
ಮುರಳಿಕಾರ್ತಿಕ್ ಎಸ್.
ಅಣುಬಾಂಬ್ ದಾಳಿಯಿಂದಾದ ಹಾನಿ, ಸಾವುನೋವುಗಳಿಂದ ದೇಶಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಸ್ವಪ್ರತಿಷ್ಠೆಗಾಗಿ ಎದುರಾಳಿ ರಾಷ್ಟ್ರಗಳಿಗೆ ಅಣುಬಾಂಬ್ ದಾಳಿ ಮಾಡುವ ಬೆದರಿಕೆ ಹಾಕುತ್ತಿವೆ. ಇದು ಜಾಗತಿಕ ಭದ್ರತೆಗೆ ಬಹುದೊಡ್ಡ ಸವಾಲು. ಇಂಥ ಸನ್ನಿವೇಶದಲ್ಲಿ ಅಂದು ನಡೆದಿರುವ ಹಿರೋಶಿಮಾ ದುರ್ಘಟನೆ ವಿಶ್ವದ ಎಲ್ಲ ರಾಷ್ಟಗಳಿಗೂ ಎಚ್ಚರಿಕೆಯ ಗಂಟೆ.
ಆ ಘಟನೆಯಿಂದ ಒಂದು ದೇಶದ ಲಕ್ಷಾಂತರ ಜನ ಸಾವನ್ನಪ್ಪಿ ಸಂಕಷ್ಟ ಅನುಭವಿಸಿದರೆ, ಮತ್ತೊಂದು ದೇಶಕ್ಕೆ ಇಡೀ ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸಿದ ಪ್ರತಿಷ್ಠೆ. ಆದರೆ ಆ ಘಟನೆಯಿಂದ ಪ್ರಪಂಚಕ್ಕೆ ವಿನಾಶದ ಮುನ್ಸೂಚನೆ ದೊರಕಿತ್ತು. ಅದು 1945ರ ಆಗಸ್ಟ್ 6. ಮುಂಜಾನೆ 8.15ಕ್ಕೆ ಜಪಾನ್ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದ್ದ ಹಿರೋಶಿಮಾ ನಗರದ ನಾಗರಿಕರು ಯುದ್ಧದ ಭೀತಿಯಲ್ಲೇ, ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಆಗಸದಿಂದ ಅಮೆರಿಕದ ಸೇನಾ ವಿಮಾನವೊಂದು ಜಗತ್ತಿನಲ್ಲಿ ಮಟ್ಟಮೊದಲ ಬಾರಿಗೆ ಅಣುಬಾಂಬ್ ಹಾಕಿತ್ತು. ಕೆಲವೇ ಕ್ಷಣದಲ್ಲಿ ಬಾಂಬ್ ಬಿದ್ದ ಸ್ಥಳದಿಂದ ಸುತ್ತಲು ಸುಮಾರು 4 ಕಿಲೋಮೀಟರ್ ದೂರದ ಜಾಗ ಸುಟ್ಟು ಬೂದಿಯಾಗಿತ್ತು. ಹಿರೋಶಿಮಾ ನಗರದ ಸುಮಾರು 90ರಷ್ಟು ಜಾಗ ಛಿದ್ರಗೊಂಡು, ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಇನ್ನೂ ಅನೇಕರು ಗಾಯಾಳುಗಳಾದರು. ಮನುಕುಲದ ಅತ್ಯಂತ ಘೋರ ಕರಾಳ ಘಟನೆ ಎಂದು ಕರೆಯುವ ಆ ದಿನಕ್ಕೆ ಇಂದಿಗೆ 80 ವರ್ಷ.
ಅಣುಬಾಂಬ್ ದಾಳಿ ಏಕೆ?: 1939ರಲ್ಲಿ ಆರಂಭಗೊಂಡಿದ್ದ 2ನೇ ಮಹಾಯುದ್ಧವು 1945ರ ಹೊತ್ತಿಗೆ ನಿರ್ಣಾಯಕ ಘಟ್ಟ ತಲುಪಿತ್ತು. ಇಟಲಿ ಮತ್ತು ಜರ್ಮನಿ ದೇಶಗಳು ಮಿತ್ರರಾಷ್ಟ್ರಗಳಿಗೆ ಶರಣಾಗಿದ್ದವು. ಆದರೆ ಜಪಾನ್ ಇನ್ನೂ ಶರಣಾಗಿರಲಿಲ್ಲ. ಈ ವೈಷಮ್ಯದಿಂದ ಅಮೆರಿಕ ಜಪಾನ್ ಮೇಲೆ ಆಕ್ರಮಣ ಮಾಡಿತ್ತು. ಜಪಾನ್ ಇದಕ್ಕೆ ಪ್ರತಿದಾಳಿ ಮಾಡಿದ್ದರಿಂದ ಆಕ್ರೋಶಗೊಂಡ ಅಂದಿನ ಅಮೆರಿಕ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಜಪಾನ್‌ಗೆ, ‘ನಿಮ್ಮ ದೇಶವನ್ನು ಕ್ಷಣಮಾತ್ರದಲ್ಲಿ ನಾಶ ಮಾಡುವ ಶಸ್ತ್ರಾಸ್ತ್ರ ನಮ್ಮ ಬಳಿ ಇದೆ. ಕೂಡಲೇ ಯುದ್ಧ ನಿಲ್ಲಿಸಿ ಶರಣಾಗಿ. ಇಲ್ಲದಿದ್ದರೆ, ದಾಳಿ ಮಾಡಬೇಕಾಗುತ್ತದೆ’ ಎಂಬ ಎಚ್ಚರಿಕೆಯ ಪತ್ರ ರವಾನಿಸಿದ್ದರು.
ಆದರೆ ಪತ್ರಕ್ಕೆ 9 ದಿನವಾದರೂ ಉತ್ತರ ಸಿಗದ ಹಿನ್ನೆಲೆ 1945ರ ಆಗಸ್ಟ್ 6ರಂದು ಜಪಾನ್‌ನ ಪ್ರಮುಖ ನಗರವಾದ ಹಿರೋಶಿಮಾ ಮೇಲೆ ಅಮೆರಿಕವು ‘ಲಿಟಲ್ ಬಾಯ್’ ಎಂಬ ಹೆಸರಿನ 4030 ಕೆ.ಜಿ. ತೂಕದ ಯೂರೇನಿಯಂ - 235ನಿಂದ ತಯಾರಿಸಿದ್ದ ಅಣ್ವಸ್ತ್ರವನ್ನು ಎಸೆಯಿತು. ಇದಾದ 3 ದಿನಗಳ ಬಳಿಕ ಅಂದರೆ ಆಗಸ್ಟ್ 9ರಂದು ಜಪಾನ್‌ನ ಮತ್ತೊಂದು ನಗರವಾದ ನಾಗಸಾಕಿ ಎಂಬ ನಗರಕ್ಕೂ ‘ಫ್ಯಾಟ್‌ಮ್ಯಾನ್’ ಎಂಬ ಹೆಸರಿನ ಪ್ಲೊಟೋನೀಯಂ - 239ನಿಂದ ತಯಾರಿಸಿದ್ದ 4535 ಕೆ.ಜಿ. ತೂಕದ ಅಣುಬಾಂಬ್ ಹಾಕಿ ಘೋರ ಪಾಪ ಮಾಡಿತು. ಈ ದಾಳಿಯಲ್ಲೂ ಹೆಚ್ಚು ಜನರು ಸಾವನ್ನಪ್ಪಿದರು. ಇದರಿಂದ ಅಪಾರ ಸಂಕಷ್ಟ ಅನುಭವಿಸಿದ ಜಪಾನ್ ಅಮೆರಿಕಕ್ಕೆ ಶರಣಾಯಿತು.
ಅಪಾರ ಜೀವಹಾನಿ, ವಿನಾಶ: ಅಣುಬಾಂಬ್‌ನ ವಿಕಿರಣದ ಹರಡುವಿಕೆಯಿಂದ ಜಪಾನ್ ಅಪಾರ ಜೀವಹಾನಿ, ವಿನಾಶ ಅನುಭವಿಸಿತು. ಅಲ್ಲಿನ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಹಿರೋಶಿಮಾ ನಗರದಲ್ಲಿ 90 ಸಾವಿರದಿಂದ 1,66,000 ಜನರು ಸಾವಿಗೀಡಾದರೆ, ಬಹಳಷ್ಟು ಜನ ಗಾಯಾಳುಗಳಾಗಿ ಕೆಲ ದಿನಗಳ ನಂತರ ನರಳಿ ಸತ್ತರು. ಕಟ್ಟಡಗಳೆಲ್ಲವೂ ಭಸ್ಮವಾದವು. ರೇಡಿಯೋ ಟವರ್‌ಗಳೆಲ್ಲವೂ ನಾಶಗೊಂಡು ಸಂವಹನ ವ್ಯವಸ್ಥೆ ಹಾಳಾಯಿತು. ನಾಗಸಾಕಿ ಮೇಲೆ ನಡೆದ ದಾಳಿಯಲ್ಲಿ ಸುಮಾರು 40,000 ಜನರು ತಕ್ಷಣವೇ ಸಾವನ್ನಪ್ಪಿದ್ದರು. 1945ರ ಅಂತ್ಯದ ವೇಳೆಗೆ, ಅಲ್ಲಿನ ಒಟ್ಟು ಸಾವಿನ ಸಂಖ್ಯೆ ಸುಮಾರು 74,000 ಎಂದು ಅಂದಾಜಿಸಲಾಗಿದೆ.
ಘಟನೆಯಲ್ಲಿ ಬದುಕುಳಿದ ಜನರು ಹೀನಾಯವಾಗಿ ಮುಂದಿನ ಜೀವನ ಕಳೆಯುವಂತಾಯಿತು. ಮುಂಪೀಳಿಗೆಗಳೆಲ್ಲವೂ ವಿಕಿರಣ ಕಾಯಿಲೆ, ಕ್ಯಾನ್ಸರ್, ವಿಕಲಾಂಗತೆ ಮತ್ತು ಇತರೆ ಕಾಯಿಲೆಗಳಿಂದ ಬಳಲುವಂತಾಯಿತು. ಈ ಬಾಂಬ್ ಸ್ಫೋಟಗೊಂಡ ಬಳಿಕ ಅದೆಷ್ಟೋ ವರ್ಷಗಳ ಬಳಿಕವೂ ಇಂದಿಗೂ ಅಲ್ಲಿನ ಜನರು ನೋವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಜಗತ್ತು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯಿಂದ ಆಗುವ ಅಪಾಯವನ್ನು ತಿಳಿಯಿತು. ಯಾವುದೇ ದೇಶಗಳ ನಡುವೆ ಯುದ್ಧ ಸಂಭವಿಸಿದರೂ ಪರಮಾಣು ದುರಂತ ನಡೆಯದಂತೆ ತಡೆಯುತ್ತಿದೆ. ಈ ಘಟನೆ ನಡೆದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಐನ್‌ಸ್ಟೈನ್ ಸೂತ್ರವೇ ಆಧಾರ: ‘ಅಣುಬಾಂಬ್ ಪಿತಾಮಹ’ ಎಂದು ಕರೆಯುವ ಜೆ. ರಾಬರ್ಟ್ ಓಪನ್‌ಹೈಮರ್ ನಿರ್ದೇಶನದಲ್ಲಿ ಈ ಅಣುಬಾಂಬ್ ತಯಾರಾಗಿದ್ದರೂ, ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ನ E=mc² ಸೂತ್ರವು ಅಣುಬಾಂಬ್ ತಯಾರಿಕೆಗೆ ಆಧಾರವಾಯಿತು. ಈ ಸೂತ್ರವು ಪರಮಾಣು ಶಕ್ತಿಯ ಬಳಕೆಯನ್ನು ಸಂಶೋಧಿಸಲು ಸಹಾಯ ಮಾಡಿತು. ಅಲ್ಲದೆ, ಆತ ಬರೆದ ಪತ್ರವೊಂದು ಹಿರೋಶಿಮಾ ಮೇಲೆ ಬಾಂಬ್ ದಾಳಿಗೆ ಪರೋಕ್ಷವಾಗಿ ಕಾರಣವಾಯಿತು. 1939ರಲ್ಲಿ ಐನ್‌ಸ್ಟೈನ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಅಮೆರಿಕ, ಫ್ರಾನ್ಸ್‌ನಲ್ಲಿ ಪರಮಾಣುಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳನ್ನು ಉಲ್ಲೇಖಿಸಿ, ‘ಈ ಪ್ರಕ್ರಿಯೆಯನ್ನು ಬಳಸಿಕೊಂಡು ಅತ್ಯಂತ ಪ್ರಬಲವಾದಂತಹ ಬಾಂಬ್ ತಯಾರಿಸುವುದು ಸಾಧ್ಯ. ಒಂದೇ ಒಂದು ಬಾಂಬ್ ಇಡೀ ಬಂದರಿನ ಸುತ್ತಮುತ್ತಲ ಪ್ರದೇಶವನ್ನೂ ನಾಶ ಮಾಡುವಷ್ಟು ಶಕ್ತಿಶಾಲಿಯಾಗಿರುತ್ತದೆ.
ಅಮೆರಿಕ ಇಂತಹ ಪ್ರಯತ್ನಕ್ಕೆ ವಿಶೇಷವಾದ ಧನಸಹಾಯ ಹಾಗೂ ವ್ಯವಸ್ಥೆಯನ್ನು ಮಾಡದಿದ್ದರೆ ಜರ್ಮನಿ ಅದನ್ನು ಮೊದಲು ಸಾಧಿಸಿಬಿಡಬಹುದು’ ಎಂಬ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ಅಮೆರಿಕ ಸರ್ಕಾರ ಮ್ಯಾನ್‌ಹ್ಯಾಟನ್ ಎಂಬ ಯೋಜನೆಯನ್ನು ರಹಸ್ಯವಾಗಿ ಹಮ್ಮಿಕೊಂಡಿತು. ಈ ಯೋಜನೆಗೆ ಯುರೋಪ್, ಅಮೆರಿಕ ವಿಜ್ಞಾನಿಗಳು ಕೈ ಜೋಡಿಸಿದ್ದರು. ನಂತರ ಮೊದಲ ಪರಮಾಣು ಬಾಂಬ್ ಪರೀಕ್ಷೆಯನ್ನು 1945ರ ಜುಲೈ 16ರಂದು ನ್ಯೂ ಮೆಕ್ಸಿಕೋದ ಮರುಭೂಮಿಯಲ್ಲಿ ನಡೆಸಲಾಯಿತು. ಇದಕ್ಕೆ ‘ಟ್ರಿನಿಟಿ’ ಎಂದು ಸಂಕೇತನಾಮ ನೀಡಲಾಗಿತ್ತು. ಇದು ಪರಮಾಣು ಯುಗದ ಆರಂಭಕ್ಕೆ ನಾಂದಿ ಹಾಡಿತು. ನಂತರ 1945ರ ಆಗಸ್ಟ್ 6ರಂದು ಮೊದಲಬಾರಿಗೆ ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ಹಾಕಲಾಯಿತು. ಆದರೆ ಈ ಬಾಂಬ್ ಐನ್‌ಸ್ಟೈನ್ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ನಾಶಮಾಡಿತು. ಬಾಂಬ್ ದಾಳಿಯಿಂದ ಹಿರೋಶಿಮಾ ಮತ್ತು ನಾಗಬ್ಕಿಯಲ್ಲಾದ ಸಾವು, ನೋವು, ಹಾನಿಗೆ ಐನ್‌ಸ್ಟೈನ್ ದುಃಖಿತರಾಗಿದ್ದರು. ಇದಾದ ಬಳಿಕ ಅವರು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಮತ್ತು ನಿಶಸ್ತ್ರೀಕರಣಕ್ಕಾಗಿ ಪ್ರಬಲ ವಾದಮಂಡನೆ ಮಾಡಿದರು.
ಮನುಕುಲಕ್ಕೆ ಎಚ್ಚರಿಕೆಯ ಗಂಟೆ: ಅಣುಬಾಂಬ್ ದಾಳಿಯಿಂದ ಹಿರೋಶಿಮಾ ನಗರದಲ್ಲಾದ ಹಾನಿ, ಸಾವುನೋವುಗಳಿಂದ ಅನೇಕ ದೇಶಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಪ್ರಸ್ತುತ ರಾಷ್ಟ್ರೀಯ ಭದ್ರತೆಗಾಗಿ ಕೆಲವು ದೇಶಗಳು ಅಣುಬಾಂಬ್ ಹೊಂದಿವೆ. ವಿಶ್ವಾದ್ಯಂತ ಸುಮಾರು 12,331 ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ರಷ್ಯಾ, ಅಮೆರಿಕ, ಚೀನಾ, ಫ್ರಾನ್ಸ್, ಬ್ರಿಟನ್, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೋರಿಯಾ, ಈ 9 ದೇಶಗಳು ಅಣುಬಾಂಬ್ ಹೊಂದಿವೆ. ಕೆಲವೊಮ್ಮೆ ಈ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ಉಂಟಾದಾಗ ತಮ್ಮ ಪ್ರತಿಷ್ಠೆಗಾಗಿ ಇವುಗಳಲ್ಲಿ ಕೆಲ ದೇಶಗಳು ಎದುರಾಳಿ ರಾಷ್ಟ್ರಗಳಿಗೆ ಅಣುಬಾಂಬ್ ದಾಳಿ ಮಾಡುವ ಬೆದರಿಕೆ ಹಾಕುತ್ತಿವೆ. ಇದು ಜಾಗತಿಕ ಭದ್ರತೆಗೆ ಒಂದು ದೊಡ್ಡ ಬೆದರಿಕೆಯಾಗಿದೆ. ಇಂಥ ಸನ್ನಿವೇಶದಲ್ಲಿ ಅಂದು ನಡೆದಿರುವ ಈ ದುರ್ಘಟನೆ ವಿಶ್ವದ ಎಲ್ಲ ರಾಷ್ಟಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ.