ಕೆಲವೇ ಗಂಟೆಗಳಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಸ್ಪೇಸ್ ಎಕ್ಸ್ ರಾಕೆಟ್ ಭಾಗ: ಗಂಟೆಗೆ 8,690 ಕಿ.ಮೀ ವೇಗದಲ್ಲಿ ಡಿಕ್ಕಿ!

Published : Aug 05, 2026, 09:53 AM IST
Moon

ಸಾರಾಂಶ

ಸ್ಪೇಸ್ ಎಕ್ಸ್ ಸಂಸ್ಥೆಯ ರಾಕೆಟ್‌ನ 4 ಟನ್ ತೂಕದ ಭಾಗವೊಂದು ಚಂದ್ರನ ಮೇಲ್ಮೈಗೆ ಅಪ್ಪಳಿಸಲಿದೆ. ಈ ಡಿಕ್ಕಿಯಿಂದ ಚಂದ್ರನ ಮೇಲೆ ಹೊಸ ಕುಳಿಯೊಂದು ನಿರ್ಮಾಣವಾಗಲಿದ್ದು, ಇದು ವಿಜ್ಞಾನಿಗಳಿಗೆ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಲಿದೆ ಹಾಗೂ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ.

ವಾಷಿಂಗ್ಟನ್ (ಆ.5): ಕಳೆದ ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ 'ಸ್ಪೇಸ್ ಎಕ್ಸ್' (SpaceX) ಸಂಸ್ಥೆಯ ರಾಕೆಟ್‌ನ 4 ಟನ್ ತೂಕದ ಭಾಗವೊಂದು ಬುಧವಾರದಂದು ತೀವ್ರ ವೇಗದಲ್ಲಿ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆಯಲಿದೆ. ಈ ಡಿಕ್ಕಿಯಿಂದ ಭೂಮಿಗೆ ಯಾವುದೇ ಅಪಾಯವಿಲ್ಲವಾದರೂ, ಚಂದ್ರನ ಮೇಲೆ ಹೊಸದೊಂದು ಕುಳಿ (Crater) ನಿರ್ಮಾಣವಾಗಲಿದ್ದು, ವಿಜ್ಞಾನಿಗಳಿಗೆ ಹೆಚ್ಚಿನ ಸಂಶೋಧನೆ ನಡೆಸಲು ಇದು ಉತ್ತಮ ಅವಕಾಶ ಒದಗಿಸಲಿದೆ. ಶಾಲಾ ಬಸ್‌ ಗಾತ್ರದ ಈ ವಸ್ತುವನ್ನು ಸ್ಪೇಸ್ ಎಕ್ಸ್‌ನ 'ಫಾಲ್ಕನ್ 9' (Falcon 9) ರಾಕೆಟ್‌ನ ಎರಡನೇ ಹಂತದ ಭಾಗ ಎಂದು ಗುರುತಿಸಲಾಗಿದೆ. ಈ ರಾಕೆಟ್ 2025ರ ಜನವರಿಯಲ್ಲಿ 'ಫೈರ್‌ಫ್ಲೈ ಏರೋಸ್ಪೇಸ್' (Firefly Aerospace) ಸಂಸ್ಥೆಯ ಲೂನಾರ್ ಲ್ಯಾಂಡರ್ ಅನ್ನು ಚಂದ್ರನತ್ತ ಹೊತ್ತೊಯ್ದಿತ್ತು.

ಯುರೋಪಿಯನ್‌ ಕಾಲಮಾನ ಬೆಳಿಗ್ಗೆ 06.35ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 12.05 ನಿಮಿಷ) ಈ ರಾಕೆಟ್ ಭಾಗವು ಗಂಟೆಗೆ ಸುಮಾರು 5,400 ಮೈಲಿ (8,690 ಕಿ.ಮೀ) ವೇಗದಲ್ಲಿ ಚಂದ್ರನ ಅಂಗಳಕ್ಕೆ ಅಪ್ಪಳಿಸಲಿದೆ. ಈ ಡಿಕ್ಕಿಯಿಂದ ಚಂದ್ರನ ಧೂಳು ಗಾಳಿಯಲ್ಲಿ ತೇಲಲಿದ್ದು, ಸೂರ್ಯನ ಬೆಳಕಿನಲ್ಲಿ ಪ್ರಕಾಶಮಾನವಾಗಿ ಕಾಣಿಸಿದರೂ ಭೂಮಿಯಿಂದ ಬರಿಗಣ್ಣಿಗೆ ನೋಡುವುದು ಕಷ್ಟಕರವಾಗಿದೆ.

18 ಮೀಟರ್ ಅಗಲದ ಕುಳಿ ನಿರ್ಮಾಣ

ನಾಸಾ (NASA) ನೀಡಿರುವ ಮಾಹಿತಿಯ ಪ್ರಕಾರ, ಈ ಅಪಘಾತದಿಂದ ಚಂದ್ರನ ಮೇಲೆ ಸುಮಾರು 60 ಅಡಿ (18 ಮೀಟರ್) ಅಗಲ ಹಾಗೂ 12 ಅಡಿ (4 ಮೀಟರ್) ಆಳದ ಕುಳಿ ನಿರ್ಮಾಣವಾಗಲಿದ್ದು, ಕಲ್ಲು ಮತ್ತು ಧೂಳಿನ ಕಣಗಳು ಹೊರಚೆಲ್ಲಲಿವೆ. ಚಂದ್ರನ ಪಶ್ಚಿಮ ಅಂಚಿನಲ್ಲಿರುವ 'ಐನ್ಸ್ಟೈನ್ ಕುಳಿ' (Einstein crater) ಪ್ರದೇಶಕ್ಕೆ ಈ ಭಾಗ ಡಿಕ್ಕಿಯಾಗುವ ನಿರೀಕ್ಷೆಯಿದೆ. ಭೂಮಿಯಿಂದ ಈ ಪ್ರದೇಶವನ್ನು ವೀಕ್ಷಿಸುವುದು ಕೊಂಚ ಸವಾಲಿನ ಕೆಲಸವಾಗಿದೆ.

ಆದರೆ, ಈ ಘಟನೆಯ ಮೊದಲು ಮತ್ತು ನಂತರದ ಚಿತ್ರಗಳನ್ನು ಸೆರೆಹಿಡಿಯಲು ನಾಸಾ ಯೋಜಿಸಿದ್ದು, ಸಂಗ್ರಹಿಸಿದ ಡೇಟಾ "ಮಾನವ ನಿರ್ಮಿತ ಡಿಕ್ಕಿಗಳನ್ನು ಉತ್ತಮವಾಗಿ ಅರ್ಥೈಸಿಕೊಳ್ಳಲು ಹಾಗೂ ಬಾಹ್ಯಾಕಾಶ ಪರಿಶೋಧನೆಯ ಮುಂದಿನ ಹಂತಗಳಿಗೆ ಸಹಾಯ ಮಾಡಲಿವೆ" ಎಂದು ತಿಳಿಸಿದೆ. ನಾಸಾದ ವಿಜ್ಞಾನಿ ಜಿಮಿ ರಸ್ಸೆಲ್ ಮಾತನಾಡಿ, "ಈ ಘಟನೆಯಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ನಾಸಾ ವಿಜ್ಞಾನಿಗಳು ಚಂದ್ರನ ದತ್ತಾಂಶವನ್ನು ಸಂಗ್ರಹಿಸಲು ಹಾಗೂ ಬಾಹ್ಯಾಕಾಶದಲ್ಲಿರುವ ವಸ್ತುಗಳನ್ನು ಟ್ರ್ಯಾಕ್ ಮಾಡುವ ತಂತ್ರಜ್ಞಾನವನ್ನು ಸುಧಾರಿಸಲು ಯೋಜಿಸುತ್ತಿದ್ದಾರೆ" ಎಂದಿದ್ದಾರೆ.

ಚಂದ್ರನತ್ತ ಪಥ ಬದಲಾಗಿದ್ದು ಹೇಗೆ?

ಸಾಮಾನ್ಯವಾಗಿ ರಾಕೆಟ್‌ನ ಇಂತಹ ಹಂತಗಳು (Stages) ತಮ್ಮ ಕಾರ್ಯಾಚರಣೆ ಮುಗಿದ ನಂತರ ಭೂಮಿಯ ವಾತಾವರಣಕ್ಕೆ ಮರಳಿ ಉರಿದು ಹೋಗುತ್ತವೆ ಅಥವಾ ಸಾಗರಕ್ಕೆ ಬೀಳುತ್ತವೆ. ಆದರೆ, ಜನವರಿಯ ಈ ಚಂದ್ರನ ಯೋಜನೆಗೆ ಹೆಚ್ಚಿನ ಇಂಧನ ಹಾಗೂ ಥ್ರಸ್ಟ್‌ ಅಗತ್ಯವಿದ್ದ ಕಾರಣ, ಈ ರಾಕೆಟ್‌ನ ಎರಡನೇ ಭಾಗವು ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದು ಇತರ ಸಾವಿರಾರು ಬಾಹ್ಯಾಕಾಶ ತ್ಯಾಜ್ಯಗಳ (Space Junk) ನಡುವೆ ನಿಗದಿ ಇಲ್ಲದೆ ತೇಲುತ್ತಿತ್ತು. ಸೂರ್ಯನ ವಿಕಿರಣ ಹಾಗೂ ಗುರುತ್ವಾಕರ್ಷಣೆಯ ಬಲದಿಂದಾಗಿ ಈ ನಿಯಂತ್ರಣವಿಲ್ಲದ ರಾಕೆಟ್ ಭಾಗವು ಚಂದ್ರನ ಕಡೆಗೆ ಚಲಿಸುತ್ತಿದೆ ಎಂಬುದನ್ನು ಬಾಹ್ಯಾಕಾಶ ವಿಜ್ಞಾನಿಗಳು ಈ ವರ್ಷದ ಆರಂಭದಲ್ಲಿ ಪತ್ತೆಹಚ್ಚಿದ್ದರು.

ಸೂರ್ಯನ ಚಟುವಟಿಕೆಗಳು ಮತ್ತು ಗುರುತ್ವಾಕರ್ಷಣೆಯ ಬಲಗಳು ಸೇರಿ ಇದನ್ನು ಚಂದ್ರನ ಕಡೆಗೆ ಸಾಗುವ ಪಥದಲ್ಲಿ ತಳ್ಳಿವೆ ಎಂದು ಸ್ಪೇಸ್ ಎಕ್ಸ್‌ನ ನಾಸಾ ವಿಜ್ಞಾನ ಮತ್ತು ಡ್ರ್ಯಾಗನ್ ಕಾರ್ಯಕ್ರಮಗಳ ನಿರ್ದೇಶಕಿ ಜುಲಿಯಾನಾ ಶೀಮನ್ ತಿಳಿಸಿದ್ದಾರೆ. ಆಸ್ಟ್ರೋನಮಿ ತಂತ್ರಾಂಶದ ಪ್ರವರ್ತಕ ಬಿಲ್ ಗ್ರೇ ಮಾತನಾಡಿ, ಇದರಿಂದ ಯಾವುದೇ ಅಪಾಯವಿಲ್ಲದಿದ್ದರೂ, ಬಾಹ್ಯಾಕಾಶದಲ್ಲಿ ಉಳಿಯುವ ಉಪಕರಣಗಳನ್ನು ಎಷ್ಟು ಜವಾಬ್ದಾರಿಯಿಲ್ಲದೆ ಎಸೆಯಲಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.

ಚಂದ್ರನ ಮೇಲಿನ ಹಿಂದಿನ ಡಿಕ್ಕಿಗಳು

ಚಂದ್ರನ ಮೇಲೆ ಬಾಹ್ಯಾಕಾಶ ತ್ಯಾಜ್ಯಗಳು ಬೀಳುವುದು ವಿರಳ. 2022ರ ಮಾರ್ಚ್‌ನಲ್ಲಿ ಚೀನಾದ ರಾಕೆಟ್‌ ಭಾಗವೊಂದು ಚಂದ್ರನಿಗೆ ಡಿಕ್ಕಿಯಾಗಿತ್ತು. 2009ರಲ್ಲಿ ನಾಸಾ ಸ್ವತಃ ಉದ್ದೇಶಪೂರ್ವಕವಾಗಿ ರಾಕೆಟ್ ಹಂತವನ್ನು ಚಂದ್ರನಿಗೆ ಡಿಕ್ಕಿ ಹೊಡೆಸಿ ಚಂದ್ರನ ಧೂಳಿನ ಮಾದರಿಯನ್ನು ಅಧ್ಯಯನ ಮಾಡಿತ್ತು. ಕಳೆದ ಕೆಲವು ವರ್ಷಗಳಲ್ಲಿ ಸುರಕ್ಷಿತವಾಗಿ ಇಳಿಯಲು ಯತ್ನಿಸಿ ಅಪಘಾತಕ್ಕೀಡಾದ ಬಾಹ್ಯಾಕಾಶ ನೌಕೆಗಳಲ್ಲಿ ರಷ್ಯಾದ 'ಲೂನಾ-25' (2023), ಭಾರತದ 'ಚಂದ್ರಯಾನ-2' (2019) ಮತ್ತು ಇಸ್ರೇಲ್‌ನ 'ಬೆರೆಶೀಟ್' (2019) ಸೇರಿವೆ.

ಮುಂದಿನ ದಿನಗಳಲ್ಲಿ ಇಂತಹ ಅನಗತ್ಯ ಡಿಕ್ಕಿಗಳನ್ನು ತಡೆಯಲು ನಾಸಾ ಮತ್ತು ಸ್ಪೇಸ್ ಎಕ್ಸ್ ಜಂಟಿಯಾಗಿ ಚರ್ಚಿಸುತ್ತಿವೆ. ಮತ್ತೊಂದೆಡೆ, ಸಾರ್ವಜನಿಕ ಕಂಪನಿಯಾಗಿ ಹೊರಹೊಮ್ಮಿದ ನಂತರ ಸ್ಪೇಸ್ ಎಕ್ಸ್ ಬಿಡುಗಡೆ ಮಾಡಿದ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ವಾಲ್ ಸ್ಟ್ರೀಟ್ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ನಷ್ಟ ಹಾಗೂ ಹೆಚ್ಚಿನ ಆದಾಯವನ್ನು ದಾಖಲಿಸಿದೆ. ಆದರೆ, ಹೂಡಿಕೆದಾರರ ಅಪನಂಬಿಕೆಯಿಂದಾಗಿ ಕಂಪನಿಯ ಶೇರುಗಳಲ್ಲಿ ಕುಸಿತ ಕಂಡುಬಂದಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಹಾವಿನ ದೇಹದ ಬಗ್ಗೆ ನಿಮಗೆ ಗೊತ್ತಿರದ ಸತ್ಯ: ಹೊಸ ಸಂಶೋಧನೆಯಲ್ಲಿ ಅಚ್ಚರಿ ಮಾಹಿತಿ ಬಯಲು
ನಕ್ಷತ್ರವನ್ನು ಭಕ್ಷಿಸಿ ಅರ್ಧದಷ್ಟನ್ನು ಕಕ್ಕುವ ಕಪ್ಪು ಕುಳಿಗಳು! ವಿಜ್ಞಾನಿಗಳು ಕಂಡ ಖಗೋಳದ ವಿಸ್ಮಯಕಾರಿ ಸತ್ಯ!