ಯುದ್ಧಬೀಜ ಅಂಕುರಿಸಿತ್ತು ಕುರುಡುದೊರೆಯಲ್ಲಿ: ಅರ್ಜುನನ ಸಂಕಟಕ್ಕೆ ಭಗವಾನ್‌ ಕೃಷ್ಣ ತೋರಿದ ಬೆಳಕು

Published : Dec 01, 2025, 10:19 AM IST
Bhagavad Gita

ಸಾರಾಂಶ

ರಾಮಾಯಣದಲ್ಲಿ ಶ್ರೀರಾಮ ತಾನು ದಶರಥನ ಮಗ, ಮನುಷ್ಯನಾಗಿಯೇ ಹುಟ್ಟಿದ್ದೇನೆ ಎನ್ನುತ್ತಾ ತನ್ನ ಗುಣಗಳಿಂದಲೇ ದೇವತ್ವವನ್ನು ಪಡೆದವ. ಕೃಷ್ಣನು ಜೀವಿತದ ಕಾಲದಲ್ಲಿಯೇ ತಾನು ದೇವರ ಅವತಾರವೆಂದು ಕರೆಯಿಸಿಕೊಳ್ಳಲ್ಪಟ್ಟವನು.

-ನಾರಾಯಣ ಯಾಜಿ

ಅಥ ಚೇತ್ ತ್ವಂ ಧರ್ಮ್ಯಮಿಮಂ ಸಂಗ್ರಾಮಂ ನ ಕರಿಷ್ಯಸಿ ।
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ॥ ಗೀ. 2- 33॥

(ಒಂದೊಮ್ಮೆ, ನ್ಯಾಯದಿಂದ ಒದಗಿ ಬಂದ ಈ ಕಾಳಗವನ್ನು ನೀನು ಕೈಗೊಳ್ಳದಿದ್ದರೆ, ಆಗ ನಿನ್ನ ಧರ್ಮವನ್ನೂ ಹೆಸರನ್ನೂ ಕಳೆದುಕೊಂಡು ಪಾಪವನ್ನು ಗಳಿಸುವೆ). ಮೇಲಿನ ಶ್ಲೋಕದ ಆಧಾರದಿಂದ ಭಗವದ್ಗೀತೆಯನ್ನು ಯುದ್ಧಕ್ಕೆ ಪ್ರಚೋದಿಸುವ ಕೃತಿ ಎನ್ನುವ ಸುಲಭದ ತೀರ್ಮಾನಕ್ಕೆ ಬರಬಹುದಾದರೂ ಗೀತೆಯನ್ನು ಪೂರ್ತಿ ಅರ್ಥ ಮಾಡಿಕೊಳ್ಳಲು ಸಮಗ್ರ ಮಹಾಭಾರತದ ಇತಿಹಾಸವನ್ನು ಒಮ್ಮೆ ಗಮನಿಸಬೇಕಾಗುತ್ತದೆ. ವ್ಯಾಸರ ಜಯವೆನ್ನುವ ಈ ಮಹಾಕಾವ್ಯ ಒಂದು ವಿಶಿಷ್ಟವಾದ ಹಲವು ರಸ, ಭಾವನೆಗಳ ಧಾರೆ. ಇಲ್ಲಿ ಮನುಷ್ಯ ಸಹಜವಾದ ಎಲ್ಲಾ ಗುಣಗಳೂ ದೋಷ ಮತ್ತು ದೌರ್ಬಲ್ಯಗಳೂ ಇವೆ. ರಾಮಾಯಣದಲ್ಲಿ ಶ್ರೀರಾಮ ತಾನು ದಶರಥನ ಮಗ, ಮನುಷ್ಯನಾಗಿಯೇ ಹುಟ್ಟಿದ್ದೇನೆ ಎನ್ನುತ್ತಾ ತನ್ನ ಗುಣಗಳಿಂದಲೇ ದೇವತ್ವವನ್ನು ಪಡೆದವ. ಕೃಷ್ಣನು ಜೀವಿತದ ಕಾಲದಲ್ಲಿಯೇ ತಾನು ದೇವರ ಅವತಾರವೆಂದು ಕರೆಯಿಸಿಕೊಳ್ಳಲ್ಪಟ್ಟವನು. ಭಗವದ್ಗೀತೆಯಲ್ಲಂತೂ ಆತನೇ ತಾನೇ ಈ ಜಗಕ್ಕೆಲ್ಲ ಮೂಲಕಾರಣ, ವರ್ತಮಾನ ಮತ್ತು ಅಂತ್ಯವೂ ತಾನೇ ಎಂದು ಘೋಷಿಸಿಕೊಳ್ಳುತ್ತಾನೆ.

ಬಾಲಗಂಗಾಧರ ಟಿಳಕರು ಗೀತೆಯ ಕುರಿತು ‘ಭಗವದ್ಗೀತೆ ಇಲ್ಲದಿದ್ದರೆ ಮಹಾಭಾರತಕ್ಕೆ ಯಾವ ತಾತ್ವಿಕ ಅರ್ಥವೂ ಇಲ್ಲ’ ಎಂದಿದ್ದಾರೆ. ರಾಮಾಯಣದಲ್ಲಿಯೂ ರಾಮನಿಂದ ಭರತನಿಗೆ ರಾಜನೀತಿಯ ಉಪದೇಶ ಬರುತ್ತದೆ. ತುಂಬಾ ಮಹತ್ವದ ಸಂಗತಿಗಳನ್ನು ರಾಮ ಅಲ್ಲಿ ಭರತನಿಗೆ ವಿವರಿಸಿದ್ದಾನೆ. ಆದರೆ ಅದು ಕಾವ್ಯದ ತಿರುಳಾಗಿ ಬರದಿರುವುದಕ್ಕೆ ಕಾರಣ, ಆ ಭಾಗವಿಲ್ಲದಿದ್ದರೂ ರಾಮಾಯಣದ ಮಹತ್ವ ಕಡಿಮೆಯಾಗುವುದಿಲ್ಲ. ಸಮಗ್ರವಾಗಿ ರಾಮನ ನಡೆಯೇ ಅಲ್ಲಿ ಪ್ರಧಾನವಾದುದು. ಆದರೆ ಮಹಾಭಾರತದಲ್ಲಿ ಹಾಗಲ್ಲ. ಚತುರ, ಗೊಲ್ಲ, ಪಾಂಡವ ಪಕ್ಷಪಾತಿ ಎಂದೆಲ್ಲ ಕರೆಯಿಸಿಕೊಂಡ ಕೃಷ್ಣ ಆಚಾರ್ಯನಾಗಿ ಗೋಚರಿಸುವುದು ಭಗವದ್ಗೀತೆಯ ಮೂಲಕವಾಗಿ.

ಸತ್ಯ ದರ್ಶನವೇ ಗೀತೆಯ ಸಾರ: ಭಗವದ್ಗೀತೆಯ ಮೊದಲ ಅಧ್ಯಾಯ ಪ್ರಾರಂಭವಾಗುವುದೇ ‘ಅರ್ಜುನ ವಿಷಾದಯೋಗ’ ಎನ್ನುವುದರ ಮೂಲಕ. ಇಲ್ಲಿ ವಿಷಾದವೂ ಒಂದು ಯೋಗವಾಗಿದೆ. ಯೋಗವೆಂದರೆ ಒಂದುಗೂಡಿಸುವುದೆಂದರ್ಥ. ಕೇವಲ ಯುದ್ಧವನ್ನು ಪ್ರಚೋದಿಸುವ ಗ್ರಂಥವೆಂದು ಮೇಲುನೋಟಕ್ಕೆ ಅನಿಸಿದರೂ ವ್ಯಾಸರು ಈ ಯುದ್ಧದ ಮೂಲಕ ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವುದಕ್ಕಿರುವ ಮಹತ್ವದ ಸಾಧನ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿಯೇ ಯುದ್ಧಭೂಮಿಯಾದ ಕುರುಕ್ಷೇತ್ರ ಧರ್ಮಕ್ಷೇತ್ರ. ಮಹಾಭಾರತದ ‘ಭೀಷ್ಮ ಪರ್ವದಲ್ಲಿನ’ ಹದಿನೆಂಟು ಅಧ್ಯಾಯಗಳಲ್ಲಿ ಅರ್ಜುನನಿಗೆ ಕೃಷ್ಣ ಗೀತೆಯನ್ನು ವಿವರಿಸಿದ್ದಾನೆ.

ಕೊಲ್ಲುವುದು ಪಾಪ ಎನ್ನುವ ಗೊಂದಲದಲ್ಲಿದ್ದ ಅರ್ಜುನನಿಗೆ ಸತ್ಯದರ್ಶನವನ್ನು ಮಾಡಿಸುವುದೇ ಗೀತೆಯ ಸಾರ. ಅದಕ್ಕಾಗಿಯೇ ಕೃಷ್ಣನನ್ನು ಅರ್ಜುನ ‘ವಾರ್ಷ್ಣೇಯ’ ಅಂದರೆ, ಬಯಸಿದ ಬಯಕೆಗಳನ್ನೆಲ್ಲಾ ಈಡೇರಿಸುವವ ಎಂದು ಕರೆದಿದ್ದಾನೆ. ಇಲ್ಲಿ ನಡೆಯುತ್ತಿರುವುದು ಒಂದು ಧರ್ಮ ಸಂಗ್ರಾಮ. ಅರ್ಜುನ ಧರ್ಮದ ಪರ ನಿಂತ ಮಹಾರಥಿ. ಆತ ಇಂತಹ ಧರ್ಮ ಸಂಗ್ರಾಮದಲ್ಲಿ ಧರ್ಮದ ಪರ ಹೋರಾಡದಿದ್ದರೆ ಸಹಜ ಧರ್ಮಕ್ಕೆ ವಿರುದ್ಧವಾಗಿ ಹಾಗೂ ಸಾಮಾಜಿಕ ಧರ್ಮವನ್ನು ಬಿಟ್ಟು ನಡೆದುಕೊಂಡಂತೆ. ಇದೊಂದು ಕಳಂಕ ಮತ್ತು ಮಹಾ ಪಾಪವಾಗುತ್ತದೆ. ಈ ರೀತಿ ಪಾಪದ ಭಯದಿಂದ ಬಳಲುತ್ತಿರುವ ಅರ್ಜುನನಿಗೆ ಕೃಷ್ಣ ಯಾವುದು ನಿಜವಾದ ಪಾಪ ಎನ್ನುವುದನ್ನು ಮನವರಿಕೆ ಮಾಡಿಸುತ್ತಿದ್ದಾನೆ.

ಯುದ್ಧಾಕಾಂಕ್ಷಿಯಾಗಿರಲಿಲ್ಲ ಶ್ರೀಕೃಷ್ಣ: ನಿಜಕ್ಕೂ ಮಹಾಭಾರತದ ಯುದ್ಧದ ಬೀಜವಿರುವುದು ದುರ್ಯೋಧನನಲ್ಲಿ ಅಲ್ಲ; ಧೃತರಾಷ್ಟ್ರನಲ್ಲಿ. ಮೊದಲ ಶ್ಲೋಕದಲ್ಲಿಯೇ ಇದು ವ್ಯಕ್ತವಾಗುತ್ತದೆ. ‘ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ’ ಅದನ್ನೇ ವಿವರಿಸುತ್ತದೆ. ಸಂಜಯನೇ, ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು? ಎನ್ನುವಲ್ಲಿ ಪಾಂಡವರನ್ನು ತನ್ನವರಲ್ಲ ಎನ್ನುವುದನ್ನೇ ಸೂಚಿಸುತ್ತಿದ್ದಾನೆ. ಎಲ್ಲರೂ ಆರೋಪಿಸುವಂತೆ ಕೃಷ್ಣ ಯುದ್ಧಾಕಾಂಕ್ಷಿಯಾಗಿರಲಿಲ್ಲ. ತಾನೇ ಅಪೇಕ್ಷಿಸಿ ಪಾರ್ಥಸಾರಥಿಯಾದವ. ಅಂತಹ ಕೃಷ್ಣನೂ ಯುದ್ಧವೆನ್ನುವುದು ಯಾವ ಕಾರಣಕ್ಕೂ ಒಳ್ಳೆಯದಲ್ಲ ಎಂದು ಅಂದುಕೊಂಡವ. ಆತ ಈ ಮಹಾ ಸಂಭಾವ್ಯ ಸಂಗ್ರಾಮವನ್ನು ತಪ್ಪಿಸಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿರುತ್ತಾನೆ.

ಆದರೆ ಧೃತರಾಷ್ಟ್ರನಿಗೆ ಯುದ್ಧ ಬೇಕು, ಅದನ್ನು ನೋಡುವೆಯೋ? ದಿವ್ಯದೃಷ್ಟಿ ನೀಡುವೆ ಎಂದು ವ್ಯಾಸರು ಕೇಳಿದರೆ, ನಿರಾಕರಿಸುತ್ತಾನೆ. ದಿವ್ಯದೃಷ್ಟಿ ಸಿಕ್ಕಿದ್ದರೆ ಆತನ ಧೋರಣೆ ಬದಲಾಗುತ್ತಿತ್ತೇನೋ. ತನ್ನ ಮಕ್ಕಳ ಜನನವನ್ನೂ ನೋಡದ ಕುರುಡನಿಗೆ ಮರಣವನ್ನು ನೋಡುವ ಧೈರ್ಯಸಾಲುವುದಿಲ್ಲ. ಅದನ್ನೇ ಆತ “ನ ರೋಚಯೇ ಜ್ಞಾತಿವಧಂ ದ್ರಷ್ಟುಂ ಬ್ರಹ್ಮರ್ಷಿಸತ್ತಮ । ಯುದ್ಧಮೇತತ್ತ್ವಶೇಷೇಣ ಶ್ರುಣುಯಾಂ ತವ ತೇಜಸಾ”- ಜ್ಞಾತಿವಧೆಯನ್ನು ಕಣ್ಣಿನಿಂದ ನೋಡಲಾರೆ; ಆದರೆ ಕೇಳುವ ಕುತೂಹಲ ಖಂಡಿತವಾಗಿಯೂ ಉಂಟು. ಹಾಗಾಗಿ ಆ ದೃಷ್ಟಿ ಸಂಜಯನಿಗೆ ದೊರಕುವಂತೆ ವರ ಕೇಳಿದ. ಸಾಯುವುದು ತನ್ನ ಮಕ್ಕಳು ಎನ್ನುವ ಅಳಕು ಅವನ ಮನಸ್ಸಿನಲ್ಲಿ ಭಯವನ್ನುಂಟುಮಾಡಿದೆ, ಅದನ್ನು “ಜ್ಞಾತಿವಧೆ” ಎನ್ನುವುದರ ಮೂಲಕ ಪಾಂಡವರ ಸಾವನ್ನು ತನ್ನ ಮನಸ್ಸಿನಲ್ಲಿ ಬಯಸುತ್ತಿದ್ದಾನೆ. ದುರಂತವನ್ನು ನೋಡುವುದಕ್ಕೆ ಧೈರ್ಯಬೇಕು. ಕೇಳುವುದಕ್ಕೆ ಅಷ್ಟೆಲ್ಲಾ ಧೈರ್ಯ ಬೇಕಿಲ್ಲ. ಹಾಗಾಗಿ ಆತ ಈ ದೃಷ್ಟಿ ಸಂಜಯನಿಗೆ ದೊರಕುವಂತೆ ವರ ಕೇಳಿದ. ಈ ಕಾರಣದಿಂದಾಗಿಯೇ ಸಾರಥಿಯಿಂದ ಬೋಧಿಸಿದ ಸರ್ವೋಪನಿಷತ್ತಿನ ಸಾರ ಸಾರಥಿಯ ಮೂಲಕವಾಗಿಯೇ ಪ್ರಪಂಚಮುಖಕ್ಕೆ ತಿಳಿಯುವಂತಾದುದು.

ಪಾಂಡವ ದ್ವೇಷವೆನ್ನುವ ಬೀಜ ಧೃತರಾಷ್ಟ್ರನಲ್ಲಿ ಕಾಣಿಸುವುದು ಯುದ್ಧಭೂಮಿಯಲ್ಲಲ್ಲ. ಅದು ಕೌರವಾದಿಗಳು ಹುಟ್ಟುವುದಕ್ಕಿಂತ ಮೊದಲೇ ಕಾಣಿಸಿಕೊಂಡಿದೆ. ಶತಶೃಂಗ ಪರ್ವತದಲ್ಲಿ ಪಾಂಡುವಿಗೆ ಮಕ್ಕಳಾದ ವಿಷಯ ಅರಮನೆಗೆ ತಿಳಿದಿದೆ. ಈ ವಿಷಯ ತಿಳಿದ ಗಾಂಧಾರಿ ತನ್ನ ಗರ್ಭವನ್ನು ಹೊಟ್ಟೆಕಿಚ್ಚಿನಿಂದ ಕುಕ್ಕಿಕೊಳ್ಳುತ್ತಾಳೆ. ವ್ಯಾಸರ ಘೃತಬಾಂಡದ ಅನುಗ್ರಹದಿಂದ ನಂತರದಲ್ಲಿ ಕೌರವಾದಿಗಳ ಜನನವಾಗುತ್ತದೆ. ಆ ಸಂದರ್ಭದಲ್ಲಿ ಅನೇಕ ಅಪಶಕುನಗಳಾಗುತ್ತವೆ. ಎಷ್ಟೆಂದರೂ ಮಗ ಜನಿಸಿದ ಸಂಭ್ರಮದಲ್ಲಿರುವ ದೊರೆ ತನ್ನ ಮಂತ್ರಿಗಳನ್ನು ಮತ್ತು ವಿದುರನನ್ನೂ ಕರೆಯಿಸಿ ಹೇಳುವ ಮಾತು ತುಂಬಾ ಮಹತ್ವದ್ದು. ಇನ್ನೂ ಅರಿಯದ ತನ್ನ ಮಗು ಜನಿಸಿದ ಕೂಡಲೇ ಆತ ಮಂತ್ರಿಗಳಲ್ಲಿ ಕೇಳುವ ಮಾತು ರಾಜಕುಮಾರರಲ್ಲಿಯೇ ಹಿರಿಯನಾದ ಯುಧಿಷ್ಠಿರನು ಚಂದ್ರಕುಲದ ವಂಶವರ್ಧಕನೆನ್ನುವದು ನಿಶ್ಚಯ.

ಆತನಿಗೆ ಈ ರಾಜ್ಯಸಿಂಹಾಸನವೂ ಸೇರಲೇ ಬೇಕಾಗುತ್ತದೆ ಎಂದಿದ್ದಾನೆ. ಮುಂದುವರಿದು “ತ್ವನನ್ತರಸ್ತಸ್ಮಾದಪಿ ರಾಜಾ ಭವಿಷ್ಯತಿ ಏತದ್ವಿಬ್ರೂತ ಮೇ ತಥ್ಯಂ ಯದತ್ರ ಭವಿತಾ ಧ್ರುವಮ್” (ಮ. ಭಾ. ಸಂ ಪ. 115-32) ಅವನ ನಂತರ ಜನಿಸಿರುವ ಈ ನನ್ನ ಮಗನೂ ರಾಜನಾಗಲೂ ಸಾಧ್ಯವಿದೆಯೇ ಎನ್ನುವ ಆಪ್ತಾಲೋಚನೆಯನ್ನು ಮಾಡುತ್ತಾನೆ. ಅಧಿಕಾರದ ಮೋಹವೆಂದರೆ ಹೀಗೆ. ಯಾವುದೋ ಕಾಲದಲ್ಲಿ ತನ್ನ ಅಧಿಕಾರ ಹೋಗಬಹುದೆನ್ನುವ ಕಾರಣಕ್ಕೆ ಆ ಮೊದಲೇ ಚಿಂತಿಸಿದ ಧೃತರಾಷ್ಟ್ರನ ಭಿತ್ತಿಯಲ್ಲಿಯೇ ಅಸಮರ್ಪಕ ನಡವಳಿಕೆಗಳ ಹುಟ್ಟು ಅಡಗಿದೆ. ತನ್ನ ಹೆಂಡತಿಯೇ ಮೊದಲೇ ಗರ್ಭವತಿಯಾದರೂ ಯುಧಿಷ್ಠರನೇ ಮೊದಲು ಜನಿಸಿದುದಕ್ಕೆ ಅಸಹನೆಯಿದೆ. ಅರಮನೆಗೆ ಬಂದು ಸೇರಿದ ಕುಂತಿಯ ಮಕ್ಕಳನ್ನು ಭೀಷ್ಮಾದಿಗಳು ಒಪ್ಪಿದರೂ ಧೃತರಾಷ್ಟ್ರನ ಅಂತರಂಗದಲ್ಲಿ ಇವರು ಪಾಂಡವರು ಎನ್ನುವ ಭೇದವಿತ್ತು ಎನ್ನುವದನ್ನು ವ್ಯಾಸರು ಇಲ್ಲಿ ಸೂಕ್ಷ್ಮವಾಗಿ ವಿವರಿಸುತ್ತಾರೆ.

ಯಾವುದು ಪಾಪ ಕೃತ್ಯ?

ಪಾಪ ಕೃತ್ಯ ಯಾವುದು ಎನ್ನುವುದನ್ನು ಸಂದರ್ಭ ನಿರ್ಧರಿಸುತ್ತದೆ. ಉದಾಹರಣೆಗೆ ‘ಸತ್ಯ ನುಡಿಯುವುದು ಪುಣ್ಯದ ಕೆಲಸ’ ಎಂದು ಹೇಳಲಾಗದು. ಅದು ಪಾಪವೋ ಪುಣ್ಯವೋ ಎನ್ನುವುದನ್ನು ಸಂದರ್ಭ ನಿರ್ಣಯಿಸುತ್ತದೆ. ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಆಶ್ರಯ ಕೇಳಿ ಬಂದ ವ್ಯಕ್ತಿಯನ್ನು ಅಡಗಿಸಿಟ್ಟು, ದರೋಡೆಕೋರರು ಬಂದು ಪ್ರಶ್ನಿಸಿದಾಗ ಸತ್ಯ ನುಡಿಯುವುದು ಪಾಪದ ಕೆಲಸ. ಅಡಗಿಸಿಟ್ಟ ವ್ಯಕ್ತಿಯ ರಕ್ಷಣೆಗೋಸ್ಕರ ಸುಳ್ಳನ್ನು ಹೇಳುವುದು ಪುಣ್ಯದ ಕೆಲಸ. ಇದೇ ರೀತಿ ಇಲ್ಲಿ ಅರ್ಜುನನಿಗೆ ಧರ್ಮದ ರಕ್ಷಣೆಗೋಸ್ಕರ ಗುರು, ಪಿತಾಮಹರನ್ನು ಎದುರಿಸಿ ಹೋರಾಡುವುದು ಮಹಾ ಪುಣ್ಯದ ಕೆಲಸ ಎನ್ನುವುದನ್ನು ಕೃಷ್ಣ ಮನವರಿಕೆ ಮಾಡಿಸುತ್ತಿದ್ದಾನೆ.

ಹಾಗಾಗಿ ಕೊನೆಗೆ ತಾನು ಹೀಗೆ ಹೇಳಿದ ವಿಷಯಗಳನ್ನು ಚನ್ನಾಗಿ ಮನನ ಮಾಡಿಸಿಯಾದ ಮೇಲೆ “ಯಥೇಚ್ಛಸಿ ತಥಾ ಕುರು- ನಾನು ಹೇಳಿದ ವಿಷಯಗಳನ್ನು ಚೆನ್ನಾಗಿ ವಿಮರ್ಶೆ ಮಾಡಿ ನಂತರ ನಿನ್ನ ಇಚ್ಛೆಬಂದಂತೆ ಮಾಡು” ಎಂದು ಆಯ್ಕೆಯನ್ನು ಅರ್ಜುನನಿಗೇ ಬಿಡುತ್ತಾನೆ. ಗೀತೆಯನ್ನು ಯೋಗವೆಂತಲೂ ಕರೆಯುತ್ತಾರೆ. ಇದಕ್ಕೆ ಕಾರಣ ಇಲ್ಲಿನ 700 ಶ್ಲೋಕಗಳು ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವುದಕ್ಕಿರುವ ಮಹತ್ವದ ಸಾಧನವೆನ್ನುವದನ್ನು ಸಾರುತ್ತದೆ. ಹಾಗಾಗಿಯೇ ಯುದ್ಧಭೂಮಿಯಾದ ಕುರುಕ್ಷೇತ್ರ ಧರ್ಮಕ್ಷೇತ್ರವೆಂದು ಕರೆಯಿಸಿಕೊಳ್ಳಲ್ಪಟ್ಟಿತು.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?