101 ಕೇಸ್ ದಾಖಲಾಗಿ ಸೆಂಚುರಿ ಬಾರಿಸಿ ಕೈದಿಯಾದ

By Kannadaprabha NewsFirst Published Oct 23, 2019, 2:09 PM IST
Highlights

ಇಲ್ಲೊಬ್ಬ ಸೆಂಚುರಿ ಕಳ್ಳನಿದ್ದಾನೆ. ಈತನ ಬಗ್ಗೆ ಕೇಳಿದರೆ ಅಚ್ಚರಿಯಾಗುತ್ತೆ. ಬರೋಬ್ಬರಿ 101 ಕೇಸುಗಳು ಈತನ ಮೇಲೆ ಇದ್ದು ಸದ್ಯ ಈತ ಜೈಲಿನಲ್ಲಿದ್ದಾನೆ.

ಗೋಪಾಲ್‌ ಯಡಗೆರೆ

ಶಿವಮೊಗ್ಗ [ಅ.23]:  ಈತ ಕೈದಿ. ಹಾಗೆಂದು ಸಾಮಾನ್ಯ ಕೈದಿ ಎಂದು ಭಾವಿಸಬೇಕಾಗಿಲ್ಲ. ಅಪರೂಪದಲ್ಲಿ ಅಪರೂಪ ಎನ್ನುವಂತಹ ಕೈದಿ. ಈತನ ಮೇಲೆ ಇರುವ ಕೇಸುಗಳ ಸಂಖ್ಯೆ ಕೇಳಿದರೆ ಆಶ್ಚರ್ಯವಾಗುತ್ತದೆ. ಬರೋಬ್ಬರಿ 101 ಪ್ರಕರಣ.

ಮನೆ, ಅಂಗಡಿಗಳ ಸರಣಿ ಕಳ್ಳತನದ ಮೂಲಕ ಕೇಸುಗಳ ಸೆಂಚುರಿ ಬಾರಿಸಿರುವ ಈತ ಇನ್ನೊಂದೂವರೆ ವರ್ಷದಲ್ಲಿ ಜೈಲಿನಿಂದ ಹೊರಬರಹುದು ಎನ್ನಲಾಗಿದೆ. ಈತನೇ ಮಂಜುನಾಥ ಯಾನೆ ಹಾಲ್‌ಮಂಜ ಯಾನೆ ಹನುಮಂತಪ್ಪ.

ಈತ ಒಬ್ಬ ಸಾಮಾನ್ಯ ಮನೆಕಳ್ಳ ಎಂದು ಭಾವಿಸಿದ್ದ ಪೊಲೀಸರು ಈತನನ್ನು ಬಂಧಿಸಿದಾಗ ಸಿಕ್ಕಿದ್ದು ಕೆಜಿಗಟ್ಟಲೆ ಚಿನ್ನ. ಈತನ ಇತಿಹಾಸ, ವರ್ತಮಾನದ ಬದುಕನ್ನು ಕೆದಕುತ್ತಾ ಹೋದಾಗ ಈತನ ಹಲವು ಮುಖಗಳು, ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ. ಭವಿಷ್ಯ ಹೇಗಿರಬಹುದು ಎಂಬ ಕುತೂಹಲವೂ ಮೂಡುತ್ತದೆ.

ಕಳ್ಳತನವೇ ವೃತ್ತಿಯಾಗಿಬಿಟ್ಟಿತು:

ಮೂಲತಃ ಚನ್ನಗಿರಿ ತಾಲೂಕಿನ ಹೊಸಳ್ಳಿ ಗ್ರಾಮ ಈತನ ಊರು. ಆದರೆ ಆತ ಕೈಚಳಕ ತೋರಿಸಿದ್ದು ಮಾತ್ರ ಶಿವಮೊಗ್ಗ ಜಿಲ್ಲೆಯಲ್ಲಿ. ಆದರೆ ಅದಾವ ಗಳಿಗೆಯಲ್ಲಿ ಮನೆಕಳ್ಳತನಕ್ಕೆ ಇಳಿದನೋ, ಬಳಿಕ ಅದೇ ಅವನ ವೃತ್ತಿಯಾಗಿಬಿಟ್ಟಿತು.

2015ರಲ್ಲಿ ದೊಡ್ಡಪೇಟೆ ಸಿಪಿಐ ಕೆ. ಟಿ. ಗುರುರಾಜ್‌ ನೇತೃತ್ವದ ತಂಡ ಈತನನ್ನು ದುರ್ಗಿಗುಡಿಯ ಪದ್ಮಾ ಜ್ಯುವೆಲ್ಲರ್ಸ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಬಂಧಿಸಿತು. ಎಂಆರ್‌ಎಸ್‌ನಲ್ಲಿ ಬೈಕ್‌ನಲ್ಲಿ ಓಡಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಷ್ಟರಲ್ಲಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಈತನ ಮೇಲೆ 24 ಕಳ್ಳತನ ಪ್ರಕರಣ ದಾಖಲಾಗಿದ್ದವು. ಪೊಲೀಸರು ಈತನೊಬ್ಬ ಸಾಮಾನ್ಯ ಮನೆಕಳ್ಳ ಎಂದು ನಿಧಾನವಾಗಿ ತನಿಖೆ ಆರಂಭಿಸಿದರು. ಆದರೆ ತನಿಖೆ ನಡೆಯುತ್ತಿದ್ದಂತೆ ಈತನ ಅಪರಾಧ ಲೋಕ ತೆರೆದುಕೊಂಡ ರೀತಿ ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದರು. ಆತ ನೀಡಿದ ಹೇಳಿಕೆಯನ್ನು ಆಧರಿಸಿ ವಿವಿಧ ಜ್ಯುವಲ್ಲರಿ ಅಂಗಡಿಗಳಿಂದ ಕೆಜಿಗಟ್ಟಲೆ ಚಿನ್ನ ವಶಪಡಿಸಿಕೊಂಡಿದ್ದರು.

ಸೆಂಚುರಿ ಬಾರಿಸಿದ ಕೇಸುಗಳು:

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಹಲವು ತಾಲೂಕಿನ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಅಂಗಡಿ ಮತ್ತು ಮನೆ ಕಳ್ಳತನ ಮಾಡಿದ ಪ್ರಕರಣ ಈತನ ಮೇಲೆ ದಾಖಲಾಗಿವೆ. ಈ ರೀತಿ ದಾಖಲಾಗುತ್ತಾ ಬಂದ ಪ್ರಕರಣ ಸಂಖ್ಯೆ ಸೆಂಚುರಿ ದಾಟಿದಾಗ ಸ್ವತಃ ಹಾಲ್‌ಮಂಜನೇ ಸುಸ್ತಾಗಿದ್ದ. ಪೊಲೀಸ್‌ ಠಾಣೆಯಲ್ಲಿ ದಾಖಲೆಯೊಂದು ಈತನ ಹೆಸರಿನಲ್ಲಿ ನಿರ್ಮಾಣವಾಯಿತು.

ಈತನೇ ವಾದಿಸುತ್ತಾನೆ:

2015ರಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿ ಕೋರ್ಟಿಗೆ ಆರೋಪಪಟ್ಟಿಸಲ್ಲಿಸಿದ ಬಳಿಕ ಅಲ್ಲಿಂದ ಇಲ್ಲಿಯವರೆಗೆ ನಾಲ್ಕೂ ಜಿಲ್ಲೆಗಳ ನ್ಯಾಯಾಲಯಗಳಿಗೆ ನಿರಂತರವಾಗಿ ಹಾಜರಾಗುತ್ತಿದ್ದಾನೆ. 4 ಪ್ರಕರಣಗಳಲ್ಲಿ ಈತನೇ ತನ್ನ ಪರವಾಗಿ ವಾದ ಮಂಡಿಸಿ ಗೆದ್ದೂ ಬಿಟ್ಟಿದ್ದಾನೆ.

ಒಟ್ಟಾರೆ 101 ಪ್ರಕರಣಗಳ ಪೈಕಿ ಈಗಾಗಲೇ 84 ಪ್ರಕರಣಗಳು ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದ ಬಿದ್ದು ಹೋಗಿವೆ. 11 ಪ್ರಕರಣದಲ್ಲಿ ಸಜೆ ಆಗಿದೆ. ಇನ್ನೂ 6 ಪ್ರಕರಣದ ವಿಚಾರಣೆ ಬಾಕಿ ಇದೆ.

ಕಳ್ಳತನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಗರಿಷ್ಠ 5 ರಿಂದ 7 ವರ್ಷ ಶಿಕ್ಷೆ ಆಗುತ್ತದೆ. ಮಂಜನ ಪ್ರಕರಣದಲ್ಲಿ ಈಗಾಗಲೇ ಆತ ನಾಲ್ಕು ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾನೆ. ಉಳಿದ ಪ್ರಕರಣಗಳ ವಿಚಾರಣೆಯೂ ಶೀಘ್ರವಾಗಿ ನಡೆದು ಶಿಕ್ಷೆ ಪ್ರಕಟಗೊಂಡರೂ ಇನ್ನೊಂದೂವರೆ ವರ್ಷದಲ್ಲಿ ಈತನ ಶಿಕ್ಷೆಯ ಅವಧಿ ಮುಗಿಯು ಸಾಧ್ಯತೆ ಇದೆ. ವಿಚಾರಣೆಗೆ ಕೂಡ ಯಾವುದೇ ತಕರಾರು ಮಾಡದೆ, ನೆಪ ಹೇಳದೆ ಹಾಜರಾಗುತ್ತಾನೆ. ಕೆಲವೊಮ್ಮೆ ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ನ್ಯಾಯಾಲಯಕ್ಕೆ ಹೋಗುತ್ತಾನೆ. ತನ್ನ ಪ್ರಕರಣಗಳಲ್ಲಿ ಹೆಚ್ಚಿನದನ್ನು ನೆನಪಿಟ್ಟುಕೊಂಡಿರುವ ಈತ ಪ್ರತಿ ಬಾರಿ ಕೋರ್ಟಿಗೆ ಹಾಜರಾಗುವ ಮುನ್ನ ಹಾಜರಾಗುತ್ತಿರುವ ಪ್ರಕರಣಗಳ ಹಿನ್ನೆಲೆ, ವಿಚಾರಣೆ ಹಂತಗಳನ್ನು ಪಕ್ಕಾ ನೆನಪಿಟ್ಟುಕೊಳ್ಳುತ್ತಾನೆ. ಮನನ ಮಾಡಿಕೊಂಡೇ ನ್ಯಾಯಾಲಯಕ್ಕೆ ಹಾಜರಾಗುತ್ತಾನೆ.

ಮಂಜ ಕಾರಾಗೃಹದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾನೆ. ಕಾರಾಗೃಹದಲ್ಲಿ ಈತ ಸಹ ಕೈದಿಗಳಿಗೆ ಮಾತ್ರವಲ್ಲ, ಸಿಬ್ಬಂದಿಗೂ ಅಚ್ಚುಮೆಚ್ಚು. ಪ್ರತಿಯೊಂದರಲ್ಲಿಯೂ ಅಚ್ಚುಕಟ್ಟು.

ವಯಸ್ಕರ ಶಿಕ್ಷಣ:

ವಿಶೇಷ ಎಂದರೆ 5 ನೇ ತರಗತಿ ಓದಿರುವ ಮಂಜ ಇದೀಗ ಇಗ್ನೋ ಮೂಲಕ ಬ್ಯಾಚಲರ್‌ ಆಫ್‌ ಪ್ರಿಪರೇಟರಿ ಪ್ರೋಗ್ರಾಂ ಕೋರ್ಸ್‌ ತೆಗೆದುಕೊಂಡಿದ್ದು ಡಿಸೆಂಬರ್‌ ನಲ್ಲಿ ಪರೀಕ್ಷೆ ಬರೆಯಲಿದ್ದಾನೆ. ಅಲ್ಲದೆ ವಯಸ್ಕರ ಶಿಕ್ಷಣವನ್ನೂ ಪಡೆಯುತ್ತಿದ್ದಾನೆ.

ಒಟ್ಟಿನಲ್ಲಿ ದೊಡ್ಡಪೇಟೆ ಪೊಲೀಸರ ಶ್ರಮದಿಂದಾಗಿ ಕಳ್ಳತನದ ವೃತ್ತಿಗೆ ಬ್ರೇಕ್‌ ಬಿದ್ದು ಜೈಲಿನ ಶಿಕ್ಷೆ ಅನುಭವಿಸುವಂತಾದ ಹಾಲ್‌ ಮಂಜ ಇದೇ ವೇಳೆಯಲ್ಲಿ ತನ್ನ ಇನ್ನೊಂದು ರೀತಿಯ ಪ್ರತಿಭೆಯನ್ನೂ ಅನಾವರಣಗೊಳಿಸುತ್ತಿದ್ದಾನೆ. ಶಿಕ್ಷೆ ಮುಗಿಸಿ ಹೊರ ಜಗತ್ತಿಗೆ ಬಂದ ಬಳಿಕ ಹೊಸ ವ್ಯಕ್ತಿಯಾಗಿ, ತನ್ನ ಪ್ರತಿಭೆ, ಜಾಣ್ಮೆಯ ಹೆಜ್ಜೆಯನ್ನು ಧನಾತ್ಮಕವಾಗಿ ಪ್ರಯೋಗಿಸಿದಲ್ಲಿ ಸಮಾಜಕ್ಕೆ ಆಸ್ತಿಯೂ ಆಗಬಹುದು. ಕಾದು ನೋಡಬೇಕಷ್ಟೆ.

click me!