ಬಾಹ್ಯಾಕಾಶದಲ್ಲಿ ಕನ್ನಡ: ಭೂಮಿಯಿಂದ 1 ಬೆಳಕಿನ ದಿನದ ದೂರ ತಲುಪಿದ ನಾಸಾದ ವೊಯೇಜರ್ 1

Published : Nov 19, 2026, 09:01 AM IST
NASA Voyager 1 golden record message to aliens

ಸಾರಾಂಶ

1977ರಲ್ಲಿ ಉಡಾವಣೆಯಾದ ನಾಸಾದ ವೊಯೇಜರ್‌ 1 ನೌಕೆ 2600 ಕೋಟಿ ಕಿ.ಮೀ ದೂರ ಸಾಗಿದೆ. ಇದರಲ್ಲಿ ವಿಶ್ವದ 55 ಭಾಷೆಗಳ ಜೊತೆಗೆ ಕನ್ನಡದ ಶುಭಾಶಯ ಸಂದೇಶವನ್ನೂ ಅಳವಡಿಸಲಾಗಿದೆ. ಇದು ಅನ್ಯಗ್ರಹ ಜೀವಿಗಳಿಗಾಗಿ ಕಳುಹಿಸಿದ ಸಂದೇಶವಾಗಿದೆ.

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ವೊಯೇಜರ್‌ 1’ ಬಾಹ್ಯಾಕಾಶ ನೌಕೆಯು ಬುಧವಾರ ಭೂಮಿಯಿಂದ 1 ಬೆಳಕಿನ ದಿನ (2,600 ಕೋಟಿ ಕಿ.ಮೀ.) ದೂರವನ್ನು ತಲುಪಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದು ಮಾನವಕುಲದ ಇತಿಹಾಸದಲ್ಲಿ ಯಾವುದೇ ಬಾಹ್ಯಾಕಾಶ ನೌಕೆ ತಲುಪದ ಅತ್ಯಂತ ದೂರದ ತುದಿಯಾಗಿದೆ. ವಿಶೇಷವೆಂದರೆ, ಭೂಮಿಯ ಸಂಸ್ಕೃತಿಯ ಪ್ರತೀಕವಾಗಿ ಈ ನೌಕೆಯು ಕನ್ನಡದ ಶುಭಾಶಯ ಸಂದೇಶವನ್ನೂ ಹೊತ್ತು ಸಾಗಿದ್ದು, ‘ಅಂತರತಾರಾ ಬಾಹ್ಯಾಕಾಶ’ದಲ್ಲೂ ಕನ್ನಡದ ಕಂಪು ಮೊಳಗಿದಂತಾಗಿದೆ.

ಬಾಹ್ಯಾಕಾಶದ ಇತರ ಲೋಕಗಳಿಗೆ ಭೂಮಿಯ ಸಂಸ್ಕೃತಿಯನ್ನು ಪರಿಚಯಿಸಲು ವೊಯೇಜರ್ ನೌಕೆಯಲ್ಲಿ ‘ಗೋಲ್ಡನ್ ರೆಕಾರ್ಡ್’ಎಂಬ ತಾಮ್ರದ ಧ್ವನಿಮುದ್ರಿಕೆಯನ್ನು ಅಳವಡಿಸಲಾಗಿದೆ. ಇದರಲ್ಲಿ ಭಾರತದ 10 ಸೇರಿದಂತೆ ವಿಶ್ವದ ಒಟ್ಟು 55 ಭಾಷೆಗಳ ಶುಭಾಶಯ ಸಂದೇಶಗಳಿವೆ. ಇದರಲ್ಲಿ ಕನ್ನಡವೂ ಸೇರಿದ್ದು, ‘ನಮಸ್ಕಾರ. ಕನ್ನಡ ಭಾಷೆಯನ್ನು ಆಡುವ ಜನರ ಪರವಾಗಿ ಶುಭಾಶಯಗಳು’ ಎಂಬ ಧ್ವನಿಮುದ್ರಿಕೆಯನ್ನು ಅಳವಡಿಸಲಾಗಿದೆ.

ಉಡಾವಣೆ ಮತ್ತು ಉದ್ದೇಶ

ಸೌರಮಂಡಲದ ಹೊರವಲಯದ ಗ್ರಹಗಳಾದ ಗುರು ಮತ್ತು ಶನಿಯ ಅಧ್ಯಯನಕ್ಕಾಗಿ ನಾಸಾ 1977ರ ಸೆ.5ರಂದು ವೊಯೇಜರ್ 1 ನೌಕೆಯನ್ನು ಉಡಾವಣೆ ಮಾಡಿತ್ತು. ಆ ಗ್ರಹಗಳು ಮತ್ತು ಅವುಗಳ ಉಪಗ್ರಹಗಳ ಕುರಿತು ವೈಜ್ಞಾನಿಕ ಮಾಹಿತಿ ಸಂಗ್ರಹಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು. ನಿಗದಿತ ಗುರಿ ಪೂರೈಸಿದ ಬಳಿಕವೂ ನೌಕೆಯು ಸೌರಮಂಡಲದ ಆಚೆಗಿನ ಅಧ್ಯಯನಕ್ಕಾಗಿ ತನ್ನ ಪ್ರಯಾಣ ಮುಂದುವರಿಸಿತು.

ಪ್ರಸ್ತುತ ಎಲ್ಲಿದೆ?

2012ರ ಆಗಸ್ಟ್‌ನಲ್ಲಿ ಸೂರ್ಯನ ಪ್ರಭಾವಲಯವನ್ನು ದಾಟಿದ ನೌಕೆ, ನಕ್ಷತ್ರಗಳ ನಡುವಿನ ಅಂತರತಾರಾ ಬಾಹ್ಯಾಕಾಶವನ್ನು (ಇಂಟರ್‌ಸ್ಟೆಲ್ಲಾರ್‌ ಸ್ಪೇಸ್‌) ಪ್ರವೇಶಿಸಿದ ಮೊದಲ ಮಾನವ ನಿರ್ಮಿತ ನೌಕೆಯಾಗಿದೆ. ಸುಮಾರು 49 ವರ್ಷಗಳಿಂದ ಗಂಟೆಗೆ ಅಂದಾಜು 61,155 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಪ್ರಸ್ತುತ ಭೂಮಿಯಿಂದ ಸುಮಾರು 26,000 ಕಿ.ಮೀ.ಗಳ ದೂರದಲ್ಲಿದೆ.

ಬೆಳಕು 24 ಗಂಟೆಗಳಲ್ಲಿ ಕ್ರಮಿಸುವ ದೂರವನ್ನೇ ‘ಒಂದು ಬೆಳಕಿನ ದಿನ’ ಎನ್ನಲಾಗುತ್ತದೆ. ಈ ಅಗಾಧ ದೂರದಿಂದಾಗಿ, ಭೂಮಿಯಿಂದ ಕಳುಹಿಸುವ ರೇಡಿಯೋ ಸಂಕೇತವು ನೌಕೆಯನ್ನು ತಲುಪಲು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಅಲ್ಲಿಂದ ಮರಳಿ ಪ್ರತಿಕ್ರಿಯೆ ಬರಲು ಮತ್ತೊಂದು ದಿನ ಬೇಕಾಗುತ್ತದೆ. ಅಂದರೆ, ಒಂದು ಸಂದೇಶ ವಿನಿಮಯಕ್ಕೆ ಒಟ್ಟು 48 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ.

  • 49 ವರ್ಷಗಳ ಪಯಣ, 1977ರಲ್ಲಿ ಅಮೆರಿಕದ ನಾಸಾದಿಂದ ವೊಯೇಜರ್‌ 1 ನೌಕೆ ಉಡ್ಡಯನ
  • 49 ವರ್ಷಗಳಲ್ಲಿ 2600 ಕೋಟಿ ಕಿ.ಮೀ ದೂರ ಸಾಗಿ ತಿಹಾಸ ನಿರ್ಮಾಣ
  • ಈವರೆಗೆ ಯಾವುದೇ ನೌಕೆ ತಲುಪದ ದೂರ ತಲುಪಿದ ಹಿರಿಮೆ ಈ ನೌಕೆಗೆ
  • ಈ ನೌಕೆಯಲ್ಲಿ ಭಾರತದ 10 ಸೇರಿದಂತೆ ವಿಶ್ವದ 55 ಭಾಷೆಗಳಲ್ಲಿ ಸಂದೇಶ
  • ಒಂದೊಮ್ಮೆ ಅನ್ಯಗ್ರಹ ಜೀವಿಗಳು ಸಿಕ್ಕರೆ ಅವರಿಗೆಂದು ಈ ಸಂದೇಶ ರವಾನೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಗಡಿಯಾರದಲ್ಲಿ 60 ನಿಮಿಷ, 60 ಸೆಕೆಂಡ್‌ಗಳೇ ಏಕೆ? 100 ಏಕಿಲ್ಲ? ಇದರ ಹಿಂದೆ ಅಡಗಿದೆ 4,000 ಹಿಂದಿನ ವರ್ಷಗಳ ರಹಸ್ಯ
50 ವರ್ಷಗಳ ಪ್ರಯಾಣದ ಬಳಿಕ ಭೂಮಿಯಿಂದ 1 ಬೆಳಕಿನ ದಿನದಷ್ಟು ದೂರ ಕ್ರಮಿಸಿ ಇತಿಹಾಸ ಬರೆದ Voyager 1