ಮೃತ್ಯುಮಂಚದಲ್ಲೂ ಸಾಹಿತ್ಯವನ್ನೇ ಧ್ಯಾನಿಸುತ್ತಿದ್ದ ಕವಿಮಿತ್ರ: ಗಾಯಕ ಕೆ.ಮುದ್ದುಕೃಷ್ಣ

Kannadaprabha News   | Kannada Prabha
Published : May 31, 2025, 06:19 AM IST
HS Venkateshamurthy, K Muddukrishna

ಸಾರಾಂಶ

ಇದು ನನ್ನ ಬದುಕಿನ ಅತ್ಯಂತ ದುರಂತದ ಕ್ಷಣ. ನಾಡು ಕಂಡ ಅಪ್ರತಿಮ ಕವಿ, ಸಾಹಿತಿ, ಗೀತರಚನಕಾರ, ವೆಂಕಟೇಶ್‌ ಮೂರ್ತಿ ಅಗಲಿಕೆ ನಮಗೆಲ್ಲ ಭರಿಸಲಾರದ ನಷ್ಟ. ಹೆಚ್‌ಎಸ್‌ವಿ ಅವರು ನನಗೆ 40 ವರ್ಷಗಳ ಪರಿಚಯ.

ಇದು ನನ್ನ ಬದುಕಿನ ಅತ್ಯಂತ ದುರಂತದ ಕ್ಷಣ. ನಾಡು ಕಂಡ ಅಪ್ರತಿಮ ಕವಿ, ಸಾಹಿತಿ, ಗೀತರಚನಕಾರ, ಬುದ್ಧ ಚರಣದಂಥಾ ಮಹಾಗ್ರಂಥ ಕೊಟ್ಟ ಹೆಚ್‌ ಎಸ್‌ ವೆಂಕಟೇಶ್‌ ಮೂರ್ತಿ ಅಗಲಿಕೆ ನಮಗೆಲ್ಲ ಭರಿಸಲಾರದ ನಷ್ಟ. ಹೆಚ್‌ಎಸ್‌ವಿ ಅವರು ನನಗೆ 40 ವರ್ಷಗಳ ಪರಿಚಯ. ಮೈಸೂರು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ, ಸಿ ಅಶ್ವತ್ಥ, ಹೆಚ್‌ ಕೆ ನಾರಾಯಣ್‌, ನಾನು, ರತ್ನಮಾಲಾ ಪ್ರಕಾಶ್‌, ಮಾಲತಿ ಶರ್ಮಾ, ಪುತ್ತೂರು ನರಸಿಂಹ ನಾಯಕ್‌ ಎಲ್ಲ ಹೆಚ್ಚು ಕಡಿಮೆ ಹೆಚ್‌ಎಸ್‌ವಿ ಅವರ ಗೀತೆಗಳನ್ನೇ ಹಾಡುತ್ತಾ ಬಂದವರು. 1991 ರಲ್ಲಿ ವೆಂಕಟೇಶ್‌ ಮೂರ್ತಿ, ಜಿ ಎಸ್‌ ಶಿವರುದ್ರಪ್ಪ, ಕಣವಿ, ಬಿ ಆರ್‌ ಲಕ್ಷ್ಮಣ್‌ ರಾವ್‌, ವ್ಯಾಸರಾವ್‌, ಎನ್‌ ಎಸ್‌ ಲಕ್ಷ್ಮೀನಾರಾಯಣ್‌ ಭಟ್ಟ, ನಾನು ಹಾಗೂ ಸಿ ಅಶ್ವತ್ಥ, ‘ಧ್ವನಿ’ ಅಂತ ಒಂದು ಸಂಸ್ಥೆ ಮಾಡಿದೆವು.

ಆ ಸಂಸ್ಥೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕವಿ, ಗಾಯಕರನ್ನು ಕರೆದುಕೊಂಡು ಹೋಗಿದ್ದೆವು. ಈ ಮೂಲಕ ಸುಗಮಸಂಗೀತವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಕೆಲಸ ಮಾಡಿದ್ದೆವು. ನನ್ನ ಜೀವದ ಗೆಳೆಯ ಅಶ್ವತ್ಥ್‌ ಹಾಗೂ ನಾನು ಇದರ ಮುಂಚೂಣಿಯಲ್ಲಿದ್ದೆವು. ಆಗ ನಮ್ಮ ಒಡನಾಡಿಗಳಾಗಿದ್ದವರು ಹೆಚ್‌ಎಸ್‌ವಿ. ‘ಧ್ವನಿ’ ಸಂಸ್ಥೆಯ ಬಳಿಕ 2003ರಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಸ್ಥಾಪನೆ ಮಾಡಿದೆ. ಅದಕ್ಕೆ ಹೆಚ್‌ಎಸ್‌ವಿ ಪ್ರೀತಿ, ಸಹಕಾರ ಇತ್ತು. ಹೆಚ್‌ಎಸ್‌ವಿ ಬಹಳ ಸೌಮ್ಯ ಸ್ವಭಾವದವರು. ಅಂಥವರು ಕಾವ್ಯ ಲೋಕದಲ್ಲಿ ಕಾಣಸಿಗುವುದು ಅಪರೂಪ. ಅವರು ಮುನಿಸಿಕೊಂಡದ್ದು, ಗಂಟುಮೋರೆ ಹಾಕಿದ್ದನ್ನು ನಾನು ನೋಡಿಲ್ಲ. ನನಗೂ ಅವರಿಗೂ ಆಪ್ತ ಸಂಬಂಧ. ಅವರ ಪತ್ನಿ ಮೃತಪಟ್ಟ ಸಂದರ್ಭ ಆಸ್ಪತ್ರೆಯ ಮೂಲೆಯಲ್ಲಿ ಒಂಟಿಯಾಗಿ ನಿಂತಿದ್ದರು.

ಮನೆಯವರೆಲ್ಲ ಪಾರ್ಥಿವ ಶರೀರವನ್ನು ಸಾಗಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅವರ ಮುಖದಲ್ಲಿ ನೋವು, ಯಾತನೆ ಎದ್ದು ಕಾಣುತ್ತಿತ್ತು. ಆಗ ಅವರೊಂದಿಗೆ ನಿಂತು ಧೈರ್ಯ ತುಂಬಿದ್ದೆ. ಆ ಬಳಿಕ ನಮ್ಮ ನಡುವೆ ನಿರಂತರ ಸಂಪರ್ಕವಿತ್ತು. ಅದೊಂದು ರೀತಿಯಲ್ಲಿ ಗಾಯನ ಅಂಟಿನಂತೆ ನಮ್ಮಿಬ್ಬರನ್ನೂ ಬೆಸೆದಿತ್ತು. ಅವರು ನಾನು ಹಾಡಲಿ ಅಂತ ಬರೆದ ಗೀತೆ - ಯಾರಿವಳ್ಯಾರಿವಳ್ ಯಾರಿವಳು ಕುಡಿಗಣ್ಣಲ್ಲೆ ಮಿಂಚನು ಈಯುವಳು. ಇನ್ನೊಂದು - ಆಹಾ ಪ್ರೀತಿ ಅದರ ರೀತಿ ಯಾರು ಬಲ್ಲರು, ನೀರಿನಲ್ಲಿ ಇರುವ ಮೀನು ನೀರನರಿಯದು, ತನ್ನ ಒಳಗೆ ಇರುವ ಶಿಲ್ಪ ಶಿಲೆಗೆ ಹೊಳೆಯದು, ತಾಪವೆಂದರೇನು ಎಂದು ಬೆಂಕಿಯರಿಯದು, ಮೌನದಾಳವನ್ನು ಮಾತು ತುಂಬಲಾರದು. ಭಾವೈಕ್ಯತೆ ಬಗ್ಗೆ ‘ಐದು ಬೆರಳು ಕೂಡಿ ಒಂದು ಮುಷ್ಠಿಯು’, ‘ಎಲೆಗಳು ನೂರಾರು’ ಈ ಥರದ ಹಾಡುಗಳನ್ನು ಕೊಟ್ಟಿದ್ದಾರೆ.

ಜೊತೆಗೆ ಕೃಷ್ಣನ ಬಗ್ಗೆ ಅನೇಕ ಹಾಡನ್ನು ರಚಿಸಿದ್ದಾರೆ. ಕಳೆದ ಶುಕ್ರವಾರ ಅವರು ಆಸ್ಪತ್ರೆಗೆ ದಾಖಲಾಗೋದಕ್ಕೂ ಮುಂಚೆ, ನಾನು, ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ ಅವರ ಮುಂದೆ ಒಂದಿಷ್ಟು ಹಾಡುಗಳನ್ನು ಹಾಡಿದೆವು. ಆಗಲೂ ಲವಲವಿಕೆಯಿಂದ ಕೇಳ್ತಿದ್ರು. ಸುಗಮ ಸಂಗೀತದ ಬೆಳವಣಿಗೆಗೆ ಅವರ ಪಾತ್ರ ಬಹುದೊಡ್ಡದು. ಅವರು ಸುಗಮ ಸಂಗೀತಕ್ಕೆ ಪುಷ್ಠಿ ನೀಡಿದವರು. ಸುಗಮ ಸಂಗೀತ ಪರಿಷತ್ತು ವಿಶ್ವವನ್ನೇ ತಲುಪಿರುವುದರ ಹಿಂದೆ ಅವರ ಪಾತ್ರ ದೊಡ್ಡದು. ಕೊನೆ ಉಸಿರಿನವರೆಗೂ ಅವರು ಇದರ ಸಲಹಾಸಮಿತಿ ಅಧ್ಯಕ್ಷರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ಆಡಳಿತ ಸೇವೆಯಲ್ಲಿದ್ದ ಅಧಿಕಾರಿಯಾಗಿ ಸುಗಮ ಸಂಗೀತದಲ್ಲಿ ಬೆಳೆಯಲು ಕಾಳಿಂಗ ರಾವ್‌ ಕಾರಣರಾದರು. ಆದರೆ ಹೆಚ್‌ಎಸ್‌ವಿ ಸ್ನೇಹ ನಾನು ಕ್ಷೇತ್ರಕ್ಕೆ ಇನ್ನಷ್ಟು ಅಂಟಿಕೊಳ್ಳುವಂತೆ ಮಾಡಿತು.

ಹೆಚ್‌ಎಸ್‌ವಿ ಅವರ ‘ಚಿತ್ರಪಟ ರಾಮಾಯಣ’ವನ್ನು ಬಿ ಜಯಶ್ರೀ ಅವರ ಅಭಿನಯದಲ್ಲಿ ನೋಡಿದ್ದು ರೋಮಾಂಚನ ಮೂಡಿಸಿದ ಅನುಭವ. ಇನ್ನೊಂದು ರೀತಿಯಲ್ಲಿ ಕನ್ನಡನಾಡಿನ ಋಣ ತೀರಿಸುವ ಹುಮ್ಮಸ್ಸು ಅವರ ರಕ್ತದ ಕಣಕಣದಲ್ಲೂ ಇತ್ತು. ಅವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾಗ ನಾವೂ ಅವರೊಂದಿಗೆ ಹೋಗಿದ್ದೆವು. ಅವರು ಮೃತ್ಯಮಂಚದಲ್ಲಿ ಮಲಗಿದ್ದಾಗಲೂ ಸಾಹಿತ್ಯವನ್ನೇ ಧ್ಯಾನಿಸುತ್ತಿದ್ದರು. ಆ ಹೊತ್ತಲೂ ಹತಾಶರಾದವರಲ್ಲ. ವಿಲ್‌ ಪವರ್‌ ಅವರನ್ನು ಇಲ್ಲಿವರೆಗೆ ತಂದು ನಿಲ್ಲಿಸಿತ್ತು. ಈಗ ಅವರಿಲ್ಲ ಅನ್ನುವುದು ಬಹಳ ನೋವನ್ನು ತಂದಿದೆ. ಮೇರು ವ್ಯಕ್ತಿತ್ವವೊಂದು ನಂದಿ ಹೋಗಿದೆ. ಇದನ್ನು ಮರೆಯೋದು ಕಷ್ಟ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?