ಪ್ಲಂಬರ್, ಎಲೆಕ್ಟ್ರೀಷಿಯನ್‌ಗೂ ಲಕ್ಷ ರು. ಸಂಬಳ ಕೊಡಿಸುತ್ತೆ ಎಐ ! ಕಾರ್ಮಿಕರಿಗಿನ್ನು ಕೈತುಂಬಾ ಸಂಬಳ!

Kannadaprabha News   | Kannada Prabha
Published : Jan 27, 2026, 07:46 AM IST
Jensen Huang

ಸಾರಾಂಶ

ಕೃತಕ ಬುದ್ಧಿಮತ್ತೆಗೆ ಜಗತ್ತು ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಲವರಿಗೆ ಭವಿಷ್ಯದಲ್ಲಿ ಕೆಲಸ ಕಳೆದುಕೊಳ್ಳುವ ಚಿಂತೆ ಶುರುವಾಗಿದೆ. ಕೋಡಿಂಗ್‌ ಕಾರ್ಯವನ್ನು ಅದು ಕ್ಷಣಾರ್ಧದಲ್ಲಿ ಮಾಡುವುದನ್ನು ನೋಡಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ತಲೆ ಮೇಲೆ ಕೈ ಹೊತ್ತಿದ್ದಾರೆ.

ಜೆನ್ಸನ್ ಹುವಾಂಗ್ಎನ್ವಿಡಿಯ ಸಿಇಒ

ಕೃತಕ ಬುದ್ಧಿಮತ್ತೆಗೆ ಜಗತ್ತು ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಲವರಿಗೆ ಭವಿಷ್ಯದಲ್ಲಿ ಕೆಲಸ ಕಳೆದುಕೊಳ್ಳುವ ಚಿಂತೆ ಶುರುವಾಗಿದೆ. ಕೋಡಿಂಗ್‌ ಕಾರ್ಯವನ್ನು ಅದು ಕ್ಷಣಾರ್ಧದಲ್ಲಿ ಮಾಡುವುದನ್ನು ನೋಡಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ತಲೆ ಮೇಲೆ ಕೈ ಹೊತ್ತಿದ್ದಾರೆ. ಅವರ ಆತಂಕ ಸಹಜ. ಆದರೆ ಒಂದು ವರ್ಗದ ಉದ್ಯೋಗ ಕಸಿಯಲಿರುವ ಎಐ, ನುರಿತ ಕೆಲಸಗಾರರಿಗೆ ಭಾರೀ ಬೇಡಿಕೆಯನ್ನು ಸೃಷ್ಟಿಸಲಿದೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. 5 ಕೆಲಸಗಳನ್ನು ಎಐ ಕಸಿದರೆ, 6 ಹೊಸ ಉದ್ಯೋಗಗಳನ್ನು ಅದೇ ಸೃಷ್ಟಿ ಮಾಡಲಿದೆ. ಈ ಮೂಲಕ ದೊಡ್ಡ ರೂಪಾಂತರಕ್ಕೆ ನಾಂದಿ ಹಾಡುತ್ತದೆ. ದಿನನಿತ್ಯದ ಕೆಲಸಗಳನ್ನು ಎಐ ಸ್ವಯಂಚಾಲಿತವಾಗಿ ಮಾಡುತ್ತಾ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಅದರ ಜತೆಜತೆಗೇ ಕೊಳಾಯಿ ಕೆಲಸ ಮಾಡುವವರು, ವಿದ್ಯುತ್‌ ಕೆಲಸಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿಸುವುದರ ಜತೆಗೆ, ಅವರೆಲ್ಲ ಹೆಚ್ಚು ಹೆಚ್ಚು ವೇತನ ಪಡೆಯುವಂತೆ ಮಾಡುತ್ತದೆ.

ಕೋಡಿಂಗ್‌ ಸುಲಭವಾಗಿದೆ:

ಪ್ರಸ್ತುತ ಎಐ ಎಂಬುದು ರಸ್ತೆ, ವಿದ್ಯುತ್‌ನಂತೆ ಒಂದು ಅಗತ್ಯ ಮೂಲಸೌಕರ್ಯ. ಎಲ್ಲಾ ರಾಷ್ಟ್ರಗಳು ಆ ವಿಷಯದಲ್ಲಿ ಕೆಲಸ ಮಾಡುತ್ತಿವೆ. ಇಂದು ಕಂಪ್ಯೂಟರ್‌ ಪದವಿ ಇಲ್ಲದಿರುವವರು ಸಹ ಪ್ರೋಗ್ರಾಮಿಂಗ್‌ ಮಾಡಬಹುದು. ಸಂಕೀರ್ಣ ಕೋಡಿಂಗ್‌ ಅಧ್ಯಯನದ ಅಗತ್ಯವೇ ಇಲ್ಲ. ‘ಎಐ, ವೆಬ್‌ಸೈಟ್‌ ಸೃಷ್ಟಿಸುವುದು ಹೇಗೆ?’ ಎಂದು ಹೇಳಿದರೆ, ಹಂತಹಂತವಾಗಿ ಹೇಳಿಕೊಡುತ್ತದೆ. ಅರ್ಥವಾಗದಿದ್ದರೆ ತಾನೇ ಕೋಡ್‌ ಕೂಡ ಬರೆದು ಕೊಡುತ್ತದೆ. ಇದು ದೂರದ ಮಾತಾಯಿತು. ‘ಎಐ ಬಳಸುವುದು ಹೇಗೆ?’ ಎಂದು ಪ್ರಶ್ನಿಸಿದರೂ ಅದನ್ನೂ ಬೇಸರವಿಲ್ಲದೆ ಕಲಿಸುತ್ತದೆ. ಇದಕ್ಕೆ ಬಳಸಲಾಗುವ ಕ್ಲೌಡ್‌, ಜೆಮಿನಿಯಂತಹ ಜೆನರೇಟಿವ್‌ ಟೂಲ್‌ಗಳು ಕೋಡರ್‌ಗಳ ಭಯಕ್ಕೆ ಕಾರಣವಾಗಿವೆ.

ಕಟ್ಟಡಗಳಿಗೆ ಡಿಮ್ಯಾಂಡ್‌:

ದಿನೇದಿನೇ ಹೆಮ್ಮರವಾಗಿ ಬೆಳೆಯುತ್ತಿರುವ ಎಐ ವೇಗಕ್ಕೇ ಸಮನಾಗಿ ಅದಕ್ಕೆ ಅಗತ್ಯವಾದ ಮೂಲಸೌಕರ್ಯಗಳ ನಿರ್ಮಾಣವೂ ಅತ್ಯಗತ್ಯ. ಡೇಟಾ ಸೆಂಟರ್‌, ಸೆಮಿಕಂಡಕ್ಟರ್‌ ನಿರ್ಮಾಣ ಘಟಕ, ಕಚೇರಿಗಳನ್ನು ನಿರ್ಮಿಸುವುದು ಎಐನಿಂದ ಆಗದ ಕೆಲಸ. ಅದಕ್ಕೆ ಕಾರ್ಮಿಕರೇ ಬೇಕು. ಇತ್ತೀಚೆಗೆ ಅವರ ಕೊರತೆ ಕಾಣತೊಡಗಿದೆ. ಆದರೆ ಮುಂದೆ ಭಾರೀ ಬೇಡಿಕೆ ಹೆಚ್ಚಲಿರುವ ಕಾರಣ, ಪ್ಲಮಿಂಗ್‌, ಸ್ಟೀಲ್‌, ವಿದ್ಯುತ್‌ ಕೆಲಸ, ನಿರ್ಮಾಣ ಕ್ಷೇತ್ರಗಳಲ್ಲಿ ಹೊಸ ಹೊಸ ಉದ್ಯೋಗಗಳು ತೆರೆದುಕೊಳ್ಳಲಿದೆ. ಅದರಲ್ಲೂ ವಿಶೇಷವಾಗಿ ಪ್ರವೀಣರಿಗೆ ಕೇಳಿದಷ್ಟು ವೇತನ ಸಿಗಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ಲಮರ್‌, ಬಡಗಿ, ಎಲೆಕ್ಟ್ರೀಷನ್‌ಗಳಿಗೆ ಎಐ ಉದ್ಯೋಗ ಸೃಷ್ಟಿಸಿ ಕೈತುಂಬಾ ಸಂಬಳ ಕೊಡಲಿದೆ.

ಅಮೆರಿಕದಲ್ಲಿ ಟ್ರೆಂಡ್‌ ಶುರು:

ಈ ಎಲ್ಲಾ ಬೆಳವಣಿಗೆಗಳು ಆಗುವ ಕಾಲ ದೂರವಿಲ್ಲ. ಅಮೆರಿಕದಲ್ಲಿ ಈಗಾಗಲೇ ಈ ಟ್ರೆಂಡ್‌ ಶುರುವಾಗಿದೆ. ಎ.ಸಿ. ಫ್ರಿಡ್ಜ್‌ಗಳಂತಹ ಎಲೆಕ್ಟ್ರಿಕಲ್‌ ಸಾಧನಗಳನ್ನು ಇನ್ಸ್‌ಟಾಲ್‌ ಮಾಡುವ, ನಿರ್ವಹಿಸುವ ಮತ್ತು ದುರಸ್ತಿ ಮಾಡುವ ನುರಿತ ವೃತ್ತಿಪರರು, ವಿದ್ಯುತ್‌ಗೆ ಸಂಬಂಧಿಸಿದ ಕೆಲಸ ಮಾಡುವವರು, ಕಟ್ಟಡ ನಿರ್ಮಿಸುವವರಿಗೆ ಸಿಗುತ್ತಿರುವ ಸಂಬಳದಲ್ಲಿ ಈಗ ಹೆಚ್ಚಳವಾಗಿದೆ. ಚಿಪ್‌ ತಯಾರಕನಾಗಿರುವ ನಮ್ಮ ಎನ್ವಿಡಿಯಾ ಕಂಪನಿಯೇ ಇದಕ್ಕೆ ಸಾಕ್ಷಿಯಾಗಿದೆ. ನಾವು ತಯಾರಿಸುವ ಜಿಪಿಯು ಚಿಪ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಪರಿಣಾಮ, ಅವುಗಳ ಉತ್ಪಾದನೆ, ಬಳಕೆ, ತರಬೇತಿಗೆ ದೊಡ್ಡದೊಡ್ಡ ಡೇಟಾ ಸೆಂಟರ್‌ಗಳ ನಿರ್ಮಾಣ ಅನಿವಾರ್ಯವಾಗಿದೆ. ಈ ನಿರ್ಮಾಣ ಕಾರ್ಯಮಾಡಲು ನುರಿತ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ.

PREV
Read more Articles on
click me!

Recommended Stories

ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ 'ಆ ಮಂತ್ರ'ದ ಸಂದೇಶ ಸಾರಿದ ನಟ ಶಾರುಖ್ ಖಾನ್
Thalapathy Vijay: ಯಾರ ಮುಂದೆಯೂ ಮಂಡಿಯೂರುವ ಮಾತೇ ಇಲ್ಲ: ದಳಪತಿ ವಿಜಯ್ ಖಡಕ್ ಎಚ್ಚರಿಕೆ