25ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿ ಅಂಕೇಗೌಡರ ಅಪರೂಪದ ಸಾಧನೆ :ಹಸು ಸಾಕಿಯೂ ಪುಸ್ತಕ ಖರೀದಿ

Kannadaprabha News   | Kannada Prabha
Published : Jan 29, 2026, 07:26 AM IST
Ankegowda

ಸಾರಾಂಶ

ಪುಸ್ತಕವೇ ತಮ್ಮ ಉಸಿರು, ಬದುಕು ಎಂದು ಭಾವಿಸಿ ದುಡಿಮೆಯ ಬಹುತೇಕ ಭಾಗವನ್ನು ಪುಸ್ತಕ ಸಂಗ್ರಹಕ್ಕೆ ಖರ್ಚು ಮಾಡಿ 25ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿ ಅಪರೂಪದ ಸಾಧನೆ ಮಾಡಿರುವ ಮಂಡ್ಯ ಜಿಲ್ಲೆ ಪಾಂಡವಪುರದ ಎಂ.ಅಂಕೇಗೌಡ ಅವರು ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಂ.ಅಂಕೇಗೌಡ, ಸಂಸ್ಥಾಪಕರು, ಅಂಕೇಗೌಡ ಪುಸ್ತಕ ಮನೆ, ಪಾಂಡವಪುರ

ಮಂಡ್ಯ ಮಂಜುನಾಥ

ಪುಸ್ತಕವೇ ತಮ್ಮ ಉಸಿರು, ಬದುಕು ಎಂದು ಭಾವಿಸಿ ದುಡಿಮೆಯ ಬಹುತೇಕ ಭಾಗವನ್ನು ಪುಸ್ತಕ ಸಂಗ್ರಹಕ್ಕೆ ಖರ್ಚು ಮಾಡಿ 25ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿ ಅಪರೂಪದ ಸಾಧನೆ ಮಾಡಿರುವ ಮಂಡ್ಯ ಜಿಲ್ಲೆ ಪಾಂಡವಪುರದ ಎಂ.ಅಂಕೇಗೌಡ ಅವರು ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 76ನೇ ವಯಸ್ಸಿನಲ್ಲೂ ಅವರ ಪುಸ್ತಕ ಸಂಗ್ರಹದ ದಾಹ ಇಂಗಿಲ್ಲ. ಈಗಲೂ ಮಹತ್ವದ್ದೆನಿಸಿದ ಪುಸ್ತಕಗಳನ್ನು ಎಷ್ಟೇ ಹಣಕೊಟ್ಟಾದರೂ ಖರೀದಿಸಿ ಪುಸ್ತಕ ಮನೆಯಲ್ಲಿ ಇಡುತ್ತಾರೆ. ಇಂತಹ ವಿಶಿಷ್ಟವಾದ ಪುಸ್ತಕ ಸಂಗ್ರಹ ಆರಂಭವಾದ ಬಗೆ, ಪುಸ್ತಕ ಮನೆಯಲ್ಲಿರುವ ಪುಸ್ತಕಗಳ ವಿಶೇಷತೆ, ಪಟ್ಟ ಶ್ರಮ, ಪುಸ್ತಕ ಮನೆಯ ಭವಿಷ್ಯದ ಕನಸಿನ ಬಗ್ಗೆ ಚರ್ಚಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಪುಸ್ತಕ ಮನೆಯ ಎಂ.ಅಂಕೇಗೌಡ.

- ರಾಷ್ಟ್ರದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಈ ಬಗ್ಗೆ ನಿಮಗೆ ಹೇಗನಿಸುತ್ತೆ?

ನಾನೆಂದೂ ಪ್ರಶಸ್ತಿಗಳ ಹಿಂದೆ ಹೋದವನಲ್ಲ. ಬೇಕಿದ್ದರೆ ನನಗೆ ಬಂದಿರುವ ಪ್ರಶಸ್ತಿಗಳನ್ನೆಲ್ಲ ವಾಪಸ್ ತೆಗೆದುಕೊಳ್ಳಲಿ. ನನ್ನಲ್ಲಿರುವ ಪುಸ್ತಕಗಳಿಗೊಂದು ಆಶ್ರಯ ಕಲ್ಪಿಸಿದರಷ್ಟೇ ಸಾಕು. ನನ್ನನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಸಂತೋಷ, ಖುಷಿ ಕೊಟ್ಟಿದೆ. ಅದೇ ಆಸಕ್ತಿ, ಪ್ರೀತಿಯನ್ನು ಪುಸ್ತಕಗಳ ವ್ಯವಸ್ಥಿತ ಜೋಡಣೆಗೆ, ಓದುಗರ ವೀಕ್ಷಣೆಗೆ, ಅಧ್ಯಯನಕ್ಕೆ ನೀಡಬೇಕೆಂಬುದು ನನ್ನ ಅಭಿಪ್ರಾಯ.

- ಪ್ರಚಾರದಿಂದ ಸದಾ ದೂರ ಇರುವ ನಿಮ್ಮ ನಿರೀಕ್ಷೆ, ಹಂಬಲವೇನು?

ನನಗೆ ಪ್ರಚಾರ ಬೇಕಿಲ್ಲ. ಪುಸ್ತಕಗಳು ಬೇಕು. ನಾನು ಬದುಕಿರುವ ಸಮಯದಲ್ಲೇ ಈ ಎಲ್ಲಾ ಪುಸ್ತಕಗಳು ಅಚ್ಚುಕಟ್ಟಾಗಿ ಜೋಡಣೆಯಾಗಬೇಕು. ಅದಕ್ಕೆ 10 ಎಕರೆ ಭೂಮಿ, ಅದರಲ್ಲೊಂದು ಭವ್ಯವಾದ ಸುಂದರ ಕಟ್ಟಡ. ಎಲ್ಲಾ ಪುಸ್ತಕಗಳನ್ನು ವಿಂಗಡಿಸಿ ವ್ಯವಸ್ಥಿತ ರೀತಿಯಲ್ಲಿ ಜೋಡಿಸಿಡಬೇಕು. ಓದುಗರಿಗೆ ಇಂಥ ಪುಸ್ತಕ, ಇದೇ ಸ್ಥಳದಲ್ಲಿದೆ ಎಂಬ ಮಾಹಿತಿ ಸುಲಭವಾಗಿ ಸಿಗಬೇಕು. ಅದೊಂದು ಪುಸ್ತಕ ಮ್ಯೂಸಿಯಂ ಆಗಿರಬೇಕು. ಯಾರಿಂದಲೂ ಒಂದು ರುಪಾಯಿ ಹಣವನ್ನೂ ಪಡೆಯದೆ ಓದುಗರಿಗೆ ಉಚಿತವಾಗಿ ಪುಸ್ತಕಗಳು ಸಿಗಬೇಕು. ಅಲ್ಲೊಂದು ಗಾರ್ಡನ್ ಇರಬೇಕು. ಬರುವವರು ತಂಗಲು ವಿಶ್ರಾಂತಿ ಕೊಠಡಿಗಳಿರಬೇಕು. ಕ್ಯಾಂಟೀನ್, ಕುಡಿಯುವ ನೀರಿನ ವ್ಯವಸ್ಥೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವಂಥ ಮನಸ್ಸು ಸರ್ಕಾರಗಳಿಗೆ ಬರಬೇಕು. ಆಗ ಪುಸ್ತಕ ಸಂಗ್ರಹದ ಉದ್ದೇಶ, ನನ್ನ ಬದುಕು ಎರಡೂ ಸಾರ್ಥಕಗೊಳ್ಳುತ್ತದೆ. ಇದಿಷ್ಟೇ ನನ್ನ ಬದುಕಿನ ಕೊನೆಯ ಆಸೆ.

-ಪುಸ್ತಕ ಸಂಗ್ರಹಿಸುವ ಹವ್ಯಾಸ ಆರಂಭವಾಗಿದ್ದು ಹೇಗೆ? ಸ್ಫೂರ್ತಿ ಯಾರು?

ನಾನು ಮೂಲತಃ ಹಳ್ಳಿಯಿಂದ ಬಂದವನು. ಹೈಸ್ಕೂಲ್‌ವರೆಗೆ ಲೈಬ್ರರಿಯನ್ನೇ ನೋಡಿರಲಿಲ್ಲ. ನನಗೆ ಸಣ್ಣ ವಯಸ್ಸಿನಿಂದಲೂ ಪುಸ್ತಕಗಳನ್ನು ಕಂಡರೆ ಬಹಳ ಪ್ರೀತಿ. ರಾಮಕೃಷ್ಣ ಆಶ್ರಮದ ಪುಸ್ತಕಗಳನ್ನು ಓದಿ ಆಕರ್ಷಿತನಾದೆ. ಮಹಾರಾಜ ಕಾಲೇಜಿನ ವಿದ್ಯಾಗುರು ಕೆ.ಅನಂತರಾಮ್ ಅವರು ಜಗತ್ತಿನ ಒಳ್ಳೆಯ ಪುಸ್ತಕಗಳನ್ನು ಸಂಗ್ರಹಿಸುವಂತೆ ಹೇಳಿದ ಮಾತು ಪುಸ್ತಕಗಳ ಸಂಗ್ರಹಕ್ಕೆ ಸ್ಫೂರ್ತಿಯಾಯಿತು.

- ಪುಸ್ತಕ ಖರೀದಿಗೆ ನಿವೇಶನ ಕೂಡ ಮಾರಾಟ ಮಾಡಿದರಂತೆ? ಕಷ್ಟದಲ್ಲಿ ನಿಮ್ಮ ಕೈಹಿಡಿದವರು ಯಾರು?

ನಾನು ಪುಸ್ತಕ ಖರೀದಿಗೆ ನಿವೇಶನವೊಂದನ್ನು ಮಾರಾಟ ಮಾಡಿದೆ. ನನಗೆ ಕಷ್ಟ ಕೈ ಹಿಡಿಯಿರಿ ಎಂದು ಯಾರ ಮನೆ ಬಾಗಿಲಿಗೂ ಹೋಗಲಿಲ್ಲ. ಹಣಕ್ಕಾಗಿ ಕೈಚಾಚಲೂ ಇಲ್ಲ. ಇದೆಲ್ಲವನ್ನೂ ಪುಸ್ತಕದ ಮೇಲಿನ ಪ್ರೀತಿಯಿಂದ ಮಾಡಿದೆ. ನನ್ನನ್ನು ಕೆಲವರು ಪುಸ್ತಕಗಳ ಸಂತ ಎನ್ನುತ್ತಾರೆ. ಆ ಭಾವನೆ ನನ್ನಲ್ಲಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಒಪ್ಪತ್ತು ಗಂಜಿ ಕುಡಿಯುವೆ, ಒಂದು ಹೊತ್ತು ಊಟ ಮಾಡುವೆ. ಅದಕ್ಕೆ ಎಷ್ಟು ಹಣ ಬೇಕೋ ಅಷ್ಟು ನನ್ನಲ್ಲಿದೆ. ಈ ಪುಸ್ತಕ ಮನೆ ಮೇಲೆ ನನ್ನ ಕುಟುಂಬದವರಿಗೆ ಯಾವುದೇ ಅಧಿಕಾರವಿಲ್ಲ. ಇದು ಸಾರ್ವಜನಿಕರ ಆಸ್ತಿ. ನನಗೆ ಹಣ ಮಾಡಬೇಕೆಂಬ ಆಸೆ ಇಲ್ಲ. ನಾನು ಕಷ್ಟಪಟ್ಟು ಸಂಗ್ರಹಿಸಿರುವ ಪುಸ್ತಕಗಳಿಗೊಂದು ಶಾಶ್ವತ ನೆಲೆ ಸಿಗಬೇಕು. ಅಲ್ಲಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು, ಸಂಶೋಧಕರು, ಪುಸ್ತಕ ಪ್ರೇಮಿಗಳು ಬರಬೇಕು. ಅವರ ಜ್ಞಾನದಾಹವನ್ನು ನನ್ನ ಪುಸ್ತಕಗಳು ತಣಿಸಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗಬೇಕೆನ್ನುವುದಷ್ಟೇ ನನ್ನ ಕನಸು. ಆ ಕನಸು ನನಸಾದರೆ ಅದೇ ನನಗೆ ಸ್ವರ್ಗ. ಈಗಲೂ ನನ್ನ ಪುಸ್ತಕ ಲೋಕದೊಳಗಿರುವುದನ್ನೇ ನಾನು ಬಯಸುತ್ತೇನೆ. ಇದು ನನಗೆ ಅತ್ಯಂತ ಪ್ರಿಯವಾದ ಸ್ಥಳ. ಓದಲು ಬರುವ ಜನರೆಲ್ಲರಿಗೂ ಪುಸ್ತಕ ಮನೆಗೆ ಸದಾ ಸ್ವಾಗತ.

- ನಿಮ್ಮ ಪುಸ್ತಕಾಲಯದಲ್ಲಿ ಇರುವ ಪುಸ್ತಕಗಳ ಸಂಗ್ರಹ ಎಷ್ಟು? ಯಾವ ಯಾವ ಕೃತಿಗಳು ಇವೆ?

ಪುಸ್ತಕ ಮನೆಯಲ್ಲಿ ೨೫ ಲಕ್ಷ ಪುಸ್ತಕಗಳಿವೆ. ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಉರ್ದು, ಕೊಡವ, ಕೊಂಕಣಿ, ತುಳು ಸೇರಿದಂತೆ ಇನ್ನೂ ಅನೇಕ ಭಾಷೆಯ ಪುಸ್ತಕಗಳಿವೆ. ಎರಡೂವರೆ ಸಾವಿರ ಭಗವದ್ಗೀತೆ, ಮೂರು ಸಾವಿರ ರಾಮಾಯಣ ಗ್ರಂಥಗಳಿವೆ. ಕಾವ್ಯ, ವಿಮರ್ಶೆ, ಗದ್ಯ, ವ್ಯಾಖ್ಯಾನ ಹೀಗೆ ಎಲ್ಲಾ ಮಾದರಿಗಳಲ್ಲೂ ಓದಲು ಸಿಗಲಿವೆ. ಕನ್ನಡ ಕವಿವರ್ಯರ ಎಲ್ಲಾ ಕೃತಿಗಳು, ಕಾದಂಬರಿಗಳು, ಜ್ಞಾನಪೀಠ ಪ್ರಶಸ್ತಿ ಪಡೆದವರ ಪುಸ್ತಕಗಳು, ಲೇಖಕರ ಸಮಗ್ರ ಕೃತಿಗಳು, 15 ಭಾಷೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರ ಅನುವಾದಿತ ಕೃತಿಗಳು ಇವೆ.

- ಅತ್ಯಮೂಲ್ಯ ಪುಸ್ತಕಗಳನ್ನು ನೀವು ಸಂಗ್ರಹಿಸಿದ್ದು ಹೇಗೆ?

ಗೋದಾಮಿನಿಂದ ಹಿಡಿದು ಬುಕ್ ಹೌಸ್‌ಗಳವರೆಗೆ ಸುತ್ತಾಡಿದ್ದೇನೆ. 37 ಸಾಹಿತ್ಯ ಸಮ್ಮಳನಗಳಲ್ಲಿ ಭಾಗಿಯಾಗಿದ್ದೇನೆ. ಮೈಸೂರು, ಬೆಂಗಳೂರು, ನವೆಂಬರ್ ತಿಂಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಪುಸ್ತಕದ ಅಂಗಡಿಗಳಿಗೆ ಅಲೆದಾಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೀಗೆ ಪುಸ್ತಕಗಳಿಗಾಗಿ ಖುಷಿಯಿಂದ ಸುತ್ತಾಡಿದ್ದೇನೆ. ಅತ್ಯಮೂಲ್ಯವಾದ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ. ಪುಸ್ತಕಗಳ ಖರೀದಿಗೆ ಖರ್ಚಾದ ಹಣ ಎಷ್ಟು ಎಂದು ನಾನು ಲೆಕ್ಕ ಇಟ್ಟಿಲ್ಲ. ಅಂದಾಜನ್ನೂ ಹೇಳಲಾರೆ. ಒಟ್ಟಾರೆ 33 ವರ್ಷದಲ್ಲಿ ನನ್ನ ದುಡಿಮೆಯ ಶೇ.೭೦ರಷ್ಟು ಹಣವನ್ನು ಪುಸ್ತಕಗಳ ಖರೀದಿಗೇ ಹಾಕಿದ್ದೇನೆ. ಉಳಿದ ಶೇ.೩೦ರಷ್ಟು ಹಣದಲ್ಲಿ ನನ್ನ ಜೀವನ ನಡೆಸಿಕೊಂಡು ಬಂದಿದ್ದೇನೆ. ಪುಸ್ತಕಕ್ಕೆ ಹಣ ಸಾಲದೆಂಬ ಕಾರಣಕ್ಕೆ ಹಸುವನ್ನು ಸಾಕಿ ಹಾಲು ಮಾರಿ ಅದರಿಂದ ಬಂದ ಹಣವನ್ನೂ ಪುಸ್ತಕ ಸಂಗ್ರಹಕ್ಕೆ ಹಾಕಿದ್ದೇನೆ. ನನ್ನ ಹೆಸರಿನಲ್ಲಿದ್ದ ಒಂದು ನಿವೇಶನವನ್ನೂ ಮಾರಿ ಅದರಿಂದ ಬಂದ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿ ಪುಸ್ತಕ ಮನೆಯೊಳಗೆ ಸೇರಿಸಿದ್ದೇನೆ.

-ಪುಸ್ತಕ ಮನೆಗೆ ಈವರೆಗೆ ಭೇಟಿ ನೀಡಿರುವ ಗಣ್ಯರು ಯಾರ್‍ಯಾರು? ಬಂದಂಥ ಪ್ರಶಸ್ತಿಗಳ ಸಂಖ್ಯೆ ಎಷ್ಟು?

ಪುಸ್ತಕ ಮನೆಗೆ ಸುಪ್ರೀಂಕೋರ್ಟ್ ಜಸ್ಟೀಸ್ ವೆಂಕಟಾಚಲಯ್ಯ, ಅಮೆರಿಕ ಹೈಕೋರ್ಟ್ ಜಡ್ಜ್ ಥಾಮ್ಸನ್, ನ್ಯಾಯಮೂರ್ತಿ ಗೋಪಾಲಗೌಡ, ನಾಡೋಜ ದೇ.ಜವರೇಗೌಡ, ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ, ಸಾಹಿತಿ-ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್, ಕಾಂಗ್ರೆಸ್ ಯುವ ನಾಯಕ ರಾಹುಲ್‌ಗಾಂಧಿ, ಇನ್ಫೋಸಿಸ್‌ನ ಕೆ.ಸುಧಾಮೂರ್ತಿ, ಆದಿ ಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೀಗೆ ಅನೇಕ ಗಣ್ಯಮಹಾಶಯರು ಭೇಟಿ ನೀಡಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವಪುಸ್ತಕ ಮೇಳದಲ್ಲಿ ನನ್ನ ಸಂಗ್ರಹದ ಪುಸ್ತಕ ಮಳಿಗೆಗೆ ಅತ್ಯುತ್ತಮ ಪುಸ್ತಕ ಸಂಗ್ರಹ ಮಳಿಗೆ ಎಂದು ಪ್ರಶಂಸಿಸಿ ನಟ ಪುನೀತ್‌ರಾಜ್‌ಕುಮಾರ್ ಅವರಿಂದ ಪ್ರಶಸ್ತಿಯನ್ನು ಕೊಡಲಾಗಿತ್ತು. ಉಳಿದಂತೆ ಲಿಮ್ಕಾ ಬುಕ್ ಆಫ್ ಅವಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ರಾಜ್ಯೋತ್ಸವ ಪ್ರಶಸ್ತಿ, ಕನ್ನಡಪ್ರಭ ಪತ್ರಿಕೆಯಿಂದ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಪಬ್ಲಿಕ್ ಹೀರೋ, ನಮ್ಮ ಬಾಹುಬಲಿ, ಏಳನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಸೇರಿ ವಿವಿಧ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳು ಬಂದೊದಗಿವೆ.

- ನಿಮ್ಮ ಪುಸ್ತಕ ಸಂಗ್ರಹಾಲಯದಲ್ಲಿ ಯಾವ ಯಾವ ಭಾಷೆಯ ಎಷ್ಟು ಪುಸ್ತಕಗಳು ಇವೆ?

ಹತ್ತು ಲಕ್ಷ ಕನ್ನಡ ಪುಸ್ತಕಗಳು, ಐದು ಲಕ್ಷ ಇಂಗ್ಲಿಷ್‌, 10 ಸಾವಿರ ತಮಿಳು, ತೆಲುಗಿನ ತಲಾ ಹತ್ತು ಸಾವಿರ, ಐದು ಸಾವಿರ ಉರ್ದು, ಪರ್ಷಿಯನ್ ಭಾಷೆಯ ಪುಸ್ತಕಗಳು, ಕೊಡವ, ಕೊಂಕಣಿ, ತುಳು ಸೇರಿ ಇನ್ನಿತರ ಭಾಷೆಯ ಐದು ಸಾವಿರ ಪುಸ್ತಕಗಳು ಇವೆ. ಎರಡೂವರೆ ಸಾವಿರ ಭಗವದ್ಗೀತೆ, ಐದು ಸಾವಿರ ಡಿಕ್ಷನರಿಗಳು, ೧೦೦ ಕುರಾನ್, ೫೦೦ ಬೈಬಲ್, ಎರಡೂವರೆ ಸಾವಿರ ರಾಮಾಯಣ, ಮಹಾಭಾರತ ಎಲ್ಲವೂ ನನ್ನ ಪುಸ್ತಕ ಮನೆಯಲ್ಲಿ ಅಡಕವಾಗಿವೆ.

-ಡಿಜಿಟಲೀಕರಣ, ಮತ್ತು ಕ್ಷೀಣವಾಗುತ್ತಿರುವ ಈ ಯುಗದಲ್ಲಿ ಪುಸ್ತಕಗಳ ಓದಿನ ಬಗ್ಗೆ ಯುವಕರಿಗೆ ನಿಮ್ಮ ಸಲಹೆ ಏನು?

ಇದೊಂದು ರೀತಿಯಲ್ಲಿ ಸರ್ಕಲ್ ಇದ್ದಂತೆ. ಎಲ್ಲಿ ಆರಂಭವಾಗುವುದೋ ಅಲ್ಲಿಗೇ ಬಂದು ನಿಲ್ಲಬೇಕು. ಮೂಲವನ್ನು ಹುಡುಕಿಕೊಂಡು ಬಂದಾಗ ಮತ್ತೆ ಪುಸ್ತಕಗಳ ಕಡೆಗೆ ಬರಲೇಬೇಕು. ಕಂಪ್ಯೂಟರ್, ತಂತ್ರಜ್ಞಾನ ಎಲ್ಲವೂ ಬೇಕು. ಆದರೆ, ಪುಸ್ತಕ ಸಂಸ್ಕೃತಿಯನ್ನು ಕಳೆದುಕೊಳ್ಳಬಾರದು. ಯುವಕರು ಓದಿನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಯಾವುದೇ ಒಂದು ಪುಸ್ತಕವನ್ನು ಹಿಡಿದು ಓದಿದಾಗ ಸಿಗುವಷ್ಟು ಅನುಭವ, ತನ್ಮಯತೆ ಕಂಪ್ಯೂಟರ್‌ನಲ್ಲಿ ಓದುವುದರಿಂದ ಸಿಗುವುದಿಲ್ಲ. ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ ಎನ್ನುವ ಹೊತ್ತಿನಲ್ಲೇ ಪ್ರತಿ ವರ್ಷ ಪುಸ್ತಕಗಳ ಮಾರಾಟ ಸಂಖ್ಯೆ ಹೆಚ್ಚುತ್ತಿದೆ. ಕೃತಿಗಳ ಬೆಲೆ ಹೆಚ್ಚಾಗುತ್ತಿದೆ. ಆದರೂ ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ತಂತ್ರಜ್ಞಾನ ಎಷ್ಟೇ ಬೆಳೆಯಲಿ. ಪುಸ್ತಕವನ್ನು ಓದುವ ಹವ್ಯಾಸದಿಂದ ದೂರವಾಗಬಾರದು.

PREV
Read more Articles on
click me!

Recommended Stories

ರಾಮ್ ಚರಣ್ - ಉಪಾಸನಾ ದಂಪತಿಗೆ ಬಂಪರ್ ಗಿಫ್ಟ್; ಅವಳಿ ಗಂಡು ಮಕ್ಕಳ ಆಗಮನದ ನಿರೀಕ್ಷೆ!
ಸಿಂಗಿಂಗ್‌ಗೆ ಅರಿಜಿತ್ ಸಿಂಗ್ 'ಗುಡ್‌ಬೈ' ಸೀಕ್ರೆಟ್; 'ಹೋದ್ಯಾ ಅಂದ್ರೆ ಇಲ್ಲ ಇನ್ನೊಂದು ಕಡೆ ಬಂದೆ' ಎಂದ ಗಾಯಕ!