
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಆಡದೇ ಮಾಡುವವನು ರೂಢಿಯೊಳಗುತ್ತಮನು ಎನ್ನುವ ಮಾತಿಗೆ ಅನ್ವರ್ಥ ನಾಮವೇ ಅಟಲ್ ಬಿಹಾರಿ ವಾಜಪೇಯಿ. ತಮ್ಮ ಧೃಡ ನಿರ್ಧಾರಗಳಿಂದ ಇಡೀ ವಿಶ್ವವನ್ನೇ ಭಾರತದತ್ತ ನಿಬ್ಬೆರಗಾಗಿ ನೋಡುವಂತೆ ಮಾಡಿದ ಧೀಮಂತ ನಾಯಕ, ದೇಶಕ್ಕೆ ಕೊಟ್ಟ ಕೊಡುಗೆ ಅನಂತ. ದೇಶ ಮೊದಲು ವ್ಯಕ್ತಿ ನಂತರ ಎನ್ನುವ ಸಿದ್ಧಾಂತದ ಮೂಲಕ ಜನಮನಗೆದ್ದ ‘ಅಜಾತಶತ್ರು’. ಭಾರತದ ರಾಜಕಾರಣದಲ್ಲಿ ತಾವು ನಂಬಿದ ಸಿದ್ಧಾಂತ - ತತ್ವಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೇ ತಮ್ಮ ಸ್ವಂತ ವ್ಯಕ್ತಿತ್ವದ ಮೂಲಕ ಪಕ್ಷಾತೀತವಾಗಿ ‘ಅಜಾತಶತ್ರುʼ ಎಂದು ಕರೆಸಿಕೊಂಡ, ಶತಕೋಟಿ ಭಾರತೀಯ ಹೃದಯಗಳಲ್ಲಿ ಅಭಿಮಾನದ ಸ್ಥಾನ ಅಲಂಕರಿಸಿದ ರಾಜಕೀಯ ನೇತಾರನನ್ನು ರಾಷ್ಟ್ರ ಕಂಡಿದ್ದರೆ ಅದು ಅಟಲ್ ಬಿಹಾರಿ ವಾಜಪೇಯಿಯವರು ಮಾತ್ರ.
ಡಿಸೆಂಬರ್ 25 ವಾಜಪೇಯಿ ಅವರ ಜನ್ಮದಿನ. ದೇಶದ ಅಭಿವೃದ್ಧಿ ರಥಕ್ಕೆ ರಾಜಪಥ ನಿರ್ಮಿಸಿ, ಭವ್ಯ ಭಾರತದ ಬೆಳವಣಿಗೆಗೆ ಭರವಸೆಯ ಬೆಳಕಾಗಿ ನಿಂತವರು ಅಟಲ್‌ಜೀ. ದೇಶ ಕಂಡ ಪ್ರಧಾನಿಗಳ ಪಟ್ಟಿಯಲ್ಲಿ ಅಟಲ್‌ಜೀ ಅವರಿಗೆ ವಿಶೇಷ ಸ್ಥಾನಮಾನ. ಎನ್‌ಡಿಎ ಒಕ್ಕೂಟವನ್ನು ಕಟ್ಟಿಕೊಂಡು ದೇಶದ ಚುಕ್ಕಾಣಿಯನ್ನು ಪ್ರಧಾನಿ ಸ್ಥಾನದಲ್ಲಿ ನಿಂತು ಸಮರ್ಥವಾಗಿ ನಿಭಾಯಿಸಿ, ವಿಶ್ವವೇ ನಿಬ್ಬೆರಗಾಗುವಂತೆ ಭಾರತಕ್ಕೆ ಜಾಗತಿಕ ಭೂಪಟದಲ್ಲಿ ಹೆಗ್ಗುರುತು ಪಡಿಮೂಡಿಸಿದವರು ಅಟಲ್‌ಜೀ.
ಅಟಲ್‌ಜೀ ಮಾರ್ಗದಲ್ಲಿ ಮೋದಿಜೀ: ಅಟಲ್‌ಜೀ ಅವರ ಜನ್ಮದಿನವನ್ನು ‘ಸುಶಾಸನ ದಿವಸ’ವನ್ನಾಗಿ ಆಚರಿಸಲಾಗುತ್ತಿದೆ. ಅವರ ಆದರ್ಶ ವ್ಯಕ್ತಿತ್ವ, ಸಹೃದಯತೆಯ ರಾಜಕಾರಣ, ಸಮಾಜಮುಖಿ ಅಭಿವೃದ್ಧಿ ಕಾರ್ಯಗಳು, ರಾಷ್ಟ್ರಭಕ್ತಿ ಸಾಕ್ಷೀಕರಿಸುವ ಐತಿಹಾಸಿಕ ಹೋರಾಟಗಳನ್ನು ನೆನೆದು ಈ ದಿನವನ್ನು ಸಾರ್ಥಕಗೊಳಿಸಬೇಕೆಂಬುದು ಅಟಲ್‌ಜೀ ಅವರ ಕೋಟಿ ಕೋಟಿ ಅಭಿಮಾನಿಗಳ ಸಂಕಲ್ಪವಾಗಿದೆ. ಭಾರತೀಯ ಜನತಾ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಕೈಂಕರ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅಟಲ್‌ಜೀ ಅವರನ್ನು ನೆನಪಿಸುವುದು, ಅವರ ವ್ಯಕ್ತಿತ್ವ, ಸಾಧನೆ, ಕೊಡುಗೆಗಳನ್ನು ಸ್ಮರಿಸುವ ಕಾರ್ಯಕ್ರಮಗಳು ದೇಶಾದ್ಯಂತ ಜನರನ್ನು ತಲುಪಲಿದೆ. ‘ಸುಶಾಸನ ದಿವಸʼ ಆಚರಿಸಬೇಕೆಂದು ಸಂಕಲ್ಪಿಸಿ, ಪ್ರೇರಣೆ ನೀಡಿದವರು ಪ್ರಧಾನಿ ನರೇಂದ್ರ ಮೋದಿಯವರು. ಅಟಲ್‌ಜೀ ಅವರ ಅನೇಕ ಕಾರ್ಯಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಕನಸು ನನಸು ಮಾಡುವ ನಿಟ್ಟಿನಲ್ಲಿ ‘ವಿಕಸಿತ ಭಾರತ’ ನಿರ್ಮಾಣದ ಹಾದಿಯಲ್ಲಿ ಮೋದಿಯವರು ದಾಪುಗಾಲಿಟ್ಟಿದ್ದಾರೆ.
ನಾನು ಸಾರ್ವಜನಿಕ ಬದುಕು ಆರಂಭಿಸಿದ್ದು ಸಂಘ ಸಂಸ್ಕಾರದ ನೆರಳಿನಲ್ಲಿ, ಸಂಘಟನೆಯ ಜವಾಬ್ದಾರಿ ಹೊರುವ ಮತ್ತು ಹೋರಾಟಗಳನ್ನು ರೂಪಿಸುವ ನಿಟ್ಟಿನಲ್ಲಿ ಅಟಲ್‌ಜೀ ಅವರ ಆದರ್ಶ ರಾಜಕಾರಣ ನನಗೆ ನಿರಂತರ ಪ್ರೇರಣೆಯಾಗಿದೆ. ‘ರಾಜ್ಯದಲ್ಲಿ ಬಿಜೆಪಿ ಸ್ಥಿರವಾಗಿ ನೆಲೆಯೂರಲು ಆರಂಭಿಸಿದ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಿಗೆ ಆ ದಿನಗಳಲ್ಲಿ ನಮಗೆ ಅಟಲ್‌ಜೀ ಅವರು ಅತ್ಯಂತ ಚೈತನ್ಯ ಸ್ವರೂಪಿ ಶಕ್ತಿಯಾಗಿದ್ದರು. ಕರ್ನಾಟಕದಲ್ಲಿ ಇಂದು ಪಕ್ಷ ಭದ್ರವಾಗಿ ನೆಲೆಯೂರಿದ್ದರೆ, ದಕ್ಷಿಣ ಭಾರತದಲ್ಲಿ ಹೆಬ್ಬಾಗಿಲು ತೆರೆದು ಬಿಜೆಪಿ ಆಡಳಿತದ ಯುಗ ಆರಂಭವಾಗಲು ಪ್ರೇರಣೆ ಶಕ್ತಿಯಾಗಿ ಆ ದಿನಗಳಲ್ಲಿ ನಮ್ಮೊಂದಿಗೆ ಗಟ್ಟಿಯಾಗಿ ನಿಂತವರು ಅಟಲ್‌ಜೀ ಎಂಬುದನ್ನು ನಾನೂ ಸೇರಿದಂತೆ ಕರ್ನಾಟಕದ ಬಿಜೆಪಿ ಪ್ರಮುಖರು ಎಂದಿಗೂ ಮರೆಯಲು ಸಾಧ್ಯವಿಲ್ಲʼ ಎಂದು ಬಿ.ಎಸ್.ಯಡಿಯೂರಪ್ಪನವರು ಯಾವಾಗಲೂ ಸ್ಮರಿಸುತ್ತಾರೆ.
ರಾಜಕಾರಣದ ಧರ್ಮರಾಯ ವಾಜಪೇಯಿ: ಮಾತೃ ಹೃದಯ, ಮಗುವಿನ ನಿಷ್ಕಲ್ಮಶ ಮನಸು, ನಿಷ್ಕಪಟ ರಾಜಕಾರಣಕ್ಕೆ ದೇಶದ ರಾಜಕಾರಣದಲ್ಲಿ ಯಾರನ್ನಾದರೂ ಉದಾಹರಣೆ ಕೊಡಬಹುದಾದರೆ ಥಟ್ಟನೆ ನೆನಪಾಗುವ ಹೆಸರು ಅಟಲ್‌ಜೀ ಅವರದ್ದು. ಅತ್ಯುತ್ತಮ ವಾಗ್ಮೀ, ಶ್ರೇಷ್ಠ ಕವಿ, ಸಾಂಸ್ಕೃತಿಕ ಮನಸ್ಸಿನ ಸಮಾಜಮುಖಿ ಕಳಕಳಿಯ ಸಮರ್ಥ ಆಡಳಿತಗಾರನೆಂದು ಕರೆಸಿಕೊಂಡ ವಾಜಪೇಯಿ ಅವರು ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯನ್ನು ಜತನದಿಂದ ಕಾಯ್ದುಕೊಂಡವರು. ಭಾರತದ ಸಂಸ್ಕೃತಿ ಹಾಗೂ ಪರಂಪರೆ ಧರ್ಮದ ತಳಹದಿಯ ಮೇಲೆ ನಿಂತಿದೆ. ಧರ್ಮವನ್ನು ಅತ್ಯಂತ ಭಕ್ತಿ - ಭಾವದಿಂದ ಅನುಸರಿಸಿದ ಭೂಮಿ ಯಾವುದಾದರೂ ಇದ್ದರೆ ಅದು ಭರತ ಭೂಮಿ ಎಂದು ಹೇಳುತ್ತಿದ್ದ ವಾಜಪೇಯಿ ಅವರು ರಾಜಕಾರಣದಲ್ಲಿ ಧರ್ಮರಾಯನಂತೆ ನಡೆದುಕೊಂಡವರು. ‘ರಾಜಕಾರಣದಲ್ಲಿ ಧರ್ಮ ಇರಬೇಕು, ಆದರೆ ಧರ್ಮದಲ್ಲಿ ರಾಜಕಾರಣ ನುಸುಳಬಾರದುʼ ಎಂಬ ರಾಜನೀತಿ ಅನುಸರಿಸಿ ಅವರು ಮಾದರಿಯಾದರು.1998ರ ಮೇ 11ರಂದುʼ ಆಪರೇಷನ್ ಶಕ್ತಿʼ ಎಂದು ಕರೆಯಲಾಗುವ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಭಾರತೀಯ ಅಣು ಶಕ್ತಿಯ ಸಾಮರ್ಥ್ಯನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು. ಇಡೀ ವಿಶ್ವವೇ ಬೆಚ್ಚಿ ಭಾರತದತ್ತ ದೃಷ್ಟಿ ನೆಟ್ಟಿದ್ದು ಅಟಲ್‌ಜೀ ಅವರ ದಿಟ್ಟ ಆಡಳಿತಕ್ಕೆ ಸಾಕ್ಷಿಯಾಯಿತು.
ಕುತಂತ್ರಿ ಪಾಕ್‌ಗೆ ಕಾರ್ಗಿಲ್ ಕದನದ ಪಾಠ: ʼಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧʼ ಎಂಬತತ್ವ ಅಟಲ್‌ಜೀ ಅವರದ್ದು ಎಂಬುದು ಪಾಕಿಸ್ತಾನ ವಿಶ್ವಾಸ ಘಾತುಕತನ ತೋರಿಸಿದಾಗ ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನದ ಬೆನ್ನುನರುಕಿಸಿ, ಭಾರತದ ಪರಾಕ್ರಮದ ಶಕ್ತಿಯನ್ನು ಅನಾವರಣಗೊಳಿಸಿದರು. ಸರ್ವ ಶಿಕ್ಷಣ ಅಭಿಯಾನದ ಮೂಲಕ ಈ ದೇಶದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕೆನ್ನುವ ಉದ್ದೇಶದಿಂದ ಅಕ್ಷರ ಕ್ರಾಂತಿಯನ್ನು ಆರಂಭಿಸಿದರು. ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ ಮತ್ತು ಸಂವಹನ ಕ್ಷೇತ್ರದಲ್ಲಿ ಅಟಲ್‌ಜೀ ಅವರ ಆಡಳಿತ ವ್ಯವಸ್ಥೆ ಬಹುದೊಡ್ಡ ಹೆಜ್ಜೆಯನ್ನಿರಿಸಿ ದೇಶದ ಯುವಶಕ್ತಿಗೆ ಸಾಧಿಸುವ ಹಾದಿಯಲ್ಲಿ ‘ಚಿಮ್ಮುವ ಹಲಗೆ’ ನಿರ್ಮಿಸಿಕೊಟ್ಟಿತು.
ವಿಜ್ಞಾನ, ತಂತ್ರಜ್ಞಾನ, ಆಧುನಿಕ ಶಿಕ್ಷಣ ಸಾಮಾನ್ಯ ಭಾರತೀಯನ ಸ್ವತ್ತಾಗಬೇಕೆಂದು ಅಟಲ್‌ಜೀ ಅವರು ತಮ್ಮ ಆಡಳಿತಾವಧಿಯಲ್ಲಿ ಪರಿಣಾಮಕಾರಿ ಉಪಕ್ರಮ ಕೈಗೊಂಡರು. ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಯೋಜನೆಗಳು ಜನರನ್ನು ತಲುಪುವಂತೆ ಅನುಷ್ಠಾನಗೊಳಿಸಿದರು. ಭಾರತದ ‘ಸುವರ್ಣ ಚತುಷ್ಪಥʼ ಯೋಜನೆ, ವಿಶ್ವದ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಕಡಿಮೆಯಿಲ್ಲದ ರೀತಿಯಲ್ಲಿ ಸಾರ್ಥಕತೆ ಕಂಡುಕೊಂಡಿತು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಗ್ರಾಮಗಳ ಸ್ವರೂಪವನ್ನು ಬದಲಿಸಿ, ಗ್ರಾಮೀಣ ಜನರು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡಿತು. ಹತ್ತು - ಹಲವು ಸವಾಲುಗಳ ನಡುವೆ ಆರ್ಥಿಕ ಕ್ಷೇತ್ರದ ಬೆಳವಣಿಗೆಗೆ ಸಮರೋಪಾದಿಯಲ್ಲಿ ಅವಕಾಶಗಳ ಬಾಗಿಲು ತೆರೆದುಕೊಟ್ಟ ಹೆಗ್ಗಳಿಕೆ ಅಟಲ್‌ಜೀ ಅವರದು.
ಮಾತು ಮೌನ, ಕೆಲಸದ ಸದ್ದು ಹೆಚ್ಚು: ‘ಆಡದೇ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅಧಮನು...’ ಎಂಬ ಸರ್ವಜ್ಞರ ತ್ರಿಪದಿ ರಾಜಕಾರಣದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದ ಸಂದರ್ಭದಲ್ಲಿ ಹೆಚ್ಚು ಪ್ರಸ್ತಾಪಿಸಲಾಗುತ್ತದೆ. ಆದರೆ ಅಟಲ್‌ಜೀ ಅವರು ಮೊದಲ ಸಾಲಿಗೆ ಅರ್ಹರು. ಅಟಲ್‌ಜೀ ಅವರು ನುಡಿಯದೇ ತಂದ ಅನೇಕ ಸುಧಾರಣಾ ನೀತಿ ಹಾಗೂ ಕಾರ್ಯಕ್ರಮಗಳು ಭಾರತದ ಬೆಳವಣಿಗೆಯ ಹಾಗೂ ಜನರ ಕಲ್ಯಾಣಕ್ಕಾಗಿ ದೂರದೃಷ್ಟಿತ್ವದಿಂದ ಜಾರಿಗೆ ತಂದ ಹೆಗ್ಗಳಿಕೆಯ ಮೈಲುಗಲ್ಲುಗಳಾದವು.
ತಮ್ಮ ಸಾರ್ವಜನಿಕ ಬದುಕಿನ ಹಾದಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದರ್ಶದ ನೆರಳನ್ನು ಪ್ರತೀ ಹೆಜ್ಜೆಯಲ್ಲೂ ಪಡಿಯಚ್ಚು ಮೂಡಿಸಿದ್ದಾರೆ. ಸಂಘ ಸ್ಥಾಪಕ ಡಾ.ಹೆಡಗೇವಾರರ ಕನಸು, ಪರಿವಾರದ ಹಿರಿಯರ ತಪಸ್ಸನ್ನು ಸಾಕಾರಗೊಳಿಸುವ ಅಟಲ್‌ಜೀ ಕೊಂಡೊಯ್ದ ಜ್ಯೋತಿಯು ಯಾರೊಬ್ಬರನ್ನೂ ನೋಯಿಸಲಿಲ್ಲ, ಕಿಚ್ಚು ಹತ್ತಿಸಲಿಲ್ಲ ಬದಲಾಗಿ ಶತಕೋಟಿ ಭಾರತೀಯರ ಹೃದಯದಲ್ಲಿ ರಾಷ್ಟ್ರಭಕ್ತಿಯ ಬೆಳಕು ಪ್ರಜ್ವಲಿಸುವಂತಾಯಿತು. ಇಂದು ಭಾರತ ಬಲಿಷ್ಠವಾಗಿ ನಿಂತು, ಜಾಗತಿಕ ಮುಂಚೂಣಿಯಲ್ಲಿ ಅಗ್ರಸ್ಥಾನ ಪಡೆಯಲು ನರೇಂದ್ರ ಮೋದಿಯವರ ಶ್ರಮ ಸಾರ್ಥಕತೆಯ ಕ್ಷಣ ಅನುಭವಿಸುತ್ತಿದ್ದರೆ ಅದು ಅಟಲ್‌ಜೀ ಅವರು ದೇಶಕಟ್ಟಲು ಹಾಕಿದ ಭದ್ರ ಬುನಾದಿಯ ತಳಹದಿಯ ಪ್ರತಿಫಲ ಎನ್ನುವುದನ್ನು ಸ್ವತಃ ಮೋದಿ ಅವರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮೂರು ಬಾರಿ ಪ್ರಧಾನಿಯಾಗಿ ಅದಕ್ಕೂ ಮೊದಲು ವಿದೇಶಾಂಗ ಸಚಿವರಾಗಿ, ವಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅಟಲ್‌ಜೀ ತಮ್ಮ ಸಭ್ಯತೆ ಹಾಸ್ಯ ಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯರಾಗಿ ಅಪರೂಪದ ‘ಸಂತ ರಾಜಕಾರಣಿ’ಎಂದು ಕರೆಸಿಕೊಂಡರು. ಮಹಾನ್ನೇತಾರರಾಗಿ ದೇಶಕ್ಕೆ ಕೊಟ್ಟ ಕೊಡುಗೆಗಳ ಹಿನ್ನಲೆಯಲ್ಲಿ ‘ಪದ್ಮವಿಭೂಷಣ’,‘ಭಾರತ ರತ್ನ’ ಪ್ರಶಸ್ತಿಗಳು ಅವರ ಮುಡಿಯನ್ನು ಅಲಂಕರಿಸಿತು. ಅಟಲ್‌ಜೀ ಅವರ ಜನ್ಮದಿನ ‘ಸುಶಾಸನ ದಿನʼವಾಗಿ ಇಂದು ಆಚರಿಸುತ್ತಿರುವುದರ ದ್ಯೋತಕವಾಗಿ ಭಾರತದ ರಾಜಕಾರಣದಲ್ಲಿರುವವರು, ರಾಷ್ಟ್ರಭಕ್ತ ಕಾರ್ಯಕರ್ತರು, ಕೋಟ್ಯಂತರ ಅಭಿಮಾನಿಗಳು ಅಟಲ್ ಬಿಹಾರಿ ವಾಜಪೇಯಿ ಅವರ ಆದರ್ಶದ ನಡೆ - ನುಡಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಸಂಕಲ್ಪ ತೊಟ್ಟರೆ ಅದು ಅಟಲ್‌ಜೀ ಅವರಿಗೆ ಸಲ್ಲಿಸುವ ನೈಜ ನಮನವಾಗುತ್ತದೆ.