
ಕೆ. ಎನ್. ಚಕ್ರಪಾಣಿ, ಬಿಜೆಪಿ ಹಿರಿಯ ಮುಖಂಡರು
(ಹರದನಹಳ್ಳಿಯ ಹಳ್ಳಿಕಟ್ಟೆ ರಾಜಕಾರಣದಿಂದ ಹಿಡಿದು ಗೌಡರು ತಮ್ಮ ಛಾಪನ್ನು ರಾಷ್ಟ್ರ ರಾಜಕಾರಣ, ವಿದೇಶದಲ್ಲೂ ಮೂಡಿಸಿದ್ದವರು. ಕೃಷಿ ಕುಟುಂಬದಲ್ಲಿ ಬೆಳೆದು ಬಂದಿದ್ದರೂ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಜ್ಞಾನ ಹೊಂದಿದ್ದರು. ಕಾಯಕ ನಂಬಿ ಬದುಕಿದ್ದ ದೇವೇಗೌಡರ ಅಭಿವೃದ್ಧಿಗೂ ಇಂದಿಗೂ ಅಚ್ಚಳಿಯದೇ ಉಳಿದು ಬಿಟ್ಟಿದೆ)
ರಾಜಕಾರಣದಲ್ಲಿ ಎರಡು ರೀತಿಯಲ್ಲಿ ನಾಯಕರಾಗಿ ಬೆಳೆದವರನ್ನು ಕಾಣಬಹುದು. ಕೆಲವರು ಸಂಪರ್ಕ, ಸಂಬಂಧಗಳ ಬಲದಿಂದ ಅಗ್ರಸ್ಥಾನಕ್ಕೇರಿದವರು. ಇನ್ನು ಕೆಲವರು ಛಲ, ಸರಳತೆ, ಪರಿಶ್ರಮ ಹಾಗೂ ಜನರ ಬಗೆಗಿನ ತುಡಿತದಿಂದಾಗಿ ಉನ್ನತ ಸ್ಥಾನಕ್ಕೇರಿದವರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದರಲ್ಲಿ ಎರಡನೇ ವರ್ಗಕ್ಕೆ ಸೇರಿದವರು.
ಭಾರತದ 11ನೇ ಪ್ರಧಾನಿಯಾಗಿದ್ದ ದೇವೇಗೌಡರ ಆರು ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ರಾಜಕಾರಣದಲ್ಲಿದ್ದಾರೆ. ಅವರ ಸಾರ್ವಜನಿಕ ಬದುಕು ರಾಜಕಾರಣವನ್ನೂ ಮೀರಿದ ಕ್ಷಮತೆ, ದೂರದರ್ಶಿತ್ವ, ವಿನಮ್ರತೆ, ರೈತ ಪರ ಚಿಂತನೆಯ ಪಯಣವಾಗಿದೆ.
ಹೊಳೆನರಸೀಪುರ ಕ್ಷೇತ್ರದಿಂದ 1962ರಲ್ಲಿ ಸ್ವತಂತ್ರವಾಗಿ ಆಯ್ಕೆಯಾಗುವ ಮೂಲಕ ಚೊಚ್ಚಲ ಬಾರಿಗೆ ದೇವೇಗೌಡರು ಶಾಸಕರಾದರು. ಸಂಘಟನಾ ಸಾಮರ್ಥ್ಯ, ಸ್ಥಳೀಯ ಸಮಸ್ಯೆಗಳ ಕುರಿತಾದ ಕಾಳಜಿಯಿಂದ ಜನರ ವಿಶ್ವಾಸ ಗಳಿಸಿದರು. ಕ್ರಮೇಣ, ನೀರಾವರಿ ಯೋಜನೆಗಳು ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ ಅತ್ಯಂತ ಪ್ರಬಲ ಧ್ವನಿಯಾಗಿ ಹೊರಹೊಮ್ಮಿದರು.
ದೇವೇಗೌಡರು 1975ರ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ವೇಳೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದರು. ಆದರೆ, ಜೈಲಿನಲ್ಲಿ ಸಂಸತ್ತಿನ ನಡಾವಳಿಗಳು, ಅರ್ಥಶಾಸ್ತ್ರ, ಆಡಳಿತ ಹಾಗೂ ಭಾರತದ ರಾಜಕಾರಣದ ಚರಿತ್ರೆ ಕುರಿತು ಅಧ್ಯಯನ ನಡೆಸಿ ಜ್ಞಾನವನ್ನು ಹೆಚ್ಚಿಸಿಕೊಂಡರು.
ಅಧಿಕಾರವಿರಲಿ, ಇಲ್ಲದಿರಲಿ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಅವರ ಆಸಕ್ತಿಯ ವಿಷಯಗಳು. 1994ರಿಂದ 96ರ ಅವಧಿಯಲ್ಲಿ ಸಿಎಂ ಆಗಿದ್ದಾಗ ಹಲವಾರು ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳ ರೂವಾರಿ. ನಾಲಾ ಸಂಪರ್ಕಗಳು, ಅಣೆಕಟ್ಟುಗಳ ಜಲಸಂಗ್ರಹ ಸಾಮರ್ಥ್ಯ, ವಿವಿಧ ಭಾಗಗಳ ಕೃಷಿ ಪದ್ಧತಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಬಲ್ಲವರು. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಮೂಲಕ ಅಧಿಕಾರದಿಂದ ವಂಚಿತರಾಗಿದ್ದ ಲಕ್ಷಾಂತರ ಜನರಿಗೆ ರಾಜಕೀಯ ಶಕ್ತಿ ತುಂಬಿದರು.
ರೈತನ ಮಗನಾಗಿರುವ ಅವರಿಗೆ ಸಹಜವಾಗಿಯೇ ಕೃಷಿ ಆಸಕ್ತಿಯ ಕ್ಷೇತ್ರ. ಆದರೆ, ಅದರಾಚೆಗೂ ವಿವಿಧ ವಲಯಗಳ ಬೆಳವಣಿಗೆಯ ಸಾಮರ್ಥ್ಯವನ್ನೂ ಅರಿತಿದ್ದರು. ಬೆಂಗಳೂರು ಇಂದು ಭಾರತದ ತಂತ್ರಜ್ಞಾನ ರಾಜಧಾನಿ ಎಂದು ಹೆಸರಾಗಿರುವುದರ ಹಿಂದೆ ದೇವೇಗೌಡರು ಪಾತ್ರ ಮಹತ್ವದ್ದು.
ಸ್ವಿಟ್ಜರ್‌ಲೆಂಡ್ ನ ದಾವೋಸ್‌ನಲ್ಲಿ ಪ್ರತಿ ವರ್ಷ ನಡೆಯುವ ವಿಶ್ವ ಆರ್ಥಿಕ ಶೃಂಗದಲ್ಲಿ ಪಾಲ್ಗೊಂಡ ಕರ್ನಾಟಕದ ಮೊದಲ ಮುಖ್ಯಮಂತ್ರಿ. ಪ್ರಧಾನಿಯಾಗಿಯೂ ಅವರು ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ಆಗ ಬಿಲ್ ಗೇಟ್ಸ್ ಸೇರಿದಂತೆ ಜಾಗತಿಕ ಉದ್ಯಮಿಗಳನ್ನು ಭೇಟಿಯಾಗಿ ಸಮಾಲೋಚಿಸಿದ್ದರು.
ದೇಶವಿನ್ನೂ ನಿಧಾನಕ್ಕೆ ಮುಕ್ತ ಆರ್ಥಿಕತೆಗೆ ತೆರೆದುಕೊಳ್ಳುತ್ತಿದ್ದ ದಿನಗಳಲ್ಲೇ ಕರ್ನಾಟಕವನ್ನು ತಂತ್ರಜ್ಞಾನ ಉದ್ದಿಮೆಗಳ ಹೂಡಿಕೆಗೆ ಪ್ರಶಸ್ತ ತಾಣ ಎಂಬುದನ್ನು ಪ್ರತಿಪಾದಿಸಿದರು. ಅವರ ದೀರ್ಘಾವಧಿ ತೆರಿಗೆ ಪ್ರೋತ್ಸಾಹಕ ಕ್ರಮಗಳು ಬೆಂಗಳೂರು ದೇಶದ ಸಿಲಿಕಾನ್ ಸಿಟಿಯಾಗಿ ವೇಗವಾಗಿ ಬೆಳೆಯಲು ಕಾರಣವಾಯಿತು ಎಂಬುದು ಉಲ್ಲೇಖಾರ್ಹ.
1996ರಲ್ಲಿ ಹಠಾತ್ ರಾಜಕೀಯ ಬೆಳವಣಿಗೆಯಿಂದ ಪ್ರಧಾನಿಯಾಗಿ ನೇಮಕಗೊಂಡಾಗ ಅವರ ಸಾಮರ್ಥ್ಯದ ಬಗ್ಗೆ ಅನುಮಾನಗೊಂಡವರೇ ಹೆಚ್ಚು. ಸರಳ ಉಡುಪು, ರೈತನಂತೆ ಕಾಣುತ್ತಿದ್ದ ಅವರ ಧಿರಿಸನ್ನು ನೋಡಿ ಅವರ ಸಾಮರ್ಥ್ಯವನ್ನು ತಪ್ಪಾಗಿ ಅಂದಾಜಿಸಿದ್ದರು. ಆದರೆ ಪ್ರಧಾನಿಯಾಗಿದ್ದು ಕೇವಲ 11 ತಿಂಗಳಷ್ಟೇ ಆದರೂ ಅಚ್ಚಳಿಯದ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇಂದಿಗೂ ಅದು ಸ್ಮರಣೀಯ.
ದೇವೇಗೌಡರು ಪ್ರಧಾನಿಯಾಗಿ ಮಾಡಿದ ಕೆಲಸಗಳ ಬಗ್ಗೆ ಉಲ್ಲೇಖಿಸುವಾಗ ದೆಹಲಿ ಮೆಟ್ರೋ ಕಾರ್ಯಯೋಜನೆಗೆ ಅನುಮೋದನೆ ದೊರೆತದ್ದು ಅವರ ಅವಧಿಯಲ್ಲಿ ಎಂಬುದನ್ನು ನೆನೆಯಬೇಕಾಗುತ್ತದೆ. ರಾಜಕೀಯಕ್ಕೆ ಆಸ್ಪದವಾಗದಂತೆ ಇ.ಶ್ರೀಧರನ್ ಅವರಿಗೆ ಅದರ ಅನುಷ್ಠಾನದ ಜವಾಬ್ದಾರಿ ವಹಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ.
ದೇಶದ ಈಶಾನ್ಯ ರಾಜ್ಯಗಳಿಗೆ ಪ್ರಾಮುಖ್ಯ ನೀಡಬೇಕೆಂದು ಲೋಹಿತ್ ನದಿಗೆ ದೋಲಾ-ಸದಿಯಾ ಸೇತುವೆಯ ನಿರ್ಮಾಣ ಯೋಜನೆ ಅನುಮೋದಿಸಿದರು. ದಶಕಗಳಿಂದ ಕಡೆಗಣಿಸಲ್ಪಟ್ಟಿದ್ದ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ, ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಪ್ರಸ್ತಾಪ ಮಾಡಿದ ಮೊದಲ ಪ್ರಧಾನಿ ಎನ್ನುವ ಹಿರಿಮೆ ಇವರದ್ದು. ದೇಶದ ಭದ್ರತೆ ವಿಷಯದಲ್ಲೂ ಖಡಕ್ ಧೋರಣೆ ಹೊಂದಿದ್ದರು. ಕಣಿವೆ ರಾಜ್ಯಕ್ಕೆ ಪದೇಪದೇ ಭೇಟಿ ನೀಡಿ ಸ್ಥಳೀಯರೊಂದಿಗೆ ನೇರವಾಗಿ ಚರ್ಚಿಸುತ್ತಿದ್ದರು.
ಸಾಂಸ್ಥಿಕ ಸ್ವಾಯತ್ತತೆಯನ್ನು ಗೌರವಿಸುತ್ತಿದ್ದ ಅವರು, ಮಧ್ಯಪ್ರವೇಶಿಸಲು ಇಷ್ಟಪಡುತ್ತಿರಲಿಲ್ಲ. ಇಂತಹ ವಿಷಯಗಳಲ್ಲಿ ಕೊಂಚ ರಾಜಿ ಮಾಡಿಕೊಂಡಿದ್ದರೆ ಪ್ರಧಾನಿಯಾಗಿ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಬಹುದಿತ್ತು ಎಂಬ ಅಭಿಪ್ರಾಯಗಳೂ ಇವೆ. ಆದರೆ, ದೇವೇಗೌಡರು ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ, ಸ್ವಾಭಿಮಾನ ಮರೆತವರಲ್ಲ.
ಪ್ರಧಾನಿಯಾಗಿ ಕೆಳಗಿಳಿದ ನಂತರ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದರು. ದೆಹಲಿಯಿಂದ ಮರಳಿದ ನಂತರ 1999ರಲ್ಲಿ ಜೆಡಿಎಸ್ ಕಟ್ಟಿ, ರಾಜ್ಯ ರಾಜಕಾರಣದ ದಿಕ್ಸೂಚಿಯಾಗಿ ಉಳಿದರು.
ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಧ್ವಜ ಹಾರಿಸುವಾಗಲೂ ಹರದನಹಳ್ಳಿಯ ಹಳೇಕೋಟೆಯನ್ನು ಮರೆತವರಲ್ಲ. ದೊಡ್ಡ ಪರಿವಾರದ ಹಿರಿಯರಾಗಿ ದೇವೇಗೌಡರು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ತತ್ತ್ವ ಹಾಗೂ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡವರಲ್ಲ. ಅವರ ದೂರದೃಷ್ಟಿ ಕೆಲವೊಮ್ಮೆ ಆಪ್ತರಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ, ಅವರ ನಿರ್ಧಾರ-ನಿಲುವುಗಳು ತಪ್ಪಾಗಿ ವ್ಯಾಖ್ಯಾನವಾಗಿದ್ದೂ ಇದೆ. ಆದರೆ ಎದೆಗುಂದಿದವರಲ್ಲ.
ದೇಶದ ಗ್ರಾಮೀಣ ಭಾಗ ಮತ್ತು ಕೃಷಿ ವಲಯಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ನೀಡಿ ಆರ್ಥಿಕತೆ ಗಟ್ಟಿಗೊಳಿಸಿದರು. ಅವರ ಕೃಷಿ ಪರ ನಿಲುವುಗಳನ್ನು ಗೌರವಿಸಿ ಪಂಜಾಬಿನಲ್ಲಿ ಅಧಿಕ ಇಳುವರಿಯ ಭತ್ತದ ತಳಿಯೊಂದಕ್ಕೆ ದೇವೇಗೌಡರ ಹೆಸರನ್ನು ಇಡಲಾಗಿದೆ. ಇದು ದಕ್ಷಿಣದ ನಾಯಕರೊಬ್ಬರಿಗೆ ರಾಷ್ಟ್ರಮಟ್ಟದಲ್ಲಿ ಸಂದ ದೊಡ್ಡ ಗೌರವ.
ದೇವೇಗೌಡರು ಎಂದೂ ಅಧಿಕಾರದ ಹಿಂದೆ ಹೋದವರಲ್ಲ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎನ್ನುತ್ತಾ ಕೆಲಸ ಮಾಡಿದ್ದವರು. ಎಂದಿಗೂ ಕರ್ಮವನ್ನು (ಕಾರ್ಯವನ್ನು) ಬಿಟ್ಟವರಲ್ಲ. ದೈವವನ್ನು ಮರೆತವರೂ ಅಲ್ಲ. ಶ್ರೀಕೃಷ್ಣ ಬೋಧಿಸಿದ ರೀತಿಯಲ್ಲಿ, ‘ನಿನ್ನ ಕಾರ್ಯವನ್ನು ನೀನು ಮಾಡು, ಫಲಾಫಲಗಳನ್ನು ದೇವನಿಗೆ ಬಿಡು’ ಎಂಬುದನ್ನು ಅಳವಡಿಸಿಕೊಂಡವರು.
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ, ಸ್ವತಃ ದೇವರಾಜು ಅರಸುರವರೇ, ‘ದೇವೇಗೌಡರು ಸದನದಲ್ಲಿ ಇಲ್ಲದಿದ್ದರೆ ಸ್ವಾರಸ್ಯವೇ ಇರುವುದಿಲ್ಲ’ ಎನ್ನುತ್ತಿದ್ದರಂತೆ. ಹಾಗೆಯೇ, ದೇವೇಗೌಡರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರೂ ಗೌಡರನ್ನು ಮನಸಾರೆ ಮೆಚ್ಚಿದ್ದರಂತೆ. ದೇವೇಗೌಡರು ಪ್ರಧಾನಿಯಾಗಿ ಪದಚ್ಯುತಗೊಳ್ಳುವುದು ಸನ್ನಿಹಿತವೆಂಬ ಕ್ಷಣಗಳಲ್ಲಿ ‘ಇಂತಹ ಪ್ರಧಾನಿಯೊಬ್ಬರು ಇನ್ನಷ್ಟು ವರ್ಷಕಾಲ ದೇಶವನ್ನು ಮುನ್ನಡೆಸುವ ಅವಕಾಶ ತಪ್ಪಿಹೋಗುತ್ತಿದೆಯಲ್ಲಾ’ ಎಂದು ಸ್ವತಃ ವಾಜಪೇಯಿ ಅವರು ವೇದನೆ ಪಟ್ಟಿದ್ದರಂತೆ!
‘ಆಕಸ್ಮಿಕ ಪ್ರಧಾನಿ’ (ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್) ಎಂದು ಬಿಂಬಿತರಾದ ದೇವೇಗೌಡರು ತಾವು ನಂಬಿದ ತತ್ತ್ವಗಳು ಹಾಗೂ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಮೇ 18ರಂದು 94ನೇ ವಯಸ್ಸಿಗೆ ಪದಾರ್ಪಣೆ ಮಾಡುತ್ತಿರುವ ಮುತ್ಸದ್ಧಿ ಸಾರ್ವಜನಿಕ ಬದುಕಿನಲ್ಲಿ ನಿಷ್ಠೆ, ತಾಳ್ಮೆ ಹಾಗೂ ಆಡಳಿತಾತ್ಮಕ ಸ್ಪಂದನಶೀಲತೆಗೆ ಅವರು ಕಣ್ಣೆದುರಿಗಿನ ಉದಾಹರಣೆಯಾಗಿದ್ದಾರೆ.
ಕೃಷಿ, ನೀರಾವರಿ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಅವರು ಮಾತನಾಡುತ್ತಾರೆಂದರೆ ಇಡೀ ದೇಶವೇ ಅದನ್ನು ಕಿವಿಗೊಟ್ಟು ಆಲಿಸುತ್ತದೆ. ಇಂತಹ ಮುತ್ಸದ್ಧಿಯಾದ ಗೌಡರು ಶತಾಯುಷಿಗಳಾಗಿ, ಜಗತ್ತಿನ ಅತ್ಯಂತ ಪರಮೋಚ್ಚ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲವಾದ ರಾಜ್ಯಸಭೆಯಲ್ಲಿ ತಮ್ಮ ಧ್ವನಿ ಮೊಳಗಿಸುತ್ತಿರಲಿ ಎಂಬುದು ಪ್ರತಿಯೊಬ್ಬರ ಆಸೆ.
ಹಳ್ಳಿಕಟ್ಟೆಗಳ ಪಂಚಾಯ್ತಿ ರಾಜಕೀಯದಿಂದ ಹಿಡಿದು ದೆಹಲಿಯ ಸಮ್ಮಿಶ್ರ ರಾಜಕಾರಣದವರೆಗೆ, ಹರದನಹಳ್ಳಿಯಿಂದ ಹಿಡಿದು ಜಾಗತಿಕ ಹೂಡಿಕೆ ಶೃಂಗಗಳವರೆಗೆ ಚಾಚಿಕೊಂಡಿರುವ ಅವರ ಬದುಕು ಪ್ರಜಾಪ್ರಭುತ್ವದ ಅನಂತ ಸಾಧ್ಯತೆಗಳನ್ನು ಪ್ರತಿಬಿಂಬಿಸುವ ಯಶೋಗಾಥೆ. ಗೌಡರ ಅನನ್ಯ ಕೊಡುಗೆಗಳನ್ನು ಗೌರವಿಸಿ ಅವರನ್ನು ‘ಭಾರತ ರತ್ನ’ ಪುರಸ್ಕಾರಕ್ಕೆ ಪರಿಗಣಿಸುವ ಸಮಯ ಆದಷ್ಟು ಬೇಗನೇ ಬರಲಿ ಎಂಬುದೇ ಅವರ ಅಭಿಮಾನಿಗಳು, ಹಿತೈಷಿಗಳ, ಅಭಿಮಾನಿಗಳ ಹಾಗೂ ಸದೃಢ ದೇಶ ನಿರ್ಮಾಣ ಬಯಸುವವರ ಆಶಯವಾಗಿದೆ.