
ಬೆಂಗಳೂರು (ಮಾ.17): ಕ್ಯಾಲಿಫೋರ್ನಿಯಾ ಮೂಲದ 'ರಿಫ್ಲೆಕ್ಟ್ ಆರ್ಬಿಟಲ್' (Reflect Orbital) ಎಂಬ ಕಂಪನಿಯು ರಾತ್ರಿಯ ಸಮಯದಲ್ಲಿ ಭೂಮಿಯ ನಿರ್ದಿಷ್ಟ ಭಾಗಗಳಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವ (Reflect) ಬಾಹ್ಯಾಕಾಶ ಆಧಾರಿತ ವ್ಯವಸ್ಥೆಯನ್ನು ಪರೀಕ್ಷಿಸಲು ಅನುಮತಿ ಕೋರಿದೆ. ಈ ಯೋಜನೆಯು ಭವಿಷ್ಯದಲ್ಲಿ ಸಾವಿರಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ. ಭೂಮಿಯ ಕಕ್ಷೆಯಲ್ಲಿ ಬೃಹತ್ ಪ್ರತಿಫಲಿತ ಮೇಲ್ಮೈಗಳನ್ನು (Reflective Surfaces) ಅಳವಡಿಸುವುದು ಈ ಯೋಜನೆಯ ಮೂಲ ಉದ್ದೇಶ. ಇವು ಬಾಹ್ಯಾಕಾಶದಲ್ಲಿ ಸೂರ್ಯನ ಬೆಳಕನ್ನು ಹಿಡಿದು, ಭೂಮಿಯ ಮೇಲೆ ಅಗತ್ಯವಿರುವ ನಿರ್ದಿಷ್ಟ ಪ್ರದೇಶಗಳಿಗೆ ಅನ್ನು ನೀಡುತ್ತದೆ.
ಕಂಪನಿಯ ಮೊದಲ ಮೂಲಮಾದರಿ (Prototype) ಸಣ್ಣ ರೆಫ್ರಿಜರೇಟರ್ ಗಾತ್ರದಲ್ಲಿರಲಿದೆ. ಇದು ಭೂಮಿಯಿಂದ 400 ಮೈಲಿ ಎತ್ತರದ ಕಕ್ಷೆಯಲ್ಲಿ ಸುಮಾರು 60 ಅಡಿ ಅಗಲದ ಕನ್ನಡಿಯನ್ನು ಬಿಚ್ಚಿ ಹರಡಲಿದೆ. ಈ ಕನ್ನಡಿಯು ಸುಮಾರು ಮೂರು ಮೈಲಿ ವಿಸ್ತೀರ್ಣದ ಪ್ರದೇಶವನ್ನು ಬೆಳಗಿಸುವ ಸಾಮರ್ಥ್ಯ ಹೊಂದಿರುತ್ತದೆ. ಭೂಮಿಯಿಂದ ನೋಡುವವರಿಗೆ ಇದು ಆಕಾಶದಲ್ಲಿ 'ಹುಣ್ಣಿಮೆಯ ಚಂದ್ರನಂತೆ' ಪ್ರಕಾಶಮಾನವಾಗಿ ಕಾಣಿಸಲಿದೆ.
ಈ ಸೇವೆಯನ್ನು ಬಳಸಿಕೊಳ್ಳಲು ಗ್ರಾಹಕರು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಕಂಪನಿ ಹೇಳಿದೆ. ವರದಿಗಳ ಪ್ರಕಾರ, ಕಂಪನಿಯು ಒಂದು ಕನ್ನಡಿಯಿಂದ ಪ್ರತಿ ಗಂಟೆಯ ಬೆಳಕಿಗೆ ಸುಮಾರು 5,000 ಡಾಲರ್ (ಅಂದಾಜು 4.6 ಲಕ್ಷ ರೂಪಾಯಿ) ನಿಗದಿಪಡಿಸಲು ಯೋಜಿಸಿದೆ. ಆದರೆ, ಇದಕ್ಕೆ ಗ್ರಾಹಕರು ವರ್ಷಕ್ಕೆ ಕನಿಷ್ಠ 1,000 ಗಂಟೆಗಳ ಕಾಲ ಬೆಳಕನ್ನು ಬಳಸುವ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.
ಕಂಪನಿಯ ಸಿಇಒ ಬೆನ್ ನೋವಾಕ್ ಅವರ ಪ್ರಕಾರ, ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಪರಿಸರ ಸ್ನೇಹಿ ಇಂಧನಕ್ಕೆ ಶಕ್ತಿ ತುಂಬುವುದು ಇದರ ಗುರಿ. ರಾತ್ರಿಯಲ್ಲೂ ಸೌರ ಫಾರ್ಮ್‌ಗಳ ಮೇಲೆ ಸೂರ್ಯನ ಬೆಳಕು ಬೀಳುವಂತೆ ಮಾಡಿ ವಿದ್ಯುತ್ ಉತ್ಪಾದನೆಯ ಅವಧಿ ವಿಸ್ತರಿಸುವುದು ಮೂಲ ಉದ್ದೇಶವಾಗಿದೆ. ನೈಸರ್ಗಿಕ ವಿಕೋಪ ಅಥವಾ ತುರ್ತು ಕಾರ್ಯಾಚರಣೆಯ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವುದು ಕೂಡ ಸಾಧ್ಯವಾಗಲಿದೆ. ರಾತ್ರಿ ವೇಳೆ ನಡೆಯುವ ಹೊರಾಂಗಣ ಕಾರ್ಯಕ್ರಮಗಳಿಗೆ ತಾತ್ಕಾಲಿಕ ಬೆಳಕು ನೀಡಲು ಸಾಧ್ಯವಾಗಲಿದೆ.
ಈಗಾಗಲೇ ಈ ಕಂಪನಿಯು ಸುಮಾರು 28 ಮಿಲಿಯನ್ ಡಾಲರ್ ಹೂಡಿಕೆ ಸಂಗ್ರಹಿಸಿದೆ. 2028ರ ಅಂತ್ಯದ ವೇಳೆ 1 ಸಾವಿರ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಗುರಿ ಹೊಂದಿದ್ದು, 2030ರ ವೇಳೆಗೆ ಇದರ ಸಂಖ್ಯೆಯನ್ನು 5 ಸಾವಿರ ಸ್ಯಾಟಲೈಟ್‌ಗೆ ಏರಿಸುವ ಟಾರ್ಗೆಟ್ ನಿಗದಿ ಮಾಡಿದೆ. ಭವಿಷ್ಯದಲ್ಲಿ ಸುಮಾರು 180 ಅಡಿ ಅಗಲದ ಕನ್ನಡಿಗಳನ್ನು ಬಳಸಿ, 100 ಹುಣ್ಣಿಮೆ ಚಂದ್ರರಿಗೆ ಸಮಾನವಾದ ಬೆಳಕನ್ನು ನೀಡುವ 50,000 ಉಪಗ್ರಹಗಳ ಜಾಲವನ್ನು ನಿರ್ಮಿಸುವ ಯೋಜನೆ ಕಂಪನಿಗಿದೆ.
ಬಾಹ್ಯಾಕಾಶದಲ್ಲಿ ಕನ್ನಡಿ ಇಡುವ ಐಡಿಯಾ ಹೊಸದೇನಲ್ಲ.1990ರಲ್ಲಿ ರಷ್ಯಾ ಇಂತಹ ಪ್ರಯತ್ನ ಮಾಡಿತ್ತು. ಆದರೆ, ವಿಜ್ಞಾನಿಗಳು ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.ರಾತ್ರಿ ವೇಳೆ ಕೃತಕ ಬೆಳಕು ಹರಿಸುವುದರಿಂದ ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯಗಳ ನೈಸರ್ಗಿಕ ಜೈವಿಕ ಗಡಿಯಾರ (Circadian Rhythms) ಮತ್ತು ನಿದ್ರೆಯ ಮಾದರಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈ ಪ್ರಕಾಶಮಾನವಾದ ಉಪಗ್ರಹಗಳು ಬಾಹ್ಯಾಕಾಶ ಸಂಶೋಧನೆ ಮತ್ತು ದೂರದರ್ಶಕಗಳ ಮೂಲಕ ನಡೆಸುವ ವೀಕ್ಷಣೆಗೆ ಅಡ್ಡಿಪಡಿಸಬಹುದು. ಇಂತಹ ವಿನೂತನ ಬಾಹ್ಯಾಕಾಶ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಸ್ತುತ ಯಾವುದೇ ಜಾಗತಿಕ ನಿಯಮಾವಳಿಗಳಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.