕೊಂಡಿರುವ ಚೀನಾ ಮತ್ತು ಪಾಕಿಸ್ಥಾನ ಮೊದಲಿನಿಂದಲೂ ಗಡಿ ವಿಷಯದಲ್ಲಿ ತಂಟೆ ಮಾಡುತ್ತಲೇ ಬಂದಿವೆ.
ಅದರಲ್ಲೂ ಶತ್ರು ರಾಷ್ಟ್ರ ಪಾಕಿಸ್ತಾನ ದಿನ ಬೆಳಗಾದರೆ ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸದಲ್ಲಿ ನಿರತವಾಗಿತ್ತು. ಆದು ದೇಶದ ನಿದ್ದೆ ಗೆಡಿಸಿತ್ತು ಕೂಡಾ. ಪ್ರಧಾನಿಯಾದ ಬಳಿಕ ಮೋದಿ ಮಾಡಿದ ಮಹತ್ತರ ಸಾಧನೆಗಳಲ್ಲಿ ಶಾಂತಿ ಸ್ಥಾಪನೆಯೂ ಒಂದು, ಇಂದು ದೇಶದ ಶಿಖರ ಶಾಂತವಾಗಿದೆ. ಆರ್ಟಿಕಲ್ 370ಅನ್ನು ರದ್ದು ಗೊಳಿಸಿದ ಮೋದಿ ಸರ್ಕಾರ ಐತಿಹಾಸಿಕ ಸಾಧನೆಗೆ ಕಾರಣವಾಗಿದೆ. ಅಶಾಂತಿಯ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ. ಭಾರತೀಯ ಜನತಾ ಪಕ್ಷದ ಹಲವು ವರ್ಷಗಳ ಆಶ್ವಾಸನೆ ಮೋದಿ ಕಾಲದಲ್ಲಿ ನೆರವೇರಿದ್ದು, ಸಂಕಲ್ಪ ಶಕ್ತಿಯ ಪ್ರತೀಕವಾಗಿದೆ. ಮೋದಿ ನಮ್ಮಂತ ರಾಜಕಾರಣಿಗಳಿಗೆ ಸಂಕಲ್ಪ ಶಕ್ತಿಯಾಗಿದ್ದಾರೆ.
ಅಷ್ಟೇಕೆ ಭಾರತದ ಆತ್ಮವೇ ಆಗಿರುವ ರಾಮ ಮಂದಿರ ನಿರ್ಮಾಣ ಸಹಾ ಮೋದಿ ಸರ್ಕಾರದ ಬಹುದೊಡ್ಡ ಸಾಧನೆಗಳಲ್ಲಿ ಒಂದು. ಹಲವು ದಶಕಗಳಿಂದ ಹಿಂದೂ ಪರ ಸಂಘಟನೆಗಳು, ಸಂಘ ಪರಿವಾರ ನಡೆಸಿಕೊಂಡು ಬಂದ ಹೋರಾಟ ಫಲ ಕಂಡಿದ್ದು ಮೋದಿ ಅವರ ಕಾಲದಲ್ಲಿ, ಇಲ್ಲಿ ದೇಶ ಭಕ್ತರ, ರಾಮ ಭಕ್ತರ ಶ್ರಮ, ಬಲಿದಾನ ಇದ್ದೇ ಇದೆ. ಆದರೆ ಮೋದಿಯಂತಹಾ ಸಂಕಲ್ಪ ಶಕ್ತಿಯ ಮಹಾತ್ಮಾರಿಂದ ಮಾತ್ರ ಶತಮಾನದ ಕಾರ್ಯ ಆಗುವುದು ಎನ್ನುವುದು ನನ್ನ ನಂಬಿಕೆ. ರಾಮನ ಪಟ್ಟಾಭಿಷೇಕಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ ಆ ಧನ್ಯತೆ ನಿಮ್ಮೆಲ್ಲರಂತೆ ನನ್ನಲ್ಲೂ ಇದೆ. ಮೋದಿ ಅವರ 75ನೇ ವರ್ಷದ ಜನ್ಮದಿನದ ಈ ಸಂದರ್ಭದಲ್ಲಿ ಇದು ಸ್ಮರಣೀಯವೇ ಸರಿ.
ನಮಗೆಲ್ಲ ಮಾದರಿ ರಾಜಕಾರಣಿ: ಮೋದಿ ಕೇವಲ ಪ್ರಧಾನಿಯಲ್ಲ, ಅವರು ನಮಗೆಲ್ಲ ಮಾದರಿ ವ್ಯಕ್ತಿ, ರಾಜಕಾರಣೆ, ಸ್ವತಃ ಶುದ್ದ ಹಸ್ತರಾಗಿರುವ ಅವರು, ಭ್ರಷ್ಟಾಚಾರವನ್ನು ಕೇಂದ್ರ ಸರಕಾರದಿಂದ ಸಂಪೂರ್ಣ ದೂರಮಾಡಿದ್ದಾರೆ. ಅವರ ದಶಕದ ಆಡಳಿತದಲ್ಲಿ ಒಂದೇ ಒಂದು ಆರೋಪವೂ ಅವರ ಮೇಲೆ ಕೇಳಿಬಂದಿಲ್ಲ. ಇದು ಸಾಧ್ಯವಾಗುವುದೂ ಒಬ್ಬ ಪ್ರಾಮಾಣಿಕ ವ್ಯಕ್ತಿಯಿಂದಲೇ, ಆ ಪರಿಪ್ರಮಾಣದ ಪ್ರಾಮಾಣಿಕತೆ, ನಿಷ್ಠೆ, ಶುದ್ಧತೆ, ಬದ್ಧತೆ ಬೇಕಲ್ಲವೇ. ಅದನ್ನು ಮೋದಿ ಸಾಧಿಸಿದ್ದಾರೆ. ಅದರಷ್ಟೇ ಅಲ್ಲ, ಅವರ ಸಂಪುಟದಲ್ಲೂ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದಂತೆ ನೋಡಿಕೊಂಡಿದ್ದಾರೆ. ಜತೆ ಜತೆಗೆ ಆ ಶುದ್ಧತೆಯ ಭಾಗವಾಗಿ ಕೆಲಸ ಮಾಡಿದ ಧನ್ಯತೆಯೂ ನನ್ನದಾಗಿದೆ. ಅಂದ ಹಾಗೇ ದಿನ ನಾ ಕಾವೂಂಗಾ, ನ ಕಾನೇದೂಂಗಾ ಇದು ಮೋದಿಯವರ ಇನ್ನೊಂದು ಮಂತ್ರ, ಸದಾ ಉತ್ಸಾಹದಲ್ಲೇ ಕೆಲಸ ಮಾಡುವ ನಮ್ಮ ಪ್ರಧಾನಿಗೆ ಈಗ 75ರ ವಸಂತ ಎನ್ನಲಾಗದು. ಇಳಿವಯಸ್ಸಿನ ರಾಜಕಾರಣಿಗಳನ್ನೂ ನಾಚಿಸುವ ಚೈತನ್ಯ ಅವರದ್ದು, ಕಳೆದ ದಶಕದ ಆಡಳಿತದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ಅವರಿಗೆ ನಮೋ ಎನ್ನಲೇ ಬೇಕು. ನನಗೆ ಮೋದಿ ಅವರನ್ನು ಪ್ರತಿಬಾರಿ ನೋಡಿದಾಗಲೂ ಅವರಿಂದ ನಾವು ಕಲಿಯುವುದು ಸಾಕಷ್ಟಿದೆ ಎನ್ನುವ ಭಾವವೇ ಬರುವುದು. ಅದರಲ್ಲಿ ಅವರ ಈ ಚೈತನ್ಯವೂ ಒಂದು.
ಸ್ವಚ್ಛತೆಗೆ ಎಲ್ಲಿಲ್ಲದ ಮಹತ್ವ ನೀಡುವ ಅವರು, ಸ್ವತಃ ಪೊರಕೆ ಹಿಡಿದರು. ಅದೂ ದೇಶಕ್ಕಾಗಿ, ಸದ್ಗುಣ ಸಂಪನ್ನ ಮಗನಿಗೆ ತಾಯಿಯ ಮಾನ ಎಲ್ಲಕ್ಕಿಂತ ಮೊದಲಾಗುತ್ತದೆ. ಮೋದಿ ಮಾಡಿದ್ದು ಅದನ್ನೇ ಭಾರತ ಮಾತೆಯೇ ತಾಯಿ ಎಂದು ಭಾವಿಸಿದ್ದ ಅವರು, ಪೊರಕೆ ಹಿಡಿದರು, ಸ್ವಚ್ಛ ಭಾರತ್ ಅಭಿಯಾನದ ಮೂಲಕ ದೇಶದಲ್ಲಿ ಸ್ವಚ್ಛತಾ ಕ್ರಾಂತಿ ಮಾಡಿದರು. 10.36 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದ್ದು ಅವರ ಮಹತ್ತರ ಸಾಧನೆಯಲ್ಲೊಂದು. ದೇಶದ ಮಾನ ಸ್ವಚ್ಛತೆಯಲ್ಲಿದೆ ಎನ್ನುವ ಸಂದೇಶವನ್ನ ಮೋದಿ ದೇಶಕ್ಕೆ ಸಾರಿದರು. ಮೋದಿ ಸ್ವಚ್ಛತೆಯ ಶಿಕ್ಷಕ, ಅಷ್ಟೇಕೆ ಅವರ ದಶಕದ ಆಡಳಿತದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಬಡವರಿಗೆ ಮನೆ, ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಅಡುಗೆ ಅನಿಲ, ಜಲ್ ಜೀವನ್ ಮೂಲಕ ಮನೆ ಮನೆಗೆ ನೀರು, ಅಯುಷ್ಮಾನ್ ಮೂಲಕ ಬಡವರಿಗೆ ಆರೋಗ್ಯ, ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ವಷಕ್ಕೆ ₹6000 ನೀಡುವ ಮೂಲಕ ರೈತರ ಬಲ ಹೆಚ್ಚಿಸಿದ್ದಾರೆ. ಇಷ್ಟಕ್ಕೇ ಮುಗಿದಿಲ್ಲ. ವಿಶ್ವವೇ ಕರೋನಾದಂತಹಾ ಮಾರಿಯಲ್ಲಿ ಸಿಲುಕಿದ್ದಾಗ ಜಗತ್ತಿಗೇ ವ್ಯಾಕ್ಸಿನ್ ನೀಡುವ ಮೂಲಕ ಜಗತ್ತಿಗೇ ವೈದ್ಯರಾದರು.
ಮಹಿಳಾ ಶಕ್ತಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಮೋದಿ ಅವರ ನಡೆ ಸ್ಮರಣೀಯ. ಹಲವು ವರ್ಷಗಳಿಂದ ಉಳಿದಿದ್ದ ಶೇ.33 ಮೀಸಲಾತಿಯನ್ನು ಮೋದಿ ಜಾರಿಗೊಳಿಸಿದ್ದು, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಹೆಣ್ಣು ಮಕ್ಕಳ ರಕ್ಷಣಗೆ ಕಾರಣವಾಗಿದೆ. ದೂರದೃಷ್ಟಿಯ ಭಾರತವನ್ನು ಅವರು ಮಾತ್ರ ಊಹಿಸಬಲ್ಲರು. ವಿಕಸಿತ ಭಾರತ ಅವರ ಕನಸು. ಮೆಕ್ ಇನ್ ಇಂಡಿಯಾ, ಜನ್ ಧನ್ ಹೀಗೆ ಹಲವು ಯೋಜನೆಗಳು ಅವರ ವಿಕಸಿತ ಭಾರತದ ಕನಸಿಗೆ ಬುನಾದಿಯಾಗಿವೆ. ಮೋದಿ ಜನಪರ ನಾಯಕ ಎನ್ನಲು ಇನ್ನೇನು ಬೇಕು?
ಮೋದಿ ಅವರ ರಹಸ್ಯ: ಮೋದಿ ಯೊಳಗೊಬ್ಬ ಸ್ನೇಹಿತನಿದ್ದಾನೆ. ಸದಾ ನಗುತ್ತಲೇ ಮಾತನಾಡುವ ಮೋದಿ, ವಿರೋಧಿಯನ್ನೂ ಸ್ನೇಹದಿಂದಲೇ ಮಾತನಾಡಿಸುವ ನಿಗರ್ವಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ನಿಷ್ಣಾತರು. ಇದೇ ಅವರ ರಾಜತಾಂತ್ರಿಕ ನಡೆಯ ಯಶಸ್ಸಿನ ಗುಟ್ಟು ಎಂದರೆ ತಪ್ಪಾಗದು. ರಷ್ಯಾ, ಅಮೆರಿಕ, ಜಪಾನ್, ಇಸ್ರೇಲ್ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಇಂದು ಮೋದಿಯ ಪರಮಾಪ್ತರ ಸಾಲಿನಲ್ಲಿ ನಿಂತಿವೆ. ಅಷ್ಟೇಕೆ ಪಕ್ಕದ ಚೀನಾ ಸಹಾ ಮೊನ್ನೆ ಮೊನ್ನೆ ಮೋದಿ ಅವರ ಕೈ ಕುಲುಕಿದ್ದು, ಮೋದಿ ಅವರ ಸ್ನೇಹ ಸಂಪಾನೆಯ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಇದು ಅಮೆರಿಕವನ್ನು ಬಗ್ಗು ಬಡಿಯಲು ಹಣೆದ ರಾಜತಾಂತ್ರಿಕ ನಡೆಯೇ ಆದರೂ ಅದು ಸಾಧ್ಯವಾಗಿದ್ದು, ಮೋದಿ ಅವರ ಸ್ನೇಹ ಭಾವದಿಂದ ಎನ್ನುವುದು ನನ್ನ ಭಾವನೆ. ಭಾರತ ಇಂದು ಜಗತ್ತಿನ ಸ್ನೇಹಿತನಾಗಿದ್ದು ಮೋದಿ ಅವರಿಂದಲೇ ಎನ್ನುವುದನ್ನ ಒಪ್ಪಲೇ ಬೇಕು.
ವಸುದೈವ ಕುಟುಂಬಕಂ ಎನ್ನುವುದು ಭಾರತದ ನೀತಿ. ಅದರಂತೆ ಮೋದಿ ಸಾಗುತ್ತಿದ್ದು, ಭಾರತದೊಂದಿಗೆ ಒಂದೊಂದೇ ರಾಷ್ಟ್ರವನ್ನು ಸೇರಿಸುತ್ತ, ವಿಶ್ವನಾಯಕಾರಾಗಿ ಬೆಳೆದಿಹರು. ಇಂದು ಮೋದಿ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ವಿಶ್ವ ಅವರ ವ್ಯಾಪ್ತಿಯಾಗಿದೆ. ಮೋದಿ ತಮ್ಮ ಅವಧಿಯಲ್ಲಿ ದೇಶಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರಿಂದ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಬದಲಾಗಿದೆ. ರಾಷ್ಟ್ರಭಕ್ತಿ ಹೆಚ್ಚಿದೆ. ಪ್ರಜಾಪ್ರಭುತ್ವಕ್ಕೆ ಬಲ ಬಂದಿದೆ. ಅವರು ಕೇವಲ ರಾಜಕಾರಣಿಯಾಗಿ ದೇಶವನ್ನು ಮುನ್ನಡೆಸುತ್ತಿಲ್ಲ. ಅವರೇ ಹೇಳಿಕೊಂಡಂತೆ ಅವರು ರಾಷ್ಟ್ರದ ಚೌಕೀದಾರ. ರಾಷ್ಟ್ರ ರಕ್ಷಕ, ಧರ್ಮ ಸಂರಕ್ಷಕ, ಅವರನ್ನ ಒಬ್ಬ ರಾಜಕಾರಣಿಯಾಗಿ ನೋಡದ ದೇಶದ ಮಹಾನ್ ನಾಯಕನಾಗಿ ನೋಡುವುದು ಲೇಸೆನ್ನುವುದು ನನ್ನ ಭಾವನೆ.
ಅಂದಹಾಗೆ ರಾಜ್ಯ ರಾಜಕಾರಣ ಸೇರಿದಂತೆ ಹಾಲಿ ರಾಷ್ಟ್ರ ರಾಜಕಾರಣದಲ್ಲಿ ಮೋದಿ ಅವರೊಂದಿಗೆ ಸಾಕಷ್ಟು ಒಡನಾಟವನ್ನ ಹೊಂದಿರುವ ನಾನು ಅವರ ಸರ್ಕಾರದ ಸಂಸದನಾಗಿದ್ದೇನೆ ಎನ್ನುವ ಹೆಮ್ಮೆ ನನ್ನದು. ಮೊದಲಬಾರಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸುವಾಗ ಗುಜರಾತ್‌ನಿಂದ ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ ಮೋದಿ ನನ್ನ ಗೆಲುವಿನ ಓಟಕ್ಕೆ ಸಹಕರಿಸಿದ್ದರು. ಈಗ ಮೊದಲಬಾರಿಗೆ ಸಂಸದನಾಗಿ ಕಣಕ್ಕಿಳಿದಾಗಲೂ ದೆಹಲಿಯಂದ ಬಂದ ಮೋದಿ ನನ್ನ ಗೆಲುವಿನ ಭಾಗವಾಗಿದ್ದಾರೆ. ರಾಜಕೀಯ ಬದುಕಿನಲ್ಲಿ ಅವರೊಂದಿಗೆ ಹೆಜ್ಜೆಹಾಕುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ. ದೇವರು ಅವರಿಗೆ ಇನ್ನಷ್ಟು ಆರೋಗ್ಯ, ಆಯಸ್ಸು ನೀಡಲಿ, ಅವರ ನೇತೃತ್ವದಲ್ಲಿ ಭಾರತ ಇನ್ನಷ್ಟು ಬೆಳೆಯಲಿ. ಬೆಳಗಲಿ.